ಇಂಧನ ಕ್ಷೇತ್ರಕ್ಕೆ ‘ಶಕ್ತಿ’ ತುಂಬಲು ಬೇಕಿದೆ ನೀಲ ನಕ್ಷೆ

7

ಇಂಧನ ಕ್ಷೇತ್ರಕ್ಕೆ ‘ಶಕ್ತಿ’ ತುಂಬಲು ಬೇಕಿದೆ ನೀಲ ನಕ್ಷೆ

Published:
Updated:
ಇಂಧನ ಕ್ಷೇತ್ರಕ್ಕೆ ‘ಶಕ್ತಿ’ ತುಂಬಲು ಬೇಕಿದೆ ನೀಲ ನಕ್ಷೆ

ಒಂದು ದೇಶದ ಅಥವಾ ರಾಜ್ಯದ ಆರ್ಥಿಕ ಸ್ಥಿತಿಗತಿ ಪರಿಗಣಿಸುವಾಗ ಸರ್ಕಾರಗಳು ಪ್ರಧಾನವಾಗಿ ಮೂರು ಅಂಶಗಳ ಬಗ್ಗೆ ಗಮನ ನೀಡಬೇಕು. ಮೊದಲನೆಯದಾಗಿ ಇಂಧನ, ಎರಡನೆಯದಾಗಿ ಸಂಪನ್ಮೂಲಗಳು ಮತ್ತು ಮೂರನೆಯದಾಗಿ ಬಂಡವಾಳ (ಭದ್ರತೆಯ ವಿಚಾರವನ್ನು ನಾಲ್ಕನೇ ಅಂಶವಾಗಿ ಪರಿಗಣಿಸಬಹುದು).

ಈ ಮೂರು ಸಂಗತಿಗಳನ್ನು ಪ್ರತ್ಯೇಕವಾಗಿ ನೋಡುತ್ತಾ ಹೋದರೆ, ದೇಶ ಅಥವಾ ರಾಜ್ಯವು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಕಾರಣ ಇಷ್ಟೆ; ಈ ಮೂರರ ನಡುವೆ ಪರಸ್ಪರ ಬಿಟ್ಟಿರಲಾರದಂತಹ ಸಂಬಂಧ ಇದೆ.

ಯಾವುದೇ ರಾಜ್ಯ ಅಥವಾ ದೇಶದ ಪ್ರಗತಿಯು, ಅದು ಇಂಧನ ಮತ್ತು ಸಂಪನ್ಮೂಲಗಳನ್ನು ಎಷ್ಟು ದಕ್ಷತೆಯಿಂದ ಬಳಸುತ್ತದೆ ಎಂಬುದನ್ನು ಅವಲಂಬಿಸಿದೆ. ನಮ್ಮಲ್ಲಿ ಇಂಧನ ಮತ್ತು ಸಂಪನ್ಮೂಲಗಳ ಸದ್ಬಳಕೆ ಆಗುತ್ತಿಲ್ಲ. ಆ ಕಾರಣದಿಂದಲೇ ಅಭಿವೃದ್ಧಿ ಪಥದಲ್ಲಿ ನಮ್ಮ ರಾಷ್ಟ್ರದ ಪ್ರಯಾಣ ನಿಧಾನವಾಗುತ್ತಿದೆ.

ನಮ್ಮದು ನಗರ ಕೇಂದ್ರಿತ ಅಭಿವೃದ್ಧಿ. ಎಲ್ಲ ಸಂಪನ್ಮೂಲಗಳನ್ನು ನಗರ ಪ್ರದೇಶದ ಜನರಿಗಾಗಿಯೇ ಬಳಸಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಭಾಗದ ಜನರು  ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ಕಾರಣದಿಂದ ಅನಿವಾರ್ಯವಾಗಿ ಅವರು ನಗರ ಪ್ರದೇಶಗಳಿಗೆ ವಲಸೆ ಬರುವಂತೆ ಆಗಿದೆ. ಸಂಪನ್ಮೂಲಗಳ ಹಂಚಿಕೆ ಎಲ್ಲ ಭಾಗಗಳಿಗೆ ಸಮನಾಗಿ ಆದರೆ ಮಾತ್ರ ಇಂತಹ ಸನ್ನಿವೇಶವನ್ನು ತಪ್ಪಿಸಬಹುದು.

ಇಂಧನ ಕ್ಷೇತ್ರಕ್ಕೆ ಬರುವುದಾದರೆ, ಒಂದು ರಾಷ್ಟ್ರದ ವಿದ್ಯುತ್ತಿನ ತಲಾವಾರು ಬಳಕೆ ಪ್ರಮಾಣವು (per capita consumption of energy) ಆ ದೇಶದ ಅಭಿವೃದ್ಧಿಯ ಪ್ರಮುಖ ಸೂಚಕಗಳಲ್ಲೊಂದು. ಅಂದರೆ, ಒಂದು ದೇಶ ಅಥವಾ ರಾಜ್ಯದ ಅಭಿವೃದ್ಧಿಯಲ್ಲಿ ಇಂಧನ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಮತ್ತಷ್ಟು ಸ್ಪಷ್ಟವಾಯಿತು.

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಆಹಾರ ಭದ್ರತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಆಹಾರ ಭದ್ರತೆಯನ್ನು  ಸಾಧಿಸಬೇಕಾದರೆ ಇಂಧನ ಭದ್ರತೆಯೂ ಬೇಕು ಎಂಬುದನ್ನು ನಾವು ಮರೆತಿದ್ದೇವೆ. ಏಕೆಂದರೆ,  ಆಹಾರ ಉತ್ಪಾದನೆಯಲ್ಲಿ ಇಂಧನ ಅಥವಾ ವಿದ್ಯುತ್‌ ನಿರ್ವಹಿಸುವ ಪಾತ್ರ ಬಹು ದೊಡ್ಡದು. ಈ ಎರಡು ಭದ್ರತೆಗಳು ಜೊತೆಯಾಗಿ ಸಾಗುವಂತಹದ್ದು. ಒಂದನ್ನು ಬಿಟ್ಟು ಇನ್ನೊಂದು ಇರಲು ಸಾಧ್ಯವಿಲ್ಲ. ಹಾಗಾಗಿ, ಆಹಾರ ಭದ್ರತೆಗೆ ನೀಡುವಷ್ಟೇ ಪ್ರಾಮುಖ್ಯವನ್ನು ಇಂಧನ ಭದ್ರತೆಗೂ ಕೇಂದ್ರ ಹಾಗೂ ರಾಜ್ಯಗಳು ನೀಡಬೇಕು.

ಕರ್ನಾಟಕದ ವಿಷಯಕ್ಕೇ ಬರೋಣ. ಇಂಧನ ಕ್ಷೇತ್ರವನ್ನು ಹಿನ್ನೆಲೆಯಾಗಿಟ್ಟುಕೊಂಡು ರಾಜ್ಯದ ಅಭಿವೃದ್ಧಿಯ ವೇಗವನ್ನು ವಿಶ್ಲೇಷಣೆ ಮಾಡಿದರೆ ನಮಗೆ ಆಗುವುದು ನಿರಾಸೆ. ನಮ್ಮ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಇಂಧನ ಮತ್ತು ಸಂಪನ್ಮೂಲಗಳು ವ್ಯರ್ಥ ಆಗುತ್ತಿರುವುದು ಕಣ್ಣಿಗೆ ರಾಚುತ್ತದೆ. ರಾಜ್ಯದ ವಿದ್ಯುತ್‌ ಸರಬರಾಜು ವ್ಯವಸ್ಥೆ ಅವ್ಯವಸ್ಥೆಯಿಂದ ನರಳುತ್ತಿದೆ ಎಂಬುದೂ ತಿಳಿಯುತ್ತದೆ.

ಸದ್ಯ, ರಾಜ್ಯದಲ್ಲಿ 24 ಲಕ್ಷ ಕೃಷಿ ಪಂಪ್‌ಸೆಟ್‌ಗಳು (10 ಎಚ್‌ಪಿವರೆಗಿನವು) ಇವೆ ಎಂದು ಇಂಧನ ಇಲಾಖೆ ಹೇಳುತ್ತಿದೆ. ಇಷ್ಟು ಪಂಪ್‌ಸೆಟ್‌ಗಳು ವಾರ್ಷಿಕವಾಗಿ 1,759 ಕೋಟಿ ಯೂನಿಟ್‌ಗಳಷ್ಟು ವಿದ್ಯುತ್‌ ಬಳಸುತ್ತವೆ. ಗ್ರಾಮೀಣ ಪ್ರದೇಶಗಳಿಗೆ ಹೋಗಿ ನೋಡಿದರೆ, ಕೃಷಿ ಉದ್ದೇಶಕ್ಕೆ ಸರಿಯಾಗಿ ವಿದ್ಯುತ್‌ ಪೂರೈಕೆಯೇ ಆಗುತ್ತಿಲ್ಲ. ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ 6ರಿಂದ 8 ಗಂಟೆಗಳಷ್ಟು ಹೊತ್ತು ಮೂರು ಫೇಸ್‌ ವಿದ್ಯುತ್ ಪೂರೈಕೆಯಾದರೆ ಹೆಚ್ಚು.  ನೀರಾವರಿ ಉದ್ದೇಶದ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ  ಸರ್ಕಾರ ನೀಡುವ ಅಂಕಿ ಅಂಶಗಳು ವರದಿಗಷ್ಟೇ ಸೀಮಿತ. ಬಹುತೇಕ ಸಂದರ್ಭದಲ್ಲಿ ಅದರಲ್ಲಿರುವ ಸಂಖ್ಯೆಗಳು ವಾಸ್ತವಾಂಶವನ್ನು ಮರೆಮಾಚುತ್ತವೆ. ವಾಸ್ತವ ಸ್ಥಿತಿಗೂ ಅದಕ್ಕೂ ಅಜಗಜಾಂತರವಿರುತ್ತದೆ!

1991–92ರಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ 442 ಕೋಟಿ ಯೂನಿಟ್‌ಗಳಷ್ಟು ವಿದ್ಯುತ್‌ ಬಳಸಲಾಗಿತ್ತು. 2015ರಲ್ಲಿ ಇದು 1,759 ಕೋಟಿ ಯೂನಿಟ್‌ಗಳಿಗೆ ಏರಿದೆ. ಅಂದರೆ, ವಿದ್ಯುತ್‌ ಬಳಕೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಈ 26 ವರ್ಷಗಳ ಅವಧಿಯಲ್ಲಿ ಆಹಾರ ಉತ್ಪಾದನೆಯಲ್ಲಿ ದಾಖಲೆ ಪ್ರಮಾಣದ ಹೆಚ್ಚಳವಾಗಿದೆಯೇ? ಇಲ್ಲ. ಹಾಗಾದರೆ, ಹೆಚ್ಚು ವಿದ್ಯುತ್‌ ಪೂರೈಕೆಯಿಂದ ಆದ ಪ್ರಯೋಜನ ಏನು?

ಕೃಷಿ ಉತ್ಪನ್ನಗಳ ಬೆಲೆಯಲ್ಲಿನ ತಾರತಮ್ಯದಿಂದಾಗಿ ರೈತ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾನೆಯೇ ಹೊರತು, ಆತನಿಗೆ ಹೇಳಿಕೊಳ್ಳುವಂತಹ ಲಾಭ ಆಗಿಲ್ಲ.

ರೈತರಿಗೆ ಉಚಿತವಾಗಿ, ಸಬ್ಸಿಡಿದರದಲ್ಲಿ ವಿದ್ಯುತ್‌ ಪೂರೈಸುವ ಯೋಜನೆಗಳಿವೆ. ಆದರೆ, ರೈತರ ಅಗತ್ಯಕ್ಕೆ ಬೇಕಾದಷ್ಟು ವಿದ್ಯುತ್‌ ಒದಗಿಸಲಾಗುತ್ತಿದೆಯೇ? ಅದೂ  ಇಲ್ಲ. ಉದಾಹರಣೆಗೆ, ಕೋಲಾರದಂತಹ ಪ್ರದೇಶಗಳಲ್ಲಿ ಕೊಳವೆ ಬಾವಿಗಳ ಆಳ  ಸಾವಿರ ಅಡಿಗಿಂತಲೂ ಹೆಚ್ಚಿವೆ. 10 ಅಶ್ವ ಶಕ್ತಿಯ ಮೋಟಾರ್‌ ಸೆಟ್‌ಗಳಿಂದ ಈ ಕೊಳವೆ ಬಾವಿಗಳಿಂದ ನೀರು ಎತ್ತಲು ಸಾಧ್ಯವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರು ಕೃಷಿ ಮಾಡುವುದಾದರೂ ಹೇಗೆ?

ಕೈಗಾರಿಕೆಗಳಿಗೆ ಪೂರೈಕೆಯಾಗುವ ವಿದ್ಯುತ್ತಿನ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲೂ ನಗರ ಕೇಂದ್ರಿತ ಅಭಿವೃದ್ಧಿ ಮಾದರಿಯನ್ನೇ ಅನುಸರಿಸಲಾಗುತ್ತಿದೆ.  ಎಲ್ಲವೂ ನಗರ ಅದರಲ್ಲೂ ಪ್ರಮುಖವಾಗಿ ಬೆಂಗಳೂರು ಕೇಂದ್ರಿತವಾಗಿದೆ. ರಾಜ್ಯದಲ್ಲಿ ಲಭ್ಯವಿರುವ ವಿದ್ಯುತ್‌ನಲ್ಲಿ ಶೇ 51ರಷ್ಟು ಪ್ರಮಾಣವನ್ನು ಬೆಸ್ಕಾಂಗೆ ಹಂಚಲಾಗುತ್ತಿದೆ.

ಬೆಂಗಳೂರು ಹೊರತಾಗಿ ಇತರ ಸಣ್ಣ ನಗರ, ಪಟ್ಟಣಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಉತ್ತೇಜನ ನೀಡಲಾಗುತ್ತಿದೆ ಎಂದು ಕೈಗಾರಿಕೆ ಇಲಾಖೆ ಹೇಳುತ್ತಿದೆ. ವಾಸ್ತವದಲ್ಲಿ ಇದು ನಿಜವಾಗಬೇಕಾದರೆ ವಿದ್ಯುತ್‌ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಬೀದರ್‌, ಮಾಲೂರುಗಳಂತಹ ಊರುಗಳಲ್ಲಿ ಕೈಗಾರಿಕೆ ಸ್ಥಾಪಿಸಬೇಕಾದರೆ  ಹರ ಸಾಹಸ ಪಡಬೇಕಾದಂತಹ ಸ್ಥಿತಿ ಇದೆ.

ಸದ್ಯ, ರಾಜ್ಯದಲ್ಲಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಶೇ 4ರಷ್ಟು ವಿದ್ಯುತ್‌ ಮಾತ್ರ ಬಳಸುತ್ತಿವೆ. ಇಲ್ಲಿಗೂ ವ್ಯವಸ್ಥಿತ ರೀತಿಯಲ್ಲಿ ವಿದ್ಯುತ್‌ ಸರಬರಾಜು ಆಗುತ್ತಿಲ್ಲ. 

ಒಂದು ನಿದರ್ಶನ ಇಲ್ಲಿದೆ. 2014–15ನೇ ಸಾಲಿನಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಕೈಗಾರಿಕಾ ಉದ್ದೇಶದ ವಿದ್ಯುತ್‌ನ ಬಳಕೆ ಶೇ 7ರಷ್ಟು ಕಡಿಮೆಯಾಗಿದೆ. ಕೈಗಾರಿಕೆಗಳಿಗೆ ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್‌ ನಿರಂತರವಾಗಿ ಸಿಗದಿದ್ದುದೇ ಇದಕ್ಕೆ ಕಾರಣ. ಮೂಲಸೌಕರ್ಯಗಳು, ಅದರಲ್ಲೂ ಪ್ರಮುಖವಾಗಿ ಕೈಗೆಟಕುವ ದರದಲ್ಲಿ ಅಡೆತಡೆ ಇಲ್ಲದೆ ವಿದ್ಯುತ್‌ನ ದೊರೆಯುವ ಖಾತರಿ ಇಲ್ಲದಿದ್ದರೆ ನಮ್ಮ ರಾಜ್ಯಕ್ಕೆ ಯಾವ ಕೈಗಾರಿಕೆಗಳೂ ಬರಲಾರವು.

ರಾಜ್ಯದ ಒಟ್ಟಾರೆ ವರಮಾನದಲ್ಲಿ ಕೈಗಾರಿಕೆಗಳ ಕೊಡುಗೆ ಶೇ 15ರಿಂದ ಶೇ 20ರಷ್ಟು ಇದೆ. ಒಂದು ವೇಳೆ, ಕರ್ನಾಟಕದಲ್ಲಿ ಉದ್ದಿಮೆಗಳು ಸಮರ್ಥವಾಗಿ ಬೆಳೆಯುತ್ತಿದೆ ಎಂದಾದರೆ ಒಂದು ದಶಕದಲ್ಲಿ ರಾಜ್ಯದ ವರಮಾನಕ್ಕೆ ಕೈಗಾರಿಕೆಗಳು ನೀಡುತ್ತಿರುವ ಕೊಡುಗೆಯಲ್ಲಿ ಕನಿಷ್ಠ ಶೇ 3 ರಷ್ಟಾದರೂ ಹೆಚ್ಚಳವಾಗಬೇಕಿತ್ತು. ಆದರೆ, ಅದು ಆಗಿಲ್ಲ.

ನಮ್ಮಲ್ಲಿರುವ ಇಂಧನ ಮತ್ತು ಇತರ ಸಂಪನ್ಮೂಲಗಳನ್ನು ನಾವು ಸರಿಯಾಗಿ ಬಳಸಿಲ್ಲ ಮತ್ತು ಸಮಾಜಕ್ಕೆ ಪ್ರಯೋಜನ ಆಗುವ ರೀತಿಯಲ್ಲಿ ಅದನ್ನು ನಿರ್ವಹಿಸಿಲ್ಲ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ  ತೆರಿಗೆ ಸಂಗ್ರಹ ಆಗುತ್ತಿದೆ ಎಂದು ಸರ್ಕಾರ ಹೇಳುತ್ತಿರಬಹುದು. ಇದರ ಅರ್ಥ, ನಾವು ಇಂಧನ ಮತ್ತು ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸುತ್ತಿದ್ದೇವೆ ಎಂದಲ್ಲ.

ಮುಂದೇನು...?: ಯಾವುದೇ ಒಂದು ಕ್ಷೇತ್ರ ಬೆಳವಣಿಗೆ ಹೊಂದಬೇಕಾದರೆ ವ್ಯವಸ್ಥಿತವಾದ ಒಂದು ನೀಲ ನಕ್ಷೆ ಇರಬೇಕು. ಇಂಧನ ಕ್ಷೇತ್ರವೂ ಇದಕ್ಕೆ ಹೊರತಲ್ಲ. ವಿಷಾದದ ಸಂಗತಿ ಎಂದರೆ ನಮ್ಮಲ್ಲಿ ಭವಿಷ್ಯದ ಬಗ್ಗೆ ನೀಲ ನಕಾಶೆಯೇ ಇಲ್ಲ. ಮುಂದಿನ 10, 20, 30 ವರ್ಷಗಳಲ್ಲಿ ನಾವು ಏನಾಗಬೇಕು, ಎಲ್ಲಿರುತ್ತೇವೆ ಎಂಬುದರ ಬಗ್ಗೆ ಯೋಚನೆಯನ್ನೇ ಮಾಡಿಲ್ಲ. ನಮ್ಮದೇನಿದ್ದರೂ ತಾತ್ಕಾಲಿಕ ಪರಿಹಾರ ಹುಡುಕುವ ಮನೋಭಾವ. ಎದುರಾಗುವ ಸಮಸ್ಯೆಯನ್ನು ಅಂದಿನ ಮಟ್ಟಿಗೆ ಪರಿಹರಿಸಿ ನಿಟ್ಟುಸಿರು ಬಿಡುವ ಜಾಯಾಮಾನ. ದೀರ್ಘಾವಧಿಯಲ್ಲಿ ಇದು ಪ್ರಯೋಜನಕ್ಕೆ ಬಾರದು.  ಯಾರೇ ಆಗಲಿ; ನಿನ್ನೆ, ಇಂದು  ಮತ್ತು ನಾಳೆಗಳ ಬಗ್ಗೆ ಯೋಚನೆ ಮಾಡದವರು ಯಾವುದರಲ್ಲೂ ಯಶಸ್ವಿಯಾಗಲಾರರು.

ಸೋರಿಕೆಯೇ ಸವಾಲು: ನಾವು ಎದುರಿಸುತ್ತಿರುವ ವಿದ್ಯುತ್‌ ಕೊರತೆಯ ಸಮಸ್ಯೆಗೆ ಹೆಚ್ಚು ವಿದ್ಯುತ್‌ ಉತ್ಪಾದನೆಯೊಂದೇ ದಾರಿ ಎಂಬ ಅಭಿಪ್ರಾಯ ಆಡಳಿತ ನಡೆಸುವವರಲ್ಲಿದೆ. ಲೋಡ್‌ ಶೆಡ್ಡಿಂಗ್‌ ಸಮಸ್ಯೆ ತಾರಕಕ್ಕೆ ಏರಿದಾಗಲೆಲ್ಲಾ ವಿದ್ಯುತ್‌ ಉತ್ಪಾದನೆ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಮುಂದಿಡುತ್ತಾರೆಯೇ ಹೊರತು ಲಭ್ಯವಿರುವ ವಿದ್ಯುತ್‌ ಅನ್ನು ಪರಿಣಾಮಕಾರಿಯಾಗಿ ಬಳಸುವ ಬಗ್ಗೆ ಗಮನಹರಿಸುವುದಿಲ್ಲ. ಪ್ರಮುಖವಾಗಿ ವಿದ್ಯುತ್‌ ಸೋರಿಕೆಯನ್ನು ತಡೆಗಟ್ಟುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ.

ವಿದ್ಯುತ್‌ ಸಾಗಣೆ ಮತ್ತು ವಿತರಣೆ ಮಾಡುವ ಸಂದರ್ಭದಲ್ಲಿ ಆಗುವ ಸೋರಿಕೆ ಪ್ರಮಾಣ ರಾಜ್ಯದಲ್ಲಿ ಸರಾಸರಿ ಶೇ 18ರಿಂದ 19ರಷ್ಟು ಇದೆ. ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ, ಶೇ 7ರಿಂದ ಶೇ 8ರಷ್ಟು ವಿದ್ಯುತ್‌ ಸೋರಿಕೆಯಾಗಬಹುದು. ಅಂದರೆ ನಮ್ಮಲ್ಲಿ ಶೇ 10ರಷ್ಟು ಹೆಚ್ಚು ವಿದ್ಯುತ್‌ ಸೋರಿಕೆಯಾಗುತ್ತಿದೆ. ಕೃಷಿ ವಿಚಾರಕ್ಕೆ ಬರುವುದಾದರೆ, ರಾಜ್ಯದಲ್ಲಿರುವ ಕೃಷಿ ಪಂಪ್‌ಸೆಟ್‌ಗಳ  ಕಾರ್ಯಕ್ಷಮತೆ  ಶೇ 40ರಷ್ಟು ಮಾತ್ರ. ಈ ಕಾರಣದಿಂದಾಗಿ ಪಂಪ್‌ಸೆಟ್‌ಗಳು ಹೆಚ್ಚು ವಿದ್ಯುತ್‌ ಬೇಡುತ್ತವೆ.

ಇಷ್ಟು ಪ್ರಮಾಣದ ವಿದ್ಯುತ್‌ ಸೋರಿಕೆಯನ್ನು ತಡೆಯಲು ನಾವು ಬುದ್ಧಿಪೂರ್ವಕ ಕ್ರಮ ಕೈಗೊಳ್ಳದ ಹೊರತು, ಹೆಚ್ಚಿನ ವಿದ್ಯುತ್‌ ಉತ್ಪಾದನೆ ಮಾಡಿದರೂ ಹೆಚ್ಚು ಪ್ರಯೋಜನವಾಗದು. ಮುಂದಿನ ಹತ್ತು ವರ್ಷಗಳಲ್ಲಿ ವಿದ್ಯುತ್‌ ಸೋರಿಕೆ ಪ್ರಮಾಣವನ್ನು ಶೇ 12–13ಕ್ಕೆ ಇಳಿಸಿದರೆ ಮತ್ತು ಕೃಷಿ ಪಂಪ್‌ ಸೆಟ್‌ಗಳ ಕಾರ್ಯದಕ್ಷತೆಯನ್ನು ಶೇ 60ಕ್ಕೆ ಹೆಚ್ಚಿಸಿದರೆ ಸಾಕಷ್ಟು ವಿದ್ಯುತ್‌ ಅನ್ನು ನಾವು ಉಳಿತಾಯ ಮಾಡಬಹುದು.

ಸೋಲಾರ್‌ ಸೇರಿದಂತೆ ಇತರ ಪರಿಸರ ಸ್ನೇಹಿ ಇಂಧನ ಮೂಲಗಳಿಂದ ವಿದ್ಯುತ್‌ ತಯಾರಿಸಲು ಇಲಾಖೆ ಉತ್ತೇಜನ ನೀಡುತ್ತಿರುವುದು ಸ್ವಾಗತಾರ್ಹ. ಆದರೆ, ಜಲವಿದ್ಯುತ್‌, ಪೆಟ್ರೋಲಿಯಂ ಉತ್ಪನ್ನಗಳಿಂದ ವಿದ್ಯುತ್‌ ತಯಾರಿಸಲು ಆಗುವ ವೆಚ್ಚಕ್ಕೆ ಹೋಲಿಸಿದರೆ ಸೋಲಾರ್‌ ದುಬಾರಿ. ಪ್ರತಿ ಜಿಲ್ಲೆಯಲ್ಲೂ 5 ಮೆ ವಾ ಸಾಮರ್ಥ್ಯದ ಸೌರ ವಿದ್ಯುತ್‌ ಘಟಕ ಸ್ಥಾಪಿಸುವಂತೆ ಹತ್ತು ವರ್ಷಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಮಹಾ ಸಂಘ (ಎಫ್‌ಕೆಸಿಸಿಐ) ಸಲಹೆ ನೀಡಿತ್ತು. ಆಗ ಅದರ ಬಗ್ಗೆ ಹೆಚ್ಚು ಗಮನ ನೀಡದ ಸರ್ಕಾರ, ಈಗ ಪ್ರತಿ ಜಿಲ್ಲೆಯಲ್ಲೂ 150 ಮೆವಾ ಸಾಮರ್ಥ್ಯದ ಘಟಕ ಸ್ಥಾಪಿಸಲು ಯೋಚಿಸುತ್ತಿದೆ. ಯೋಜನೆಗಳನ್ನು ರೂಪಿಸುವುದು ದೊಡ್ಡದಲ್ಲ; ಅವುಗಳ ಯಶಸ್ವಿ ಅನುಷ್ಠಾನವೇ ದೊಡ್ಡ ಸವಾಲು. 

ಏನು ಮಾಡಬಹುದು?: ಕಾಲ ಮಿಂಚಿಲ್ಲ. ಇಂಧನ ಕ್ಷೇತ್ರದ ಸುಧಾರಣೆಗೆ ಇನ್ನೂ ಅವಕಾಶಗಳಿವೆ.

ನನ್ನ ಪ್ರಕಾರ, ಮೊಟ್ಟ ಮೊದಲನೆಯದಾಗಿ ಆಡಳಿತದಲ್ಲಿರುವವರಿಗೆ ವಿದ್ಯುತ್‌ ಕ್ಷೇತ್ರದ ಬಗ್ಗೆ ಸ್ಪಷ್ಟ ಧೋರಣೆ ಇರಬೇಕು. ಯೋಜನೆಗಳ ಬಗ್ಗೆ ನಿಖರ ಕಲ್ಪನೆ ಇರಬೇಕು. ಏನನ್ನು ಮಾಡಲು ಹೊರಟಿದ್ದೇವೆ, ಹೇಗೆ ಅನುಷ್ಠಾನಕ್ಕೆ ತರುತ್ತೇವೆ, ಅದಕ್ಕೆ ಅನುಸರಿಸಲಾಗುತ್ತಿರುವ ಮಾನದಂಡಗಳೇನು ಎಂಬುದರ ಬಗ್ಗೆ ಅರಿವಿರಬೇಕು. ಯಾರಾದರೂ ಸಲಹೆ ನೀಡುತ್ತಾರೆ ಎಂದರೆ ಅದನ್ನು ಆಲಿಸುವ ತಾಳ್ಮೆಯನ್ನೂ ಹೊಂದಿರಬೇಕು.

ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳುವ ಮನಸ್ಸು ಅವರಿಗೆ ಇರಬೇಕು. 2015–16ನೇ ಸಾಲಿನಲ್ಲಿ ಇಂಧನ ಇಲಾಖೆಯಲ್ಲಿ ಸುಮಾರು ₹500 ಕೋಟಿಗಳಷ್ಟನ್ನು ಉಳಿಸಿಕೊಳ್ಳಬಹುದಿತ್ತು ಎಂದು ಸಿಎಜಿ ವರದಿ ಹೇಳಿದೆ. ಪ್ರತಿ ವರ್ಷ ಸಿಇಜಿ ವರದಿಗಳು ಬರುತ್ತಲೇ ಇರುತ್ತವೆ. ಇಲಾಖೆಯಲ್ಲಿನ ಲೋಪದೋಷಗಳ ಬಗ್ಗೆ ಬೆಟ್ಟು ಮಾಡುತ್ತಲೇ ಇರುತ್ತವೆ. ಆದರೆ, ಮುಂದಿನ ದಿನಗಳಲ್ಲಿ ಆ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಯತ್ನಗಳು ನಡೆಯುವುದಿಲ್ಲ. ಇದು ನಮ್ಮ ಸಮಸ್ಯೆ.

ನಮ್ಮ ವಿದ್ಯುತ್‌ ವಿತರಣೆ ವ್ಯವಸ್ಥೆಗೆ ಕಾರ್ಪೊರೇಟ್‌ ಸ್ಪರ್ಶ ನೀಡುವ ಅಗತ್ಯವಿದೆ. ಇದನ್ನು ಒಂದು ಉದ್ಯಮದ ರೀತಿಯಲ್ಲಿ ನೋಡಬೇಕು. ಅದು ಅರ್ಥಶಾಸ್ತ್ರದ ನಿಯಮಗಳ ಅಡಿಯಲ್ಲಿ ನಿರ್ವಹಿಸಬೇಕು. ನಮ್ಮಲ್ಲಿ ಅದಾಗುತ್ತಿಲ್ಲ. ಇದೊಂದು ಸೇವಾ ಕಾರ್ಯ (ಚ್ಯಾರಿಟಿ) ಎಂಬ ಧೋರಣೆ ಇದೆ.

ಯಾವುದೇ ಕ್ಷೇತದ ಪ್ರಗತಿಯಲ್ಲಿ ಆಯಾ ಕ್ಷೇತ್ರದ ಒಳ–ಹೊರಗನ್ನು ಅರಿತಿರುವ ತಜ್ಞರು ನಿರ್ಣಾಯಕವಾಗಿರುತ್ತಾರೆ. ಅವರು ನೀಡುವ ಸಲಹೆಗಳು ಕ್ಷೇತ್ರದ ಬೆಳವಣಿಗೆಗೆ ಹೊಸ ದಿಕ್ಕನ್ನು ತೋರಿಸುತ್ತದೆ. ಹಿಂದೆ ನಮ್ಮ ವಿದ್ಯುತ್‌ ವಲಯದಲ್ಲಿ ತಜ್ಞ ಎಂಜಿನಿಯರ್‌ಗಳು ಇದ್ದರು.  ದಕ್ಷ,  ಪ್ರಾಮಾಣಿಕ ಅಧಿಕಾರಿಗಳೂ ಇದ್ದರು. ಈಗ ಅಂಥವರು ಕಾಣುತ್ತಿಲ್ಲ. ವಿಪರ್ಯಾಸ ಎಂದರೆ ವಿದ್ಯುತ್‌, ವ್ಯವಸ್ಥೆಯ ಕಾರ್ಯನಿರ್ವಹಣೆ, ತಂತ್ರಜ್ಞಾನದ ಬಗ್ಗೆ ಗೊತ್ತಿಲ್ಲದವರು ಅದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ!

ಇಂತಹ ಪರಿಸ್ಥಿತಿಯಲ್ಲಿ ಇಲಾಖೆಯ ನಿರ್ವಹಣೆಗೆ ಶ್ರದ್ಧೆ ಮತ್ತು ಬದ್ಧತೆಯಿರುವ ಕ್ರಿಯಾಶೀಲ ವೃತ್ತಿಪರ ತಜ್ಞರ ತಂಡದ ಅಗತ್ಯವಿದೆ. ಈ ತಂಡವು ಇಂಧನ ಕ್ಷೇತ್ರದ ತಜ್ಞರು ಮತ್ತು ಜನರೊಂದಿಗೆ ಆಗಾಗ ಬೆರೆತು, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಬೇಕು. ಅಲ್ಲದೇ, ಆ ಸಲಹೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಶ್ರಮವಹಿಸಬೇಕು.ವಿದ್ಯುತ್‌ ನಿಯಂತ್ರಣ ಆಯೋಗವೇ ‘ಸುಪ್ರೀಂ’!

ರಾಜ್ಯದ ವಿದ್ಯುತ್‌ ಕ್ಷೇತ್ರದ ಮಟ್ಟಿಗೆ ಹೇಳುವುದಾದರೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವೇ (ಕೆಇಆರ್‌ಸಿ) ಪರಮೋಚ್ಛ ನಾಯಕ.

ಸಂವಿಧಾನಾತ್ಮಕ ಸಂಸ್ಥೆಯಾಗಿರುವ ಇದು, ವಿದ್ಯುತ್‌ ತಯಾರಿಕೆ, ನಿರ್ವಹಣೆ ಮತ್ತು ಸರಬರಾಜು ವ್ಯವಸ್ಥೆಯಲ್ಲಿ  ನಿರ್ವಹಿಸುವ ಪಾತ್ರ ದೊಡ್ಡದು. ತನ್ನ ಕಾರ್ಯನಿರ್ವಹಣೆಯಲ್ಲಿ ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಇಂಧನ ಕ್ಷೇತ್ರದ ಅಭಿವೃದ್ಧಿಗೆ ನೀಲ ನಕ್ಷೆ ತಯಾರಿಸುವುದರಿಂದ ಹಿಡಿದು ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಆಯೋಗದ ಮೇಲಿದೆ.

ವಾಸ್ತವದಲ್ಲಿ ಇಂಧನ ಕ್ಷೇತ್ರದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಪಾತ್ರ ಸೀಮಿತ. ನೀತಿಗಳನ್ನು ರೂಪಿಸುವುದು, ಬಜೆಟ್‌ ಹಂಚಿಕೆ ಸೇರಿದಂತೆ ಸರ್ಕಾರಕ್ಕೆ ಇರುವುದು ಬೆರಳೆಣಿಕೆಯ  ಜವಾಬ್ದಾರಿಗಳು ಮಾತ್ರ.

ಆಯೋಗವು ಸರ್ಕಾರ ಮತ್ತು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು ಎಂಬ ಉದ್ದೇಶದಿಂದಲೇ 2003ರಲ್ಲಿ ವಿದ್ಯುತ್‌ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆ ಕೊಟ್ಟಿರುವ ಅಧಿಕಾರದ ಅಡಿಯಲ್ಲಿ ಆಯೋಗವು ನಿಸ್ಪಕ್ಷಪಾತ ಮತ್ತು ಮುಕ್ತವಾಗಿ ಕಾರ್ಯನಿರ್ವಹಿಸಿದರೆ ಸಾಕು, ಇಡೀ ವ್ಯವಸ್ಥೆಯೇ ಸರಿ ಹೋಗುತ್ತದೆ.(ಲೇಖಕರು: ಕೆಇಆರ್‌ಸಿ ಸಲಹಾ ಸಮಿತಿಯ ಸದಸ್ಯ)

ನಿರೂಪಣೆ: ಸೂರ್ಯನಾರಾಯಣ ವಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry