7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in
ಚಿತ್ರ: ಮಮ್ಮಿ

ಮುದ್ದು ಬಾಲಕಿಯೂ ಸದ್ದು ಮಾಡುವ ಭೂತವೂ

Published:
Updated:
ಮುದ್ದು ಬಾಲಕಿಯೂ ಸದ್ದು ಮಾಡುವ ಭೂತವೂ

ಚಿತ್ರ: ಮಮ್ಮಿ

ನಿರ್ಮಾಣ: ಕೆ. ರವಿಕುಮಾರ್

ನಿರ್ದೇಶನ: ಎಚ್‌. ಲೋಹಿತ್

ತಾರಾಗಣ: ಪ್ರಿಯಾಂಕಾ ಉಪೇಂದ್ರ, ಯುವಿನಾ ಪಾರ್ಥವಿ, ಐಶ್ವರ್ಯಾ ಸಿಂಧೋಗಿ

ಮೌಢ್ಯವನ್ನು ಮೀರಿದ ಮಾಂತ್ರಿಕ ವಾಸ್ತವ ಸಿನಿಮಾಗಳಿಗೆ ವಸ್ತುವಾಗಿ ಲಾಗಾಯ್ತಿನಿಂದ ಒದಗಿಬಂದಿದೆ. ‘ಫ್ಯಾಂಟಸಿ’ ಹಾಗೂ ‘ಹಾರರ್’ ಪಂಥಕ್ಕೆ ಸೇರಿದ ಸಿನಿಮಾಗಳೂ ಹಲವು ಪ್ರಯೋಗಗಳಿಗೆ ಪಕ್ಕಾಗಿರುವುದೂ ಉಂಟು. ‘ಮಮ್ಮಿ’ ಸಿನಿಮಾವನ್ನು  ಪ್ರಯೋಗಮುಖಿ ಎನ್ನಲಾಗದೇ ಇದ್ದರೂ ತಂತ್ರ, ತಾಂತ್ರಿಕ ಕುಶಲತೆಯ ಕಾರಣಕ್ಕೆ ಮೆಚ್ಚುಗೆಗೆ ಅರ್ಹ ಎನ್ನಬೇಕು.ಭಯ ಹುಟ್ಟಿಸುವ ಭೂತಚೇಷ್ಟೆಯ ಸಿನಿಮಾಗಳಿಗೆ ತಾಂತ್ರಿಕ ಕುಶಲತೆ ತುಂಬಾ ಮುಖ್ಯ. ‘ಧ್ವನಿಯೇ ಇಲ್ಲದಂತೆ ಇಂಥ ಸಿನಿಮಾಗಳನ್ನು ನೋಡಿದರೆ ಭಯವೇ ಆಗದು’ ಎನ್ನುವ ಜೋಕ್ ಚಾಲ್ತಿಯಲ್ಲಿದೆ. ‘ಮಮ್ಮಿ’ಗೂ ಆ ಹಾಸ್ಯದ ಸಾಲನ್ನು ಅನ್ವಯಿಸಬಹುದು.ನಿರ್ದೇಶಕ ಎಚ್‌. ಲೋಹಿತ್‌ ಅವರಿಗೆ ಇದು ಮೊದಲ ಚಿತ್ರ. ಅವರು ಆರಿಸಿಕೊಂಡಿರುವ ವಸ್ತು, ಅದನ್ನು ಪ್ರಕಟಪಡಿಸಿರುವ ತಂತ್ರ ಹಾಗೂ ಅದಕ್ಕೆ ಬಳಕೆಯಾಗಿರುವ ತಂತ್ರಜ್ಞಾನವನ್ನು ಬಗೆದು ನೋಡುವುದು ಸೂಕ್ತ. ವಸ್ತುವಿನ ದೃಷ್ಟಿಯಲ್ಲಿ ಇದು ಹೊಸತನವಿಲ್ಲದ ಚಿತ್ರ. ಭೂತವು ಮುದ್ದು ಬಾಲಕಿಗೆ ಸ್ನೇಹಿತೆಯಾಗುವ ಕಥೆಯನ್ನು ‘ಹಾರರ್’ ಆಗಿಸುವ ಹಟ ನಿರ್ದೇಶಕರದ್ದು. ಅದಕ್ಕೇ ಅವರು ನವಿರಾಗಿಸಬಹುದಾಗಿದ್ದ ಭೂತಚೇಷ್ಟೆಯನ್ನು ಭಯಾನಕ ಮಾಡುವ ತಂತ್ರದ ಹಾದಿ ಹಿಡಿದಿದ್ದಾರೆ. ಮೊದಲು ಬಾಲಕಿಯ ಸ್ನೇಹಿತೆಯಂತೆ ಭಾಸವಾಗುವ ಭೂತ, ಆಮೇಲೆ ವಿಕಾರ ಆಕಾರವಾಗಿ ತೆರೆಮೇಲೆ ಕಾಣುವುದು ನಿರ್ದೇಶಕರ ಹಟವನ್ನು ಬಿಂಬಿಸುತ್ತದೆ.ಸಿನಿಮಾಟೊಗ್ರಫರ್ ಎಚ್‌.ಸಿ. ವೇಣು ಹಾಗೂ ಸಂಕಲನಕಾರ ಸಿ. ರವಿಚಂದ್ರನ್ ಅವರ ಹೆಚ್ಚು ಶ್ರಮವನ್ನು ಬೇಡಿರುವ ಚಿತ್ರವಿದು. ಅವರ ತಾಂತ್ರಿಕ ವೃತ್ತಿಪರತೆಗೆ ಶಹಬ್ಬಾಸ್ ಹೇಳಬೇಕು. ಅವರಷ್ಟೇ ಶ್ರದ್ಧೆಯಿಂದ ಸ್ವರ ಸಂಯೋಜಕ ಅಜನೀಶ್ ಲೋಕನಾಥ್ ಕೆಲಸ ಮಾಡಿದ್ದಾರೆ. ಮಂದ ಬೆಳಕನ್ನೇ ಹೆಚ್ಚು ಅವಲಂಬಿಸಿರುವುದು, ಕ್ಯಾಮೆರಾ ನೋಟವನ್ನು ಭಯಾನಕ ರಸ ಸ್ಫುರಿಸುವ ಮೂಲೋದ್ದೇಶಕ್ಕೆ ಒಗ್ಗಿಸಿರುವುದು ವೇಣು ಅವರ ಹೆಚ್ಚುಗಾರಿಕೆ.ಅಭಿನಯದಲ್ಲಿ ಪುಟಾಣಿ ಯುವಿನಾ ಪಾರ್ಥವಿ ಮುಗ್ಧತೆಯ ಕಾರಣಕ್ಕೆ ಇಷ್ಟವಾದರೆ, ಐಶ್ವರ್ಯಾ ಸಿಂಧೋಗಿ ಸಣ್ಣ ‘ರಿಲೀಫ್’ ಎನ್ನಬಹುದು. ಸವಾಲಿನ ಈ ಪಾತ್ರವನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಲು ಪ್ರಿಯಾಂಕಾ ಉಪೇಂದ್ರ ಅವರಿಗೆ ಆಗಿಲ್ಲವಾದರೂ ಪಾತ್ರದ ಆಯ್ಕೆಯಲ್ಲಿ ಅವರ ಔದಾರ್ಯವನ್ನು ಮೆಚ್ಚಬೇಕು.ಅಮ್ಮ ಹಾಗೂ ಮಗಳು ಭೂತಚೇಷ್ಟೆಯಿಂದಾಗಿ ತೊಳಲಾಡುವ ಈ ಕಥನದಲ್ಲಿ ಉಳಿದ ಪಾತ್ರಗಳನ್ನು ದುಡಿಸಿಕೊಂಡಿರುವ ರೀತಿಯಲ್ಲೂ ತರ್ಕವಿಲ್ಲ. ನಾಯಕಿಯ ಅಮ್ಮ ಅದೇ ಮನೆಯಲ್ಲಿದ್ದರೂ ಎಷ್ಟೋ ಭಾವುಕ ಸಂದರ್ಭಗಳಲ್ಲಿ ಕಾಣಿಸಿಕೊಳ್ಳದೇ ಇರುವುದು ಅದಕ್ಕೆ ಉದಾಹರಣೆ.ಚಿತ್ರಲೋಕದಲ್ಲಿ ಹಲವು ಭೂತಕೇಂದ್ರಿತ ಪ್ರಯೋಗಗಳಾಗಿವೆ. ಅದನ್ನು ಹಾಸ್ಯಕ್ಕೆ ಒಗ್ಗಿಸಿ ಆಗಿದೆ. ಮನೋವೈದ್ಯರ ದೃಷ್ಟಿಕೋನದಿಂದ ತೋರಿರುವ ಉದಾಹರಣೆಗಳು ಹಲವು. ‘ಸೈಕೊ’ದಂಥ ಕನ್ನಡದ್ದೇ ಚಿತ್ರವನ್ನು ಹಾರರ್ ಹಾಗೂ ಸಸ್ಪೆನ್ಸ್‌ನ ಉತ್ತಮ ಮಾದರಿಯನ್ನಾಗಿ ನೋಡಬಹುದು. ಅವುಗಳ ತುಲನೆಯಲ್ಲಿ ಕೆಳಕ್ಕಿಳಿದಂತೆ ಕಾಣುವ ‘ಮಮ್ಮಿ’, ನಿರ್ದೇಶಕರ ಚೊಚ್ಚಲ ಪ್ರಯತ್ನವಾಗಿ ಕಣ್ಣರಳುವಂತೆ ಮಾಡುತ್ತದೆ. ಚಿತ್ರ ಮೌಢ್ಯವನ್ನು ಮೀರಬೇಕಲ್ಲವೇ ಎನ್ನುವ ಪ್ರಶ್ನೆಯನ್ನೂ ಉಳಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry