ಗುರುವಾರ , ಏಪ್ರಿಲ್ 22, 2021
22 °C
ಕಪ್ಪುಹಣ, ಖೋಟಾನೋಟು, ಭ್ರಷ್ಟಾಚಾರ ತಡೆಗೆ ಕೇಂದ್ರ ಸರ್ಕಾರದಿಂದ ಅನಿರೀಕ್ಷಿತ ಕ್ರಮ

₹500, 1000 ನೋಟು ರದ್ದು; ಗುರುವಾರದಿಂದ ₹500, ₹ 2000 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

₹500, 1000 ನೋಟು ರದ್ದು; ಗುರುವಾರದಿಂದ ₹500, ₹ 2000 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ

ನವದೆಹಲಿ: ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆ ತಡೆಗೆ ಅಚ್ಚರಿಯ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಮಂಗಳವಾರ ಮಧ್ಯರಾತ್ರಿಯಿಂದ ₹500 ಮತ್ತು ₹1,000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದೆ.

ಇದೇ ಮೊದಲ ಬಾರಿ ಸುದ್ದಿ ವಾಹಿನಿಗಳ ಮೂಲಕ ಅನಿರೀಕ್ಷಿತವಾಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ನಿರ್ಧಾರ ಪ್ರಕಟಿಸಿದ್ದಾರೆ. ₹500, ₹1,000 ನೋಟುಗಳನ್ನು ಹೊಂದಿರುವವರು ಅವುಗಳನ್ನು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಲ್ಲಿನ ಖಾತೆಗೆ ಜಮಾ ಮಾಡಬಹುದು. ನವೆಂಬರ್‌ 10ರಿಂದ ಡಿಸೆಂಬರ್‌ 30ರವರೆಗೆ ಇದಕ್ಕೆ ಅವಕಾಶ ಇದೆ.

₹100 ಮತ್ತು ಅದಕ್ಕಿಂತ ಕಡಿಮೆ ಮುಖಬೆಲೆಯ ಎಲ್ಲ ನೋಟುಗಳು ಮತ್ತು ನಾಣ್ಯಗಳು ಅಸ್ತಿತ್ವದಲ್ಲಿ ಇರುತ್ತವೆ. ₹500 ಮತ್ತು ₹2,000 ಮುಖಬೆಲೆಯ ಹೊಸ ನೋಟುಗಳು ಗುರುವಾರದಿಂದಲೇ  ಚಾಲ್ತಿಗೆ ಬರಲಿವೆ.

ದಿನವೊಂದಕ್ಕೆ ಎಟಿಎಂನಿಂದ ಪಡೆಯಬಹುದಾದ ಗರಿಷ್ಠ ಮೊತ್ತವನ್ನು ₹ 2,000ಕ್ಕೆ ನಿಗದಿಪಡಿಸಲಾಗಿದೆ. ಬ್ಯಾಂಕ್‌ ಖಾತೆಯಿಂದ ದಿನಕ್ಕೆ ₹10 ಸಾವಿರ ಪಡೆಯಲು ಮಾತ್ರ ಅವಕಾಶ ಇದೆ. ಒಂದು ವಾರದ ಅವಧಿಯಲ್ಲಿ ಬ್ಯಾಂಕ್‌ನಿಂದ ಪಡೆಯಬಹುದಾದ ಮೊತ್ತ ₹20 ಸಾವಿರ ಮಾತ್ರ. ಈ ಮಿತಿಯನ್ನು ಮುಂದಿನ ದಿನಗಳಲ್ಲಿ ಏರಿಕೆ ಮಾಡಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.

ಬುಧವಾರ ಬ್ಯಾಂಕುಗಳು ವಹಿವಾಟು ನಡೆಸುವುದಿಲ್ಲ. ಬುಧವಾರ ಮತ್ತು ಗುರುವಾರ ಎಟಿಎಂಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಲಭ್ಯವಿರುವ ಕಡಿಮೆ ಅವಧಿಯಲ್ಲಿಯೇ ಹೊಸ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಬ್ಯಾಂಕ್‌ ಮತ್ತು ಅಂಚೆ ಕಚೇರಿ ಸಿಬ್ಬಂದಿ ಶಕ್ತಿ ಮೀರಿ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ಮಹತ್ವದ ನಿರ್ಧಾರ ಯಶಸ್ವಿಯಾಗಲು ರಾಜಕೀಯ ಪಕ್ಷಗಳು, ಕಾರ್ಯಕರ್ತರು, ಸಾಮಾಜಿಕ ಸಂಘಟನೆಗಳು ಮತ್ತು ಮಾಧ್ಯಮ ನೆರವಾಗಲಿವೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಬದಲಾವಣೆಗೂ ಅವಕಾಶ: ಜನರು ತಮ್ಮಲ್ಲಿರುವ ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು    ಬ್ಯಾಂಕ್‌ ಅಥವಾ ಅಂಚೆ ಕಚೇರಿ ಮೂಲಕ ಕಡಿಮೆ ಮುಖಬೆಲೆಯ ನೋಟುಗಳಿಗೆ  ಬದಲಾಯಿಸಿಕೊಳ್ಳುವುದಕ್ಕೂ ಅವಕಾಶ ಇದೆ. ಆದರೆ ಒಬ್ಬ ವ್ಯಕ್ತಿ ದಿನಕ್ಕೆ ₹4,000 ಮೌಲ್ಯದ ನೋಟುಗಳನ್ನು ಮಾತ್ರ ಬದಲಿಸಿಕೊಳ್ಳಬಹುದು. ಆದರೆ, ಇದಕ್ಕಾಗಿ ಸರ್ಕಾರ ನೀಡಿರುವ ಪ್ಯಾನ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಆಧಾರ್‌ ಸಂಖ್ಯೆಯಂತಹ ದಾಖಲೆಗಳನ್ನು ನೀಡುವುದು ಕಡ್ಡಾಯ.

ಮುಂದಿನ ವರ್ಷವೂ ಅವಕಾಶ: ₹500, ₹1,000 ನೋಟುಗಳನ್ನು ನಿಗದಿತ ಡಿಸೆಂಬರ್‌ 30ರೊಳಗೆ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲು ಸಾಧ್ಯವಾಗದವರು ಈ ನೋಟುಗಳನ್ನು ಮತ್ತೆಯೂ ಬ್ಯಾಂಕ್‌ಗೆ ಜಮಾ ಮಾಡುವುದಕ್ಕೆ ಅವಕಾಶ ಇದೆ. ಇವುಗಳನ್ನು ಮುಂದಿನ ಮಾರ್ಚ್‌ 31ರೊಳಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿಯೋಜಿತ ಶಾಖೆಗಳಲ್ಲಿ ಜಮಾ ಮಾಡಬಹುದು. ಆದರೆ ಆ ಸಂದರ್ಭದಲ್ಲಿ ವಿಳಂಬಕ್ಕೆ ಕಾರಣವೇನು ಎಂಬ ಪ್ರಮಾಣಪತ್ರ ಸಲ್ಲಿಸಬೇಕು. ಜತೆಗೆ ಅದಕ್ಕೆ ಅಗತ್ಯ ಪುರಾವೆಗಳನ್ನೂ ಒದಗಿಸಬೇಕು.

ಎಲ್ಲಿ ವಿನಾಯಿತಿ: ಆಸ್ಪತ್ರೆಗಳು, ವಿಮಾನ, ರೈಲು ಟಿಕೆಟ್‌ ಕಾದಿರಿಸುವಿಕೆ ಮತ್ತು ಸರ್ಕಾರಿ ಬಸ್‌ ಟಿಕೆಟ್‌ ಕೌಂಟರ್‌ಗಳಲ್ಲಿ ನ. 11–12ರ ಮಧ್ಯರಾತ್ರಿವರೆಗೆ ₹500, ₹1,000 ಮುಖಬೆಲೆಯ ನೋಟುಗಳ ಚಲಾವಣೆಗೆ ಅವಕಾಶ ಇದೆ.

ಇದೇ ಮೊದಲಲ್ಲ

ಸ್ವಾತಂತ್ರ್ಯಪೂರ್ವದಲ್ಲಿ 1946ರ ಜನವರಿಯಲ್ಲಿ ಇಂತಹ ಕ್ರಮವನ್ನು ಒಮ್ಮೆ ಕೈಗೊಳ್ಳಲಾಗಿತ್ತು. ಆಗ ಚಲಾವಣೆಯಲ್ಲಿದ್ದ ₹1,000 ಮತ್ತು ₹10,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಲಾಗಿತ್ತು. ಆಗಲೂ ಕಪ್ಪು ಹಣ ತಡೆಯೇ ಅದರ ಉದ್ದೇಶವಾಗಿತ್ತು.

1954ರಲ್ಲಿ ₹1,000, ₹5,000 ಮತ್ತು ₹10,000 ಮುಖಬೆಲೆಯ ನೋಟುಗಳನ್ನು ಮತ್ತೆ ಪರಿಚಯಿಸಲಾಯಿತು. 1978ರಲ್ಲಿ ಈ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಲಾಯಿತು.

ನೀವು ಮಾಡಬೇಕಿರುವುದು ಏನು?

* ₹ 500, ₹ 1,000 ಮುಖಬೆಲೆಯ ನೋಟುಗಳನ್ನು  ಬ್ಯಾಂಕ್‌ ಅಥವಾ ಅಂಚೆ ಕಚೇರಿ ಖಾತೆಗೆ ಜಮಾ ಮಾಡಲು  ಡಿಸೆಂಬರ್‌ 30ರವರೆಗೆ ಅವಕಾಶ. ಜಮಾ ಮೊತ್ತಕ್ಕೆ ಮಿತಿ ಇಲ್ಲ.

* ₹ 500, ₹ 1,000 ನೋಟುಗಳನ್ನು ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ಬದಲಾಯಿಸಿಕೊಳ್ಳಲೂ ಅವಕಾಶ ಇದೆ. ಹೀಗೆ ಮಾಡುವಾಗ ಗುರುತಿನ ಚೀಟಿ ತೋರಿಸಬೇಕು.

* ಆಧಾರ್‌, ಪ್ಯಾನ್‌, ಮತದಾರರ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ತೋರಿಸಬಹುದು.

* ದಿನಕ್ಕೆ ಗರಿಷ್ಠ ₹ 4,000ವರೆಗೆ ಮಾತ್ರ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.

ಹಣ ಪಡೆಯುವುದಕ್ಕೆ ಮಿತಿ

* ಬ್ಯಾಂಕಿನಿಂದ ದಿನವೊಂದಕ್ಕೆ ಗರಿಷ್ಠ ₹ 10 ಸಾವಿರ, ವಾರಕ್ಕೆ ಗರಿಷ್ಠ ₹ 20 ಸಾವಿರ ಪಡೆಯಬಹುದು.

* ಎಟಿಎಂ ಯಂತ್ರದಿಂದ ದಿನಕ್ಕೆ ಗರಿಷ್ಠ ₹ 2,000 ಮಾತ್ರ ತೆಗೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಇದನ್ನು ₹ 4,000ಕ್ಕೆ ಹೆಚ್ಚಿಸಲಾಗುವುದು.

* ಬ್ಯಾಂಕ್‌ನಿಂದ ಹಣ ಪಡೆಯಲು ಹೇರಿರುವ ಮಿತಿಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುವುದು ಎಂದು ಸರ್ಕಾರ ಹೇಳಿದೆ.

* ಬ್ಯಾಂಕ್‌ ಸೇವೆಗಳು ಬುಧವಾರ ಸಾರ್ವಜನಿಕರಿಗೆ ಲಭ್ಯ ಇಲ್ಲ

* ಬುಧವಾರ, ಗುರುವಾರ ಎಟಿಎಂ ತೆರೆದಿರುವುದಿಲ್ಲ.

ಇಲ್ಲಿ ಚಲಾವಣೆ ಇದೆ

ರೈಲ್ವೆ, ವಿಮಾನ, ಸರ್ಕಾರಿ ಬಸ್ ಟಿಕೆಟ್‌ ಬುಕಿಂಗ್‌ಗೆ, ಆಸ್ಪತ್ರೆಗಳಲ್ಲಿ, ಪೆಟ್ರೋಲ್‌ ಬಂಕ್‌ಗಳಲ್ಲಿ ₹ 500, ₹ 1,000 ಮುಖಬೆಲೆಯ ನೋಟುಗಳನ್ನು ನವೆಂಬರ್‌ 11ರ ಮಧ್ಯರಾತ್ರಿವರೆಗೆ ಬಳಸಬಹುದು.

ಇವುಗಳಿಗೆ ಮಿತಿ ಇಲ್ಲ

ಚೆಕ್‌, ಡಿ.ಡಿ, ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ನಡೆಯುವ ವಹಿವಾಟು, ಎಲೆಕ್ಟ್ರಾನಿಕ್‌ ಹಣ ವರ್ಗಾವಣೆಗೆ ಮಿತಿ ಇಲ್ಲ, ನಿರ್ಬಂಧವೂ ಇಲ್ಲ.

ಹೊಸ ನೋಟು

₹ 500 ಮತ್ತು ₹ 2,000 ಮುಖಬೆಲೆಯ ಹೊಸ ನೋಟುಗಳು ಶೀಘ್ರದಲ್ಲೇ ಚಲಾವಣೆಗೆ ಬರಲಿವೆ ಎಂದು ಪ್ರಧಾನಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.