ಪ್ರಗತಿಯ ನಾಳೆಗೆ ಬೇಕು ಹೊಸ ಸಾರಿಗೆ ನೀತಿ

7

ಪ್ರಗತಿಯ ನಾಳೆಗೆ ಬೇಕು ಹೊಸ ಸಾರಿಗೆ ನೀತಿ

Published:
Updated:
ಪ್ರಗತಿಯ ನಾಳೆಗೆ ಬೇಕು ಹೊಸ ಸಾರಿಗೆ ನೀತಿ

ಸಾರಿಗೆ–ಸಂಪರ್ಕಗಳು ಪ್ರಗತಿಗೆ ಕೀಲಿಕೈ ಇದ್ದಂತೆ. ಅಸಮಾನತೆ ಇಲ್ಲದ ಬೆಳವಣಿಗೆಗೂ ಇದು ಅಗತ್ಯ. ಮಾಹಿತಿ, ಸುದ್ದಿ, ಜ್ಞಾನದ ಹರಿವಿಗೆ ಟಿ.ವಿ, ರೇಡಿಯೊ, ಇಂಟರ್ನೆಟ್‌, ಮೊಬೈಲ್‌ ದೂರವಾಣಿ, ಸಾಮಾಜಿಕ ಜಾಲತಾಣ ಮತ್ತು ಮುದ್ರಣ ಮಾಧ್ಯಮಗಳ ಮೂಲಕ ಸಂಪರ್ಕ ಹೊಂದಿರುವುದು, ಬ್ರಾಡ್‌ಬ್ಯಾಂಡ್‌ ಮತ್ತು ಅದಕ್ಕೆ ಸಂಬಂಧಿಸಿದ ಐ.ಟಿ. ಮೂಲಸೌಕರ್ಯ ಹೊಂದಿರುವುದು ಈ ಕಾಲಘಟ್ಟದ ಅಭಿವೃದ್ಧಿ ಹೊಂದಿದ ಜಗತ್ತಿನ ಲಕ್ಷಣಗಳು. ಇಷ್ಟೇ ಅಲ್ಲ, ಜನರ ಹಾಗೂ ವಸ್ತುಗಳ ಸಾಗಾಟಕ್ಕೆ ರಸ್ತೆ, ರೈಲು, ವಾಯುಮಾರ್ಗ ಮತ್ತು ಜಲಮಾರ್ಗಗಳನ್ನು ಹೊಂದಿರುವುದೂ ಮುಖ್ಯ. ಈ ವಿಷಯದಲ್ಲಿ, ಭಾರತ, ಕರ್ನಾಟಕ ಮತ್ತು ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕ ಹಿಂದೆ ಬಿದ್ದಿವೆ.

 

ಸಾರಿಗೆ ಮೂಲಸೌಕರ್ಯ ಕಲ್ಪಿಸುವ ಜೊತೆಯಲ್ಲೇ ಇನ್ನೊಂದಿಷ್ಟು ಕೆಲಸಗಳು ಆಗಬೇಕು. ಈ ವಲಯದಲ್ಲಿ ಹೊಸ ಮಾದರಿಯ ವಾಣಿಜ್ಯ ಚಟುವಟಿಕೆಗಳು ಶುರುವಾಗಲು ಅನುಕೂಲ ಕಲ್ಪಿಸುವ ಉದಾರ ನೀತಿಗಳನ್ನು ಸರ್ಕಾರ ರೂಪಿಸಬೇಕು, ರಾಜ್ಯದ ಮೂಲೆ–ಮೂಲೆಗಳಲ್ಲಿರುವ ಜನರಿಗೆ ಪ್ರಯೋಜನ ಆಗುವಂತೆ ಈ ಕ್ಷೇತ್ರದ ಉದ್ಯಮಿಗಳ ಶಕ್ತಿಯನ್ನು ಬಳಸಿಕೊಳ್ಳಲು ಸರ್ಕಾರ ಮುಂದಾಗಬೇಕು.

 

ಸಾರಿಗೆ ಮೂಲಸೌಕರ್ಯವು ಮಾನವ ಸಂಪನ್ಮೂಲ ಹಾಗೂ ಭೌತಿಕ ಸಂಪನ್ಮೂಲಗಳ ಹಂಚಿಕೆಗೆ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಬೆನ್ನೆಲುಬು ಇದ್ದಂತೆ. ಆಧುನಿಕ ಅರ್ಥ ವ್ಯವಸ್ಥೆಗೆ ಆಧಾರವಾಗಿರುವ ಈ ಮೂಲಸೌಕರ್ಯದ ಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸೋಣ.

 

ಅಮೆರಿಕದಲ್ಲಿ ಒಂದು ಜನಪ್ರಿಯ ಮಾತು ಇದೆ. ‘ಅಮೆರಿಕ ರಸ್ತೆಗಳನ್ನು ನಿರ್ಮಿಸಲಿಲ್ಲ. ರಸ್ತೆಗಳೇ ಅಮೆರಿಕವನ್ನು ಕಟ್ಟಿದವು’ ಎನ್ನುವುದು ಆ ಮಾತು. 1950ರ ಸುಮಾರಿಗೆ ಅಮೆರಿಕ 50 ಸಾವಿರ ಕಿಲೋ ಮೀಟರ್‌ ಉದ್ದದ ಅಂತರರಾಜ್ಯ ಹೆದ್ದಾರಿಗಳನ್ನು ನಿರ್ಮಿಸಲು ಭಾರಿ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿತು. ಇದು ಯುದ್ಧೋತ್ತರ ಕಾಲಘಟ್ಟದ ಅಮೆರಿಕದ ಅರ್ಥವ್ಯವಸ್ಥೆಯನ್ನು, ವಿಶ್ವದ ಅತ್ಯಂತ ಬಲಾಢ್ಯ ಅರ್ಥವ್ಯವಸ್ಥೆಯನ್ನಾಗಿ ರೂಪಿಸಿತು. ಅಲ್ಲಿನ ಪಟ್ಟಣಗಳು, ನಗರಗಳು, ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿದ ಈ ಹೆದ್ದಾರಿಗಳು, ಜನರ ಹಾಗೂ ಉತ್ಪನ್ನಗಳ ಸುಲಭ ಸಾಗಾಟಕ್ಕೆ ಅನುವು ಮಾಡಿಕೊಟ್ಟು, ಅರ್ಥ ವ್ಯವಸ್ಥೆಯನ್ನು ಅತ್ಯಂತ ಶಕ್ತಿಶಾಲಿಯಾಗಿಸಿದವು.

 

ಅಮೆರಿಕದ ಮಾದರಿಯನ್ನು ಯುರೋಪಿನ ಪಶ್ಚಿಮದ ದೇಶಗಳು ಅನುಸರಿಸಿದವು. ಇಲ್ಲಿ ಒಂದು ವಿಚಾರ ಹೇಳಬೇಕು. ಅದು ಎಲ್ಲರಿಗೂ ಗೊತ್ತು. ಆದರೂ ಅದನ್ನು ಮತ್ತೊಮ್ಮೆ ಹೇಳಬೇಕು. ಉತ್ತಮ ಗುಣಮಟ್ಟ ಹಾಗೂ ವಿನ್ಯಾಸದ ರಸ್ತೆಗಳು ದೇಶದ ಅರ್ಥ ವ್ಯವಸ್ಥೆಯ ಅತ್ಯಂತ ಮುಖ್ಯ ಚಾಲನಾ ಶಕ್ತಿ. ಇಂಥ ರಸ್ತೆಗಳು ಆರ್ಥಿಕತೆ ಹಾಗೂ ಜನಜೀವನದ ಮೇಲೆ ಪರಿಣಾಮ ಬೀರುತ್ತವೆ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ  ಲಕ್ಷಾಂತರ ಉದ್ಯೋಗ ಸೃಷ್ಟಿಸುತ್ತವೆ.

 

ಕರ್ನಾಟಕವು ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಬಂಡವಾಳ ಹೂಡಬೇಕು. ಇನ್ನೂ ಹೆಚ್ಚಿನ ಗುಣಮಟ್ಟದ ಸರ್ವಋತು ಗ್ರಾಮೀಣ ರಸ್ತೆಗಳ ನಿರ್ಮಾಣ ಆಗಬೇಕು ಎಂದಾದರೆ, ರಸ್ತೆಗಳ ಮೇಲಿನ ಹೂಡಿಕೆಯ ಬಗ್ಗೆ ಮೂರನೆಯ ವ್ಯಕ್ತಿಯಿಂದ ಪರಿಶೀಲನೆ ನಡೆಸುವ ವ್ಯವಸ್ಥೆ ಬೇಕು. ರಸ್ತೆಗಳು ಹಾಳಾಗಿರುವ ರೀತಿಯಲ್ಲೇ, ಗ್ರಾಮೀಣ ಪ್ರದೇಶದ ಜನರ ಜೀವನ ಕೂಡ ಅಸ್ತವ್ಯಸ್ತಗೊಂಡಿದೆ. ಇಲ್ಲಿನ ರಸ್ತೆಗಳ ಮೇಲೆ ಈಗ ಮಾಡುತ್ತಿರುವ ಕಡಿಮೆ ಪ್ರಮಾಣದ ಹೂಡಿಕೆ ಕೂಡ ಸೋರಿಹೋಗುತ್ತಿದೆ. ‘ಹಳೇ ಕಲ್ಲು, ಹೊಸ ಬಿಲ್ಲು’ ಎಂದು ಪಾಲಿಕೆಯ ಮಾಜಿ ಆಯುಕ್ತರೊಬ್ಬರು ಅಸಹಾಯಕರಾಗಿ ಹೇಳಿದ್ದ ಮಾತು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತಿದೆ.

 

ಉತ್ತಮ ರಸ್ತೆಗಳು ಗ್ರಾಮೀಣ ಮತ್ತು ನಗರದ ಅರ್ಥ ವ್ಯವಸ್ಥೆಗಳ ಜೀವನಾಡಿ ಇದ್ದಂತೆ. ಗ್ರಾಮೀಣ ರಸ್ತೆಗಳ ಜೊತೆಯಲ್ಲೇ, ರಾಜ್ಯ ಹೆದ್ದಾರಿಗಳೂ ಬೇಕು. ರಾಜ್ಯ ಹೆದ್ದಾರಿಗಳು ಉತ್ತಮಗೊಳ್ಳಲು ನಮಗೆ ಬೇಕಿರುವುದು ಹೂಡಿಕೆಗಿಂತ ಹೆಚ್ಚಾಗಿ, ಸ್ವಸ್ಥ ನೀತಿಗಳು. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಅನುಸರಿಸುವ ‘ನಿರ್ಮಿಸು–ನಿರ್ವಹಿಸು–ವರ್ಗಾಯಿಸು’ ಮಾದರಿಯನ್ನೇ ರಾಜ್ಯ ಹೆದ್ದಾರಿ ನಿರ್ಮಾಣದಲ್ಲೂ ಅಳವಡಿಸಿಕೊಳ್ಳಬಹುದು. ಇಲ್ಲಿ ರಾಜ್ಯ ಸರ್ಕಾರವು ಒಂದೇ ಒಂದು ರೂಪಾಯಿ ಖರ್ಚು ಮಾಡಬೇಕಿಲ್ಲ. ಅತ್ಯಂತ ಕಡಿಮೆ ಮೊತ್ತದ ಬಿಡ್ ಸಲ್ಲಿಸುವ ವ್ಯಕ್ತಿ/ಕಂಪೆನಿ, ಹೆದ್ದಾರಿ ನಿರ್ಮಾಣಕ್ಕೆ ಹಣ ಹೂಡಿಕೆ ಮಾಡಬಹುದು, ನಂತರ ರಸ್ತೆ ಶುಲ್ಕದ ಮೂಲಕ ಆದಾಯ ಸಂಗ್ರಹಿಸಬಹುದು.

 

ರಾಜ್ಯದಲ್ಲಿ ಉತ್ಪನ್ನಗಳ ಸಾಗಾಟಕ್ಕೆ ಮುಕ್ತ ಅವಕಾಶ ಇರಬೇಕು. ತನಿಖಾ   ಠಾಣೆಗಳನ್ನು ಇಲ್ಲವಾಗಿಸಬೇಕು. ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗಿರುವ ಆಕ್ಟ್ರಾಯ್‌, ಪ್ರವೇಶ ತೆರಿಗೆ ರದ್ದು ಮಾಡಬೇಕು. ಮಾರಾಟ ಮತ್ತು ಇತರ ತೆರಿಗೆಗಳನ್ನು ಸರಳಗೊಳಿಸಿ ಹಫ್ತಾ ವಸೂಲಿ ನಿಲ್ಲಿಸಬೇಕು. ರಸ್ತೆ ತೆರಿಗೆಯನ್ನು, ವಾಹನಗಳ ಮೇಲೆ ವಿಧಿಸುವ ಇತರ ಸೆಸ್‌ಗಳನ್ನು ಒಪ್ಪಿಕೊಳ್ಳಬಹುದಾದ ಮಟ್ಟದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಕೃಷಿ ಉತ್ಪನ್ನ, ಕಚ್ಚಾ ವಸ್ತು, ಸಿದ್ಧ ಉತ್ಪನ್ನಗಳನ್ನು ನಗರಗಳಿಗೆ, ರಾಜ್ಯದ ಮೂಲೆ–ಮೂಲೆಗಳಿಗೆ ಸ್ಪರ್ಧಾತ್ಮಕ ದರದಲ್ಲಿ ಸಾಗಿಸಲು ಸಾಧ್ಯವಾಗುತ್ತದೆ. ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತದೆ. ಅರ್ಥ ವ್ಯವಸ್ಥೆಗೆ ಶಕ್ತಿ ಸಿಗುತ್ತದೆ.

 

ರಸ್ತೆಗಳ ನಿರ್ಮಾಣ ಮೊದಲ ಹೆಜ್ಜೆ. ರಸ್ತೆಗಳನ್ನು ಅವುಗಳ ಸಾಮರ್ಥ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾರಿಗೆ ವಲಯದಲ್ಲಿ ಸುಧಾರಣೆ ತರಬೇಕು. ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ಜೊತೆ ಸ್ಪರ್ಧಿಸಲು ಖಾಸಗಿ ಕಂಪೆನಿಗಳಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿಲ್ಲ. ಇಂದಿನ ಕಾಲದಲ್ಲೂ ಸರ್ಕಾರ ಸಮಾಜವಾದಿ ನೀತಿಗಳನ್ನು ಅನುಸರಿಸುತ್ತಿದೆ ಎಂಬುದು ಆಶ್ಚರ್ಯದ ಸಂಗತಿ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಖಾಸಗಿ ಕಂಪೆನಿಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಒದಗಿಸಲು ಅವಕಾಶ ಇದೆ. ಉಳಿದೆಡೆ ಕೆಎಸ್‌ಆರ್‌ಟಿಸಿಯದ್ದೇ ಪಾರಮ್ಯ.

 

ರಾಜ್ಯದ ಅರ್ಥವ್ಯವಸ್ಥೆಯ ಬೆಳವಣಿಗೆಗೆ ಅತಿದೊಡ್ಡ ತೊಡಕು ಇದು. ಅದರಲ್ಲೂ, ಪ್ರವಾಸೋದ್ಯಮದ ಬೆಳವಣಿಗೆ ಮೇಲೆ ಇದು ಅಡ್ಡ ಪರಿಣಾಮ ಉಂಟುಮಾಡಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದ ಪ್ರದೇಶಗಳಲ್ಲಿ, ಸಾರಿಗೆ ಸೌಲಭ್ಯ ಕಲ್ಪಿಸುವುದಕ್ಕೆ ಈ ನೀತಿಯ ಕಾರಣದಿಂದಾಗಿ ಸಾಧ್ಯವಾಗುತ್ತಿಲ್ಲ. ಜನರ ಸಂಚಾರ ಹಾಗೂ ಸರಕುಗಳ ಸಾಗಾಟ ಮುಕ್ತವಾಗಿ ಆಗುತ್ತಿಲ್ಲ. ಸಾರಿಗೆ ವಲಯದಲ್ಲಿ ಖಾಸಗಿಯವರಿಗೆ ಅವಕಾಶ ನೀಡುವುದು ಆರ್ಥಿಕ ಬೆಳವಣಿಗೆಗೆ ಅವಶ್ಯಕ. ದೂರವಾಣಿ, ಮಾಧ್ಯಮ, ವಿಮಾನಯಾನ, ವಿಮಾನ ನಿಲ್ದಾಣ ಕ್ಷೇತ್ರಗಳಲ್ಲಿ ಖಾಸಗಿಯವರ ಪ್ರವೇಶ ಆದ ನಂತರ ಬೃಹತ್ ಬದಲಾವಣೆ ಸಾಧ್ಯವಾಗಿವೆ.

 

ಅಸಂಘಟಿತ ವಲಯದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿರುವುದು ಪ್ರವಾಸೋದ್ಯಮ. ನಮ್ಮ ರಾಜ್ಯದ ಪ್ರವಾಸಿ ತಾಣಗಳಾದ ದೇವಸ್ಥಾನಗಳು, ಕೋಟೆಗಳು, ಕಡಲ ಕಿನಾರೆಗಳು, ಅಭಯಾರಣ್ಯಗಳು ಇರುವುದು ಮೂಲೆಯಂತಹ ಊರುಗಳಲ್ಲಿ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರೆ, ಹೋಟೆಲ್‌ ಉದ್ಯಮ, ಕರಕುಶಲ ವಸ್ತುಗಳ ಮಾರಾಟ, ಟ್ಯಾಕ್ಸಿ ಉದ್ಯಮಕ್ಕೆ ಬಲ ಬರುತ್ತದೆ.

 

ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಅಲ್ಲದ, ಪರವಾನಗಿ ಇಲ್ಲದ ಖಾಸಗಿ ವ್ಯಕ್ತಿಗಳು ರಾಜ್ಯದೆಲ್ಲೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಉದಾಸೀನ ಧೋರಣೆಯ, ಅಸಮರ್ಥ ಕೆಎಸ್‌ಆರ್‌ಟಿಸಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಿರ್ವಾತ ಸ್ಥಿತಿ ಸೃಷ್ಟಿಸಿದೆ. ಹಾಗಾಗಿ, ಕೆಲವು ಖಾಸಗಿ ವ್ಯಕ್ತಿಗಳು ಪ್ರವಾಸಿಗರನ್ನು ಕದ್ದುಮುಚ್ಚಿ ಕರೆದೊಯ್ಯುತ್ತಿದ್ದಾರೆ. ಇಂಥ ಚಟುವಟಿಕೆಗಳ ಬಗ್ಗೆ ಕಣ್ಣು ಮುಚ್ಚಿ ಕುಳಿತಿರುವ ಸರ್ಕಾರ, ಒಂದಿಷ್ಟು ಆದಾಯ ಕಳೆದುಕೊಳ್ಳುತ್ತಿದೆ.

 

ಪ್ರವಾಸೋದ್ಯಮದಲ್ಲಿ ಕಳ್ಳ ಮಾರುಕಟ್ಟೆಯೊಂದು ಸೃಷ್ಟಿಯಾಗಲು ಕಾರಣವಾಗಿದೆ. ರಾಜ್ಯ ಸರ್ಕಾರವು ಒಂದು ಪೈಸೆ ಬಂಡವಾಳ ಹೂಡಿಕೆ ಮಾಡದಿದ್ದರೂ, ಹೊಸತನ ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡು ಸಾವಿರಾರು ಜನರಿಗೆ ಉದ್ಯೋಗವನ್ನು ಹೇಗೆ ನೀಡಬಹುದು ಎಂಬುದಕ್ಕೆ ಓಲಾ ಮತ್ತು ಉಬರ್‌ ಉತ್ತಮ ಮಾದರಿಗಳು. ಈ ಕ್ಯಾಬ್‌ಗಳ ಶೇಕಡ 90ರಷ್ಟು ಚಾಲಕರು ಮಂಡ್ಯ, ಹಾಸನ, ತುಮಕೂರು, ಬೆಂಗಳೂರು ಮತ್ತು ಇತರ ಜಿಲ್ಲೆಗಳಿಗೆ ಸೇರಿದವರು. ಸಾರಿಗೆ ವಲಯದಲ್ಲಿ ಬದಲಾವಣೆ ತಂದ ಹೊಸ ತಂತ್ರಜ್ಞಾನಕ್ಕೆ ಅವರು ಹೊಂದಿಕೊಂಡಿದ್ದಾರೆ.

 

ವಿಮಾನ ಯಾನ: ವಿಶ್ವಮಟ್ಟದಲ್ಲಿ ಸ್ಪರ್ಧಿಸಲು, ಅಭಿವೃದ್ಧಿ ಹೊಂದಿದ ಅರ್ಥ ವ್ಯವಸ್ಥೆಯಾಗಿ ರೂಪುಗೊಳ್ಳಲು, ಸುಧಾರಣೆಗಳು ಮತ್ತು ಬಂಡವಾಳ ಹೂಡಿಕೆ ನಾಡಿನ ದೂರದ ಊರುಗಳನ್ನು ತಲುಪುವಂತೆ ಆಗಬೇಕಿದ್ದರೆ, ವಿಮಾನಯಾನ ಕ್ಷೇತ್ರವು ವಿಸ್ತಾರವಾಗಬೇಕು. ರಸ್ತೆ ಮತ್ತು ರೈಲು ಸಾರಿಗೆಯು ವಿಮಾನಯಾನದ ಜೊತೆ ಬೆಸೆದುಕೊಳ್ಳಬೇಕು. ಅರ್ಥವ್ಯವಸ್ಥೆಯ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಲು ಈ ಮೂರು ಸಾರಿಗೆ ವ್ಯವಸ್ಥೆಗಳನ್ನು ನಗರಗಳು ಹಾಗೂ ದೂರದ ಊರುಗಳ ಜೊತೆ ಬೆಸೆಯಬೇಕು.

 

ಇಂದು ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಮಾತ್ರ ವಿಮಾನ ನಿಲ್ದಾಣಗಳು ಸಕ್ರಿಯವಾಗಿವೆ. ಐತಿಹಾಸಿಕ ನಗರ ಮೈಸೂರು ಈಗ ಐ.ಟಿ. ಮತ್ತು ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದ್ದರೂ ಇಲ್ಲಿ ಸಮರ್ಪಕ ವಿಮಾನ ನಿಲ್ದಾಣ ಇಲ್ಲ. ಇಲ್ಲಿರುವ ವಿಮಾನ ನಿಲ್ದಾಣಕ್ಕೆ ಮಿತಿಗಳೇ ಹೆಚ್ಚು. ಬೀದರ್, ವಿಜಯಪುರ, ರಾಯಚೂರು, ಕಲಬುರ್ಗಿ ಮತ್ತು ಕಾರವಾರಗಳು ವಿಮಾನ ಸಂಪರ್ಕದಿಂದ ವಂಚಿತವಾಗಿವೆ. ಸರಿಯಾಗಿ ಯೋಜನೆ ರೂಪಿಸದೆಯೇ ಶಿವಮೊಗ್ಗ, ಕಲಬುರ್ಗಿ ಮತ್ತು ಹಾಸನ ಪ್ರಾದೇಶಿಕ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್ ನೀಡಲಾಯಿತು. ಟೆಂಡರ್‌ ನೀಡಿ, ಕೆಲಸ ಆರಂಭವಾಗಿ ಆರು ವರ್ಷಗಳ ನಂತರ ವಿಮಾನ ನಿಲ್ದಾಣ ಕಾಮಗಾರಿಗಳನ್ನು ಕೈಬಿಡಲಾಗಿದೆ.

 

ಬೀದರ್‌ನಲ್ಲಿ ವಾಯುಪಡೆಯವರ ಅತ್ಯುತ್ತಮ ವಿಮಾನ ನಿಲ್ದಾಣ ಇದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ, ರಾಜ್ಯ ಸರ್ಕಾರವು ಬೀದರ್‌ ನಗರವನ್ನು ವಿಮಾನಯಾನ ಜಾಲಕ್ಕೆ ಸೇರಿಸಬಹುದು. ಆಗ್ರಾ, ಪುಣೆ, ಗೋವಾ ಮಾದರಿಯಲ್ಲಿ ಇದನ್ನು ಬಳಸಿಕೊಳ್ಳಬಹುದು. ಈ ಮೂರು ಊರುಗಳಲ್ಲಿರುವ ವಿಮಾನ ನಿಲ್ದಾಣಗಳು ರಕ್ಷಣಾ ಪಡೆಗಳಿಗೆ ಸೇರಿದ್ದರೂ, ಅವನ್ನು ನಾಗರಿಕ ವಿಮಾನಗಳೂ ಬಳಸುತ್ತಿವೆ.

 

ಮುಂದಿನ ದಿನಗಳಲ್ಲಿ ಬೀದರ್‌ಗೆ ರಾಜ್ಯ ಸರ್ಕಾರ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆ ರೂಪಿಸಬಹುದು. ಇಂದು ರಸ್ತೆ ಮಾರ್ಗವಾಗಿ ಬೀದರ್‌ ತಲುಪಲು ಅಂದಾಜು 15 ತಾಸು ಬೇಕು.

 

ಬೆಂಗಳೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿದ ಮಾದರಿಯಲ್ಲೇ, ರಾಜ್ಯ ಸರ್ಕಾರವು ಖಾಸಗಿಯವರ ನೆರವು ಪಡೆದು ಕಡಿಮೆ ವೆಚ್ಚದ ಏಳರಿಂದ ಎಂಟು ವಿಮಾನ ನಿಲ್ದಾಣಗಳನ್ನು ರಾಜ್ಯದಲ್ಲಿ ನಿರ್ಮಿಸಬೇಕು. ವಿಮಾನ ಸಂಪರ್ಕ ಇರುವ ಪ್ರಾದೇಶಿಕ ಪಟ್ಟಣಗಳಿಗೆ ಬಂಡವಾಳ ಹೂಡಿಕೆಯಾಗುವಂತೆ ನೋಡಿಕೊಳ್ಳಬೇಕು. ಸಂಪನ್ಮೂಲ ಇರುವಲ್ಲಿಗೆ ಕೈಗಾರಿಕೆಗಳು ಸ್ಥಳಾಂತರ ಆಗಲು, ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಇದು ಅಗತ್ಯ.

 

ಸಾರಿಗೆ ವಲಯದ ನಾಲ್ಕನೆಯ ಸ್ತಂಭವಾದ ಬಂದರುಗಳು ರಾಜ್ಯದಲ್ಲಿ ಸಂಪೂರ್ಣವಾಗಿ ನಿರ್ಲಕ್ಷಕ್ಕೆ ಒಳಗಾಗಿವೆ. ಗುಜರಾತ್, ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳು ಖಾಸಗಿ ಸಹಭಾಗಿತ್ವದಲ್ಲಿ ಬೃಹತ್ ಬಂದರುಗಳನ್ನು ನಿರ್ಮಿಸಿವೆ. ಕರ್ನಾಟಕದಲ್ಲಿ 300 ಕಿ.ಮೀ. ಕಡಲ ಕಿನಾರೆ ಇದೆ. ಕ್ಷಮತೆ ಇರುವ, ಬೃಹತ್ ಆದ, ಅತ್ಯಾಧುನಿಕ ಸೌಲಭ್ಯ ಹೊಂದಿರುವ ಬಂದರು ರಫ್ತು ಮತ್ತು ಆಮದನ್ನು ಉತ್ತೇಜಿಸುತ್ತದೆ. ಈಗ ಬೇರೆ ರಾಜ್ಯಗಳಿಗೆ ಆದ್ಯತೆ ನೀಡುತ್ತಿರುವ ವಿದೇಶಿ ಬಂಡವಾಳ ಹೂಡಿಕೆದಾರರನ್ನು, ಕೈಗಾರಿಕೆಗಳನ್ನು ನಮ್ಮತ್ತ ಸೆಳೆಯುತ್ತದೆ.

 

ರಸ್ತೆ, ವಿಮಾನ ನಿಲ್ದಾಣ, ರೈಲ್ವೆ, ಬಂದರು, ಖಾಸಗಿ ಬಸ್‌ ಸಂಪರ್ಕ, ಟ್ಯಾಕ್ಸಿ, ಮೆಟ್ರೊದಂತಹ ರೈಲು ಮಾರ್ಗಗಳು, ಹೊಸತನ ಇರುವ ನೀತಿಗಳು ಖಾಸಗಿ ಬಂಡವಾಳವನ್ನು – ದೇಶಿ ಮತ್ತು ವಿದೇಶಿ – ಆಕರ್ಷಿಸುತ್ತವೆ. ಆಗ ಸರ್ಕಾರ ತನ್ನ ಹಣವನ್ನು ಹೂಡಿಕೆ ಮಾಡಬೇಕಾದ ಅನಿವಾರ್ಯತೆ ಇರುವುದಿಲ್ಲ. ಆ ಹಣವನ್ನು ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ, ಆರೋಗ್ಯ ವಲಯಕ್ಕೆ, ಶಿಕ್ಷಣಕ್ಕೆ ಅಲ್ಪ, ಮಧ್ಯಮ ಹಾಗೂ ದೀರ್ಘಾವಧಿಯಲ್ಲಿ ಬಳಸಿಕೊಳ್ಳಬಹುದು.

 

ಅರ್ಥ ವ್ಯವಸ್ಥೆಗೆ ಶಕ್ತಿ ತುಂಬಲು, ಉದ್ಯೋಗ ಸೃಷ್ಟಿಸಲು ಸಮರೋಪಾದಿಯಲ್ಲಿ ಕೆಲವು ನೀತಿಗಳನ್ನು ಜಾರಿಗೆ ತರಬೇಕು. ನಾವು ಬಡವರಾಗಿರುವುದು, ನಮ್ಮ ನೀತಿಗಳ ಕಾರಣದಿಂದ. ನಮ್ಮಲ್ಲಿ ಸಂಪನ್ಮೂಲಗಳ ಕೊರತೆ ಇದೆ ಎಂಬ ಕಾರಣಕ್ಕೆ ಅಲ್ಲ. ಉತ್ತಮ ಆಡಳಿತ, ಕಟ್ಟುನಿಟ್ಟಿನ ಲೆಕ್ಕಪರಿಶೋಧನೆ, ಉತ್ತಮ ಗುಣಮಟ್ಟದ ಮೂಲಸೌಕರ್ಯವನ್ನು ಸಕಾಲದಲ್ಲಿ ಕಲ್ಪಿಸಬೇಕು ಎಂಬುದಕ್ಕೆ ಉತ್ತರದಾಯಿತ್ವ, ಕ್ಷಿಪ್ರಗತಿಯ ಸುಧಾರಣಾ ಕ್ರಮಗಳು ಈ ಹೊತ್ತಿನ ಅಗತ್ಯಗಳು. ಇಂಥ ಕ್ರಮಗಳನ್ನು ಕೈಗೊಳ್ಳಲು ನಮಗೆ ಸಾಧ್ಯವಿದೆ. ನಾವು ಅವನ್ನು ಮಾಡಲೇಬೇಕು.ಹಳೆಯ ಮಾದರಿ ಸಾಕು, ಹೊಸ ಯೋಚನೆ ಬೇಕು

ಭಾರತೀಯ ರೈಲ್ವೆ ಎಂಬುದು ನಿದ್ರಾವಸ್ಥೆಯಲ್ಲಿರುವ ದೊಡ್ಡ ಕರಡಿ. ಇದು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ರೈಲ್ವೆಯ ಸಂಪನ್ಮೂಲಗಳು ಸೀಮಿತ. ಅದರಲ್ಲಿ ರಾಜ್ಯಕ್ಕೆ ಸಿಗಬೇಕಿರುವ ಪಾಲು ಸಿಗದಿರಬಹುದು. ರಾಜ್ಯ ತನ್ನ ರಾಜಕೀಯ ಶಕ್ತಿ ಬಳಸಿ ಹೊಸ ರೈಲು ಮಾರ್ಗಗಳು ಹಾಗೂ ರೈಲುಗಳನ್ನು ಪಡೆಯಲು ಯತ್ನಿಸಬಹುದು. ಆದರೆ, ಇದು ಹಳೆಯ ಸಾಂಪ್ರದಾಯಿಕ ಮಾರ್ಗ. ಈ ಮಾರ್ಗಕ್ಕೆ ತನ್ನದೇ ಆದ ಮಿತಿಗಳಿವೆ. ರಾಜ್ಯ ಸರ್ಕಾರವು ಹೊಸ ಬಗೆಯಲ್ಲಿ ಚಿಂತನೆ ನಡೆಸಬಹುದು. ಅದು, ಬೆಂಗಳೂರು ಮೆಟ್ರೊ ಮಾದರಿಯಲ್ಲಿ ತನ್ನದೇ ಆದ ರೈಲ್ವೆ ನಿಗಮವೊಂದನ್ನು ಆರಂಭಿಸಬಹುದು. ಶುರುವಿನಲ್ಲಿ ಪ್ರವಾಸಿ, ವಾಣಿಜ್ಯ ಮತ್ತು ಸಮಾಜೋ–ಆರ್ಥಿಕ ಮಹತ್ವದ ನಾಲ್ಕು ಅಥವಾ ಐದು ಊರುಗಳಿಗೆ ರೈಲು ಮಾರ್ಗ ನಿರ್ಮಾಣ ಮಾಡಬಹುದು. ಈ ಕೆಲಸವನ್ನು ರಾಜ್ಯ ಸರ್ಕಾರ ಭಾರತೀಯ ರೈಲ್ವೆ ಜೊತೆ ಜಂಟಿ ಸಹಭಾಗಿತ್ವದಲ್ಲಿ ಮಾಡಬಹುದು, ಖಾಸಗಿ ವಲಯದವರನ್ನೂ ಸೇರಿಸಿಕೊಳ್ಳಬಹುದು.

ರೈಲ್ವೆ ಸಚಿವಾಲಯದ ಹೊಸ ಉಪಕ್ರಮಗಳ ಲಾಭ ಪಡೆದುಕೊಂಡು, ರಾಜ್ಯ ಸರ್ಕಾರವು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿದ ಮಾದರಿಯಲ್ಲಿ, ರೈಲ್ವೆ ಮಾರ್ಗ ಆರಂಭಿಸಬಹುದು. ‘ನಿರ್ಮಿಸು–ಮಾಲೀಕನಾಗು–ನಿರ್ವಹಿಸು’ ಮಾದರಿಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಈ ಕೆಲಸ ಮಾಡಬಹುದು. ಯಾವ ಊರಿಗೆ ಉತ್ತಮ ರೈಲು ಸಂಪರ್ಕ ಬೇಕು ಎಂಬುದನ್ನು ರಾಜ್ಯ ಸರ್ಕಾರ ತಾನೇ ತೀರ್ಮಾನಿಸಬಹುದು. ಈ ಕಾರ್ಯದಲ್ಲಿ ರಾಜ್ಯ ಚಿಕ್ಕ ಪಾಲನ್ನು ಬಂಡವಾಳ ರೂಪದಲ್ಲಿ ತೊಡಗಿಸಬಹುದು, ಇನ್ನುಳಿದ ಪಾಲು ಖಾಸಗಿ ಕ್ಷೇತ್ರದಿಂದ ಬರುತ್ತದೆ.


(ಲೇಖಕ ಉದ್ಯಮಿ)ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry