ನೋಟು ರದ್ದತಿ: ಮೋದಿಯವರ ನಿರ್ಧಾರದ ಬಗ್ಗೆ ವಿದೇಶಿ ಮಾಧ್ಯಮಗಳು ಹೇಳಿದ್ದೇನು?

7

ನೋಟು ರದ್ದತಿ: ಮೋದಿಯವರ ನಿರ್ಧಾರದ ಬಗ್ಗೆ ವಿದೇಶಿ ಮಾಧ್ಯಮಗಳು ಹೇಳಿದ್ದೇನು?

Published:
Updated:
ನೋಟು ರದ್ದತಿ: ಮೋದಿಯವರ ನಿರ್ಧಾರದ ಬಗ್ಗೆ ವಿದೇಶಿ ಮಾಧ್ಯಮಗಳು ಹೇಳಿದ್ದೇನು?

ನವದೆಹಲಿ: ನವೆಂಬರ್ 8ರಂದು ರಾತ್ರಿ ದೇಶದಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದಾಗಿ ಘೋಷಿಸಿ, ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣದ ಮೇಲೆ ಸಮರ ಸಾರಿದ್ದರು. ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ಹೊಸ ₹500 ಮತ್ತು ₹2000 ನೋಟುಗಳನ್ನು ಚಲಾವಣೆಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು.

ಚಲಾವಣೆ ರದ್ದಾಗಿರುವ ನೋಟುಗಳ ಬದಲಾವಣೆಗೆ ಡಿಸೆಂಬರ್ 30ರ ವರೆಗೆ ಕಾಲಾವಕಾಶ ನೀಡಿದ್ದು, ಜನರು ಬ್ಯಾಂಕ್‍, ಅಂಚೆ ಕಚೇರಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಎಟಿಎಂಗಳು ಕೂಡಾ ಕಾರ್ಯನಿರ್ವಹಿಸದೇ ಇದ್ದು, ಸಾಮಾನ್ಯ ಜನರು ಹಣಕ್ಕಾಗಿ ಪರದಾಡುವಂತಾಗಿದೆ.

ಮೋದಿಯವರ ಈ ನಿರ್ಧಾರದ ಬಗ್ಗೆ ದೇಶದಲ್ಲಿ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ವಿದೇಶಿ ಮಾಧ್ಯಮಗಳು ಕೂಡಾ ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿವೆ.

ನೋಟು ರದ್ದತಿ ಬಗ್ಗೆ ವಿದೇಶಿ ಮಾಧ್ಯಮಗಳು ಹೇಳಿದ್ದೇನು?

ದ ಗಾರ್ಡಿಯನ್ ಪತ್ರಿಕೆ

ನೋಟು ರದ್ದತಿಯಿಂದಾಗಿ ಧನಿಕರಿಗೆ ಸಮಸ್ಯೆಯುಂಟಾಗುವುದಿಲ್ಲ, ಅವರು ತಮ್ಮಲ್ಲಿರುವ ದುಡ್ಡನ್ನು ಷೇರುಪೇಟೆಯಲ್ಲಿ, ರಿಯಲ್ ಎಸ್ಟೇಟ್ ಮತ್ತು ಚಿನ್ನದಲ್ಲಿ ಹೂಡಿಕೆ ಮಾಡಿಟ್ಟಿರುತ್ತಾರೆ. ಆದರೆ ದೇಶದಲ್ಲಿರುವ 1.3 ಮಿಲಿಯನ್ ಜನರು ಇದರಿಂದ ತೊಂದರೆ ಅನುಭವಿಸುತ್ತಾರೆ.

ಇವರಿಗೆ ಬ್ಯಾಂಕ್ ಖಾತೆಗಳು ಇರುವುದಿಲ್ಲ. ಇವರ ಕೈಗೆ ಬರುವ ದುಡ್ಡು ನಗದು ರೂಪದಲ್ಲೇ ಇರುತ್ತದೆ. ನೋಟು ರದ್ದತಿಯ ಪರಿಣಾಮ ಒಂದು ವಾರದಲ್ಲಿ 12 ಕ್ಕಿಂತ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಇನ್ನೂ ವಾರಗಳು ಬೇಕು ಎಂದು ಸರ್ಕಾರ ಹೇಳುತ್ತಿದೆ ಎಂದು ದ ಗಾರ್ಡಿಯನ್ ಪತ್ರಿಕೆ ತಮ್ಮ ಸಂಪಾದಕೀಯದಲ್ಲಿ ಬರೆದಿದೆ.

ಮೋದಿಯವರ ಈ ಯೋಜನೆಯು ಹಣದುಬ್ಬರದ ಏರಿಕೆ, ಕರೆನ್ಸಿ ಕುಸಿತ ಮತ್ತು ದಂಗೆಗೆ ಕಾರಣವಾಗಲಿದೆ. ಮೋದಿಯವರು ಕಪ್ಪು ಹಣವನ್ನು ಹೋಗಲಾಡಿಸಲು ಅಭಿಯಾನ ನಡೆಸುವ ಬದಲು, ಸರ್ಕಾರ ತಮ್ಮ ಹಳೇ ತೆರಿಗೆ ವಿಧಾನವನ್ನು ನವೀಕರಣಗೊಳಿಸುವುದು ಒಳಿತು ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.

ದ ನ್ಯೂಯಾರ್ಕ್ ಟೈಮ್ಸ್

ಭಾರತದಲ್ಲಿ ದುಡ್ಡೇ ಮಹಾರಾಜ. ಇಲ್ಲಿ ಶೇ.78ರಷ್ಟು ವ್ಯವಹಾರಗಳು ದುಡ್ಡಿನಿಂದಲೇ ನಡೆಯುತ್ತವೆ, ಇಲ್ಲಿನ ಜನರಲ್ಲಿ ಹೆಚ್ಚಿನವರಿಗೆ  ಬ್ಯಾಂಕ್ ಖಾತೆಯಾಗಿಲೀ ಕ್ರೆಡಿಟ್  ಕಾರ್ಡ್ ಆಗಲೀ ಇಲ್ಲ. ಹಣ ಪಾವತಿ ಮಾಡಲು ಇಂಥಾ ವ್ಯವಸ್ಥೆಗಳನ್ನು ಬಳಸದೇ ಇರುವ ವ್ಯವಹಾರಗಳಲ್ಲಿ ಜನರು ನಗದು ಮೂಲಕವೇ ಹಣ ಪಾವತಿ ಮಾಡುತ್ತಾರೆ.

ಬದಲಾವಣೆ ಬಯಸಿಯೇ ಇಂಥದೊಂದು ಯೋಜನೆಗೆ ಕೈ ಹಾಕಲಾಗಿದೆ. ಆದರೆ ಈ ಯೋಜನೆಯಿಂದಾಗಿ ಸಾವಿರಾರು ಜನರು ಬ್ಯಾಂಕ್‍ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಹಣ ಜಮೆ ಮಾಡಬೇಕಾಗಿ ಬಂದಿದೆ. ನೋಟು ಬದಲಿಸಬೇಕಾಗಿ ಬಂದಿದೆ. ಈ ಬದಲಾವಣೆಯಿಂದಾಗಿ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಹಳೇ ಬಿಲ್‍ಗಳನ್ನು ಪಾವತಿ ಮಾಡಲು ಜನರು ಬಲವಂತವಾಗಿ ಬ್ಯಾಂಕ್‍ಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾಗಿ ಬಂದಿದೆ.

ಬ್ಲೂಮ್‍ಬರ್ಗ್

ಪ್ರಧಾನಿ ನರೇಂದ್ರ ಮೋದಿಯವರು ಯೋಜನೆಯನ್ನು ಘೋಷಿಸಿದಾಗ ಇದೊಂದು ದಿಟ್ಟ ನಡೆ ಎಂದು ಕಂಡು ಬಂದರೂ ಈಗ ಆ ಯೋಜನೆ ತಪ್ಪು ನಿರ್ಧಾರದಂತೆ ಕಾಣುತ್ತಿದೆ. ಈ ಒಂದು ವಾರದಲ್ಲಿ ಬದಲಾಗಿದ್ದು ಏನು? ಈ ಬಗ್ಗೆ ಹೇಳುವುದಾದರೆ ಇದೊಂದು ಮುಂದಾಲೋಚನೆ ಇಲ್ಲದ ಯೋಜನೆ . ಸರ್ಕಾರದ ಈ ಯೋಜನೆಯಿಂದಾಗಿ ಭಾರತದಲ್ಲಿರುವ ಶೇ. 86 ಕರೆನ್ಸಿ ಮೌಲ್ಯ ರಹಿತವಾಗಿದೆ.

ರದ್ದು ಮಾಡಿದ ನೋಟುಗಳ ಬದಲಿಗೆ ಹೊಸ ನೋಟುಗಳನ್ನು ಮುದ್ರಣ ಮಾಡಲು ಕೇಂದ್ರ ಬ್ಯಾಂಕ್ ಹರಸಾಹಸ ಪಡುತ್ತಿದೆ. ಹೊಸ ನೋಟುಗಳ ಗಾತ್ರವು ಈಗಿರುವ ಎಟಿಎಂನಲ್ಲಿ ಒಗ್ಗುತ್ತಿಲ್ಲ,  50 ದಿನಗಳ ಕಾಲ ಜನರು ತಾಳ್ಮೆಯಿಂದಿರುವಂತೆ ಮೋದಿ ಮನವಿ ಮಾಡಿದ್ದಾರೆ. ಆದರೆ ಈ ಪ್ರಕ್ರಿಯೆ ಪೂರ್ತಿಯಾಗಬೇಕಾದರೆ  ನಾಲ್ಕು ತಿಂಗಳುಗಳೇ ಬೇಕು.

ಗ್ರಾಮೀಣ ಜನರಲ್ಲಿ ಕೆಲವರಿಗೆ ಮಾತ್ರ ಎಟಿಎಂ ಬಳಕೆ ತಿಳಿದಿದೆ. ಹೆಚ್ಚಿನವರು ಹಣ ಬದಲಾವಣೆಗಾಗಿ ಬ್ಯಾಂಕ್‍ಗಳಿಗೇ ಹೋಗಬೇಕು. ಅಂದರೆ ದಿನಕೂಲಿ ನೌಕರರಿಗೆ ಅಮೂಲ್ಯವಾದ ದಿನವೊಂದು ನಷ್ಟವಾಗುತ್ತದೆ. ಹೆಚ್ಚಿನ ಭಾರತೀಯರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಹೆಚ್ಚಿನವರಿಗೆ ಸಕ್ರಿಯವಾದ ಬ್ಯಾಂಕ್ ಖಾತೆಯೇ ಇಲ್ಲ. 

ಬಡಜನರ ಕೈಯಲ್ಲಿಯೂ 1000 ನೋಟು ಇದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳುತ್ತಿದ್ದರೆ, ನಿಜ ಸಂಗತಿ ಬೇರೆಯೇ ಇದೆ. ಭಾರತದ ಆರ್ಥಿಕ ವ್ಯವಸ್ಥೆ ಮುಚ್ಚಿಹೋಗುವ ಮುನ್ನ ಯಾರಾದರೂ ಈ ಸಮಸ್ಯೆಗೆ ಉತ್ತರ ಕಂಡುಹಿಡಿಯಲೇ ಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry