ಹಾಲಿವುಡ್
ಸದಾ ನಳನಳಿಸುವ ಹಳೆ ಕಥೆ

ಡಿಸ್ನಿ ಕಂಪೆನಿ ನಿರ್ಮಿಸುವ ಚಲನಚಿತ್ರಗಳಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಮಕ್ಕಳನ್ನು ಮನಸಿನಲ್ಲಿಟ್ಟುಕೊಂಡು ನಿರ್ಮಿಸುವ ಡಿಸ್ನಿ ನಿರ್ಮಾಣದ ಚಿತ್ರಗಳು ದೊಡ್ಡವರ ಕನಸಿನಲ್ಲೂ ಸ್ಥಾನ ಪಡೆಯುವುದು ಸುಳ್ಳಲ್ಲ.
ಪ್ರೇಕ್ಷಕ ವಲಯದಲ್ಲಿ ಕುತೂಹಲ ಹುಟ್ಟುಹಾಕಿರುವ ಡಿಸ್ನಿ ನಿರ್ಮಾಣದ ‘ಬ್ಯೂಟಿ ಅಂಡ್ ದಿ ಬೀಸ್ಟ್’ನ ಮೊದಲ ಟ್ರೇಲರ್ ಸೋಮವಾರ (ನ.14) ಯುಟ್ಯೂಬ್‌ಗೆ ಅಪ್‌ಲೋಡ್ ಆಗಿದೆ. ಎರಡೇ ದಿನದಲ್ಲಿ ಸುಮಾರು 75 ಲಕ್ಷ ಮಂದಿ ಟ್ರೇಲರ್ ನೋಡಿ ಆನಂದಿಸಿದ್ದಾರೆ.
ಕಣ್ಣುಗಳಲ್ಲಿ ಮುಗ್ಧತೆಯನ್ನು ಸೂಸುವ ಎಮಾ ವಾಟ್ಸನ್ ಅಭಿನಯ, ಮಾತನಾಡುವ ಗಡಿಯಾರ, ಕುಣಿಯುವ ಕೆಟಲ್, ಯುದ್ಧದ ಸನ್ನಿವೇಶ, ಒರಟು ದೈತ್ಯರಂತಿರುವ ಹಿಮಕರಡಿಗಳೊಂದಿಗೆ ಸುಕೋಮಲ ರಾಜಕುವರಿಯಂತಿರುವ ಬೆಲ್ಲೆ (ಎಮಾ ಟಾಟ್ಸನ್) ಹೋರಾಡುವ ದೃಶ್ಯಗಳು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿವೆ.
ಡಿಸ್ನಿ ಕಂಪೆನಿಯೂ 1991ರಲ್ಲಿ ಬಿಡುಗಡೆ ಮಾಡಿದ್ದ ಅನಿಮೇಶನ್ ಚಿತ್ರದ ಜೀವಂತ ರೂಪ ಮಾರ್ಚ್ ಮೂರರಂದು ಜಗತ್ತಿನಾದ್ಯಂತ ತೆರೆಗಳನ್ನು ಅಲಂಕರಿಸಲಿದೆ.
‘ಹ್ಯಾರಿ ಪಾಟರ್’ ಖ್ಯಾತಿಯ ಎಮಾ ‘ಬೆಲ್ಲೆ’ ಆಗಿ ಸೌಂದರ್ಯಕ್ಕೆ (ಬ್ಯೂಟಿ) ಪ್ರತೀಕವಾಗಿದ್ದರೆ, ‘ಡೌಟ್‌ಟನ್ ಅಬೆ’ಯ ನಟ ಡಾನ್ ಸ್ಟಿವೆನ್ಸ್ ‘ಪ್ರಿನ್ಸ್ ಆಡಂ’ ಆಗಿ ಅತಿಬಲಕ್ಕೆ (ಬೀಸ್ಟ್) ಪ್ರತೀಕವಾಗಿದ್ದಾರೆ. ಚಂದದ ಹುಡುಗಿಯ ತನ್ನನ್ನು ಬಂಧಿಸುವ ಅತಿಬಲನಿಗೆ ಒಲಿಯುವ ಜಾನಪದ ಕಥೆಯ ಎಳೆ ಚಿತ್ರದಲ್ಲಿ ಹಾಸುಹೊಕ್ಕಾಗಿದೆ.
ಬೆಲ್ಲೆ ಅತಿಬಲನನ್ನು ಮೊದಲ ಬಾರಿಗೆ ಭೇಟಿಯಾಗುವ ಸನ್ನಿವೇಶದೊಂದಿಗೆ ವಿವಿಧ ಪಾತ್ರಗಳ ಮೊದಲ ನೋಟವನ್ನು ಟ್ರೇಲರ್ ಕಟ್ಟಿಕೊಟ್ಟಿದೆ. 2015ರಲ್ಲಿ ಬಿಡುಗಡೆಯಾಗಿದ್ದ ‘ಸಿಂಡ್ರೆಲಾ’ ರೀತಿಯಲ್ಲಿಯೂ ‘ಬ್ಯೂಟಿ ಅಂಡ್ ದಿ ಬೀಸ್ಟ್’ ಸಹ ಮೂಲ ಕಾರ್ಟೂನ್ ಚಿತ್ರಕ್ಕೆ ನಿಷ್ಠವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.