ಶುಕ್ರವಾರ, ಮೇ 27, 2022
28 °C

ಅಭಿವ್ಯಕ್ತಿ ಸ್ವಾತಂತ್ರ್ಯ: ದ್ವಂದ್ವದ ದುರಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಭಿವ್ಯಕ್ತಿ ಸ್ವಾತಂತ್ರ್ಯ: ದ್ವಂದ್ವದ ದುರಂತ

ಅಮ್ಮಾನ್, ಜೋರ್ಡನ್: 2015ರ ಜನವರಿಯಲ್ಲಿ ಜೋರ್ಡನ್‌ನ ರಾಜ ಅಬ್ದುಲ್ಲಾ ಮತ್ತು ರಾಣಿ ರನಿಯಾ ಅವರು ಇತರ ವಿಶ್ವ ನಾಯಕರೊಂದಿಗೆ ಪ್ಯಾರಿಸ್‌ನಲ್ಲಿ ಜಾಥಾ ನಡೆಸಿ ಫ್ರಾನ್ಸ್‌ನ  ವಿಡಂಬನಾ ಪತ್ರಿಕೆ ‘ಚಾರ್ಲಿ ಹೆಬ್ಡೊ’ದ ಹತ್ಯೆಯಾದ ವ್ಯಂಗ್ಯಚಿತ್ರಕಾರರಿಗೆ ಶ್ರದ್ಧಾಂಜಲಿ ಅರ್ಪಿಸಿದರು.‘ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಾವಿದ್ದೇವೆ’ ಎಂದು ತೋರಿಸುವುದು ಕೂಡ ಈ ಜಾಥಾದ ಉದ್ದೇಶವಾಗಿತ್ತು. ಇದಾಗಿ ಎರಡು ವರ್ಷವೂ ತುಂಬಿರಲಿಲ್ಲ, ಜೋರ್ಡನ್‌ನ ಕ್ರೈಸ್ತ ಲೇಖಕ 56 ವರ್ಷದ ನಹೆದ್ ಹಟ್ಟರ್ ಅವರು ವ್ಯಂಗ್ಯಚಿತ್ರವೊಂದನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಾಗ ಅದು ದೇವರನ್ನು ಲೇವಡಿ ಮಾಡುತ್ತಿದೆ ಎಂದು ಕೆಲವರಿಗೆ ಅನಿಸಿದೆ.ತಕ್ಷಣ ಕ್ರಮ ಕೈಗೊಂಡ ಜೋರ್ಡನ್ ಸರ್ಕಾರ, ಹಟ್ಟರ್ ಬಂಧನಕ್ಕೆ ಆದೇಶ ಹೊರಡಿಸಿತು. ‘ಧಾರ್ಮಿಕ ನಂಬಿಕೆ ಮತ್ತು ಭಾವನೆಗಳಿಗೆ ಅವಮಾನ’ ಮಾಡಿದ ಆರೋಪವನ್ನು ಅವರ ಮೇಲೆ ಹೊರಿಸಲಾಯಿತು.ತಮ್ಮ ಫೇಸ್‌ಬುಕ್ ಪುಟದಿಂದ ವ್ಯಂಗ್ಯಚಿತ್ರವನ್ನು ಹಟ್ಟರ್ ಅಳಿಸಿ ಹಾಕಿದರು. ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್‌ನ ಅನುಯಾಯಿಗಳು ದೇವರನ್ನು ಹೇಗೆ ನೋಡುತ್ತಾರೆ ಎಂಬುದನ್ನು ಲೇವಡಿ ಮಾಡುವುದಷ್ಟೇ ತಮ್ಮ ಉದ್ದೇಶವಾಗಿತ್ತು ಎಂಬ ಸ್ಪಷ್ಟೀಕರಣವನ್ನೂ ನೀಡಿದರು. ಹಟ್ಟರ್ ಶರಣಾಗುವುದಕ್ಕೆ ಮೊದಲೇ ಅವರು ‘ತಲೆ ಮರೆಸಿಕೊಂಡ ಆರೋಪಿ’ ಎಂದು ಅಮ್ಮಾನ್‌ನ ಗವರ್ನರ್ ಘೋಷಿಸಿದರು. ಸೆಪ್ಟೆಂಬರ್ ಆರಂಭದಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದಕ್ಕೆ ಮೊದಲು ಅವರು 25 ದಿನ ಸೆರೆಮನೆಯಲ್ಲಿ ಕಳೆದಿದ್ದರು.ತಿಳಿದೋ ತಿಳಿಯದೆಯೋ, ಹಟ್ಟರ್ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಲು ಸರ್ಕಾರವೇ ನೆರವಾಯಿತು. ಭಾನುವಾರ, ಹಟ್ಟರ್ ಅವರನ್ನು ನ್ಯಾಯಾಲಯದ ಎದುರಿನಲ್ಲಿಯೇ ಗುಂಡಿಟ್ಟು ಹತ್ಯೆ ಮಾಡುವವರೆಗೆ ಈ ಪ್ರಕರಣ ಹೋಯಿತು. ಇಡೀ ದೇಶದಲ್ಲಿ ಇರುವ ಭದ್ರತೆ ಮತ್ತು ಸುರಕ್ಷತೆ ಬಗ್ಗೆ ದೊಡ್ಡದಾಗಿ ಮಾತನಾಡುವ ಜೋರ್ಡನ್‌ ಸರ್ಕಾರಕ್ಕೆ ಹಿಂದೆಂದೂ ಕಂಡಿಲ್ಲದಂತಹ ಈ ಹತ್ಯೆ ದೊಡ್ಡ ಆಘಾತವನ್ನೇ ಉಂಟು ಮಾಡಿದೆ.ಆದರೆ ಜನರಿಗೆ ಈ ಹತ್ಯೆ ಅಂತಹ ಆಶ್ಚರ್ಯ ಉಂಟು ಮಾಡಿರುವ ಸಂಭವ ಇಲ್ಲ. ಯಾಕೆಂದರೆ, ಹಟ್ಟರ್‌ ಅವರಿಗೆ ಸಾರ್ವಜನಿಕವಾಗಿಯೇ ಹಲವು ಕೊಲೆ ಬೆದರಿಕೆಗಳು ಬಂದಿದ್ದವು. ಶಿರಚ್ಛೇದ ಮಾಡುವುದಾಗಿಯೂ ಹೆದರಿಸಲಾಗಿತ್ತು. ಅವರ ಬಂಧನದ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ಈ ವಿಚಾರಗಳೇ ತುಂಬಿದ್ದವು. ಅವರ ವಿರುದ್ಧ ಸರ್ಕಾರವೇ ಆರೋಪಗಳನ್ನು ಹೇರಿದಾಗ ಸಾರ್ವಜನಿಕ ಆಕ್ರೋಶಕ್ಕೆ ಒಂದು ರೀತಿಯ ಕಾನೂನು ಸಮ್ಮತಿಯೂ ದೊರೆತಂತಾಯಿತು.ನ್ಯಾಯಾಂಗವು ಹಟ್ಟರ್ ಅವರೊಂದಿಗೆ ಮೃದುವಾಗಿ ನಡೆದುಕೊಂಡರೆ ಕಾನೂನನ್ನು ತಾವೇ ಕೈಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದೂ ಕೆಲವರು ಬರೆದರು. ಬೆದರಿಕೆ ಒಡ್ಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಯಾವುವೂ ಸರ್ಕಾರಕ್ಕೆ ಪ್ರೇರಣೆ ನೀಡಲಿಲ್ಲ. ಹತ್ತಿರದ ಮಸೀದಿಯೊಂದರಲ್ಲಿ ಧರ್ಮಬೋಧನೆ ಮಾಡುವ 49 ವರ್ಷದ ವ್ಯಕ್ತಿ ಹತ್ಯೆಯ ಆರೋಪಿ; ಇದೇ ವ್ಯಕ್ತಿ 2011ರಲ್ಲಿ ದೇವರನ್ನು ಅವಹೇಳನ ಮಾಡಿದ 15 ವರ್ಷದ ಬಾಲಕನನ್ನು ಥಳಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ.‘ಚಾರ್ಲಿ ಹೆಬ್ಡೊ’ ವ್ಯಂಗ್ಯಚಿತ್ರಕಾರರಿಗೆ ರಾಜ ಮತ್ತು ರಾಣಿಯ ಬೆಂಬಲ ಮತ್ತು ಭಿನ್ನಮತದ ಜನರ ವಿರುದ್ಧ ಆಕ್ರೋಶಕ್ಕೆ ಪ್ರಚೋದನೆ ನೀಡಲು ಸರ್ಕಾರಕ್ಕೆ ಇರುವ ಬಯಕೆಗಳ ನಡುವಣ ಅಸಾಂಗತ್ಯ ಇಲ್ಲಿನ ವ್ಯವಸ್ಥೆಯ ಲಕ್ಷಣವೇ ಆಗಿದೆ.ಧರ್ಮಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಇಲ್ಲಿನ ಸರ್ಕಾರ ಈ ರೀತಿಯಲ್ಲಿಯೇ ನಿಭಾಯಿಸಿದೆ: ಒಂದೆಡೆ, ಮೂಲಭೂತವಾದ ಮತ್ತು ಹಿಂಸಾತ್ಮಕ ತೀವ್ರವಾದದ ವಿರುದ್ಧ ಹೋರಾಡುವುದಾಗಿ ಅಧಿಕಾರಿಗಳು ಹೇಳಿಕೊಳ್ಳುತ್ತಾರೆ; ಮತ್ತೊಂದೆಡೆ, ಮುಸ್ಲಿಂ ಮೂಲಭೂತವಾದಿಗಳನ್ನು ಓಲೈಸುವುದಕ್ಕಾಗಿ ಪುಸ್ತಕಗಳನ್ನು ನಿಷೇಧಿಸಲಾಗುತ್ತದೆ ಮತ್ತು ಸಿನಿಮಾಗಳ ಮೇಲೆ ಕತ್ತರಿ ಪ್ರಯೋಗಿಸಲಾಗುತ್ತದೆ. ತಾವು ಇಸ್ಲಾಂನ ರಕ್ಷಕರೆಂದು ಹೇಳಿಕೊಳ್ಳಲಾಗುತ್ತದೆ.ಜೋರ್ಡನ್‌ನ ಹಾಶಿಂ ರಾಜ ವಂಶ ಚಾರಿತ್ರಿಕವಾಗಿ ಪ್ರವಾದಿ ಮುಹಮ್ಮದ್ ಅವರ ವಂಶಕ್ಕೆ ಸೇರಿದವರು ಮತ್ತು ಹಾಗಾಗಿ ಸದಾ ಅವರು ತಮ್ಮನ್ನು ಇಸ್ಲಾಂನ ರಕ್ಷಕರು ಎಂದು ಬಿಂಬಿಸಿಕೊಳ್ಳುತ್ತಾರೆ. ಜೋರ್ಡನ್‌ನ  ಜನಸಂಖ್ಯೆಯಲ್ಲಿ ಜೋರ್ಡನಿಯರು ಮತ್ತು ಪ್ಯಾಲೆಸ್ಟೀನಿಯರು ಸೇರಿದ್ದಾರೆ. ಇತ್ತೀಚೆಗೆ ಸಿರಿಯಾ ಮತ್ತು ಇರಾಕ್‌ನ  ನಿರಾಶ್ರಿತರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ನೆಲೆಯಾಗಿದ್ದಾರೆ. ಧರ್ಮದ ವಿಚಾರಕ್ಕೆ ಬಂದರೆ ಜೋರ್ಡನ್‌ನದು ಬಹುತೇಕ ಏಕರೂಪದ ವ್ಯವಸ್ಥೆ: ಇಲ್ಲಿನ ಶೇ 97ಕ್ಕೂ ಹೆಚ್ಚಿನ ಜನರು ಸುನ್ನಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು.ದೋಹಾ ಮೂಲದ ‘ಅರಬ್ ಸೆಂಟರ್ ಫಾರ್ ರಿಸರ್ಚ್ ಎಂಡ್ ಪಾಲಿಸಿ ಸ್ಟಡೀಸ್’ 2015ರಲ್ಲಿ ನಡೆಸಿದ ಅಧ್ಯಯನ ಪ್ರಕಾರ ಜೋರ್ಡನ್‌ನ ಶೇ 81ರಷ್ಟು ಜನರು ತಮ್ಮನ್ನು ‘ಧರ್ಮನಿಷ್ಠರು’ ಎಂದು ಗುರುತಿಸಿಕೊಂಡರೆ ಶೇ 15ರಷ್ಟು ಜನರು ತಮ್ಮನ್ನು ‘ಅತಿ ಧಾರ್ಮಿಕರು’ ಎಂದು ಗುರುತಿಸಿಕೊಳ್ಳುತ್ತಾರೆ. ಮುಸ್ಲಿಂ ಬ್ರದರ್‌ಹುಡ್‌ನ ರಾಜಕೀಯ ಘಟಕ ಇಲ್ಲಿನ ಸಂಸತ್ತಿನ ವಿರೋಧ ಪಕ್ಷಗಳಲ್ಲಿ ಅತ್ಯಂತ ಪ್ರಬಲವಾಗಿದೆ.ಹಟ್ಟರ್ ಅವರ ಬಂಧನಕ್ಕೆ ತಿಂಗಳುಗಳ ಮೊದಲು ಜೂನ್‌ನಲ್ಲಿ ಇಸ್ಲಾಂನ ಜನಪ್ರಿಯ ವಿದ್ವಾಂಸ ಮತ್ತು ಬೋಧಕ ಅಮ್ಜದ್ ಕೌರ್‌ಷಾ ಅವರನ್ನು ಸರ್ಕಾರ ಬಂಧಿಸಿತ್ತು.ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ವಿರುದ್ಧದ ಮೈತ್ರಿಕೂಟದಲ್ಲಿ ಜೋರ್ಡನ್ ವಹಿಸಿದ ಪಾತ್ರವನ್ನು ಬಹಿರಂಗವಾಗಿ ಟೀಕಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು.ನಾಗರಿಕರು ಮತ್ತು ಅಲ್ ನುಸ್ರಾ ಭಯೋತ್ಪಾದಕ ಸಂಘಟನೆಯ ಹೋರಾಟಗಾರರನ್ನು ಗುರಿಯಾಗಿಸಿ ಮೈತ್ರಿಕೂಟ ದಾಳಿ ನಡೆಸುತ್ತಿರುವುದನ್ನು 2014ರಲ್ಲಿ ಪ್ರಕಟವಾದ ವಿಡಿಯೊವೊಂದರಲ್ಲಿ ಅಮ್ಜದ್ ಪ್ರಶ್ನಿಸಿದ್ದರು. ಸ್ಟೇಟ್ ಸೆಕ್ಯುರಿಟಿ ಕೋರ್ಟ್ ಎಂಬ ಹೆಸರಿನ ವಿಶೇಷ ನ್ಯಾಯಾಲಯ ಮೂರು ತಿಂಗಳು ಈ ವ್ಯಕ್ತಿಗೆ ಜಾಮೀನು ನಿರಾಕರಿಸಿತ್ತು.ಹಲವು ಸಂಪ್ರದಾಯವಾದಿ ಜೋರ್ಡನಿಯರಲ್ಲಿ ಇದು ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೆ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲಾಯಿತು. ಅಮ್ಜದ್ ಜೈಲಿನಲ್ಲಿರುವಾಗಲೇ ಹಟ್ಟರ್ ಅವರ ಬಂಧನವಾಗಿತ್ತು. ಜನಪ್ರಿಯ ಮತ್ತು ಸಂಪ್ರದಾಯವಾದಿ ಬೋಧಕನನ್ನು ಬಂಧಿಸಿದ ಹಾಗೆಯೇ ಇಸ್ಲಾಮನ್ನು ಲೇವಡಿ ಮಾಡುವವರ ಬಗ್ಗೆಯೂ ಸರ್ಕಾರ ಎಚ್ಚರಿಕೆಯಿಂದ ಇದೆ ಎಂಬುದನ್ನು ತೋರಿಸುವ ಸಮತೋಲನದ ಕ್ರಮವಾಗಿ ಸರ್ಕಾರ ಹಟ್ಟರ್ ಅವರನ್ನು ಬಂಧಿಸಿತು ಎಂದು ಜೋರ್ಡನ್‌ನ ಹಲವರು ಭಾವಿಸಿದ್ದಾರೆ.ಇದು ಹೊಸ ಪ್ರವೃತ್ತಿಯೇನೂ ಅಲ್ಲ. ಜೋರ್ಡನ್‌ನ ದಂಡ ಸಂಹಿತೆ ಮತ್ತು ಮಾಧ್ಯಮ ಹಾಗೂ ಪ್ರಕಟಣಾ ಕಾನೂನಿನಲ್ಲಿ ದೇವರು, ಧಾರ್ಮಿಕ ಸಂಕೇತಗಳನ್ನು ಅವಮಾನಿಸುವ ಭಾಷಣ ಮತ್ತು ಇತರ ಅಭಿವ್ಯಕ್ತಿಗಳನ್ನು ನಿಷೇಧಿಸುವ ಮತ್ತು ಅವುಗಳನ್ನು ಅಪರಾಧ ಎಂದು ಸಾರುವ ಹಲವು ಕಲಂಗಳಿವೆ.ಜನಾಂಗೀಯ ಸಂಘರ್ಷಕ್ಕೆ ಕಾರಣವಾಗುವ ಅಂಶಗಳಿಗೆ ಸಂಬಂಧಿಸಿಯೂ ಇಂತಹುದೇ ನಿಯಮಗಳಿವೆ. ಇಂತಹ ಅಪರಾಧಗಳಿಗೆ ಗರಿಷ್ಠ ಮೂರು ವರ್ಷ ಸೆರೆವಾಸದ ಶಿಕ್ಷೆ ವಿಧಿಸಬಹುದಾಗಿದೆ. ಕಾನೂನು ಎಷ್ಟೊಂದು ಅಸ್ಪಷ್ಟವಾಗಿದೆಯೆಂದರೆ ಅದನ್ನು ಸ್ವೇಚ್ಛೆಯಿಂದ ಬಳಸುವುದಕ್ಕೆ ಇದು ಕಾರಣವಾಗುತ್ತದೆ. ಹಾಗೆಯೇ  ತಮಗೆ ಆಗದವರು ಯಾರಿದ್ದಾರೋ ಅವರ ವಿರುದ್ಧ ಬಳಸುವುದಕ್ಕೆ ಅವಕಾಶ ಒದಗಿಸುತ್ತದೆ.ಜೋರ್ಡನ್‌ನ ಮಾಧ್ಯಮ ಆಯೋಗವು ಪ್ರತಿ ವರ್ಷ ಹತ್ತಾರು ಪುಸ್ತಕಗಳು, ಕವನ ಸಂಕಲನಗಳನ್ನು ನಿಷೇಧಿಸುತ್ತದೆ. ಹಾಶಿಂ ರಾಜ ವಂಶ ಮತ್ತು ಇತರ ಅರಬ್ ರಾಜ ವಂಶಗಳಿಗೆ ಅವಮಾನ, ಇಸ್ಲಾಂನ ಅವಹೇಳನ, ‘ಸಾರ್ವಜನಿಕ ನೈತಿಕತೆಗೆ ವ್ಯತಿರಿಕ್ತವಾಗಿದೆ’ ಮುಂತಾದ ವಿವಿಧ ಕಾರಣಗಳನ್ನು ನೀಡಿ ಪುಸ್ತಕಗಳ ಮೇಲೆ ನಿಷೇಧ ಹೇರಲಾಗುತ್ತದೆ. 2014ರ ಒಂದು ಉದಾಹರಣೆಯನ್ನು ಗಮನಿಸಬಹುದು: ಜೋರ್ಡನ್ ವಿಶ್ವವಿದ್ಯಾಲಯದಲ್ಲಿ ತೌಲನಿಕ ಸಾಹಿತ್ಯದ ಪ್ರಾಧ್ಯಾಪಕರೊಬ್ಬರು ಬರೆದ ತತ್ವಶಾಸ್ತ್ರದ ಪುಸ್ತಕವೊಂದನ್ನು ನಿಷೇಧಿಸಲಾಯಿತು. ಪುಸ್ತಕದಲ್ಲಿ ‘ದೇವರು ಒಳ್ಳೆಯ ಬರಹಗಾರ ಅಲ್ಲ’ ಎಂಬ ವಾಕ್ಯ ಇತ್ತು ಎಂಬುದು ನಿಷೇಧಕ್ಕೆ ಕಾರಣ.ಒಂದು ಪುಸ್ತಕ, ಸಿನಿಮಾ ಅಥವಾ ಯಾವುದೇ ಕಲಾಕೃತಿಯನ್ನು ನಿಷೇಧಿಸುವ ನಿರ್ಧಾರ ಕೈಗೊಳ್ಳುವ ಮೊದಲು ಮಾಧ್ಯಮ ಆಯೋಗವು ಇಲ್ಲಿನ ಮುಸ್ಲಿಂ ಮತ್ತು ಕ್ರೈಸ್ತ ಧಾರ್ಮಿಕ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸುತ್ತದೆ. ಪ್ರವಾದಿಗಳ ಚಿತ್ರಣದ ಕಾರಣಕ್ಕಾಗಿ ‘ನೂಹ್’ ಎಂಬ ಸಿನಿಮಾವನ್ನು ನಿಷೇಧಿಸಲಾಗಿತ್ತು. ಕ್ರೈಸ್ತ ಧರ್ಮವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ ‘ಮೇರಿ ಆಫ್ ನಜರೆತ್’ ಎಂಬ ಸಿನಿಮಾದ ಮೇಲೆ ನಿಷೇಧ ಹೇರಲಾಗಿತ್ತು.ಹಟ್ಟರ್ ಅವರ ಹತ್ಯೆಯ ನಂತರ ಹೇಳಿಕೆ ನೀಡಿದ ಸರ್ಕಾರ, ಹಟ್ಟರ್ ಹಂತಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಈ ಘಟನೆಯನ್ನು ಉಪಯೋಗಿಸಿಕೊಂಡು ಸಮಾಜದಲ್ಲಿ ದ್ವೇಷ ಹರಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತು. ಒಂದಲ್ಲ ಒಂದು ಗುಂಪಿನ ಭಾವನೆಗಳಿಗೆ ಗಾಸಿಯಾಗಿದೆ ಎಂಬ ಕಾರಣದಿಂದ ಮುಕ್ತ ಅಭಿವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಸರ್ಕಾರ ಮುಂದುವರಿಸುತ್ತಿರುವಷ್ಟು ಕಾಲ ಸರ್ಕಾರ ನೀಡಿರುವ ಮೇಲಿನ ಹೇಳಿಕೆಗೆ ಯಾವ ಅರ್ಥವೂ ಇಲ್ಲ.ಜೋರ್ಡನ್‌ನ ಈಗಿನ ಪರಿಸ್ಥಿತಿ ಬಹಳ ಪ್ರಕ್ಷುಬ್ಧವಾಗಿದೆ. ಹಟ್ಟರ್ ಹತ್ಯೆಯ ನಂತರ ಸಮಾಜದಲ್ಲಿ ದ್ವೇಷ ಹರಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದ ನಂತರ ಅಂತರ್ಜಾಲದಲ್ಲಿ ಹಟ್ಟರ್ ಹತ್ಯೆಯನ್ನು ಸಂಭ್ರಮಿಸಿ ಅಥವಾ ಸಮರ್ಥಿಸಿ ನೂರಾರು ಹೇಳಿಕೆಗಳು ಪ್ರಕಟವಾಗಿವೆ.ಜೋರ್ಡನ್‌ಗೆ ನಿಜವಾಗಿಯೂ ಮೂಲಭೂತವಾದ ಮತ್ತು ಹಿಂಸಾತ್ಮಕ ತೀವ್ರವಾದದ ವಿರುದ್ಧ ಹೋರಾಟ ಮಾಡುವ ಮನಸಿದ್ದರೆ ಮುಕ್ತ ಅಭಿವ್ಯಕ್ತಿಯ ಹಕ್ಕನ್ನು ಎತ್ತಿ ಹಿಡಿಯುವ ಮೂಲಕ ಅದನ್ನು ಆರಂಭಿಸಬೇಕು.ಸ್ವಾತಂತ್ರ್ಯವನ್ನು ನಿರ್ಬಂಧಿಸಲು ಕಾನೂನನ್ನು ಬಳಸಿಕೊಳ್ಳಲಾಗುತ್ತದೆ ಎಂದಾದರೆ ಅದು ಕಾನೂನು ಸುವ್ಯವಸ್ಥೆ ಅಲ್ಲ. ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕಾಗಿ ಜೋರ್ಡನ್‌ನಲ್ಲಿ ಹತ್ಯೆಯಾದ ಮೊದಲ ವ್ಯಕ್ತಿ ಹಟ್ಟರ್ ಆಗಿರಬಹುದು, ಆದರೆ ಈ ಕಾರಣಕ್ಕೆ ಹತ್ಯೆಯಾದ ಕೊನೆಯ ವ್ಯಕ್ತಿ ಅವರು ಎಂದು ಹೇಳಲಾಗದು.(ಲೇಖಕಿ ಅಮ್ಮಾನ್‌ನ 7iber.com ಸ್ಥಾಪಕಿ ಮತ್ತು ಕಾರ್ಯನಿರ್ವಾಹಕ ಸಂಪಾದಕಿ ದಿ ನ್ಯೂಯಾರ್ಕ್‌ ಟೈಮ್ಸ್‌)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.