ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಗಳ ನೀರಿಗಾಗಿ ಇಂದಿನ ಯೋಜನೆಗಳು

Last Updated 17 ನವೆಂಬರ್ 2016, 19:30 IST
ಅಕ್ಷರ ಗಾತ್ರ

ದೇಶದ ವಾರ್ಷಿಕ  ಮಳೆಯ ಸರಾಸರಿ 1100 ಮಿಲಿ ಮೀಟರ್. ಪಶ್ಚಿಮ ರಾಜಸ್ತಾನ  ಇಸಾವಲಿನಲ್ಲಿ ಅಬ್ಬಬ್ಬಾ ಎಂದರೆ 200 -250 ಮಿಲಿ ಮೀಟರ್ ಇರಬಹುದು. ಅಲ್ಲಲ್ಲಿ ಲಭ್ಯವಾಗುವ ಮಳೆಯನ್ನು ಹೊಂದಿಕೊಂಡು ಬಳಕೆಯ ರೀತಿಗಳನ್ನು ನಮ್ಮ ಪೂರ್ವಜರು ರೂಪಿಸಿದ್ದರು.

ತೃತೀಯ ಜಗತ್ತಿನ ದೇಶಗಳಿಗೆಲ್ಲಾ ಪಾಠ ಹೇಳುವಷ್ಟು ವೈವಿಧ್ಯಮಯ ನೀರಿನ ವಿಜ್ಞಾನ ನಮ್ಮ ದೇಶದಲ್ಲಿದೆ. ಒಂದಷ್ಟು ದಾಖಲಾತಿ ಆಗಿದೆ; ಆಗದೆ ಇರುವವೂ ಸಾಕಷ್ಟಿರಬಹುದು. ಆದರೆ ನಮ್ಮ ಅದೆಷ್ಟೋ ಅದ್ಭುತವಾದ ನೀರಿನ ಜ್ಞಾನ ಇನ್ನೂ ಹಬ್ಬಬೇಕಾದಷ್ಟು ಹಬ್ಬಿಲ್ಲ. ಅದನ್ನು ಸುತ್ತಲಿನ ಪ್ರದೇಶಕ್ಕೆ ಹಬ್ಬಿಸುವ ಕೆಲಸವೇ ಆಗಿಲ್ಲ.

ಕೋಲಾರದ ಸುತ್ತಮುತ್ತ ಇರುವ ಕಮ್ಮಿ ಮಳೆಯ ವರ್ಷದಲ್ಲಿ ನೀರನ್ನು ಸಮಾನವಾಗಿ ಹಂಚಿಕೊಳ್ಳುವ ದಾಮಾಶಾ ಪದ್ಧತಿ, ನೀರಿನ ಕೊರತೆಯಿದ್ದಾಗ ಊರಿನ ಜನ ಒಟ್ಟು ಸೇರಿ ಬೇಲೇಯ ಆಯ್ಕೆ ಮಾಡುವ ಮಹಾರಾಷ್ಟ್ರದ ಫಡ್ ವ್ಯವಸ್ಥೆ, ಪಾಲಕ್ಕಾಡಿನ ಭತ್ತದ ಗದ್ದೆಗಳಲ್ಲಿ ಆಪತ್ಕಾಲಕ್ಕೆ ನೀರೊದಗಿಸಲು ನಿರ್ಮಿಸುತ್ತಿದ್ದ ಕೊಕ್ಕರ್ಣಿ, ಕೇರಳದ ವಯನಾಡಿನ ಕೇಣಿ, ಒರಿಸ್ಸಾದ ಕಾಟಾ, ಬಿಹಾರದ ಅಹರ್ಸ್ ಮತ್ತು ಪೈನ್ಸ್, ಕರಾವಳಿ ಕನ್ನಾಡಿನ ಮದಕಗಳು, ಕೊಪ್ಪಳ ಜಿಲ್ಲೆಯ ಬರನಿರೋಧಕ ಜಾಣ್ಮೆಯಾದ ಮರಳು ಮುಚ್ಚಿಗೆ – ಎಷ್ಟು ಎಷ್ಟು ಉದಾಹರಣೆ ಬೇಕು ನಿಮಗೆ?

ಹೀಗೊಮ್ಮೆ ಯೋಚಿಸಿ ನೋಡಿ. ಸ್ವಲ್ಪ ಹೊತ್ತಿಗೆ ಸುತ್ತಲಿನ ಹಳ್ಳಿಗಳಿಂದ ಜನವಲಸೆ ಬಂದು ಉಬ್ಬುತ್ತಾ, ಏದುಸಿರು ಬಿಡುತ್ತಾ ಇರುವ ನಗರಗಳನ್ನು ಬಿಟ್ಟುಬಿಟ್ಟು ಹೀಗೊಂದು ಆಲೋಚನೆ ಮಾಡಿ. ಎಲ್ಲೆಲ್ಲಿ ಎಕರೆವಾರು ಜನಸಂಖ್ಯೆ ಹೆಚ್ಚಿದೆಯೋ ಅಲ್ಲಿ ಮಳೆಯೂ ಹೆಚ್ಚಿದೆ. ಎಲ್ಲಿ ಜನದಟ್ಟಣೆ ವಿರಳವೋ, ಅಲ್ಲಿ ಮಳೆಯೂ ಕಮ್ಮಿ. ಇದರರ್ಥ ಏನು? ಅಲ್ಲಲ್ಲಿ ಸುರಿಯುವ ಮಳೆಯೇ ಆ ಪ್ರದೇಶದ ಜನರಿಗೆ ಧಾರಾಳ. ಮಳೆ ಹೇಗೆಯೋ, ಹಾಗೆಯೇ ನೀರಿನ ಯೋಜನೆಗಳೂ ವಿಕೇಂದ್ರೀಕೃತವಾಗಿರಬೇಕು. ನೂರಾರು ಕಿಲೋಮೀಟರ್ ದೂರದಿಂದ ತರುವ ಕೆಲಸ ಅಪ್ರಾಯೋಗಿಕ.

ಜಲಸಾಕ್ಷರತೆ ನೀರನೆಮ್ಮದಿಯ ಅಡಿಪಾಯ
ಬರಬರುತ್ತಾ ಜನರಿಗೆ ನೀರಿನ ಸುಸ್ಥಿತಿಯ ಪ್ರಾಥಮಿಕ ವಿಚಾರವೂ ಮರೆತುಹೋಗಿದೆ. ಇದೂ ಬ್ಯಾಂಕ್ ವ್ಯವಹಾರದಂತೆಯೇ, ಭೂಮಿ ಎಂಬ ಬ್ಯಾಂಕಿನಲ್ಲಿ ಠೇವಣಿ ಇಟ್ಟರಷ್ಟೇ ಅಗತ್ಯ ಬಿದ್ದಾಗ ಎತ್ತಿಕೊಳ್ಳಬಹುದು. ಇದನ್ನು ಅರ್ಥ ಮಾಡಿಕೊಳ್ಳದವರೇ ಹೆಚ್ಚು. ಹಣಕಾಸು ಸಾಕ್ಷರತೆ, ಕಂಪ್ಯೂಟರ್ ಸಾಕ್ಷರತೆಯಂತೆಯೇ ಜಲಸಾಕ್ಷರತೆ ನಮಗೀಗ ಬೇಕು. ಏನಿದು ಜಲಸಾಕ್ಷರತೆ? ಅವರವರ ಪ್ರದೇಶದಲ್ಲಿ ದಶಕಗಳ ಹಿಂದಿನಿಂದಲೂ ನೀರಸುಸ್ಥಿತಿ ಕಾದಿರಿಸಿಕೊಂಡು ಬಂದ ‘ಪಾರಂಜವ್ಯ’ಗಳ (ಪಾರಂಪರಿಕ ಜಲಸಂರಕ್ಷಣಾ ವ್ಯವಸ್ಥೆ) ಬಗ್ಗೆ ಸರಿಯಾದ ತಿಳಿವಳಿಕೆ, ಜಲಚಕ್ರ ಮತ್ತು ಜಲಕ್ಷಾಮದ ಕಾರಣಗಳ ಬಗ್ಗೆ ಅರಿವು, ನೀರ ಬಳಕೆಯಲ್ಲಿ ಕಟ್ಟೆಚ್ಚರ ಮತ್ತು ಬಳಸಿದ ನೀರನ್ನು ಹೊರಹಾಕುವಾಗ ಬೇರೆಯವರಿಗೆ ತೊಂದರೆ ಆಗದಂತೆ ಮಾಡುವ ಮುನ್ನೆಚ್ಚರಿಕೆ – ಇವೆಲ್ಲವೂ ಜಲಸಾಕ್ಷರತೆಯಲ್ಲಿ ಸೇರಿವೆ.

ನಾವು ಜಲಕಾರ್ಯಕರ್ತರು ದಶಕಗಳಿಂದಲೂ ಆಗ್ರಹಿಸುತ್ತಾ ಬಂದಿರುವ ಜಲಸಾಕ್ಷರತೆ ಹಬ್ಬಿಸುವ ಒಂದು ಪರಿಣಾಮಕಾರಿ ಮಾರ್ಗ - ಪ್ರತಿ ಜಿಲ್ಲೆಯಲ್ಲಿ ಮಳೆಕೇಂದ್ರ – ರೈನ್ ಸೆಂಟರ್ – ಗಳ ಸ್ಥಾಪನೆ. ಇದು ಸರಕಾರಿ ಮತ್ತು ಖಾಸಗಿ ಮಿಶ್ರ ಆಡಳಿತ ಮತ್ತು ಪಾಲುಗಾರಿಕೆ ಹೊಂದಿರಬೇಕು. ಆಯಾಯಾ ಪ್ರದೇಶದ ಹಳ್ಳಿ ಮತ್ತು ನಗರಕ್ಕೆ ಸೂಕ್ತವಾದ ನೀರಿಂಗಿಸುವ, ಮಳೆಕೊಯ್ಲಿನ ಮಾದರಿಗಳು ಈ ಮಳೆ ಕೇಂದ್ರದಲ್ಲಿರಬೇಕು.

ಜಿಲ್ಲೆಯಲ್ಲಿ ಬೇರೆಬೇರೆ ಪರಿಸ್ಥಿತಿಗಳಲ್ಲಿ ಜಲಮರುಪೂರಣ ಮಾಡಿ ಗೆದ್ದವರ ಚಿತ್ರ, ವಿಳಾಸ ಸಂಪರ್ಕ ನಂಬರುಗಳ ದಾಖಲೆ, ಬೇರೆಬೇರೆ ಕಡೆಯ ವಿಡಿಯೋ ಚಿತ್ರ, ಅವುಗಳನ್ನು ತೋರಿಸಲು ವ್ಯವಸ್ಥೆ-ಹೀಗೆ ಮಳೆ ಕೇಂದ್ರ ಆಯಾಯಾ ಜಿಲ್ಲೆಯ ಜಲಸಂರಕ್ಷಣೆಯ ಮಾಹಿತಿಯ ‘ಒಂದು ಕಿಟಕಿಯ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ’ ಆಗಬೇಕು. ಆಯಾ ಜಿಲ್ಲೆಯಲ್ಲಿ ನೀರನೆಮ್ಮದಿಗಾಗಿ ಮಾಡಬಹುದಾದ ಕ್ರಮಗಳ ಬಗ್ಗೆಯೇ ಶಿಕ್ಷಣಾತ್ಮಕ ವಿಡಿಯೋವನ್ನು ‘ಉತ್ತಮ ವಿಧಾನಗಳು’(ಬೆಸ್ಟ್ ಪ್ರಾಕ್ಟೀಸಸ್) ಎಂಬ ಹೆಸರಿನಲ್ಲಿ ಸಿದ್ಧಪಡಿಸಿಕೊಳ್ಳಬೇಕು. ಇಂಥದ್ದೊಂದು ಮಳೆ ಕೇಂದ್ರ ಚೆನ್ನೈಯಲ್ಲಿದೆ. ಅದು ಖಾಸಗಿ ವ್ಯವಸ್ಥೆಯಲ್ಲಿದ್ದು ಬಹು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ.

ಪ್ರತ್ಯಕ್ಷದರ್ಶನ ಮಾಡಿಸಲಿ
ಮಿತ ವೆಚ್ಚದಲ್ಲಿ ಆಸಕ್ತ ಗುಂಪುಗಳನ್ನು ಒಂದು ದಿನ ಕರೆದೊಯ್ದು ಜಿಲ್ಲೆಯಲ್ಲಿ ಆಗಿರುವ ಜಲಸಂರಕ್ಷಣೆಯ ಕೆಲಸಗಳ ಪ್ರತ್ಯಕ್ಷದರ್ಶನ (ಎಕ್ಸ್‌ಪೋಶರ್ ವಿಸಿಟ್) ಮಾಡಿಸುವ ವ್ಯವಸ್ಥೆಯೂ ಮಳೆಕೇಂದ್ರದಲ್ಲಿರಬೇಕು. ಸಂತಸದ ವಿಷಯವೆಂದರೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಶ್ರೀಸಾಮಾನ್ಯರ ಒಳ್ಳೊಳ್ಳೆ ನೀರಿನ ಯಶೋಗಾಥೆಗಳಿವೆ. ನಮ್ಮ ಬಾಗಲಕೋಟೆ, ಬಿಜಾಪುರಗಳಲ್ಲಿ ಈ ಥರದ ಯತ್ನ ಆಗಿದ್ದರೂ ಅವು ಸಾಲದು. ಬೆಂಗಳೂರಿನಲ್ಲೂ ಜಲಮಂಡಳಿ ಈ ಬಗೆಯದೊಂದನ್ನು ಆರಂಭಿಸಿರುವುದಾಗಿ ಕೇಳಿದ್ದೇನೆ. ಆದರೆ ಈ ಪ್ರಯತ್ನಗಳು ಯಾವುವೂ ಜಿಲ್ಲೆಗೇ ನೀರ ಪಾಠ ಹೇಳುವಷ್ಟು ಸುಸಜ್ಜಿತವೂ ದೂರದೃಷ್ಟಿಯವೂ ಆಗಿಲ್ಲ.

ಕರ್ನಾಟಕದ ಬರ ಸಂಭಾವ್ಯ ಪ್ರದೇಶದ ವಿಸ್ತೀರ್ಣ ದೇಶದಲ್ಲೇ ಹೆಚ್ಚು. ಅದು ರಾಜಸ್ಥಾನಕ್ಕೆ ಮಾತ್ರ ಹಿಂದೆ ನಿಲ್ಲುತ್ತದೆ. ಐದಾರು ವರ್ಷದ ಹಿಂದೆ ಒಂದು ಅಧ್ಯಯನ ವರದಿ ಬಂದಿತ್ತು. ಇಳಿಮೇಡು (ವಾಟರ್ ಶೆಡ್) ಅಭಿವೃದ್ಧಿಗಾಗಿ ಅಗಾಧ ಪ್ರಮಾಣದ ಮೊತ್ತ ಚೆಲ್ಲಿದ್ದರೂ ಇಂಥ ಪ್ರದೇಶಗಳಲ್ಲಿ ಸಾಧಿಸಿದ ಪ್ರಗತಿ ನಿರಾಶಾದಾಯಕ ಅಂತ. ಇದಕ್ಕೆ ಕಾರಣಗಳು ಬೇರೆಬೇರೆ ಇರಬಹುದು – ಕಾಮಗಾರಿಯ ಅನುಷ್ಠಾನದ ಗುಣಮಟ್ಟವೂ ಸೇರಿದಂತೆ. ಆಡಳಿತ, ಜಲಾನಯನ ಅಭಿವೃದ್ಧಿ ಅಥವಾ ಅಭ್ಯುದಯರಂಗದ ದೊಡ್ಡ ತಲೆಗಳಿಗೆ ಎಷ್ಟರ ಮಟ್ಟಿಗೆ ಇದು ಗೊತ್ತೋ ನಾನರಿಯೆ. ಕರ್ನಾಟಕದ ಮಳೆಯಾಧಾರಿತ ಕೃಷಿ ಪ್ರದೇಶದಲ್ಲಿ ದೇಶಮಟ್ಟದಲ್ಲೇ ಹೆಮ್ಮೆಯಿಂದ ಎತ್ತಿ ತೋರಿಸಬಲ್ಲಂಥಾ ಮೂರು ಬರನಿರೋಧಕ ಜಾಣ್ಮೆಗಳಿವೆ.

ಅರ ಬರದಾಗ ಎಂಟಾಣೆ ಬೆಳೆ
ಹುನಗುಂದದ ಡಾ. ಮಲ್ಲಣ್ಣ ನಾಗರಾಳರ ಕುಟುಂಬದ ಬಗ್ಗೆ ಕೇಳಿದ್ದೀರಾ? ಮೂರು ತಲೆಮಾರುಗಳಿಂದ ಇವರು ಮಾಡಿ, ಪ್ರಚರಿಸುತ್ತಾ, ಕೇಳಿದವರಿಗೆ ಹೊಲಕ್ಕೇ ಬಂದು ಮಾರ್ಗದರ್ಶನ ಕೊಡುತ್ತಾ ಬಂದ ‘ಬನಿಜಾ’ (ಬರನಿರೋಧಕ ಜಾಣ್ಮೆ) ನಿಜಕ್ಕೂ ನೂರಕ್ಕೆ ನೂರು ಪರಿಣಾಮಕಾರಿ. ಅವರ ಹಿರಿಯರೇ ಹೇಳುತ್ತಾ ಬಂದಂತೆ ಇದು ‘ಅರ ಬರದಾಗೂ ಎಂಟಾಣೆ ಬೆಳೆ’ ಬೆಳೆದುಕೊಡುವ, ಬದುಕು ಕಟ್ಟಿ ಕೊಡುವ ವಿದ್ಯೆ.

ಇವರ ವಿಧಾನಗಳು ಎರಡು ಘಟ್ಟದವು. ಮೊದಲನೆಯದು ತಳ ಒಡ್ಡಿನ ನಿರ್ಮಾಣ. ಮಳೆ ಬಂದಾಗ ಹೆಚ್ಚಿನ ನೀರು ಇದ್ದರೆ ಅದನ್ನು ಮಾತ್ರ ಹೊರಬಿಟ್ಟು ಒಂದಿಷ್ಟೂ ಕೆನೆಮಣ್ಣನ್ನು ಕೆಳಗಿನ ಭೂಮಿಗೆ ಬಿಟ್ಟುಕೊಡದ ತಂತ್ರ. ಇದಕ್ಕಾಗಿ ಆಯಾಯಾ ಪರಿಸ್ಥಿತಿ ಹೊಂದಿಕೊಂಡು ತಳ ಒಡ್ಡಿನ ಆಯ್ದ ಭಾಗದಲ್ಲಿ ಒಳಗಟ್ಟಿ ಅಥವಾ ಗುಂಡಾವರ್ತಿಯ ನಿರ್ಮಾಣ ಮಾಡಿಕೊಳ್ಳಬೇಕು. ಗುಂಡಾವರ್ತಿಯ ಬಾಯಿಯ ಬಳಿ ಒಂದೇ ಒಂದು ಕಲ್ಲನ್ನು ಬೇಕಾದಂತೆ ಇಟ್ಟು ಅಥವಾ ತೆಗೆದು ರೈತ ಹೆಚ್ಚುವರಿ ನೀರನ್ನು ನಿಲ್ಲಿಸುವ ಅಥವಾ ಹೊರಬಿಡುವ ಕೆಲಸ ಅತಿಸುಲಭವಾಗಿ ಮಾಡಿಕೊಳ್ಳಬಹುದು. ಈ ವಿಧಾನಗಳನ್ನು ಅಳವಡಿಸಿ ಗೆದ್ದ ಒಬ್ಬರು ಹಿರಿಯ ಕೃಷಿಕ ನಗುನಗುತ್ತಾ ಹೇಳುವ ಮಾತು ಕೇಳಿ: “ಬೇರೇನಿಲ್ಲ ಸರ್ರ. ಮಳಿ ಬಂದಾಗ ಹೆಚ್ಚು ನೀರು ಸುರಿಯಿತೂ ಅನ್ನಿ. ಆ ನೀರು ತನ್ನ ಪಾಡಿಗೆ ತಾನು ನಮ್ ಹೊಲದಿಂದ ಹೊರ ಹೋಗೂ ಹಂಗಿಲ್ಲ. ನಮ್ ಪರ್ಮಿಸನ್ ತಗೊಂಡೇ ಹೋಗಬೇಕು ಅಷ್ಟೇ.”

ಹೊಲವನ್ನಿಡೀ ಸಮತಟ್ಟು ಮಾಡಿ ಸಣ್ಣ ಮಳೆ ಬಂದರೂ ಗರಿಷ್ಠ ಜಾಗ ಹದವಾಗುವಂತೆ (ತೇವಭರಿತ)  ಮಾಡುವುದು ಇದರ ನಂತರದ ಘಟ್ಟ. ಮಲ್ಲಣ್ಣ ಇದನ್ನು ‘ಹೊಲವನ್ನು ಕೆರೆಯ ಅಂಗಳದಂತೆ ಮಾಡೋದು’ ಎನ್ನುತ್ತಾರೆ. ಎರಡೂ ವಿಧಾನಗಳು ಸೋವಿ ಅಲ್ಲ. ಇದಕ್ಕಾಗಿ ರೈತ ಬಹುದೊಡ್ಡ ಮೊತ್ತ ವ್ಯಯಿಸಬೇಕಾಗುತ್ತದೆ. ಹಾಗಾಗಿ ಕೆಲವರು ಹಂತಹಂತವಾಗಿ ಮಾಡುವುದಿದೆ. ಸಾಲ ತೆಗೆದು ಮಾಡುವುದಿದೆ.

ಮೌಖಿಕ ವಿಸ್ತರಣೆ
ಗಮನಿಸಬೇಕಾದ ಅಂಶವೆಂದರೆ ಹುನಗುಂದ ತಾಲೂಕಿನ ಬಹುತೇಕ ಕುಟುಂಬಗಳೂ ಈ ಬನಿಜಾದ ಮೊದಲ ಹಂತದ ಕೆಲಸ – ತಳ ಒಡ್ಡು – ಮಾಡಿಕೊಂಡಿವೆ. ಈ ಕೆಲಸಕ್ಕೆ ಈಚೇಚೆಗೆ ಇಲಾಖೆಗಳೂ ಸಹಾಯಧನ ಕೊಟ್ಟಿರುವುದು ಗಮನಾರ್ಹ. ಈ ಶತಮಾನದ ಆರಂಭದ ಎರಡು ಮೂರು ವರ್ಷ ಮತ್ತು ಕಳೆದ ಸಾಲಿನಲ್ಲಿ ಹುನಗುಂದ ಕನಿಷ್ಠ ಮಳೆಯಲ್ಲೇ ತೃಪ್ತಿಪಡಬೇಕಾಗಿತ್ತು. ಆದರೂ ಹೊಟ್ಟೆ ತುಂಬುವಷ್ಟು ಕಾಳು ಬೆಳೆಯಲು ಸಾಧ್ಯವಾದದ್ದು ಈ ವಿಧಾನಗಳ ಅತಿ ಸಮರ್ಥ ವಿಸ್ತರಣೆಯಿಂದ. ಈ ವಿಸ್ತರಣೆಯ ಬಹುಪಾಲೂ ಆಗಿರುವುದು ಮೌಖಿಕವಾಗಿ, ಮಲ್ಲಣ್ಣ ಕುಟುಂಬ ಮತ್ತು ಈ ವಿಧಾನ ಅನುಸರಿಸಿದ ರೈತರಿಂದ ಎನ್ನುವುದನ್ನು ಮರೆಯಬಾರದು. ಬಹುಮಾಧ್ಯಮಗಳ ಲಭ್ಯತೆ ಬಿಡಿ, ಅಲ್ಲಿ ಈ ವರೆಗೆ ಒಂದು ಕರಪತ್ರವನ್ನಾದರೂ ಅಚ್ಚು ಹಾಕಿಸಿದ್ದಾರೋ ಇಲ್ಲವೋ.

ಮಲ್ಲಣ್ಣನ ತಂದೆ ಶಂಕರಣ್ಣ ಮಣ್ಣಿನ ಸವಕಳಿ, ಒಡ್ಡುಗಳ ಮಹತ್ವದ ಬಗ್ಗೆ ಬರೆದ ಹಾಡುಗಳನ್ನೊಮ್ಮೆ ಕೇಳಬೇಕು. “ಮಣ್ಣು ಸಂರಕ್ಷಣೆಯ ಪಾಠ ಹೇಳುವುದು ಎಷ್ಟು ಕಷ್ಟ, ಅದು ಎಂಥ ಒಣ ವಿಚಾರ ಎನ್ನುವುದು ನನಗೆ ಈ ವಿಚಾರದ ಪ್ರಾಧ್ಯಾಪಕನಿಗೆ ಚೆನ್ನಾಗಿ ಅರಿವಿದೆ. ಹಾಗಿದ್ದಾಗ ತಲೆಮಾರುಗಳಿಂದ ಹಾಡು ಹೊಸೆದು ಅದನ್ನು ಹೇಳಹೇಳುತ್ತಾ ಸುತ್ತಲಿನ ರೈತರ ಬದುಕಿಗೆ ಸ್ಥಿರತೆ ತಂದು ಕೊಟ್ಟ ನಾಗರಾಳ್ ಅವರಿಗೆ ನನ್ನ ನಮನ ತಿಳಿಸಿ” ಎಂದು ನಾನು ಹಿಂದೆ ಬರೆದ ಇಂಗ್ಲಿಷ್ ಲೇಖನ ಓದಿದ ಬಾಂಗ್ಲಾದೇಶದ ಪ್ರೊಫೆಸರೊಬ್ಬರು ಬರೆದದ್ದು ಈಗಲೂ ನೆನಪಿದೆ.

ಆರೆಂಟು ಜಿಲ್ಲೆಗಳಿಗೆ ಪ್ರಸ್ತುತ
ನಾಗರಾಳ್ ಕುಟುಂಬ ಪ್ರತಿಪಾದಿಸುವ ‘ಬನಿಜಾ’ ಆರೆಂಟು ಜಿಲ್ಲೆಗಳಿಗೆ ಪ್ರಸ್ತುತ ಎನ್ನುತ್ತಾರೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ. ಎಂ.ಬಿ ಗುಳೇದ್. ಮಲ್ಲಣ್ಣ ಅವರ ಸಾಧನೆ ಮೆಚ್ಚಿ ಅವರಿಗೆ ಡಾಕ್ಟರೇಟ್ ಕೊಟ್ಟಿರುವುದು ಇದೇ ವಿವಿ. ಕೊಪ್ಪಳ ಜಿಲ್ಲೆಯಲ್ಲಿ ಸಾಕಷ್ಟು ಜನಪ್ರಿಯವಾದ ಮರಳು ಮುಚ್ಚಿಗೆ ಇನ್ನೊಂದು ರೈತಸಂಶೋಧಿತ ‘ಬನಿಜಾ’. ಹೆಚ್ಚಾಗಿ ಇದು ಕಪ್ಪು ಮಣ್ಣಿನಲ್ಲಿ ನಡೆದಿದ್ದರೂ ಕೆಂಪು ಮಣ್ಣಿಗೂ ಅನ್ವಯ. ಮಳೆ ಕಡಿಮೆ ಇರುವ ವರ್ಷದಲ್ಲಿ ನೀವು ಕೊಪ್ಪಳ ಜಿಲ್ಲೆಯಲ್ಲಿ ರಸ್ತೆಯಲ್ಲಿ ಸಂಚರಿಸುವಾಗ ಹೊಲಗಳಲ್ಲಿ ಎಲ್ಲೆಲ್ಲಿ ಹಸಿರು ಕಾಣಿಸುತ್ತಿದೆಯೋ ಅವೆಲ್ಲಾ ಮರಳು ಮುಚ್ಚಿಗೆಯ ಕೃಪೆ ಎನ್ನಲು ಸಂಶಯ ಬೇಡ! ಅಲ್ಲಿ ಅದು ಅಷ್ಟು ಜನಪ್ರಿಯ.

ಬಿದ್ದ ಮಳೆಯನ್ನು ಈ ಮರಳು ದೂರಹರಿಯಲು ಬಿಡುವುದೇ ಇಲ್ಲ. ನೀರು ಅಲ್ಲಲ್ಲೇ ಇಂಗುವುದು ಅನಿವಾರ್ಯವಾಗುತ್ತದೆ. ಆದರೆ ತುಂಬ ಆಳಕ್ಕೆ ಬೇರು ಬಿಡುವ ಬೆಳೆಗಳು ಮರಳು ಮುಚ್ಚಿಗೆಯ ಹೊಲದಲ್ಲಿ ಸಾಧ್ಯವಿಲ್ಲ. ಯಾವುದೇ ಬಿತ್ತನೆ ಮಾಡುವಾಗ ಅದು ಮರಳಿನ ಪದರ ಭೇದಿಸಿ ಕೆಳಗಿರುವ ಮಣ್ಣಿನ ಸಂಪರ್ಕಕ್ಕೆ ಬರುವಂತೆ ಮಾಡಬೇಕಿದೆ. ಅದಕ್ಕಾಗಿ ರೈತರು ಬಿದಿರಿನ ಉಪಕರಣವೊಂದನ್ನು ತಯಾರಿಸಿ ಅದನ್ನು ಎತ್ತುಗಳ ಹಿಂದುಗಡೆ ನೇಗಿಲಿನ ಹಿಂದೆ ಜೋಡಿಸಿಕೊಳ್ಳುತ್ತಾರೆ.

ಅಂಗಿ ನೆನೆಯುವಷ್ಟು ಮಳೆ ಸಾಕು
ಮರಳು ಮುಚ್ಚಿಗೆ ಕೂಡಾ ದುಬಾರಿ. ಕಚ್ಚಾವಸ್ತುವಿನ ಮಿತಿಯೂ ಇದೆ. ಆದರೂ ಅನುಸರಿಸಿದವರಿಗೆಲ್ಲಾ ಅದು ಅದ್ಭುತ ಫಲಿತಾಂಶ ಕೊಟ್ಟಿದೆ. “ಒಣಗಲು ಹಾಕಿದ ಅಂಗಿ ನೆನೆಯುವಷ್ಟು ಮಳೆ ಬಂದ್ರೆ ಸಾಕು, ನಾವು ಒಂದು ಪಚ್ಚೆ ಹೆಸ್ರು ಬೆಳೆ ತಗೋತೀವಿ” ಎನ್ನುವ ಮಾತು ಸ್ವಲ್ಪ ಉತ್ಪ್ರೇಕ್ಷೆ ಅನಿಸಲೂಬಹುದು. ಆದರೆ ಕ್ಷೇತ್ರ ನೋಡೊದವರಿಗೆ ಈ ಮಾತಿನ ಹುರುಳು ಅರ್ಥವಾಗುತ್ತದೆ. ಅಚ್ಚರಿಯೂ!

ಈ ಜಿಲ್ಲೆಗಳ ರೈತರಿಗೆ ಮರಳು ಮುಚ್ಚಿಗೆ ಬಗ್ಗೆ ಎಷ್ಟು ಅಚಲ ವಿಶ್ವಾಸ ಇದೆ ಗೊತ್ತೇ? ಬ್ಯಾಂಕು ಸಾಲ ಕೊಡದ ಕಾರಣ ತಮ್ಮ ಜಮೀನಿನ ಒಂದು ಭಾಗವನ್ನು ಒತ್ತೆಯಿಟ್ಟು ಇನ್ನೊಂದಕ್ಕೆ ಮರಳು ಹೊದೆಸುವವರಿದ್ದಾರೆ. ಅದರಲ್ಲಿ ಬಂದ ಉಳಿತಾಯದಿಂದ ಅವರು ಒತ್ತೆಯಿಟ್ಟ ಜಮೀನನ್ನು ಬಿಡಿಸಿಕೊಳ್ಳುತ್ತಾರೆ. ಕೊಪ್ಪಳದಲ್ಲಿ ಮರಳು ಮುಚ್ಚಿಗಾಗಿ ರೈತರು ಹಣಕಾಸು ಹೊಂದಿಕೆ ಮಾಡಿಕೊಳ್ಳುವ ಮೂರ್ನಾಲ್ಕು ವಿಧಾನಗಳು ಆರ್ಥಿಕ ತಜ್ಞರ, ಅಷ್ಟೇ ಏಕೆ ಪಿ.ಎಚ್.ಡಿ. ಅಧ್ಯಯನಕ್ಕೂ ಒಂದು ಯೋಗ್ಯ ವಿಷಯ.

ಹೆಚ್ಚು ಅಂತರದ ಬೆಳೆ
ಇನ್ನೊಂದು ಅತಿ ಸರಳ, ಖರ್ಚೇ ಇಲ್ಲದ ಬನಿಜಾ ಹೆಚ್ಚು ಅಂತರದ ಬೆಳೆ. ತತ್ವ ಇಷ್ಟೇ. ಹಸಿರು ಕ್ರಾಂತಿಯ ಸಂದರ್ಭದಿಂದ ಈಚೆಗೆ ಎಕ್ರೆವಾರು ಗಿಡ ಸಂಖ್ಯೆ ಹೆಚ್ಚಿಸಿ ಗರಿಷ್ಠ ಬೆಳೆ ತೆಗೆಯುವುದಕ್ಕೇ ಒತ್ತು ಸಿಕ್ಕಿತು. ಬರಸಂಭಾವ್ಯ ಪ್ರದೇಶದಲ್ಲಿ ಕನಿಷ್ಠ ಸಾಲಿನಿಂದ ಸಾಲಿಗೆ ಇರುವ ಅಂತರವನ್ನಾದರೂ ಗಣನೀಯವಾಗಿ ಹೆಚ್ಚಿಸಬೇಕು. ಇದರಿಂದ ನೀರಿನ ಕೊರತೆಯ ಕಾಲದಲ್ಲಿ ಲಭ್ಯ ತೇವಾಂಶ ಇರುವ ಕಡಿಮೆ ಗಿಡಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ.

ಸೂರ್ಯಕಾಂತಿ, ನೆಲಗಡಲೆ ಮತ್ತಿತರ ಹಲವು ಬೆಳೆಗಳಲ್ಲಿ ಈ ಬನಿಜಾ ಅನುಸರಿಸುತ್ತಾರೆ. ಬಾಗಲಕೋಟೆ ಜಿಲ್ಲೆಯ ಮುಂದುವರಿದ ಗ್ರಾಮ ಬೆನಕಟ್ಟಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಈ ಕ್ರಮ ಸಾಕಷ್ಟು ಒಲವು ಪಡೆದಿದೆ. ಡಾ.ಗುಳೇದ್ ನೇತೃತ್ವದಲ್ಲಿ ಬಿಜಾಪುರ ಸಂಶೋಧನಾ ಕೇಂದ್ರದಲ್ಲಿ ಮೇಲೆ ತಿಳಿಸಿದ ಎಲ್ಲಾ ಬನಿಜಾಗಳ ಅಧ್ಯಯನ ಮಾಡಿದ್ದಾರೆ. ಇವನ್ನು ವಿವಿ ‘ಬಹಳ ರೈತೋಪಯೋಗಿ ಕ್ರಮಗಳು’ ಎಂದು ಒಪ್ಪಿಕೊಂಡು ಅಲ್ಲಲ್ಲಿ ಪ್ರಚುರಪಡಿಸುವ ಯತ್ನ ಮಾಡಿದೆ. ಆದರೆ ಇಷ್ಟೇ ಸಾಲದು. ಕೃಷಿ ಇಲಾಖೆಯ ಹಲವು ಅಧಿಕಾರಿಗಳೂ ತಮ್ಮ ಸ್ವಂತ ಹೊಲದಲ್ಲಿ ಮರಳು ಮುಚ್ಚಿಗೆ ಮಾಡಿ ಗೆದ್ದಿರುವುದನ್ನು ನಾನು ಬಲ್ಲೆ. ಆದರೆ ಇಲಾಖೆ ಇದನ್ನಾಗಲೀ, ಹೆಚ್ಚು ಅಂತರದ ಬೆಳೆಯನ್ನಾಗಲೀ ಹೃದಯಪೂರ್ವಕವಾಗಿ ವಿಸ್ತರಣೆಗೆ ತೆಗೆದುಕೊಂದೇ ಇಲ್ಲ. ಏಕೆ ಎನ್ನುವುದನ್ನು ಅವರೇ ಹೇಳಬೇಕು.

ನಿಜವಾಗಿ ಹೊಸಹೊಸ ಬರಸಂಭಾವ್ಯ ಪ್ರದೇಶಗಳಲ್ಲಿ ಪಂಚಾಯತಿನಲ್ಲಿ ಒಂದೆಡೆಯಾದರೂ ಈ ಬನಿಜಾಗಳ ಪ್ರಯೋಗ ಮಾಡಿ ಸುತ್ತಲಿನ ರೈತರಿಗೂ ಬಹುಮಾಧ್ಯಮದ ಮೂಲಕ ಹಬ್ಬಿಸುವ ಕೆಲಸ ಆಗಬೇಕು. ಮರಳು ಮುಚ್ಚಿಗೆಯ ವಿಚಾರದಲ್ಲಿ ಅಗಾಧ ವೆಚ್ಚ, ಮರಳಿನ ಲಭ್ಯತೆಯ ಕೊರತೆ ಎಂಬ ಎರಡು ಅಡ್ಡಿಗಳಿವೆ. ಆದರೆ ಹತ್ತೆಕ್ರೆ ಇರುವ ರೈತನ ಒಂದೆಕ್ರೆಯಲ್ಲಾದರೂ ಈ ಬನಿಜಾ ಬಳಕೆಯಾದರೆ ಆತ ಧಾನ್ಯಕ್ಕಾಗಿ ಅಂಗಡಿಗೆ ಹೋಗಿ ಉದ್ರಿ ಕೇಳಬೇಕಾಗಿಲ್ಲ. ಹೆಚ್ಚು ಅಂತರದ ಬೆಳೆಯಂತೂ ಅದರ ಸರಳ ಅನುಷ್ಠಾನ ಮತ್ತು ಹೆಚ್ಚುವರಿ ಖರ್ಚಿಗೆ ಬದಲು ಬೀಜದ ಬಳಕೆಯಲ್ಲಿ ಉಳಿತಾಯ ಇರುವ ಕಾರಣ ಹಬ್ಬಿಸುವುದು - ಸ್ಕೇಲಿಂಗ್ ಅಪ್ - ಸುಲಭ.

ಪಾರಂಜವ್ಯಕ್ಕೂ ಸಮಾನ ಗಮನ
ಕೃಷಿ ಹೊಂಡಗಳಿಗೆ ಸರಕಾರ ಒಂದಷ್ಟು ಮನಸ್ಸು ಮಾಡಿ ಸಹಾಯ ಕೊಡುತ್ತಿರುವುದು ಪ್ರಶಂಸಾರ್ಹ. ಇಂದು ಬೇರೆ ಬೇರೆ ಯೋಜನೆಯಡಿ ಇಳಿಮೇಡು ಅಭಿವೃದ್ಧಿ ಕೆಲಸ ಅಲ್ಲಲ್ಲಿ ನಡೆಯುತ್ತಿರುತ್ತದೆ. ಈ ಕೆಲಸದ ನೀಲಿ ನಕಾಶೆ ಮಾಡುವಾಗ ಆಯಾಯಾ ಜಿಲ್ಲೆಗೆ ಸೂಕ್ತವಾದ ನೆಲಜಲ ಸಂರಕ್ಷಣೆಯ ಅಥವಾ ಬನಿಜಾಗಳನ್ನು ಸೇರಿಸಿಕೊಳ್ಳುವ ವಿವೇಚನಾ ಅಧಿಕಾರ ಅಲ್ಲಲ್ಲಿನ ಜಿಲ್ಲೆಯ ಮುಖ್ಯ ಅಧಿಕಾರಿಗೆ ಕೊಡಬೇಕು. ಈಗ ‘ಮೇಲಿನಿಂದ’ ಹೇರುವ ವಿಧಾನಗಳನ್ನೇ ಅನುಸರಿಸಬೇಕಾದ ಫಲಿತಾಂಶ ನಿರ್ದೇಶಿತವಲ್ಲದ ಕ್ರಮ ಇದೆ. ಮಾತ್ರವಲ್ಲ ಇಲಾಖೆ ನಡೆಸುವ ಇಳಿಮೇಡು ಅಭಿವೃದ್ಧಿಯ ಕೆಲಸದಲ್ಲಿ ಪಾರಂಜವ್ಯಗಳಿಗೆ ಸ್ಥಾನವೇ ಇಲ್ಲ!

ಕೊಳವೆಬಾವಿ ತೋಡುವ ಮುನ್ನ ಬೇರೆ ಪರ್ಯಾಯಗಳಿವೆಯೇ ಎಂದು ಹತ್ತು ಸಾರಿ ಚಿಂತಿಸಬೇಕು. ತೀರಾ ಅನಿವಾರ್ಯವಾದಲ್ಲಿ ಕೊಳವೆಬಾವಿ ತೋಡುವಾಗಲೇ ಅದರ ಮರುಪೂರಣದ ವೆಚ್ಚವೂ ಯೋಜನೆಯಲ್ಲಿ ಸೇರಿ ಎರಡೂ ಜತೆಯಾಗಿ ನಡೆಯುವಂತಾಗಬೇಕು. ಮಳೆಗಾಲದಲ್ಲಿ ಅನಾಯಾಸವಾಗಿ ತಲೆಯ ಮೇಲೇ ಶುದ್ಧ ನೀರು ಸುರಿಯುವಾಗಲೂ ಕೊಳವೆ ಬಾವಿಯಿಂದ ನೀರೆತ್ತಿ ಪೂರೈಸುವ ಚಾಳಿಗೆ ಕಡಿವಾಣ ಅಗತ್ಯ. ಕುಟುಂಬಗಳು, ಸಂಸ್ಥೆ, ಉದ್ದಿಮೆಗಳನ್ನು ಸೂರಿನಿಂದ ನೀರು ಹಿಡಿದಿಟ್ಟು ಬಳಸಲು ಪ್ರೇರೇಪಿಸಬೇಕು. ಮನೆಯ ಸೂರಿನಿಂದ ಮಳೆನೀರು ಹಿಡಿಯುವ, ತಂತಮ್ಮ ನೀರಿನ ಅಗತ್ಯ ಪೂರೈಸಲು ಆಕಾಶಕ್ಕೆ ಬೊಗಸೆಯೊಡ್ಡುವ ವ್ಯಕ್ತಿ/ಸಂಸ್ಥೆಗಳಿಗೆ ಆರ್ಥಿಕ ಸಹಾಯ ಕೊಡುವುದು ಒಳ್ಳ್ಳೆಯದು. ಅದನ್ನು ತೆರಿಗೆಯಲ್ಲಿ ಕಡಿತದ ರೂಪದಲ್ಲಿ ಕೊಟ್ಟರೆ ಚೆನ್ನ.

ಕುಟುಂಬಕ್ಕೊಂದು ನೀರಿನ ಮೀಟರ್
ಹೈದರಾಬಾದ್, ಬೆಂಗಳೂರುಗಳಲ್ಲಿನ ಕೆಲವು ಬಹುಮಹಡಿ ಕಟ್ಟಡಗಳ ನೀರುಳಿತಾಯದ ‘ವಿಚಿತ್ರ’ ಯಶೋಗಾಥೆ ಕೇಳಿದ್ದೀರಾ? ಇಡೀ ಕಟ್ಟಡದಲ್ಲಿ ಬಳಕೆಯಾಗುವ ನೀರನ್ನು ಎಲ್ಲಾ ಕುಟುಂಬಗಳಿಗೆ ಹಂಚಿ ಹಾಕುವುದು ಈಗಿನ ರೂಢಿ. ಬದಲಿಗೆ, ಪ್ರತಿ ಕುಟುಂಬಕ್ಕೊಂದು ನೀರಿನ ಮೀಟರ್ ಜೋಡಿಸಿ, ಅವರವರು ಬಳಸಿದ ನೀರಿನ ವೆಚ್ಚ ಅವರವರು ಪಾವತಿಸುವಂತೆ ಮಾಡಿಬಿಟ್ಟರೆ ಸೈ. ನೀರಿನ ಬಳಕೆಯೇ ಜರ್ರನೆ ಇಳಿಯುತ್ತದೆ! ಇದನ್ನೇಕೆ ಒಂದು ಪಾಲಿಸಿ ನಿರ್ಧಾರವಾಗಿ ಮಾಡಬಾರದು?

ಅಮಿತ ನೀರು ಬಳಸುವ ಸಂಸ್ಥೆ/ ಉದ್ದಿಮೆಗಳು ಅವರ ಹೆಚ್ಚಿನ ಬಳಕೆಗೂ ಮಳೆನೀರು ಹಿಡಿಯಬೇಕು, ಇಂಗಿಸಿ ಬಳಸಬೇಕು ಎಂಬ ನಿಯಮ ತರುವುದರಿಂದ ಗುಣವಿದೆ. ಅದೇ ರೀತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಅಮಿತ ನೀರು ಬಳಸುವವರು ಚಾವಣಿ ನೀರು ಹಿಡಿದಿಟ್ಟು ತಂತಮ್ಮ ಕೊಳವೆಬಾವಿಗಳಿಗೆ ಮಳೆಗಾಲವಿಡೀ ರಜೆ ಕೋಡಬೇಕು ಎಂಬ ನಿಯಮ ತರುವುದರಲ್ಲಿ ಅರ್ಥವಿದೆ. ಇಲ್ಲಿನ ಪಂಚಾಯತ್/ ನಗರಪಾಲಿಕೆಗಳೂ ಮಳೆಗಾಲದಲ್ಲಿ ನೂರಾರು ಅಡಿ ಆಳದ ನೀರೆತ್ತುವುದರ ಬದಲು ಮಳೆನೀರ ಬಳಕೆಯ ಒಂದಷ್ಟು ವ್ಯವಸ್ಥೆ ರೂಪಿಸುವುದು ಭವಿಷ್ಯಕ್ಕೊಂದು ಒಳ್ಳೆ ಅಡಿಪಾಯ ಆಗಬಹುದು. ಹೆಚ್ಚು ಮಳೆ ಬೀಳುವ, ದೊಡ್ಡ ಪ್ರಮಾಣದ ಮಳೆನೀರು ಓಡುವ ಎಡೆಗಳಲ್ಲಿ ಇಂಗುಬಾವಿಗಳ ರಚನೆ ಸಮಾಜಹಿತದ ಉಪಯುಕ್ತ ಕ್ರಮ.

ಮಳೆಚರಂಡಿಯಲ್ಲೇ ಇಂಗುಗುಂಡಿ
ಮಂಗಳೂರು, ಶಿರಸಿ, ಶಿವಮೊಗ್ಗದಂತಹ ನಗರಗಳನ್ನು ಕಲ್ಪಿಸಿಕೊಳ್ಳಿ. ಇಲ್ಲಿ ಹಲವೆಡೆ ಸುರಿದ ಮಳೆನೀರನ್ನು ಹೊರಹಾಕಲು ಸಿಮೆಂಟ್ / ಕಾಂಕ್ರೀಟುಗಳ ಮಳೆನೀರ ಚರಂಡಿ ರಚಿಸುತ್ತಾರೆ. ಈ ಚರಂಡಿ ಮಾಡುವಾಗ ಅಥವಾ ಹಳೆಯದರಲ್ಲೂ ಹತ್ತು ಮೀಟರಿಗೊಂದು ಇಂಗುಗುಂಡಿ ರಚಿಸಿ ಸ್ವಲ್ಪಶೋಧಕ ಸಾಮಗ್ರಿ ತುಂಬಿಕೊಟ್ಟರೆ ಸಾಕು. ಹೆಚ್ಚುವರಿ ನೀರು ಹೊರಹರಿಯುತ್ತಿರುವ ಹಾಗೆಯೇ ಇಂಗುವ ಕ್ರಿಯೆಯೂ ನಡೆದು ನಮ್ಮ ಜಲಪಾತಳಿ ಮೇಲೇರಬಲ್ಲುದು.
ಪಂಚಾಯತುಗಳಲ್ಲಿ ಮಣ್ಣಿನ ರಸ್ತೆಯ ರಿಪೇರಿ ವರ್ಷಂಪ್ರತಿ ನಡೆಯುತ್ತದೆ. ಮಳೆನೀರ ಚರಂಡಿಯ ವಿಚಾರದಂತೆ ಇದರಲ್ಲೂ ಒಂದೇ ಕೆಲಸದಲ್ಲಿ ಎರಡು ಸಾಧನೆ ಮಾಡಲು ಸಾಧ್ಯ. ಈ ಬಗ್ಗೆಯೇ ಪಂಚಾಯತ್ ಸದಸ್ಯರು, ಊರಿನ ಸಾಮಾಜಿಕ ಕಾರ್ಯಕರ್ತರಿಗೆ ಮತ್ತು ರಿಪೇರಿ ಗುತ್ತಿಗೆದಾರರಿಗೆ ಸೂಕ್ತ ತರಬೇತಿ ಕೊಡಬೇಕು. ರಿಪೇರಿಗಾಗಿ ಆಯ್ದ ಜಾಗದಿಂದ ಮಣ್ಣು ತೆಗೆಯುವುದರ ಮೂಲಕ ಒಳ್ಳೆಯ ರೀತಿಯಲ್ಲಿ ನೀರನ್ನು ಭೂಮಿಗೆ ಇಳಿಸಿಕೊಳ್ಳಬಹುದು.

ಶಿರಸಿಯ ಜಲ ಕಾರ್ಯಕರ್ತ ಶಿವಾನಂದ ಕಳವೆ ಅಲ್ಲಿ ತನ್ನ ಯತ್ನದಿಂದ ಒಂದಷ್ಟು ಈ ಥರದ ಕೆಲಸ ಆಗುವಂತೆ ಮಾಡಿ ತೋರಿಸಿದ್ದಾರೆ. ಕೆರೆಗಳನ್ನು ಮುಚ್ಚು ಬಸ್ ನಿಲ್ದಾಣ, ಬ್ಯೂಟಿ ಪಾರ್ಲರ್ ಕಟ್ಟುವ ಅತಿ ದುರದೃಷ್ಟಕರ, ಸಮೀಪ ದೃಷ್ಟಿಯ ಪ್ರಮಾದಕ್ಕೆ ಕರ್ನಾಟಕ ಕುಖ್ಯಾತ. ಬೆಂಗಳೂರು ಮಾತ್ರವಲ್ಲ, ರಾಜ್ಯದಲ್ಲಿಡೀ ಮುಚ್ಚಿರುವ ಕೆರೆಗಳ ಬಗ್ಗೆ, ಅದರಿಂದಾದ ಸರಿಪಡಿಸಲಾಗದ ಹಾನಿಯ ಬಗ್ಗೆ ಯಾರಾದರೂ ಅಧ್ಯಯನ ಮಾಡಬೇಕು. ತೆರೆದ ಬಾವಿ, ಕೆರೆಗಳು ಕೂಡಾ ದೊಡ್ಡ ಸಮಾಜಹಿತದ ಕೆಲಸ ಸದ್ದಿಲ್ಲದೆ ಮಾಡುತ್ತಿರುತ್ತವೆ. ಅದನ್ನು ಮುಚ್ಚುವುದರ ಬಗ್ಗೆ ಒಳ್ಳೆ ರೀತಿಯಲ್ಲಿ ಚಿಂತಿಸಿ ನಿಯಂತ್ರಣ ತರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT