ಭಾನುವಾರ, ಮಾರ್ಚ್ 26, 2023
31 °C

ನಾನು ಸತ್ಯದ ಹಾದಿಯಲ್ಲಿ ನಡೆಯುತ್ತಿದ್ದೇನೆ, ನಾನು ಯಾರಿಗೂ ಹೆದರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನು ಸತ್ಯದ ಹಾದಿಯಲ್ಲಿ ನಡೆಯುತ್ತಿದ್ದೇನೆ, ನಾನು ಯಾರಿಗೂ ಹೆದರಲ್ಲ

ಘಾಜೀಪುರ್: ಉತ್ತರ ಪ್ರದೇಶದಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನೋಟು ರದ್ದು ನಿರ್ಧಾರವನ್ನು ಟೀಕಿಸುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ಸರ್ಕಾರ ರದ್ದು ಮಾಡಿದ ನಂತರ ಬಡವರು ಆರಾಮವಾಗಿ ನಿದ್ದೆ ಮಾಡುತ್ತಿದ್ದಾರೆ. ಆದರೆ ಧನಿಕರು ನಿದ್ದೆ ಮಾತ್ರೆ ಖರೀದಿಸಲು ಓಡುತ್ತಿದ್ದಾರೆ ಎಂದು ಹೇಳಿದ ಮೋದಿ,  ಹೊಸತಾಗಿ ವೈಟ್‍ವಾಷ್ ಮಾಡಿದರೆ ಮೊದಲಿಗೆ ಕೆಟ್ಟ ವಾಸನೆ ಬರುತ್ತಿರುತ್ತದೆ. ಅದು ಅನಿವಾರ್ಯವೂ ಹೌದು. ನೋಟು ರದ್ದು ನಿರ್ಧಾರದಿಂದ ಜನರಿಗೆ ಅನಾನುಕೂಲ ಆಗುತ್ತಿದೆ ನಿಜ. ಈ ಅನಾನುಕೂಲತೆಗಳನ್ನು ಸಹಿಸಿಕೊಂಡರೆ ಮಾತ್ರ ಭ್ರಷ್ಟಾಚಾರವನ್ನು ಹೋಗಲಾಡಿಸಲು ಸಾಧ್ಯ ಎಂದಿದ್ದಾರೆ.

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ, ಈ ಬಗ್ಗೆ ಮಾತನಾಡಿದ ಪ್ರಧಾನಿ, ಲೋಕಸಭಾ ಚುನಾವಣಾ ಗೆಲುವಿನಲ್ಲಿ ಉತ್ತರ ಪ್ರದೇಶದ ಮತದಾರರು ಪ್ರಧಾನ ಪಾತ್ರ ವಹಿಸಿದ್ದರು. 1965ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ ವೀರ್ ಅಬ್ದುಲ್ ಹಮೀದ್ ಅವರ ಊರಾದ  ಘಾಜೀಪುರ್‍‍ಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.

1962ರಲ್ಲಿ ಘಾಜೀಪುರದ ಸಂಸದ ಪೂರ್ವಾಂಚಲದ ಬಡತನದ ಬಗ್ಗೆ ಪಂಡಿತ್ ನೆಹರೂ ಅವರಿಗೆ ಹೇಳಿದ್ದರು. ಆಗ ನೆಹರೂ ಅವರು ಸಮಿತಿಯೊಂದನ್ನು ರಚಿಸಿದ್ದರು. ಆದರೆ ಪಂಡಿತ್ ನೆಹರೂ ಮರಣಾನಂತರ ಹಲವಾರು ಸಂಸದರು ಬಂದು ಹೋದರೂ, ಸಮಿತಿಯ ವರದಿ ಮಾತ್ರ ಬೆಳಕಿಗೆ ಬರಲೇ ಇಲ್ಲ.

ನೆಹರೂ ಅವರ ಜನ್ಮ ದಿನವಾದ ಇಂದು, ಕಳೆದು ಹೋಗಿರುವ ಆ ವರದಿಯ ಕಡತಗಳನ್ನು ಮತ್ತೆ ತೆರೆಯುವಂತೆ ಮಾಡುತ್ತೇನೆ. ಮಾಜಿ ಪ್ರಧಾನಿಯವರ ಪಕ್ಷ ಮತ್ತು ಕುಟುಂಬ ಮಾಡದೇ ಇದ್ದ ಕೆಲಸವನ್ನು ಮಾಡುವ ಮೂಲಕ ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ.

ರೈತರ ಹಿತಕ್ಕಾಗಿ ನಾನು ಬೆಳೆ ವಿಮೆ ಯೋಜನೆಯೊಂದನ್ನು ಜಾರಿಗೆ ತಂದಿದ್ದೇವೆ. ಈ ಮೂಲಕ ರೈತರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶ ನಮ್ಮದು.

ದೇಶದಲ್ಲಿ ಹಣದ ಕೊರತೆ ಇಲ್ಲ, ಆದರೆ ಹಣ ಎಲ್ಲಿದೆ ಎಂಬುದರಲ್ಲಿ ಸಮಸ್ಯೆ ಅಡಗಿದೆ. ಇದೀಗ ಕೆಲವು ಪಕ್ಷಗಳು ಚಿಂತಾಕ್ರಾಂತವಾಗಿವೆ. ಮುಂದೇನು ಮಾಡುವುದು ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಈ ನಡುವೆ ಸಾಮಾನ್ಯ ಜನರು ಎದುರಿಸುತ್ತಿರುವ ಅನಾನುಕೂಲತೆಗಳಿಗಾಗಿ ವಿಷಾದಿಸುತ್ತೇನೆ ಎಂದಿದ್ದಾರೆ ಮೋದಿ.

ನೋಟು ರದ್ದು ನಿರ್ಧಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ ಪ್ರಧಾನಿ, ಇಂದಿರಾ ಗಾಂಧಿಯವರ ಸಂಸತ್ ಸೀಟು ಉಳಿಸಿಕೊಳ್ಳುವ  ಸಲುವಾಗಿ ತುರ್ತು ಪರಿಸ್ಥಿತಿ ಘೋಷಿಸಿ ನೀವು ದೇಶದ ಜನರು 19 ತಿಂಗಳು ಜೈಲಿಗಟ್ಟಿದಿರಿ.  ಯಾರೊಬ್ಬರಲ್ಲಿಯೂ ಅಭಿಪ್ರಾಯ ಕೇಳದೆ ನೀವು 25 ಪೈಸೆಯನ್ನು ರದ್ದು ಮಾಡಿದಿರಿ. ನೀವು ನಿಮ್ಮ ಘನತೆಗೆ ತಕ್ಕಂತೆ ಮಾಡಿದಿರಿ. ನಾನು ನನ್ನ ಘನತೆಗೆ ತಕ್ಕಂತೆ ಮಾಡಿದೆ.

ನಮ್ಮ ಶತ್ರುಗಳು ದೇಶದಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿದ್ದಾರೆ. ಇಂಥಾ ಕಾರ್ಯಗಳನ್ನು ನಿಲ್ಲಿಸಬೇಕಾಗಿದೆ. ನನ್ನ ವಿರುದ್ಧವಿರುವರು ಶಕ್ತಿಶಾಲಿಯಾದ ಜನರು. ಆದರೆ ನಾನು ಅವರಿಗೆ ಹೆದರಲ್ಲ. ನಾನು  ಸತ್ಯದ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.