ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂಗಿ ಗೆಲುವು ಸಾಧಿಸಿದ ವರ್ಣರಂಜಿತ ಉದ್ಯಮಿ

Last Updated 9 ನವೆಂಬರ್ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಡೊನಾಲ್ಡ್‌ ಟ್ರಂಪ್‌ ಅಮೆರಿಕದ ವರ್ಣರಂಜಿತ ವ್ಯಕ್ತಿ, ಕೋಟ್ಯಧೀಶ, ರಾಜಕಾರಣಿ. ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಅವರ ಪ್ರವೃತ್ತಿ. ಅಮೆರಿಕದ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯನ್ನು ಅವರು ಏಕಾಂಗಿಯಾಗಿ ಎದುರಿಸಿದರು. ಅಮೆರಿಕದ ರಾಜಕೀಯದಲ್ಲಿನ ಒಪ್ಪಿತ ನಿಲುವುಗಳನ್ನು ತಿರಸ್ಕರಿಸಿದರು.

ನ್ಯೂಯಾರ್ಕ್‌ ಮೂಲದ ಈ ರಿಯಲ್‌ ಎಸ್ಟೇಟ್‌ ಉದ್ಯಮಿ, ಪ್ರಭುತ್ವದ ಬಗ್ಗೆ ಸಾಮಾನ್ಯ ಅಮೆರಿಕನ್ನರಲ್ಲಿ ಮೂಡಿದ್ದ ಭ್ರಮನಿರಸನವನ್ನು ಗ್ರಹಿಸಿದರು. ಅದನ್ನು ಅಪಾಯಕಾರಿ ‘ವಲಸಿಗ ವಿರೋಧಿ’ ಭಾಷಣಗಳಲ್ಲಿ ಉಲ್ಲೇಖಿಸಿದರು. ಇದು ಟ್ರಂಪ್‌ ಅವರಿಗೆ ಚುನಾವಣೆಯಲ್ಲಿ ಯಶಸ್ಸು ತಂದುಕೊಟ್ಟಿತು.

ಡೆಮಾಕ್ರಟಿಕ್‌ ಪಕ್ಷದ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದ ಟ್ರಂಪ್‌ ನಡುವಣ ಜಿದ್ದಾಜಿದ್ದಿನ ಚುನಾವಣೆ ಇದಾಗಿತ್ತು. ಚುನಾವಣಾ ಪ್ರಚಾರದ ವೇಳೆ ಟ್ರಂಪ್‌ ಅವರ ಹೆಸರು ‘ವಿವಾದ’ಕ್ಕೆ ಪರ್ಯಾಯ ಪದವಾಗಿತ್ತು! ಮುಸ್ಲಿಮರು, ವಲಸಿಗರು, ಅರ್ಥವ್ಯವಸ್ಥೆ ಮತ್ತು ಭಯೋತ್ಪಾದನೆ ಬಗ್ಗೆ ಟ್ರಂಪ್‌ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದರು.

ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಟ್ರಂಪ್‌ ಎದುರಿಸಿದರು. ‘ಮಹಿಳೆಯರ ಬಗ್ಗೆ, ತಮ್ಮ ಪುತ್ರಿಯ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಟ್ರಂಪ್‌’ ಎಂಬ ತಲೆಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾದವು. ಇದು ಅವರಿಗೆ ನಕಾರಾತ್ಮಕವಾಗುವ  ಸಾಧ್ಯತೆ ಇತ್ತು. ತಾವು ಈ ಹಿಂದೆ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರೂ, ತಮಗೆ ತಾರಾ ಪಟ್ಟ ಇದ್ದ ಕಾರಣ ಸಮಸ್ಯೆಯಾಗಲಿಲ್ಲ ಎಂದು ಟ್ರಂಪ್ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಎಂಬ ದೃಶ್ಯಾವಳಿಯೊಂದು ಚುನಾವಣಾ ಪ್ರಚಾರದ ವೇಳೆ ಬಹಿರಂಗವಾಯಿತು.

ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದನ್ನು ಟ್ರಂಪ್‌ ಅವರು 1987ರಿಂದಲೂ ತಮಾಷೆಯಿಂದ ಕಂಡವರು. ಆದರೆ, 2011ರಲ್ಲಿ ಅಧ್ಯಕ್ಷ ಬರಾಕ್ ಒಬಾಮ ಆಯೋಜಿಸಿದ್ದ ಔತಣ ಕೂಟವೊಂದರಲ್ಲಿ ಪಾಲ್ಗೊಂಡ ಟ್ರಂಪ್‌, ಅಲ್ಲಿ ಒಬಾಮ ಅವರ ಹಾಸ್ಯದ ಮಾತುಗಳನ್ನು ಕೇಳಿ ಮನಸ್ಸು ಬದಲಾಯಿಸಿದರು. ಈ ಸಂದರ್ಭದಲ್ಲೇ ಟ್ರಂಪ್‌ ಅವರು ‘ಅಧ್ಯಕ್ಷ ಒಬಾಮ ಅಮೆರಿಕದ ಪ್ರಜೆ ಹೌದೇ’ ಎಂಬ ಪ್ರಶ್ನೆ ಕೇಳಿದ್ದರು.

ಅಮೆರಿಕದ ಯೋಧರು ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ನನ್ನು ಕೊಲ್ಲುವ ಎರಡು ದಿನಗಳ ಮೊದಲು ಈ ಔತಣಕೂಟ ನಡೆದಿತ್ತು. ಲಾಡೆನ್‌ ಹತ್ಯೆಯಿಂದಾಗಿ ಇಡೀ ಅಮೆರಿಕದ ಒಂದಾಗಿತ್ತು. ಕುಖ್ಯಾತ ಭಯೋತ್ಪಾದಕನನ್ನು ಸಂಹರಿಸಿದ ಅಧ್ಯಕ್ಷ ಒಬಾಮ ಅವರ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನೆ ಮಾಡಿದ್ದರಿಂದ, ದೇಶವಾಸಿಗಳ ವಿರೋಧ ಎದುರಿಸಬೇಕಾಯಿತು.

ಇದಾದ ನಾಲ್ಕು ವರ್ಷಗಳ ನಂತರ ಈ ಉದ್ಯಮ ದೊರೆ, ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಲು ಉಮೇದುವಾರಿಕೆ ತೋರಿದರು. ಆಗ ರಿಪಬ್ಲಿಕನ್ ಪಕ್ಷದಿಂದ 17 ಜನ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ಅವರ ಪಕ್ಷದವರು, ಅಧ್ಯಕ್ಷ ಒಬಾಮ ಅವರು ‘ಇದು ಗಮನ ಸೆಳೆಯುವ ತಂತ್ರ’ ಎಂದು ಟ್ರಂಪ್‌ ಉಮೇದುವಾರಿಕೆಯನ್ನು ನಿರ್ಲಕ್ಷಿಸಿದ್ದರು.

ವಿಭಜನಕಾರಿ ಹೇಳಿಕೆ: ಆದರೆ ಟ್ರಂಪ್‌ ಅವರ ಅಭಿಯಾನವು ವಿಭಜನಕಾರಿ ಹೇಳಿಕೆಗಳಿಂದ ತುಂಬಿತ್ತು. ಇದನ್ನು ಕೇಳಿದ ಜನ ಆಘಾತಕ್ಕೆ ಒಳಗಾದರು. ಟ್ರಂಪ್‌ ಹೇಳಿಕೆಗಳು ಅಮೆರಿಕದ ಜಾತ್ಯತೀತ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳಿಗೆ ಬೆದರಿಕೆಯಂತೆ ಕಂಡವು.

ಇರಾಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮಡಿದ ಅಮೆರಿಕದ ಮುಸ್ಲಿಂ ಯೋಧರೊಬ್ಬರ ತಂದೆ–ತಾಯಿಯನ್ನು ಅವಮಾನಿಸಿದ್ದಕ್ಕೆ ಟ್ರಂಪ್‌ ಟೀಕೆಗೆ ಗುರಿಯಾದರು.

ಟ್ರಂಪ್‌ ಅವರ ಉದ್ವೇಗದ ಮಾತುಗಳು ಹೇಗಿದ್ದವು ಎಂದರೆ, ಅವರದೇ ಪಕ್ಷದ ಕೆಲವು ಪ್ರಮುಖ ನಾಯಕರು ಚುನಾವಣೆಯ ಕೊನೆಯ ಹಂತದವರೆಗೂ ಟ್ರಂಪ್‌ ಅವರನ್ನು ಬೆಂಬಲಿಸಲು ಹಿಂದೇಟು ಹಾಕಿದರು.

ಬೆಂಬಲಿಸಿದ ಕಾರ್ಮಿಕ ವರ್ಗ: ಆದರೆ ಟ್ರಂಪ್‌ ಅವರ ಭಾಷಣಗಳು ಅಮೆರಿಕದ ಕಾರ್ಮಿಕ ವರ್ಗಕ್ಕೆ ಹಿತವೆನಿಸಿದವು. ಈ ವರ್ಗವು ವಾಷಿಂಗ್ಟನ್ನಿನ ಮೇಲ್ವರ್ಗದ, ಪ್ರಭುತ್ವದ ಧೋರಣೆಗಳಿಂದ ರೋಸಿಹೋಗಿತ್ತು. ವಲಸಿಗರಿಂದಾಗಿ ತಮ್ಮ ಪಾಲಿನ ಉದ್ಯೋಗ ಕೈತಪ್ಪುತ್ತಿದೆ, ಕಂಪೆನಿಗಳು ಬೇರೆ ದೇಶಗಳಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ ಕಾರಣ ಉದ್ಯೋಗ ನಷ್ಟ ಆಗುತ್ತಿದೆ ಎಂದು ಭಾವಿಸಿದ ಈ ವರ್ಗದಲ್ಲಿ ಆಕ್ರೋಶವೊಂದು ಮಡುಗಟ್ಟಿತ್ತು.
ಅಸಾಂಪ್ರದಾಯಿಕ ಅಭಿಯಾನ: ರಿಯಲ್‌ ಎಸ್ಟೇಟ್‌ ಉದ್ಯಮದ ದೊರೆ ಟ್ರಂಪ್‌ ಅವರು ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಅಸಾಂಪ್ರದಾಯಿಕ ಚುನಾವಣಾ ಪ್ರಚಾರ ಕೈಗೊಂಡರು. ಅವರು ಅಮೆರಿಕ ಕಂಡ ಅತ್ಯಂತ ಅಸಾಂಪ್ರದಾಯಿಕ ಅಧ್ಯಕ್ಷ ಆಗಲಿದ್ದಾರೆ.

ಉದ್ಯಮಿಯ ಪುತ್ರ: ಟ್ರಂಪ್‌ ಅವರು ಹುಟ್ಟಿದ್ದು ನ್ಯೂಯಾರ್ಕ್‌ ನಗರದ ಕ್ವೀನ್ಸ್‌ನಲ್ಲಿ. ಇವರು ರಿಯಲ್‌ ಎಸ್ಟೇಟ್‌ ಉದ್ಯಮಿ ಫ್ರೆಡ್ ಟ್ರಂಪ್‌ ಅವರ ಮಗ. ತಮ್ಮ ತಂದೆಯಿಂದ ಸಣ್ಣ ಮೊತ್ತವನ್ನು ಸಾಲದ ರೂಪದಲ್ಲಿ ಪಡೆದು ಉದ್ಯಮ ಆರಂಭಿಸಿದರು.

ನಂತರ ತಮ್ಮ ತಂದೆಯ ಕಂಪೆನಿ ಸೇರಿದರು. ಆ ಕಂಪೆನಿಯ ಚಟುವಟಿಕೆಗಳನ್ನು ನಿಭಾಯಿಸಲು ನೆರವಾದರು. 1971ರಲ್ಲಿ ಕಂಪೆನಿಯ (ಟ್ರಂಪ್‌ ಆರ್ಗನೈಸೇಷನ್) ನೇತೃತ್ವ ವಹಿಸಿಕೊಂಡರು.

ಪಾಪ–ಪುಣ್ಯಗಳನ್ನು ಲೆಕ್ಕಿಸದ ಉದ್ಯಮಿ ಅವರು. ತಮ್ಮ ಕಂಪೆನಿಯ ವಸತಿ ಉದ್ದೇಶದ ಸಾಮಾನ್ಯ ರಿಯಲ್ ಎಸ್ಟೇಟ್ ಯೋಜನೆಗಳನ್ನು ಅವರು ಭಾರಿ ಪ್ರಮಾಣದ ಮ್ಯಾನ್‌ಹಟನ್‌ ಯೋಜನೆಗಳವರೆಗೆ ಬೆಳೆಸಿದರು. ಇಂದು ಅವರ ಬಹುಮಹಡಿ ಕಟ್ಟಡಗಳಿಗೆ ನ್ಯೂಯಾರ್ಕ್‌ನಲ್ಲಿ ಭಾರಿ ಬೇಡಿಕೆ ಇದೆ.

ಟ್ರಂಪ್‌ ಪ್ಲೇಸ್‌, ಟ್ರಂಪ್‌ ವರ್ಲ್ಡ್‌ ಟವರ್‌, ಟ್ರಂಪ್‌ ಇಂಟರ್‌ನ್ಯಾಷನಲ್‌ ಹೋಟೆಲ್‌... ಇವೆಲ್ಲ ಅವರಿಗೇ ಸೇರಿದ್ದು. ಮುಂಬೈ, ಇಸ್ತಾಂಬುಲ್‌, ಫಿಲಿಪ್ಪೀನ್ಸ್‌ನಲ್ಲೂ ಅವರಿಗೆ ಸೇರಿದ ಆಸ್ತಿ ಇದೆ.

ಈ ಯಶಸ್ಸುಗಳ ಹಿಂದೆ ಸೋಲುಗಳೂ ಇವೆ. ಟ್ರಂಪ್‌ ಅವರು ‘ನಾನು ದಿವಾಳಿ ಆಗಿದ್ದೇನೆಂದು ಘೋಷಿಸಿ’ ಎಂಬ ಅರ್ಜಿ ಸಲ್ಲಿಸಿದ್ದೂ ಇದೆ. ಅವರು ತಮ್ಮ ಗುತ್ತಿಗೆದಾರರಿಗೆ ಸರಿಯಾಗಿ ಹಣ ಪಾವತಿಸಿಲ್ಲ ಎಂಬ ಆರೋಪಗಳು ಇವೆ.

ರಿಯಲ್‌ ಎಸ್ಟೇಟ್‌ನಲ್ಲಿ ಹಣ ಹೂಡಿದಂತೆಯೇ ಟ್ರಂಪ್‌ ಅವರು 1996ರಿಂದ 2015ರವರೆಗಿನ ಅವಧಿಯಲ್ಲಿ ಮನೋರಂಜನಾ ಉದ್ಯಮದಲ್ಲೂ ಹೂಡಿಕೆ ಮಾಡಿದ್ದರು. 2003ರಲ್ಲಿ ಅವರು ಟಿ.ವಿ. ರಿಯಾಲಿಟಿ ಕಾರ್ಯಕ್ರಮವೊಂದರ ನಿರೂಪಕ ಆಗಿದ್ದರು.

ಮೂರು ಮದುವೆ, ಐದು ಮಕ್ಕಳು
ಮೂರು ಬಾರಿ ಮದುವೆ ಆಗಿರುವ ಟ್ರಂಪ್ ಅವರ ಈಗಿನ ಪತ್ನಿಯ ಹೆಸರು ಮೆಲಾನಿಯಾ. ಟ್ರಂಪ್‌ ಅವರಿಗೆ ಐದು ಜನ ಮಕ್ಕಳು – ಡೊನಾಲ್ಡ್ ಟ್ರಂಪ್ (ಜೂನಿಯರ್), ಇವಾಂಕಾ, ಎರಿಕ್, ಟಿಫಾನಿ ಮತ್ತು ಬ್ಯಾರೊನ್.

‘ಅಮೆರಿಕವನ್ನು ಮತ್ತೆ ಮಹಾನ್‌ ರಾಷ್ಟ್ರವನ್ನಾಗಿಸಬೇಕು’ ಎಂಬುದು ಚುನಾವಣಾ ಪ್ರಚಾರದ ವೇಳೆ ಟ್ರಂಪ್‌ ಅವರ ಮಂತ್ರವಾಗಿತ್ತು. ಅಮೆರಿಕದ ಅರ್ಥ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು, ಅಕ್ರಮ ವಲಸಿಗರನ್ನು ತಡೆಯಲು ಮೆಕ್ಸಿಕೊಗೆ ಹೊಂದಿಕೊಂಡಿರುವ ಗಡಿಯಲ್ಲಿ ಗೋಡೆ ನಿರ್ಮಿಸುವುದು ಹಾಗೂ ದೇಶದಲ್ಲಿ ಏನಾಗುತ್ತಿದೆ ಎಂಬುದು ಅರ್ಥವಾಗುವವರೆಗೆ ಮುಸ್ಲಿಂ ವಲಸಿಗರನ್ನು ನಿಷೇಧಿಸುವ ಭರವಸೆಗಳ ಸೌಧವನ್ನು ಟ್ರಂಪ್‌ ನಿರ್ಮಿಸಿದ್ದಾರೆ.

ಪ್ರಥಮ ಮಹಿಳೆ ವಿದೇಶಿ ಸಂಜಾತೆ: 1820ರ ನಂತರದ ದಿನಗಳಲ್ಲಿ ವಿದೇಶಿ ಸಂಜಾತೆಯೊಬ್ಬರು ಅಮೆರಿಕದ ಪ್ರಥಮ ಮಹಿಳೆ ಆಗಲಿರುವುದು ಇದೇ ಮೊದಲು.

ಡೊನಾಲ್ಟ್‌ ಟ್ರಂಪ್‌ ಅವರ ಪತ್ನಿ ಮೆಲಾನಿಯಾ ಅವರು ಜನಿಸಿದ್ದು ಯುಗೋಸ್ಲಾವಿಯಾದಲ್ಲಿ. ಮೆಲಾನಿಯಾ ಅವರು 1998ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಫ್ಯಾಶನ್‌ ಸಪ್ತಾಹವೊಂದರ ಸಂದರ್ಭದಲ್ಲಿ ಟ್ರಂಪ್‌ ಅವರನ್ನು ಮೊದಲು ಭೇಟಿ ಮಾಡಿದರು. ಆಗ ಟ್ರಂಪ್‌ ಅವರು ತಮ್ಮ ಎರಡನೆಯ ಪತ್ನಿಯಿಂದ ಬೇರೆಯಾಗಿದ್ದರು. 2005ರಲ್ಲಿ ಟ್ರಂಪ್‌–ಮೆಲಾನಿಯಾ ಮದುವೆಯಾದರು.

ಕಾಂಗ್ರೆಸ್‌ನಲ್ಲೂ ರಿಪಬ್ಲಿಕನ್ನರ ಆಧಿಪತ್ಯ
ಅಧ್ಯಕ್ಷೀಯ ಚುನಾವಣೆಯ ಜತೆಯಲ್ಲಿಯೇ ಅಮೆರಿಕ ಕಾಂಗ್ರೆಸ್‌ನ ಮೇಲ್ಮನೆ ಮತ್ತು ಕೆಳಮನೆ ಸ್ಥಾನಗಳಿಗೂ ಮಂಗಳವಾರ ಮತದಾನ ನಡೆದಿದೆ. ಜನಪ್ರತಿನಿಧಿಗಳ ಸಭೆಯ (ಕೆಳಮನೆ) 435 ಹಾಗೂ ಸೆನೆಟ್‌ನ (ಮೇಲ್ಮನೆ) 34 ಸ್ಥಾನಗಳಿಗೆ ಸದಸ್ಯರ ಆಯ್ಕೆಗಾಗಿ ಜನರು ಮತ ಚಲಾಯಿಸಿದ್ದಾರೆ.

ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಜನಪ್ರತಿನಿಧಿಗಳ ಸಭೆಯ 435 ಸ್ಥಾನಗಳಲ್ಲಿ ರಿಪಬ್ಲಿಕನ್ ಪಕ್ಷ 239, ಡೆಮಾಕ್ರಟಿಕ್ ಪಕ್ಷ 192 ಸ್ಥಾನಗಳನ್ನು ಪಡೆದಿದ್ದವು. 4 ಸ್ಥಾನಗಳ ಮತ ಎಣಿಕೆ ಫಲಿತಾಂಶ ಇನ್ನೂ ಬಾಕಿ ಇತ್ತು. ಇಲ್ಲಿ ಬಹುಮತಕ್ಕೆ 217 ಸ್ಥಾನಗಳ ಅವಶ್ಯಕತೆ ಇದ್ದು, ಈಗಾಗಲೇ ರಿಪಬ್ಲಿಕನ್ನರು ಜಯಗಳಿಸಿದ್ದಾರೆ.

ಆದರೆ ಅಮೆರಿಕದ ಕಾಂಗ್ರೆಸ್‌ಗೆ ಈ ಬಾರಿ ಭಾರತೀಯ ಮೂಲದ ಐವರು ಆಯ್ಕೆಯಾಗಿದ್ದಾರೆ. ಐದೂ ಮಂದಿ ಡೆಮಾಕ್ರಟಿಕ್ ಪಕ್ಷದ ಸದಸ್ಯರು. ಕಮಲಾ ಹ್ಯಾರಿಸ್ ಮತ್ತು ಪ್ರಮೀಳಾ ಜಯಪಾಲ್ ಅವರು ಸೆನೆಟ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಜನಪ್ರತಿನಿಧಿಗಳ ಸಭೆಗೆ ರಾಜಾ ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ. ಅಲ್ಲದೆ ರೋಹಿತ್ ಖನ್ನಾ ಅವರು ಜಯ ಗಳಿಸಿದ್ದಾರೆ. ಜತೆಗೆ ಅಮಿ ಬೆರಾ ಅವರು ಜಯಗಳಿಸಿದ್ದು, ಮರು ಎಣಿಕೆ ನಡೆಯುತ್ತಿರುವುದರಿಂದ ಫಲಿತಾಂಶ ತಡೆ ಹಿಡಿಯಲಾಗಿದೆ.

ನವೆಂಬರ್‌ 8ರಂದೇ ಅಧ್ಯಕ್ಷೀಯ ಚುನಾವಣೆಯ ಮತದಾನ ನಡೆದಿದ್ದರಿಂದ ಸೆನೆಟ್‌ ಚುನಾವಣೆಗೆ ಅಗತ್ಯ ಪ್ರಚಾರ ಸಿಕ್ಕಿರಲಿಲ್ಲ. ಆದರೆ ಅಧ್ಯಕ್ಷೀಯ ಚುನಾವಣೆಯ ಜತೆಯಲ್ಲೇ ಈ ಚುನಾವಣೆಯು ನಡೆದಿದ್ದರಿಂದ ಒಟ್ಟಾರೆ ಮತದಾನದ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೆನೆಟ್‌ನಲ್ಲಿ ಡೆಮಾಕ್ರಟ್‌ ಬಲ ಹೆಚ್ಚಳ: ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷ ತನ್ನ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದರೂ, ರಿಪಬ್ಲಿಕನ್ ಪಕ್ಷ ಬಹುಮತ ಪಡೆದಿದೆ.

ಸೆನೆಟ್‌ನ ಒಟ್ಟು ಸದಸ್ಯರ ಸಂಖ್ಯೆ 100. ಇವರಲ್ಲಿ 34 ಸದಸ್ಯರ ಅವಧಿ ಈ ತಿಂಗಳ ಆರಂಭದಲ್ಲಿ ಕೊನೆಯಾಗಿತ್ತು. ಇದಕ್ಕೂ ಮುನ್ನ ಒಟ್ಟು ಸದಸ್ಯರಲ್ಲಿ 54 ರಿಪಬ್ಲಿಕನ್ ಮತ್ತು 44 ಡೆಮಾಕ್ರಟಿಕ್ ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದರು.ಇದರಲ್ಲಿ  ರಿಪಬ್ಲಿಕನ್‌ ಪಕ್ಷದ 24 ಮತ್ತು ಡೆಮಾಕ್ರಟಿಕ್ ಪಕ್ಷದ 10 ಸ್ಥಾನಗಳು ತೆರವಾಗಿದ್ದವು.

ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ  ರಿಪಬ್ಲಿಕನ್ನರಿಗೆ 51 ಸ್ಥಾನಗಳೂ, ಡೆಮಾಕ್ರಟಿಕನ್ನರಿಗೆ 48 ಸ್ಥಾನಗಳು ದೊರೆತಿದ್ದವು. ಇನ್ನೂ ಒಂದು ಸ್ಥಾನದ ಫಲಿತಾಂಶ ಪ್ರಕಟವಾಗಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT