ಯುಎಇ ಸಂಸ್ಕೃತಿಯ ಅಪೂರ್ವ ಗುಮ್ಮಟ

6

ಯುಎಇ ಸಂಸ್ಕೃತಿಯ ಅಪೂರ್ವ ಗುಮ್ಮಟ

Published:
Updated:
ಯುಎಇ ಸಂಸ್ಕೃತಿಯ ಅಪೂರ್ವ ಗುಮ್ಮಟ

‘‘ಈ ಭವ್ಯ ಪೂಜಾಸ್ಥಳವು ತನ್ನ ಗಾತ್ರ ಮತ್ತು ಸೌಂದರ್ಯದಿಂದ ಆಕರ್ಷಣೀಯವಾಗಿದೆ. ಉತ್ಕೃಷ್ಟ ಕೌಶಲ್ಯ ಮತ್ತು ಕಲಾಸೃಷ್ಟಿಯ ಜೊತೆಗೆ ಸಾಧನೆ ಮತ್ತು ಐಕ್ಯತೆಯನ್ನು ಇದು ಪ್ರತಿನಿಧಿಸುತ್ತಿದೆ. ಇಸ್ಲಾಂ ಧರ್ಮದಲ್ಲಿ ಅಂತರ್ಗತವಾಗಿರುವ ಶಾಂತಿ, ಧರ್ಮನಿಷ್ಠೆ, ಸಾಮರಸ್ಯ, ಸೌಹಾರ್ದತೆಯ ಸಂಕೇತವಾದ ಈ ಸ್ಥಳಕ್ಕೆ ಭೇಟಿ ನೀಡಿ ಹರ್ಷಗೊಂಡಿದ್ದೇನೆ.

ಸಂಯುಕ್ತ ಅರಬ್‌ ಸಂಸ್ಥಾನದ ಮಾಜಿ ಅಧ್ಯಕ್ಷ ಶೇಖ್‌ ಝಾಯೆದ್‌ ಬಿನ್‌ ಸುಲ್ತಾನ್‌ ಅಲ್‌ ನಹ್ಯಾನ್‌ ಅವರ ಅಸಾಮಾನ್ಯ ದೂರದೃಷ್ಟಿ ಮುಂದಿನ ತಲೆಮಾರಿಗೆ ಈ ಸುಂದರ ಪೂಜಾಮಂದಿರದ ಮೂಲಕ ತಿಳಿಯುವಂತಿದೆ’’. ವಿಶ್ವದ ವಿಶಾಲ ಮತ್ತು ಸುಂದರ ಮಸೀದಿಗಳ ಪೈಕಿ ಒಂದೆಂದು ಪರಿಗಣಿಸಲಾದ ಯುಎಇ ರಾಜಧಾನಿ ಅಬುಧಾಬಿಯಲ್ಲಿ ಇರುವ ‘ಶೇಖ್‌ ಝಾಯೆದ್‌ ಗ್ರಾಂಡ್‌ ಮಸೀದಿ’ಯ ಸಂದರ್ಶಕರ ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬರೆದಿರುವ ಟಿಪ್ಪಣಿ ಇದು.ಕಳೆದ ವರ್ಷ ತೈಲ ಸಂಪದ್ಭರಿತ ರಾಷ್ಟ್ರಸಂಯುಕ್ತ ಅರಬ್‌ ಸಂಸ್ಥಾನಕ್ಕೆ ತೆರಳಿದ್ದ ಮೋದಿ ಅವರು, ವಿಶ್ವದಲ್ಲಿಯೇ ಮೂರನೇ ಅತಿ ದೊಡ್ಡದು ಎನ್ನಲಾದ ಅಬುಧಾಬಿಯ ‘ಶೇಖ್‌ ಝಾಯೆದ್‌ ಗ್ರಾಂಡ್‌ ಮಸೀದಿ’ಗೆ ಭೇಟಿ ನೀಡಿದ್ದರು. ಇಸ್ಲಾಮಿಕ್‌ ವಾಸ್ತುಶಿಲ್ಪದ ಹಿರಿಮೆಯನ್ನು ಸಾರುವ ಈ ಮಸೀದಿಯು ಒಮ್ಮೆಗೆ 40,000 ಜನ ಸೇರಿ ಪ್ರಾರ್ಥಿಸಬಲ್ಲಷ್ಟು ದೊಡ್ಡದು.ಕನಸಿನ ಕೂಸು

ಯುಎಇ ಪ್ರಥಮ ಅಧ್ಯಕ್ಷ ದಿವಂಗತ ಶೇಖ್ ಝಾಯೆದ್‌ ಬಿನ್ ಸುಲ್ತಾನ್ ಆಲ್ ನಹ್ಯಾನ್‌ ಅವರ ಕನಸಿನ ಕೂಸಾದ ಈ ಮಸೀದಿಗೆ ಅವರ ಹೆಸರನ್ನೇ ಇಡಲಾಗಿದೆ. ಅವರ ಇಚ್ಛೆಯಂತೆ ಮಸೀದಿಯ ಅಂಗಣದಲ್ಲೇ ಅವರ ಸಮಾಧಿಯೂ ಇದೆ.ಯುಎಇ ಸಂಸ್ಕೃತಿಯನ್ನು ಪ್ರತಿಬಿಂಬಿಸುವ, ಅತ್ಯುನ್ನತ ವಾಸ್ತುಶಿಲ್ಪದ, ಇಸ್ಲಾಮ್ ಧರ್ಮದ ಉದ್ದೇಶಗಳನ್ನು ಸಾರುವ ಹಾಗೂ ಸಾಮರಸ್ಯದ ಪ್ರತೀಕವಾದ ಮಸೀದಿಯನ್ನು ನಿರ್ಮಿಸುವುದು ಅವರ ಕನಸಾಗಿತ್ತು. ಮತಾಂಧತೆ ಮತ್ತು ಉಗ್ರಗಾಮಿತ್ವದಿಂದ ದೂರವುಳಿಯಬೇಕು, ಇಸ್ಲಾಮಿಕ್‌ ನಂಬಿಕೆಯ ಸಹಿಷ್ಣುತಾಭಾವವನ್ನು ಪ್ರಚುರಪಡಿಸಬೇಕು, ಇಸ್ಲಾಂ ಧರ್ಮದ ಶಾಂತಿ, ಸಹನೆ ಮತ್ತು ವೈವಿಧ್ಯತೆಯನ್ನು ಎಲ್ಲರೂ ಅರಿಯುವಂತಾಗಬೇಕು – ಎನ್ನುವುದು ಈ ವಾಸ್ತುಶಿಲ್ಪವನ್ನು ರೂಪಿಸುವ ನಿಟ್ಟಿನಲ್ಲಿ ಶೇಖ್‌ ಝಾಯೆದ್‌ ಅವರು ಕಂಡ ಕನಸುಗಳು. ಎಲ್ಲರೂ ಒಗ್ಗೂಡಿ ಒಬ್ಬರನ್ನೊಬ್ಬರು ಅರಿಯುವ ಶ್ರದ್ಧಾಕೇಂದ್ರ ಇದಾಗಬೇಕು ಎನ್ನುವ ಆಸೆ ಅವರದಾಗಿತ್ತು.1999ರಲ್ಲಿ ಮಸೀದಿಯ ಶಂಕುಸ್ಥಾಪನೆ ನಡೆಯಿತು. ಆರಂಭದಲ್ಲಿ ಕಾಮಗಾರಿ ನಿಧಾನವಾಗಿ ಸಾಗಿತು. 2004ರ ನವೆಂಬರ್ 2ರಂದು ಶೇಖ್ ಝಾಯೆದ್‌ ಅವರು ನಿಧನರಾದರು. ಅವರ ಮಕ್ಕಳು  ವಿಶ್ವದಾದ್ಯಂತ ಅಪರೂಪದ ವಸ್ತುಗಳನ್ನು ತಂದು ಮಸೀದಿಯನ್ನು, ಅದರ ಹಿಂದಿನ ಉದ್ದೇಶವನ್ನು ಮತ್ತು ಅವರ ತಂದೆಯ ಕನಸನ್ನು ಸಾಕಾರಗೊಳಿಸಿದರು.ಅಪರೂಪದ ಸಿಂಗಾರ

ಮಸೀದಿಯ ನಿರ್ಮಾಣ ಕಾರ್ಯದಲ್ಲಿ ಇಟಲಿ, ಜರ್ಮನಿ, ಮೊರಾಕ್ಕೊ, ಭಾರತ, ಟರ್ಕಿ, ಇರಾನ್, ಚೀನಾ, ಗ್ರೀಸ್ ದೇಶಗಳಿಂದ ತರಿಸಲಾದ ಹಲವು ವಿಶಿಷ್ಟ ಸಾಮಗ್ರಿಗಳನ್ನು ಬಳಸಲಾಗಿದೆ. ಅಮೃತ ಶಿಲೆ, ಚಿನ್ನ, ವೈಢೂರ್ಯ, ಸೆರಾಮಿಕ್, ಕ್ರಿಸ್ಟಲ್ ಹರಳುಗಳನ್ನು ಬಳಸಿ ಸಿಂಗರಿಸಲಾಗಿದೆ. ಮೊರಾಕ್ಕೊ ದೇಶದ ವಾಸ್ತು ವಿನ್ಯಾಸವನ್ನು ಅಳವಡಿಸಿಕೊಂಡಿದ್ದರೂ ಹಲವು ದೇಶಗಳ ವಾಸ್ತುಶೈಲಿಗಳನ್ನು ಅಗತ್ಯಕ್ಕನುಗುಣವಾಗಿ ಬಳಸಿಕೊಳ್ಳಲಾಗಿದೆ. ಒಟ್ಟು 82 ವಿವಿಧ ಗಾತ್ರದ ಗುಮ್ಮಟಗಳಿವೆ. ಪ್ರಧಾನ ಗುಮ್ಮಟ 32.8 ಮೀಟರ್ ವ್ಯಾಸ ಹೊಂದಿದ್ದು, ಒಳಭಾಗದಿಂದ 7 ಮೀ. ಎತ್ತರ ಹಾಗೂ ಹೊರಭಾಗದಿಂದ ೮೫ ಮೀ. ಎತ್ತರವಿದೆ.ಗುಮ್ಮಟವನ್ನು ರಚಿಸಲು ಅತಿ ನಯವಾದ ಅಮೃತಶಿಲೆಯನ್ನು ಬಳಸಿದ್ದಾರೆ. ಅದರ ಒಳ ಆವರಣದಲ್ಲಿ ಕುರಾನ್ ವಾಕ್ಯಗಳನ್ನು ಬರೆಯಲಾಗಿದೆ. ಶಬ್ದ ಪ್ರತಿಧ್ವನಿಸದಂತೆ ಅತ್ಯಂತ ಕರಾರುವಾಕ್ಕಾಗಿ ಗುಮ್ಮಟಗಳನ್ನು ನಿರ್ಮಿಸಿದ್ದಾರೆ. ಇದರಿಂದಾಗಿ ಧರ್ಮಗುರುಗಳು ನೀಡುವ ಪ್ರವಚನಗಳು ಹಾಗೂ ನಮಾಜ್ ಸಮಯದಲ್ಲಿನ ಕುರಾನ್ ಪಠಣ ಸ್ಪಷ್ಟವಾಗಿ ಕೇಳಿಸುತ್ತದೆ.ಮಸೀದಿಯ ವೈಶಿಷ್ಟ್ಯಗಳು

ಮಸೀದಿಯ ಆವರಣದೊಳಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಂಬಗಳಿವೆ. ಈ ಕಂಬಗಳ ಹೊರಭಾಗಕ್ಕೆ ಅಮೃತಶಿಲೆಯ ಚಿಕ್ಕಚಿಕ್ಕ ಚಪ್ಪಡಿಗಳನ್ನು ಅಳವಡಿಸಲಾಗಿದೆ. ಅವುಗಳ ನಡುವೆ ಹಲವಾರು ಅಮೂಲ್ಯ ಹರಳುಗಳನ್ನು ಅಳವಡಿಸಲಾಗಿದೆ.ಮಸೀದಿಯ ಪ್ರಾಂಗಣವನ್ನು ಗ್ರೀಸ್ ದೇಶದ ಅಪ್ಪಟ ಬಿಳಿಬಣ್ಣದ ಅಮೃತ ಶಿಲೆಯ ಚಪ್ಪಡಿಗಳಿಂದ ಸಿಂಗರಿಸಲಾಗಿದೆ. ಕಟ್ಟಡದ ಸುತ್ತಲೂ ವಿಸ್ತಾರವಾದ ಸುಂದರ ನೀರಿನ ಕೊಳಗಳನ್ನು ನಿರ್ಮಿಸಲಾಗಿದೆ.ಇರುಳಿನಲ್ಲಿ ಮಸೀದಿಗೆ ಅಳವಡಿಸಿರುವ ಸುಂದರ ಹಾಗೂ ಪ್ರಜ್ವಲ ಬೆಳಕಿನ ಕಾಂತಿಯು ಅಮೃತಶಿಲೆಯನ್ನು ಪ್ರತಿಫಲಿಸಿ ಕಟ್ಟಡದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಚೌಕಾಕಾರದ ಸ್ತಂಭಗಳಲ್ಲಿ ಪ್ರಖರವಾದ ಬೆಳಕಿನ ಕಿರಣಗಳನ್ನು ಹಾಯಿಸುವ ಫೋಕಸ್ ದೀಪಗಳನ್ನು ಅಳವಡಿಸಲಾಗಿದ್ದು ಇವು ಮಸೀದಿಯ ಹೊರಮೈಯನ್ನು ಬೆಳಗುತ್ತವೆ. ಬೆಳದಿಂಗಳ ಚಂದ್ರನ ಬೆಳಕು ಗುಮ್ಮಟಗಳನ್ನು ಬೆಳಗುವಷ್ಟು ಬೆಳಕನ್ನು ಮಾತ್ರ ಅವು ಹೊರಹೊಮ್ಮಿಸುತ್ತದೆ. ಚಂದ್ರನ ಆಕೃತಿಗೆ ತಕ್ಕಂತೆ ಮಸೀದಿಯ ಮೇಲೆ ಬೀಳುವ ಬೆಳಕೂ ಏರಿಳಿತವಾಗುವ ವಿಶೇಷ ವ್ಯವಸ್ಥೆಯನ್ನಿಲ್ಲಿ ರೂಪಿಸಲಾಗಿದೆ. ತೂಗುದೀಪಗಳ ಗೊಂಚಲು

ಇಲ್ಲಿಯ ತೂಗುದೀಪಗಳ ಗೊಂಚಲು (ಶಾಂಡಲಿಯರ್) ವಿಶ್ವದ ಅತಿ ದೊಡ್ಡ ‘ದೀಪಗಳ ಗೊಂಚಲು’ ಎಂದು ಹೆಸರಾಗಿದೆ. ಜರ್ಮನಿಯಲ್ಲಿ ತಯಾರಾದ ಇದನ್ನು ಆಸ್ಟ್ರಿಯಾದ ಸಾವಿರಾರು ಸ್ವರೋವ್‌ಸ್ಕಿ ಹರಳುಗಳು ಮತ್ತು ಇಟಲಿಯ ಗಾಜಿನ ತುಣುಕುಗಳಿಂದ ಅಲಂಕರಿಸಲಾಗಿದೆ.ಈ ಮಸೀದಿಯಲ್ಲಿ ಕೈಮಗ್ಗದಲ್ಲಿ ನೇಯ್ದಿರುವ ವಿಶ್ವದ ಅತಿ ದೊಡ್ಡ ಕಾರ್ಪೆಟ್‌ (6 ಸಾವಿರ ಚದರ ಮೀಟರ್‌) ಹಾಸಲಾಗಿದೆ. ಇರಾನಿನ ಕಲಾವಿದ ಅಲಿ ಖಲೀಖಿ ವಿನ್ಯಾಸಗೊಳಿಸಿರುವ ಈ ಅಪರೂಪದ ನೆಲಹಾಸು 1,300 ಮಂದಿ ಕುಶಲಕರ್ಮಿಗಳ ಶ್ರಮದಿಂದ ರೂಪುಗೊಂಡಿದೆ.ಮಸೀದಿಯ ಪ್ರಾಂಗಣ ಹಾಗೂ ಹೊರಗೋಡೆಗಳ ಮೇಲೆಲ್ಲಾ ಗುಲಾಬಿ, ನೈದಿಲೆ, ಲಿಲ್ಲಿ, ಟ್ಯುಲಿಪ್‌, ಮಲ್ಲಿಗೆ, ಗಸಗಸೆ ಮುಂತಾದ ಹೂಗಳ ಚಿತ್ರಣವನ್ನು ಬಣ್ಣಬಣ್ಣದ ಅಮೃತಶಿಲೆಗಳ ಮೂಲಕ ಚಿತ್ರಿಸಲಾಗಿದೆ. ಕೆವಿನ್‌ಡೀನ್‌ ಎಂಬ ಆಂಗ್ಲ ವಿನ್ಯಾಸಕ ರೂಪಿಸಿರುವ ಈ ಚಿತ್ರಣಕ್ಕೆ ವಿಶ್ವದ ನಾನಾ ಮೂಲೆಗಳಿಂದ ತಂದ 37 ವಿವಿಧ ಬಣ್ಣಗಳ ಅಮೃತಶಿಲೆಗಳನ್ನು ಬಳಸಲಾಗಿದೆ.ಗ್ರೀಸ್ ಹಾಗೂ ಮ್ಯಾಸಿಡೋನಿಯದಿಂದ ತರಿಸಲಾದ ಸಿವೆಕ್ ಮಾರ್ಬಲ್ ಹೊರಭಾಗದ ನಾಲ್ಕು ಮಿನಾರ್‌ಗಳೂ ಸೇರಿದಂತೆ ಮಸೀದಿಯ ಪೂರ್ತಿ ಹೊರ ಆವರಣವನ್ನು ಆವರಿಸಿವೆ. ಈ ಮಾರ್ಬಲ್ ಚಪ್ಪಡಿಗಳ ವಿಶೇಷವೆಂದರೆ, ಸೂರ್ಯನ ಶಾಖವನ್ನು ಅತಿ ಕಡಿಮೆಯಾಗಿ ಹೀರುವ ಗುಣ ಹೊಂದಿರುವುದು. ಇದರಿಂದಾಗಿ ಅತಿ ಬೇಸಗೆಯಲ್ಲೂ ನೆಲ ತಣ್ಣಗೆ ಹಿತವಾಗಿರುತ್ತದೆ.

ಮಕರಾನಾ ಅಮೃತ ಶಿಲೆಯನ್ನು (ಭಾರತದ ರಾಜಸ್ತಾನದ್ದು) ಕಚೇರಿ ಹಾಗೂ ಇತರ ಕೋಣೆಗಳಿಗೆ ಬಳಸಿದ್ದಾರೆ. ನೆಲದ ಮೇಲೆ ವಿವಿಧ ಸುಂದರ ವಿನ್ಯಾಸಗಳನ್ನು ರಚಿಸಲು ಇಟಲಿಯ ಆಕ್ವಾ ಬಿಯಾನಾ ಮತ್ತು ಬಿಯಾನೋ ಮಾರ್ಬಲ್‌ಗಳನ್ನೂ ಚೀನಾದೇಶದ ಈಸ್ಟ್ ವೆಸ್ಟ್ ಮತ್ತು ಮಿಂಗ್ ಗ್ರೀನ್ ಮಾರ್ಬಲ್‌ಗಳನ್ನೂ ಹೆಚ್ಚಾಗಿ ಉಪಯೋಗಿಸಲಾಗಿದೆ.ಪ್ರಾರ್ಥನಾ ವೇಳೆಯನ್ನು ತೋರಿಸುವ ಗಡಿಯಾರ, 12 ಎಳೆಯ ಹೂವಿನ ಮಾದರಿಯಲ್ಲಿದೆ. ಅದಕ್ಕೆ ಹರಳುಗಳನ್ನು ಹೊಂದಿಸಲಾಗಿದೆ. ದಿನದ ಐದು

ಹೊತ್ತಿನ ನಮಾಜಿನ ವೇಳೆಗಳನ್ನು ಕರಾರುವಕ್ಕಾಗಿ ತೋರಿಸುವುದರ ಜೊತೆಗೆ, ಸೂರ್ಯೋದಯದ ವೇಳೆಯನ್ನೂ ಈ ಗಡಿಯಾರ ದಾಖಲಿಸುತ್ತದೆ.ಇಸ್ಲಾಂ ಮಾಹಿತಿಯ ಕಣಜ

ಮಸೀದಿಯ ಮೂರನೇ ಮಹಡಿಯಲ್ಲಿ ‘ಗ್ರಂಥಾಲಯ’ವಿದೆ. ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ಇಲ್ಲಿ ಬೃಹತ್ ಗ್ರಂಥ ಭಂಡಾರವಿದೆ. ವಿಜ್ಞಾನ, ಇತಿಹಾಸ, ಧರ್ಮ, ಮಕ್ಕಳ ಸಾಹಿತ್ಯ, ವಾಸ್ತುಶಿಲ್ಪ, ವಿಶ್ವಕೋಶ, ಪತ್ರಿಕೆಗಳು, ಅರೇಬಿಕ್‌ ಹಸ್ತಪ್ರತಿಗಳು, ಅತ್ಯಂತ ಹಳೆಯ ದಾಖಲೆಗಳು, 16 ನೇ ಶತಮಾನದ ಕುರಾನ್‌ ಸೇರಿದಂತೆ ಐದು ಸಾವಿರಕ್ಕೂ ಅಧಿಕ ಸಂಗ್ರಹದಿಂದಾಗಿ ಸಂಶೋಧನಾಸ್ತಕರಿಗೆ ಇದು ವರದಾನವಾಗಿದೆ.ಮಸೀದಿಯ ಚಿತ್ರವಿರುವ ಅಂಚೆಚೀಟಿಯನ್ನು ಯುಎಇ ಸರ್ಕಾರ ಬಿಡುಗಡೆಗೊಳಿಸಿದೆ. ಯುಎಇ ಪ್ರಥಮ ಅಧ್ಯಕ್ಷ ದಿವಂಗತ ಶೇಖ್ ಝಾಯೆದ್‌ ಬಿನ್ ಸುಲ್ತಾನ್ ಆಲ್ ನಹ್ಯಾನ್‌ ಅವರ ಆಶಯವನ್ನು ಪ್ರತಿನಿಧಿಸುವ ಈ ಮಸೀದಿ ಯುಎಇ ದೇಶದ ಪ್ರಮುಖ ಪ್ರವಾಸಿ ತಾಣವಾಗಿದೆ.

ಮಹಿಳೆಯರಿಗೆ, ಸರ್ವಧರ್ಮೀಯರಿಗೂ ಪ್ರವೇಶ

ಅಬುಧಾಬಿಯಲ್ಲಿರುವ ಪ್ರಸಿದ್ಧ ಮಸೀದಿಗೆ ಸರ್ವಧರ್ಮೀಯರಿಗೂ ಪ್ರವೇಶಕ್ಕೆ ಅನುಮತಿಯಿರುವುದು  ವಿಶೇಷ. 545 ದಶಲಕ್ಷ ಡಾಲರ್‌ ವೆಚ್ಚದಲ್ಲಿ ನಿರ್ಮಿಸಿದ ಈ ಮಸೀದಿಯಲ್ಲಿ ಧ್ವನಿಮುದ್ರಿತ ಕುರಾನ್ ಮಂತ್ರಗಳನ್ನು 24 ಘಂಟೆಗಳೂ ಪ್ರಸಾರ ಮಾದಲಾಗುತ್ತದೆ. ಮಹಿಳೆಯರೂ ಪ್ರಾರ್ಥನೆ ಮಾಡಲು ಬರುವುದು ಮತ್ತೊಂದು ವಿಶೇಷ. ಪ್ರಧಾನ ಸಭಾಂಗಣದ ಎಡಬಲಗಳಲ್ಲಿನ ಎರಡು ವಿಶಾಲ ಕೋಣೆಗಳನ್ನು ಮಹಿಳೆಯರಿಗಾಗಿ ಪ್ರಾರ್ಥನೆಮಾಡಲು ಮೀಸಲಾಗಿಟ್ಟಿದ್ದಾರೆ. ಪ್ರತಿಕೋಣೆಯಲ್ಲಿ 1500 ಜನ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಬಹುದು.ಮಸೀದಿಗೆ ಬರುವ ‘ಸಂದರ್ಶಕರು’ ಪಾಲಿಸಬೇಕಾದ ಕೆಲವು ನಿಯಮಗಳು, ಕಟ್ಟುಪಾಡುಗಳು, ಕಡ್ಡಾಯವಾಗಿದೆ. ಮಹಿಳೆಯರಿಗೆ ‘ಬುರ್ಖಾ’ ಹಾಗೂ ಪುರುಷರಿಗೆ ‘ಪೂರ್ಣ ಪ್ರಮಾಣದ ವಸ್ತ್ರಗಳ ಧಾರಣೆ‘ ಅತ್ಯಗತ್ಯವಾಗಿವೆ.  ಮೆಹ್ರಾಬ್ (ಇಮಾಮರು ನಮಾಜಿಗೆ ನಿಲ್ಲುವ ತಾಣ) ಸುಮಾರು 3 ಮೀ. ಎತ್ತರವಿದ್ದು ಅತ್ಯಾಧುನಿಕ ಆಪ್ಟಿಕಲ್ ಫೈಬರ್ ದೀಪಗಳಿಂದ ಸಜ್ಜುಗೊಂಡಿದೆ. ಗೋಡೆಯ ಮೇಲೆ ಅರೇಬಿಕ್ ಬರಹ ಶೈಲಿಯಲ್ಲಿ ಅಲ್ಲಾಹನ 99 ನಾಮಗಳನ್ನು ಬರೆಯಲಾಗಿದೆ. ಒಟ್ಟು 250 ಆಪ್ಟಿಕಲ್ ಫೈಬರ್ ದೀಪಗಳು ಈ ನಾಮಗಳ ಹಿನ್ನೆಲೆಯಲ್ಲಿ ಬೆಳಗುತ್ತಾ ಗೋಡೆಗೆ ಒಂದು ವಿಶಿಷ್ಟ ಕಳೆಯನ್ನು ನೀಡುತ್ತವೆ. ಇದರ ಕರ್ತೃ ಮೊಹಮ್ಮದ್ ಮೇಂದಿ ಯುಎಇಯ ಖ್ಯಾತ ಕ್ಯಾಲಿಗ್ರಫಿ ಬರಹಗಾರರು. ಇವರ ಜೊತೆ ಕೈಯಾಡಿಸಿದವರು ಸಿರಿಯಾ ದೇಶದ ಫಾರೂಖ್ ಹದ್ದಾದ್ ಹಾಗೂ ಜೋರ್ಡಾನ್‌ನ ಮೊಹಮ್ಮದ್ ಆಲಮ್.ಮೆಹ್ರಾಬ್ ಹಾಗೂ ಒಳಾಂಗಣದ ಗೋಡೆಯಮೇಲಿನ ಕಲಾತ್ಮಕ ರಚನೆಗಳು, ಮುಖ್ಯ ಮಿನಾರ್ ಮತ್ತು ಗುಂಬಜುಗಳ ಮೇಲಿರುವ ಕಳಸಗಳನ್ನು ಅಪ್ಪಟ 24 ಕ್ಯಾರೆಟ್ ಬಂಗಾರದ ಲೇಪನದಿಂದ ರೂಪಿಸಲಾಗಿದೆ. ಕುರಾನ್ ವಾಕ್ಯಗಳಿಗೆ ಚಿನ್ನದ ಲೇಪನ ಭವ್ಯವಾಗಿದೆ. ಮಸೀದಿಯ ಪ್ರಧಾನ ಧ್ವಾರದ ವಿನ್ಯಾಸದ ಸೊಬಗು ಅಮೋಘವಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry