ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ರಂಗಗಳಲ್ಲೂ ಚಿಂತನೆ ನಡೆಯಲಿ

Last Updated 8 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಆಡು–ಕುರಿ ಸಾಕಾಣಿಕೆ ಆದಿಮ ಸಂಸ್ಕೃತಿ
ನಾಗರಿಕತೆಯ ನಾಗರಿಕತೆಯ ಆರಂಭದ ಕಸುಬು. ಇದರಲ್ಲಿ ಈಗ ಹೆಚ್ಚು ಚರ್ಚೆಯಾಗುತ್ತಿರುವ ಸುಸ್ಥಿರ, ಸಾವಯವ ಕೃಷಿ ಸಂಸ್ಕೃತಿ ಅಡಗಿದೆ. ಹೈನುಗಾರಿಕೆಯ ಕ್ಷೇತ್ರದಲ್ಲಿ ಆದಂತೆ ಇಲ್ಲಿಯೂ ಒಂದು ಸಹಕಾರ ಆಂದೋಲನ ಆರಂಭಗೊಂಡರೆ ಆಡು–ಕುರಿ ಸಾಕಾಣಿಕೆಯ ಆರ್ಥಿಕತೆಯ ಸ್ವರೂಪವೇ ಬದಲಾಗಿಬಿಡುತ್ತದೆ. ಇದನ್ನು ಮಾಡುವುದಕ್ಕೆ  ಮೊದಲು ಆಡು-ಕುರಿ ಪಾಲಕರನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇವರೆಲ್ಲಾ ಸಾಮಾಜಿಕವಾಗಿ ತಳ ಸಮುದಾಯದವರು.

ಆಡು-ಕುರಿ ಪಾಲಕರಲ್ಲಿ ಹೆಚ್ಚಿನವರು ಭೂಹೀನರು ಅಥವಾ ಸಣ್ಣ ಹಿಡುವಳಿಯ ಕೃಷಿಕರು. ಪ್ರಕೃತಿಯೊಡನೆ ಹತ್ತಿರದ ಸಂಬಂಧ ಇಟ್ಟುಕೊಂಡಿರುವ ಇವರು ಸಿರಿಧಾನ್ಯಗಳ ಬೆಳೆಗಾರರೂ ಹೌದು. ಈಗಲೂ ಇವರ ಹಟ್ಟಿ, ಪಾಳ್ಯ, ತಾಂಡ್ಯಗಳಲ್ಲಿ ಯಥೇಚ್ಛ ಸಿರಿಧಾನ್ಯದ ಮೂಟೆಗಳಿದ್ದರೂ ಈಗ ಅದಕ್ಕೆ ಬಂದಿರುವ ಬೆಲೆಯನ್ನೋ ಬೇಡಿಕೆಯನ್ನೋ ಅರಿಯದವರು. ನಮ್ಮ ಅನೇಕ ನಾಟಿ ತಳಿಗಳ ಬೀಜಗಳನ್ನು ರಕ್ಷಿಸಿದವರೂ ಇವೆ.

ಈಗಲೂ ಎತ್ತು, ಕೋಣಗಳನ್ನು ಬಳಸಿ ಉಳುವವರು, ಎತ್ತಿನ ಬಂಡಿಗಳನ್ನು ಬಳಸುವವರೂ ಇವರೇ. ಬರದ ಜೊತೆ ಚೌಕಾಸಿಗೆ ಇಳಿದು ಅದನ್ನು ಮೀರಲು ಬೇಕಿರುವ ಸಾಂಪ್ರದಾಯಿಕ ಜ್ಞಾನವೂ ಇವರಲ್ಲಿದೆ. ಇವರೆಂದೂ ನೀರಾವರಿ ಕೇಳಿಲ್ಲ. ರಸಗೊಬ್ಬರದ ಅವಶ್ಯಕತೆ ಇವರಿಗಿಲ್ಲ, ಕೀಟನಾಶಕ ಗೊತ್ತೇ ಇಲ್ಲ. ಸಬ್ಸಿಡಿ ಎಂದರೆ ಏನು ಎನ್ನುತ್ತಾರೆ. ಸಾಲಮನ್ನಾ ಕೇಳುವುದಕ್ಕೆ ಇವರಿಗೆ ಇಲ್ಲಿಯವರಿಗೆ ಯಾರೂ ಸಾಲ ನೀಡಿಲ್ಲ. ಇಲ್ಲಿಯವರೆಗೂ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ.  ಅದಕ್ಕೆ ಇವರನ್ನು ಯಾವ ಹೋರಾಟದವರು ಇವರನ್ನು ಒಳಗೆ ತೆಗೆದುಕೊಂಡಿಲ್ಲ.

ಆದರೆ ಇಂದು ಆಡು-ಕುರಿ ಪಾಲಕ ಆಧುನಿಕ ಅಭಿವೃದ್ಧಿಯ ಒತ್ತಡಗಳಿಗೆ ಸಿಲುಕಿದ್ದಾನೆ. ಅರಣ್ಯ ಉಳ್ಳವರ ಪಾಲಾಗುತ್ತಿದೆ. ಕೆರೆ-ಕಟ್ಟೆಗಳು ಮಂಗಮಾಯವಾಗುತ್ತಿವೆ. ಉಣ್ಣೆ, ಚರ್ಮಕ್ಕೆ ಯಾವುದೇ ಬೆಲೆ ಇಲ್ಲ. ಮಧ್ಯವರ್ತಿಯ ಕೈಯಲ್ಲಿ ನರಳುತ್ತಿದ್ದಾನೆ. ಮಧ್ಯವರ್ತಿಯ ಮೂಲಕ ನಮಗೆ ಆರೋಗ್ಯಕರ ಮಾಂಸ ದೊರೆಯುತ್ತಿಲ್ಲ. ಚರ್ಮದ ವಸ್ತುಗಳನ್ನು ಕೊಳ್ಳುವುದಕ್ಕೆ ಶ್ರೀಮಂತರಿಗೆ ಮಾತ್ರ ಸಾಧ್ಯವಾಗುತ್ತಿದೆ. ಆಧುನಿಕ ರೋಗಗಳ ನಿಯಂತ್ರಣ, ರೋಗಗಳ ಚಿಕಿತ್ಸೆ-ಇವೆರಡೂ ಸಾಕಷ್ಟು ವ್ಯವಸ್ಥಿತವಾಗಿ ನಿರಂತರವಾಗಿ ನಿರ್ದಿಷ್ಟ ಕಾಲದಲ್ಲಿ ಮನೆ ಬಾಗಿಲಿನಲ್ಲಿ ಸಾಕಷ್ಟು ಸಿಗುತ್ತಿಲ್ಲ.

ಇಡೀ ಕರ್ನಾಟಕದಲ್ಲಿ ಒಂದೂವರೆ ಕೋಟಿ ಆಡು-ಕುರಿಗಳಿವೆ. ಕರ್ನಾಟಕ ರಾಜ್ಯದಲ್ಲಿರುವ ಒಟ್ಟು 747 ಹೋಬಳಿಗಳಲ್ಲಿ ಕನಿಷ್ಠ 646 ಹೋಬಳಿಗಳಲ್ಲಿ ತಲಾ 15,000ಕ್ಕೂ ಹೆಚ್ಚು ಆಡು-ಕುರಿಗಳಿವೆ. ಪ್ರತಿವಾರ 146 ಕುರಿಸಂತೆಗಳು 23 ಜಿಲ್ಲೆಗಳಲ್ಲಿ ಕೂಡುತ್ತಿವೆ. ಅಂದಾಜು ಎರಡು ಲಕ್ಷ ಆಡು-ಕುರಿಗಳ ವ್ಯಾಪಾರ ಪ್ರತಿವಾರ ನಡೆಯುತ್ತಿದೆ.

ಹದಿನೈದು ಲಕ್ಷ ಗ್ರಾಮೀಣ ಕುಟುಂಬಗಳು ಇವುಗಳ ಪಾಲಕರಾಗಿದ್ದಾರೆ. ಇದು ವಾರ್ಷಿಕ ₹ 20,000 ಕೋಟಿಗಳ ವ್ಯವಹಾರ. ಈ ಕ್ಷೇತ್ರವನ್ನು ಸರಿಯಾಗಿ ಬೆಳೆಸಿದರೆ ಇದು ಭವಿಷ್ಯದ ಅನೇಕ ಸಮಸ್ಯೆಗಳಿಗೆ ಪರಿಹಾರವಾಗುತ್ತದೆ.

ಹಳ್ಳಿಗಾಡಿನಲ್ಲಿ ಕೃಷಿಯೇತರ ಉದ್ಯೋಗ ಸೃಷ್ಟಿಸುವ ಕೆಲಸದಿಂದ ಕೃಷಿಕರಿಗೆ ಹೆಚ್ಚುವರಿ ವರಮಾನ ತರುವ ಕ್ಷೇತ್ರವನ್ನಾಗಿ ಇದನ್ನು ಬದಲಾಯಿಸಬಹುದು. ಯಾವುದೇ ಕೃಷಿಯ ಉತ್ಪನ್ನ ಸಂಸ್ಕರಣೆಗೊಳ್ಳದೇ, ಮೌಲ್ಯವರ್ಧನೆಗೊಳ್ಳದೇ, ಲಾಭ ತರುವುದಿಲ್ಲ ಎಂದು ಪಾಠ ಹೇಳಿಕೊಟ್ಟವರು ಕುರಿಯನ್. ಹಾಲಿಗೆ ನಿರಂತರ ವೈಜ್ಞಾನಿಕ ಮಾರುಕಟ್ಟೆ ಒದಗಿಸಿದ ಕುರಿಯನ್ ಪ್ರಯೋಗ ಎಲ್ಲಾ ಕೃಷಿ ವಲಯಗಳಿಗೂ ವಿಸ್ತರಣೆಗೊಳ್ಳಬೇಕಾಗಿದೆ.

ಈ ಅಭಿವೃದ್ಧಿ ಮಾದರಿಯನ್ನು ಜಾರಿಗೊಳಿಸಿದ ನಂತರ ಕರ್ನಾಟಕದಲ್ಲಿ ಹಾಲಿನ ಉತ್ಪನ್ನಗಳಿಂದಲೇ ₹ 8000 ಕೋಟಿ ಗಳಷ್ಟು ಹಣ ಗ್ರಾಮೀಣರ ಕೈಯಲ್ಲಿ ಓಡಾಡುತ್ತಿದೆ.

ಗ್ರಾಮೀಣ ಕರ್ನಾಟಕದಲ್ಲಿ ಇಂದು ಯಾವುದಾದರೊಂದು ಕೃಷಿ ಉತ್ಪನ್ನಕ್ಕೆ, ಮಾರುಕಟ್ಟೆಯ ರಕ್ಷಣೆ ಸಿಗುತ್ತಿದ್ದರೆ ಅದು ಹಾಲಿಗೆ ಮಾತ್ರ. ಸರಿಸುಮಾರು ಇನ್ನೂರು ಹಾಲಿನ ಮೌಲ್ಯವರ್ಧಿತ ಪದಾರ್ಥಗಳು ನಗರ ಮತ್ತು ಪಟ್ಟಣಗಳ  ಮಳಿಗೆಗಳಲ್ಲಿ ಮಾರಾಟವಾಗುತ್ತಿವೆ. ನಿರುದ್ಯೋಗಿ ಯುವಕರು ತಮಗೊಂದು ನಂದಿನಿ ಮಳಿಗೆ ಸಿಕ್ಕರೆ ಸಾಕು ಎಂದು ಜಾಗತೀಕರಣಗೊಂಡ ಕರ್ನಾಟಕದ ಕೆ.ಎಂ.ಎಫ್ ಆಫೀಸಿನ ಮುಂದೆ ನಿಂತಿದ್ದಾರೆ. ಯಾರೂ ಸರ್ಕಾರವನ್ನು ಒತ್ತಾಯಿಸದಿದ್ದರೂ, ಸರ್ಕಾರಗಳೇ ಮೇಲೆ            ಬಿದ್ದು, ಹಾಲಿನ ಉತ್ಪಾದಕರ ಸಹಕಾರ ಒಕ್ಕೂಟದ ಜನಸಂಘಟನೆಯನ್ನು ಒಲಿಸಲು ಪ್ರತಿವರ್ಷ ಸುಮಾರು ₹1400 ಕೋಟಿಗಳನ್ನು ಹಲವಾರು ಯೋಜನೆಗಳ ಮುಖಾಂತರ ನೀಡುತ್ತಿವೆ.

ಈಗ ಕುರಿ-ಆಡು ಪಾಲಕರೂ ಇದನ್ನೇ ಉದಾಹರಣೆಯಾಗಿ ತೆಗೆದುಕೊಂಡು ಮುಂದುವರಿಯಬೇಕಿದೆ. ಪ್ರತಿ ಹತ್ತರಿಂದ ಹದಿನೈದು ಸಾವಿರ ಆಡು-ಕುರಿಗಳಿಗೆ ಸಹಕಾರ ಸಂಘಗಳು ರಚನೆಯಾಗಬೇಕಿದೆ. ಇವನ್ನು ಕೆಲವು ಜಿಲ್ಲೆಗಳಲ್ಲಿ ಹೋಬಳಿ ಮಟ್ಟದಲ್ಲಿಯೂ ಇನ್ನು ಕೆಲವು ಜಿಲ್ಲೆಗಳಲ್ಲಿ ಗ್ರಾಮ ಮಟ್ಟದಲ್ಲಿಯೂ ರೂಪಿಸಲು ಸಾಧ್ಯವಿದೆ.

ಕುರಿ ಮತ್ತು ಆಡುಗಳ ಸಾಕಾಣಿಕೆಯಲ್ಲಿ ತೊಡಗಿಕೊಂಡಿರುವ ಸಂಖ್ಯೆಯ ಆಧಾರದ ಮೇಲೇ ಸಂಘ ಎಲ್ಲಿರಬೇಕು ಎಂಬುದನ್ನು ನಿರ್ಧರಿಸಬಹುದು. ಇವು ಕುರಿ-ಆಡುಗಳ ರೋಗ ನಿಯಂತ್ರಣ ಇತ್ಯಾದಿಗಳನ ಮೇಲ್ವಿಚಾರಣೆ ನಡೆಸಬೇಕು. ಹಾಗೆಯೇ ಆಡು-ಕುರಿ ಉತ್ಪನ್ನಗಳಾದ ಉಣ್ಣೆ, ಚರ್ಮ, ಹಾಲು, ಮಾಂಸ, ಗೊಬ್ಬರಗಳ ಮಾರುಕಟ್ಟೆಗೆ ವೈಜ್ಞಾನಿಕ ವ್ಯವಸ್ಥೆ ಕಲ್ಪಿಸುತ್ತವೆ.

ಇನ್ನು ಜಿಲ್ಲಾಮಟ್ಟದಲ್ಲಿ ಆಡು-ಕುರಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆಯ ಕೇಂದ್ರಗಳ ಸಂಕೀರ್ಣ ಸ್ಥಾಪನೆಗೊಳ್ಳಬೇಕು. ಮತ್ತೆ ಇನ್ನು ರಾಜ್ಯಮಟ್ಟದಲ್ಲಿ ಈ ಎಲ್ಲಾ ಸಹಕಾರ ಸಂಘಗಳ ಫೆಡರೇಶನ್ ಇರಬೇಕು. ಅದು ಇಡೀ ಕ್ಷೇತ್ರದ ನೀತಿ ನಿರೂಪಣೆ, ವ್ಯಾಪಾರ, ಒಪ್ಪಂದಗಳನ್ನು ರೂಪಿಸಬೇಕು.

ಕೇಂದ್ರದ, ರಾಜ್ಯದ ಹಲವು ಆಡು-ಕುರಿ ಅಭಿವೃದ್ಧಿಯ ಹಲವು ಸಂಸ್ಥೆಗಳ ನಡುವೆ ಸಂಯೋಜಕನಂತೆ ಕೆಲಸ ಮಾಡಬೇಕು. ಹೀಗೆ ಮೂರು ಹಂತದ ಸಹಕಾರಿ ಫೆಡರೇಶನ್ ಕಾರ್ಯನಿರ್ವಹಿಸಿದರೆ, ಕೆ.ಎಂ.ಎಫ್ ಹಾಲಿನಂತೆ, ಮಾಂಸ, ಚರ್ಮ, ಹಾಲು, ಉಣ್ಣೆ, ಗೊಬ್ಬರಗಳಿಗೆ, ಉತ್ಪನ್ನಗಳಿಗೆ ನಗರ ಮತ್ತು ಪಟ್ಟಣಗಳಲ್ಲಿ ಮಳಿಗೆಗಳು ಆರಂಭವಾಗುತ್ತವೆ. ಈ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಮುಂತಾದವುಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು  ಐಟಿಐ, ಪಾಲಿಟೆಕ್ನಿಕ್‌ಗಳಲ್ಲಿ ಆರಂಭಿಸಬಹುದು.

ಆರೋಗ್ಯಕರ ಮಾಂಸ, ಪರಿಸರಪೂರಕ ಉಣ್ಣೆ ಉತ್ಪನ್ನಗಳು, ಚರ್ಮದ ಉತ್ಪನ್ನಗಳು, ಅಪಾರ ಬೇಡಿಕೆಯ ಆರೋಗ್ಯ ವರ್ಧಿತ ಆಡು-ಕುರಿ ಹಾಲು ನಾಳಿನ ಕರ್ನಾಟಕದಲ್ಲಿ ಸಮೃದ್ಧವಾಗಿ ದೊರೆಯುತ್ತದೆ. ಅದರಿಂದ ಸರಿಸುಮಾರು ₹ 20,000 ಕೋಟಿ ಗಳ ವಾರ್ಷಿಕ ವಹಿವಾಟು ನಡೆಸಬಹುದಾದ ಆರ್ಥಿಕತೆ ರೂಪುಗೊಳ್ಳುತ್ತದೆ.

ಕನಿಷ್ಠ ಮಳೆಯಲ್ಲಿ ಗರಿಷ್ಠ ಆಡು-ಕುರಿ ಬೆಳೆಯ ತಾಂತ್ರಿಕತೆ ಅಡಕಗೊಂಡಿದೆ. ಅರಣ್ಯ, ಕೆರೆ-ಕಟ್ಟೆಗಳ ಸಂರಕ್ಷಕರ ಪಡೆ ಇಡೀ ನಾಡಿನಾದ್ಯಂತ ಪ್ರತಿ ಗ್ರಾಮಗಳಲ್ಲೂ ಸಜ್ಜಾಗಿರುತ್ತದೆ. ಇಲ್ಲಿ ಕೆರೆ-ಕಟ್ಟೆಗಳು, ಅರಣ್ಯಗಳ ಒತ್ತುವರಿದಾರರಿಗೆ ಪ್ರತಿಯಾಗಿ ಈ ಪಡೆ ಅಲ್ಲಿಯೇ ಪಾಠ ಕಲಿಸಲು ಸಿದ್ಧವಾಗುತ್ತದೆ.

ಇಲ್ಲಿ ಆಡು-ಕುರಿ ಸಾಕಾಣಿಕೆ ಮತ್ತು ಕೃಷಿ ಅರಣ್ಯ ಜೊತೆ ಜೊತೆಯಾಗಿ ನಡೆಯುತ್ತವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಬಹು ಜನರಿಗೆ ಅವರ ಹಕ್ಕಾದ ಆರೋಗ್ಯಕರ ಮಾಂಸ ದೊರೆಯುತ್ತದೆ. ಮಾಂಸದ ಸುತ್ತ ಹೆಣೆದುಕೊಂಡಿರುವ ತಳ ಸಮುದಾಯಗಳ ಗ್ರಾಮ ಸಂಸ್ಕೃತಿ ಆತ್ಮವಿಶ್ವಾಸದಿಂದ ಪುಟಿಯುತ್ತದೆ. ಕೇವಲ ಸಮಾನತೆಯ, ವೈಚಾರಿಕತೆಯ ಸಮೃದ್ಧಿ ಕರ್ನಾಟಕ ಎಂಬ ಆಶಯವನ್ನು ಮಾತನಾಡುತ್ತಲೇ ಕಾಲ ಕಳೆಯುತ್ತಿರುವ ನಮಗೆ ಚಲಿಸಲು, ನಡೆಯಲು, ನಡೆಯುತ್ತಾ ತಿದ್ದಿಕೊಳ್ಳಲು ಇರುವ ಅಭಿವೃದ್ಧಿಯ ಮುಖ್ಯ ಕಾರ್ಯಕ್ರಮ ಇದಾಗಿದೆ.
– ಡಾ. ರಘುಪತಿ.ಸಿ.ಎಸ್

***
ಇಂಗಾಲದ ಹೆಜ್ಜೆ ಗುರುತಿರದವಿದ್ಯುತ್

ನಮ್ಮ ಕರುನಾಡ ಜನಸಂಖ್ಯೆ 6.4 ಕೋಟಿ ದಾಟಿ ಮುನ್ನುಗುತ್ತಿದೆ. ಇದು ಇಡಿ ವಿಶ್ವದ ಶೇ 0.9 ಶೇಕಡವಾರು ಆಗಲಿದೆ. ವಿದ್ಯುತ್ ಶಕ್ತಿಯನ್ನೇ ತೆಗೆದುಕೊಂಡರೆ ನಮಗೆ ಇಂದು ಸರಾಸರಿ ಬೇಕಾದ 15ಸಾವಿರ ಮೆಗಾವ್ಯಾಟ್‍ನಲ್ಲಿ ನಾವು ಉತ್ಪಾದಿಸುತ್ತಿರುವುದು ಕೇವಲ ಕೇವಲ ಶೇ 50ರಷ್ಟನ್ನು ಮಾತ್ರ.  ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಂಗಾಲದ ಹೆಜ್ಜೆ ಗುರುತು ಮಾಡದೆ ಉತ್ಪಾದಿಸುತ್ತಿರುವ ವಿದ್ಯುತ್‌ ಶಕ್ತಿ ಎಂದರೆ ಜಲವಿದ್ಯುತ್, ಪವನಶಕ್ತಿ ಮತ್ತು ಸೌರಶಕ್ತಿಯಿಂದ ಮಾತ್ರ. ಸೌರಶಕ್ತಿಯಿಂದಾಗುವ ಉತ್ಪಾದನೆ ಶೇ 0.56 ಮಾತ್ರ. ಈ ಪ್ರಮಾಣವು ಹಸಿದ ಬ್ರಹ್ಮರಾಕ್ಷಸನಿಗೆ ಅರೆಕಾಸಿನ ಮಜ್ಜಿಗೆಗೆ ಸಮಾನ.

ದೇಶದಲ್ಲಿಯೆ ಕಡಿಮೆ ಮಳೆ ಬೀಳುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಅನಾವೃಷ್ಟಿಯಿಂದ ಜಲವಿದ್ಯುತ್ ಘಟಕಗಳ ವಿದ್ಯುತ್ ಉತ್ಪಾದನೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಮಳೆಯು ಮರಚೀಕೆಯಾದಂತೆಲ್ಲಾ, ಕಿರು ಜಲವಿದ್ಯುತ್ ಘಟಕಗಳು (ಶೇ 5.2 ವಿದ್ಯುತ್ ಶಕ್ತಿಯ ಮೂಲ)¸ ಭವಿಷ್ಯದಲ್ಲಿ ನೀರಿನ ಕೊರತೆಯಿಂದ ಮುಚ್ಚುವ ಸ್ಥಿತಿ ತಲುಪಬಹುದು. 

ಸೌರಶಕ್ತಿಯೆಂದೇ ಮಾನವನನ್ನು ಭವಿಷ್ಯದಲ್ಲಿ ಕೈ ಹಿಡಿಯುವ ಮೂಲ. ಕರ್ನಾಟಕದಲ್ಲಿ ಎಷ್ಟೇ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಕೊರತೆ ಇದ್ದೇ ಇದೆ.ಆದರೂ ಕರ್ನಾಟಕವು 2011ರಲ್ಲಿ ಸೌರ ನೀತಿಯನ್ನು ದಕ್ಷಿಣ ಭಾರತದಲ್ಲಿಯೇ ಮೊದಲು ಅಳವಡಿಸಿಕೊಂಡ ರಾಜ್ಯ ಎಂಬ ಹೆಮ್ಮೆ ಇದೆ. 2021 ಇಸವಿಯಷ್ಟರಲ್ಲಿ 2000  ಮೆಗಾವ್ಯಾಟ್ ಸೌರಶಕ್ತಿಯ ಉತ್ಪಾದನೆಯ ಗುರಿಯನ್ನು ಹೊಂದಿದೆ ಅದು ಅಂದಿನ ಶೇ 3ರಷ್ಟು ಬೇಡಿಕೆಯನ್ನಷ್ಟೇ ಪೂರೈಸಬಹುದು.

ಹಳೆ ಮನೆಗಳಿಗೆ ಹಾಗೂ ಹೊಸ ಮನೆಗಳನ್ನು ಕಟ್ಟುವವರಿಗೆ ಸೌರವಿದ್ಯುತ್ ಉತ್ಪಾದಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು ಹಾಗೂ ಮಳೆನೀರು  ಸಂಗ್ರಹವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯ ಗೊಳಿಸಬೇಕು. ಇದರಿಂದ ನೀರು ಹಾಗೂ ವಿದ್ಯುತ್ ಉಳಿತಾಯವಾಗಿ ಇಂಗಾಲ ಹೊರಸೂಸುವ ಪ್ರಮಾಣ ತಗ್ಗುತ್ತದೆ. ಮುಂದಿನ ದಿನಗಳಲ್ಲಿ ಸೌರವಿದ್ಯುತ್ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಾ ದೇಶಕ್ಕೆ ಮತ್ತು ವಿಶ್ವಕ್ಕೆ ಮಾದರಿಯಾಗಬೇಕು.
– ಮೋಹನ್ ಶಾಮಣ್ಣ

***
ಇಂಗ್ಲಿಷ್ ಮರೆಯದ ಕನ್ನಡ ಮಾಧ್ಯಮ ಬೇಕು

ಜಗತ್ತಿನಲ್ಲಿ ಸರಿಸುಮಾರು ಆರು ಸಾವಿರ ಭಾಷೆಗಳಲ್ಲಿ ಕನ್ನಡಕ್ಕೂ ಅಗ್ರಸ್ಥಾನವಿದೆ. ಆದರೆ ನಶಿಸುತ್ತಿರುವ ಭಾಷೆಯಲ್ಲಿ ಕನ್ನಡವೂ ಒಂದು ಎನ್ನುವುದು ವಿಷಾದಕರ ಸಂಗತಿ. 

ಕನ್ನಡ ಉಳಿಯಬೇಕಾದರೆ ಇಂಗ್ಲಿಷನ್ನು ಕನ್ನಡದೊಂದಿಗೆ ಜೀರ್ಣಿಸಿಕೊಂಡು ಹೆಜ್ಜೆ ಹಾಕಬೇಕು. ಅದರ ಬದಲು ಇಂಗ್ಲಿಷ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳದೆ ಪ್ರತ್ಯೇಕತೆಯನ್ನು ಕನ್ನಡ ಕಂಡುಕೊಂಡರೆ ಜಾಗತಿಕ ಭಾಷೆಯ ಎದುರಿಗೆ ಕನ್ನಡ ಸೊರಗುವ ಅಪಾಯವಿದೆ.

ಪ್ರಾಥಮಿಕ ಶಿಕ್ಷಣವನ್ನು ಖಾಸಗೀಕರಣಗೊಳಿಸಿದ್ದೇ ಅಪಾಯಕಾರಿ. ಹೀಗಾಗಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯು ರಾಜಕೀಯ ವ್ಯಕ್ತಿ, ಉದ್ಯಮಿಗಳ ಕೈಗೆ ಸಿಕ್ಕಿ ನಲುಗುತ್ತಿದೆ.ಇದರಿಂದ ಕನ್ನಡ, ಶೂದ್ರ ಇಂಗ್ಲಿಷ್ ಬ್ರಾಹ್ಮಣ ಎಂಬ ಧೋರಣೆ ಕಂಡುಬರುತ್ತಿದೆ. ಹೀಗಾಗಿ ಕನ್ನಡವು ಅಸ್ಮಿತೆಯನ್ನು ಕಂಡುಕೊಳ್ಳಬೇಕಾದರೆ ಅಂಗನವಾಡಿ ಮಕ್ಕಳಿಗೂ ಕನ್ನಡದೊಂದಿಗೆ ಇಂಗ್ಲಿಷ್ ಅಕ್ಷರಗಳ ಪರಿಚಯ ಮಾಡಿಕೊಡಬೇಕು.

‘ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿ ಮಾಡಿ’ ಎಂಬುವ ಧೋರಣೆ ಪಶ್ಚಿಮದಿಂದ ಬಂದದ್ದು. ಆಸ್ತಿ ಎಂಬ ಪರಿಕಲ್ಪನೆಯೇ ವ್ಯಕ್ತಿಯ ವ್ಯಕ್ತಿತ್ವವನ್ನು ಮರೆಮಾಚಿಸುವಂಥದ್ದು. ಬದಲಿಗೆ ಮಕ್ಕಳಿಗೆ ಪ್ರೀತಿ, ಸ್ನೇಹ, ವಿಶ್ವಾಸ, ಅನುಕಂಪ, ಕರುಣೆ ಎಂಬಂತಹ ಮಾನವಜನ್ಯ ಆಸ್ತಿ ಮಾಡಿದರೆ ಮುಂದೆ ಆ ಮಗುವಿನ ವ್ಯಕ್ತಿತ್ವ ಉತ್ಕೃಷ್ಟವಾಗಿ ರೂಪುಗೊಳ್ಳಲು ಸಹಾಯಕವಾಗುತ್ತದೆ. ಬದಲಿಗೆ ಮಕ್ಕಳನ್ನೇ ಆಸ್ತಿಯಾಗಿ ರೂಪಿಸಿದರೆ ಅದೊಂದು ಯಂತ್ರಮಾನವ ಧೋರಣೆಗೆ ಕಾರಣವಾಗುತ್ತದೆ. ಇದು ಇಂಗ್ಲಿಷ್ ಪ್ರಧಾನ ಶಿಕ್ಷಣದ ಒಳತುಡಿತವೂ ಕೂಡ ಆಗಿದೆ. ಈ ಮನಸ್ಥಿತಿ ಬದಲಾಗದ ಹೊರತು ಭಾಷೆ ಮತ್ತು ಬದುಕು ಕಟ್ಟಲು ಸಾಧ್ಯವಾಗದು.

ನಮ್ಮ ನಾಳೆಯ ಕರ್ನಾಟಕಕ್ಕೆ ಬೇಕಿರುವುದು ಕನ್ನಡ ಅಥವಾ ಇಂಗ್ಲಿಷ್ ಮೀಡಿಯಂ ಅಲ್ಲ! ಕರ್ನಾಟಕ ಮಾಧ್ಯಮದ ಪ್ರಾಥಮಿಕ ಶಿಕ್ಷಣ ಕ್ರಮ. ಇದರಲ್ಲಿ ಪ್ರಾದೇಶಿಕ ಭಾಷೆ ಕನ್ನಡ, ಅಂತರರಾಷ್ಟೀಯ ಮಟ್ಟದ ವ್ಯಾವಹಾರಿಕಾ ಭಾಷೆ ಎನಿಸಿಕೊಂಡಿರುವ ಇಂಗ್ಲಿಷ್, ಜೀವನದ ಪೂರ್ತಿ ಜತೆಯಲ್ಲಿರುವ ಗಣಿತ, ನಮಗೆಲ್ಲರಿಗೂ ತಿಳಿವಳಿಕೆಗೆ ಪ್ರೇರಕವಾದ ಸಾಮಾನ್ಯ ಜ್ಞಾನ ವಿಷಯಗಳು ಇರಬೇಕು.

ವಾಸ್ತವದಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳು ಈ ಶಿಕ್ಷಣ ಪದ್ಧತಿಯಲ್ಲಿ ಕಲಿಯುತ್ತಿದ್ದಾರೆ. ಆದರೆ ಇಲ್ಲಿ ಕನ್ನಡ ನೆಪಮಾತ್ರ ಎಂಬಂತೆ ಬೋಧಿಸಲಾಗುತ್ತಿದೆ. ಹೀಗಾಗಬಾರದು.ಇದರ ಜತೆಗೆ ಅಂಗನವಾಡಿ ಹಾಗೂ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯ ಮಕ್ಕಳು ಸರಿಯಾಗಿ ಇಂಗ್ಲಿಷ್‌ನ ಮುಖ ನೋಡುತ್ತಿರುವುದು ಐದನೇ ತರಗತಿಯಿಂದ. ಆದ್ದರಿಂದ ಈ ಎರಡು ವಿರೋಧಾಭಾಸಗಳು ಮರೆಯಾಗಿ ಕರ್ನಾಟಕ ಮೀಡಿಯಂ ಎಂಬ ಹೊಸ ಶಿಕ್ಷಣ ಪದ್ಧತಿ ಕನ್ನಡ ನಾಡಿನಲ್ಲಿ ಬೇರೂರಬೇಕಿದೆ.
– ಸಂಪತ್ ಬೆಟ್ಟಗೆರೆ

***
ಕೈತೋಟ ಕ್ರಾಂತಿಯಾಗಲಿ
ಅಮೆರಿಕದಿಂದ ದಿಗ್ಬಂಧನ ಮಿತ್ರ ದೇಶ ಸೋವಿಯೆತ್ ರಷ್ಯಾದಿಂದಲೂ ಇದ್ದಕ್ಕಿದ್ದಂತೆ ಆಹಾರಧಾನ್ಯಗಳು, ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ನಿಂತಾಗ ಅದನ್ನು ವಿಶಿಷ್ಟ ತಂತ್ರವೊಂದರ ಮೂಲಕ ಕ್ಯೂಬಾ ಎದುರಿಸಿದ್ದು ಈಗ ಇತಿಹಾಸ. ಇಡೀ ದೇಶದಲ್ಲಿ  ಹಳ್ಳಿ, ಪೇಟೆ, ಪಟ್ಟಣ, ನಗರ ಎಂಬ ಬೇಧಭಾವ ಇಲ್ಲದೆ ಎಲ್ಲೆಡೆಯೂ ಹಣ್ಣು ತರಕಾರಿ, ಮತ್ತಿತರ ಆಹಾರಧಾನ್ಯಗಳ  ವ್ಯವಸಾಯ ಪ್ರಾರಂಭಗೊಂಡು ಪ್ರತಿಯೊಬ್ಬರೂ ಬೆಳೆಗಾರರಾಗಿ, ಬಳಕೆದಾರರಾದರು.

ಈಗ ನಮ್ಮ ಸ್ಥಿತಿಯೂ ಹೆಚ್ಚು ಕಡಿಮೆ ಕ್ಯೂಬಾದಂಥದ್ದೇ. ಆದರೆ ಪರಿಣಾಮ ಅಷ್ಟೊಂದು ತೀವ್ರವಾಗಿಲ್ಲ. ಆದ್ದರಿಂದ ನಮಗೆ ಅದೊಂದು ಸಮಸ್ಯೆ ಅನ್ನಿಸುತ್ತಿಲ್ಲ. ಆರ್ಥಿಕ ಚಟುವಟಿಕೆಗಳು ಹಾಗೂ ಉದ್ಯೋಗಾವಕಾಶಗಳ  ಹೆಸರಿನಲ್ಲಿ ಮಾಲ್‌ಗಳು, ಬ್ರಾಂಡ್‌ಗಳು ನಮ್ಮ ಹಿತ್ತಿಲನ್ನು ಆಕ್ರಮಿಸುತ್ತಿವೆ. ನಾವು ಕೈತೋಟವನ್ನೇ ಮರೆತು ಎಲ್ಲವನ್ನೂ ಖರೀದಿಸುತ್ತಿದ್ದೇವೆ.

ಕಾಡುಕಡಿತದಿಂದಾಗಿ ಕಾಡುಪ್ರಾಣಿಗಳು ಕೃಷಿ ಬೆಳೆಗಳ ಮೇಲೆ ಸತತ ಆಕ್ರಮಣ ನಡೆಸಿ ಹಳ್ಳಿಗರ ಶ್ರಮವನ್ನು ಹೊಳೆಯಲ್ಲಿ ಹುಣಸೇಹಣ್ಣಿನಂತೆ ಕರಗಿಸಿದರೆ, ಪೇಟೆಗಳಲ್ಲಿ ಬಹುಮಹಡಿ ಕಟ್ಟಡಗಳು, ಝಗಮಗ ಗಾಜಿನ ಗೋಡೆಗಳು, ಮಣ್ಣಿನ ಲವಲೇಶವೂ ಕಾಣದಂಥ ಸಿಮೆಂಟು, ಇಂಟರ್ ಲಾಕ್ ಲೇಪದ ಅಂಗಳಗಳು ಮನೆಯ ಹಿತ್ತಿಲಿನ ಕಲ್ಪನೆಯನ್ನೇ ಛಿದ್ರಗೊಳಿಸಿಬಿಟ್ಟಿವೆ. ಆಧುನಿಕತೆ ಹೆಸರಿನಲ್ಲಿ ರಸ್ತೆ ಬದಿಯ ವ್ಯಾಪಾರಿಗಳನ್ನೆಲ್ಲ ಹೊಸಕಿ ಹಾಕಿ ಎದ್ದೇಳುತ್ತಿರುವ ತರಕಾರಿ ಮಾಲ್‌ಗಳು ಬಳಕೆದಾರರಿಗೂ, ರೈತರಿಗೂ ಒಂದೇ ಕಲ್ಲಿನಿಂದ ಏಟು ಕೊಡುತ್ತಿವೆ.

ಇದನ್ನು ಎದುರಿಸುವುದಕ್ಕೆ ಕೈತೋಟ ಸಂಸ್ಕೃತಿಗೆ ಮತ್ತೆ ಜೀವ ನೀಡಬೇಕು. ಕೈತೋಟ ಬೆಳೆಸಲು ಯಾವುದೇ ಅಧಿಕಾರಿಯ, ಆಡಳಿತ ವರ್ಗದ ಅಥವಾ ಸರ್ಕಾರದ ಸಬ್ಸಿಡಿಯ ಹಂಗಿಲ್ಲ.  ಹಿಡುವಳಿಯ ಹಂಗೂ ಇಲ್ಲ.  ನಮ್ಮಲ್ಲಿ ಬಿಸಿಲು ಬೇಡುವ, ಅಗಲ ಬೆಳೆಯುವ ಗಿಡಗಳು ಇದ್ದಹಾಗೆಯೇ ಪುಟ್ಟದಾಗಿ ಹರಡಿಕೊಳ್ಳುವ, ಅತಿ ಕಡಿಮೆ ಬಿಸಿಲು, ನೀರಿನಲ್ಲೂ ಬೆಳೆದು ನಿಲ್ಲುವ ಗಿಡಗಳಿವೆ. ಗಿಡ್ಡ ತಳಿಯ ಹಣ್ಣು ತರಕಾರಿ ಗಿಡಗಳೂ ಈಗ ಸಾಕಷ್ಟು ಪ್ರಚಾರದಲ್ಲಿವೆ. ತಂಪನ್ನೇ ಬಯಸುವ ಸೊಪ್ಪು ತರಕಾರಿಗಳಿವೆ.

ಚಿಕ್ಕಪುಟ್ಟ ಆರೋಗ್ಯಸಮಸ್ಯೆಗಳಿಗೆ ಮನೆಮದ್ದಿಗಾಗುವ ಔಷಧಿಗಿಡಗಳು ನೂರಾರಿವೆ. ಕೈತೋಟ ಸಂಸ್ಕೃತಿಯಿಂದಾಗಿ  ಮನೆಯ ತ್ಯಾಜ್ಯ ಗೊಬ್ಬರವಾಗಿ ಪರಿವರ್ತನೆಗೊಂಡು, ಕಸದಿಂದ ರಸ ನಿಜವಾಗಿಯೂ ನಡೆಯುತ್ತದೆ.

 ಕೈತೋಟ ಸಂಸ್ಕೃತಿಗೆ ಮತ್ತೆ ಜೀವ ಕೊಡುವುದಕ್ಕೆ ಏನು ಮಾಡಬೇಕು? ಮನೆಮನೆಯಲ್ಲಿಯೂ ಜನರಿಗೆ ಮಣ್ಣು, ಗಿಡ, ಹಣ್ಣು, ಹೂ, ಪಾತರಗಿತ್ತಿಗಳ ಬಗ್ಗೆ ಪ್ರೀತಿ ಹುಟ್ಟಬೇಕು.

ಅದಾಗಬೇಕೆಂದರೆ ಸಂಘಟಿತ ಪ್ರಯತ್ನ ನಡೆಯಬೇಕು. ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಲ್ಲಿ  ಕೈತೋಟ ಬೆಳೆಸಬಹುದು, ಆ ಮೂಲಕ ಮಕ್ಕಳಿಗೆ ಪರಿಸರ ಪಾಠವನ್ನೂ ಹೇಳಬಹುದು. ಸ್ಥಳಾವಕಾಶವಿರುವವರು ಮಳೆನೀರಿನ ಸಂಗ್ರಹಣೆ ಹಾಗೂ ಕೈತೋಟ ಮಾಡಲೇಬೇಕೆಂಬ ನಿಯಮವನ್ನು ಸ್ಥಳೀಯ ಆಡಳಿತ ಜಾರಿಗೊಳಿಸಬೇಕು. ಕೈತೋಟ ನಿರ್ಮಾಣ, ಅದಕ್ಕೆ ಸಂಬಂಧಿಸಿದ ಮಾಹಿತಿಗಳ ವಿನಿಮಯ ಇವುಗಳ ಬಗ್ಗೆ ಪ್ರತಿ ಊರಿನಲ್ಲಿಯೂ ಸಂವಾದ, ಚರ್ಚೆಗಳು ನಡೆಯಬೇಕು.

ಸಾಹಿತಿಗಳು ಕೈತೋಟ ಪದ್ಯಗಳನ್ನು ಬರೆಯಬೇಕು, ಸಮಾರಂಭಗಳಲ್ಲಿ ಅವು ಹೆಚ್ಚು ಪ್ರಚಾರ ಪಡೆಯಬೇಕು.ಕೇರಳ ರಾಜ್ಯದಲ್ಲಿ ಕೃಷಿಗೆ ಬಹಳಷ್ಟು ಒತ್ತು ನೀಡಲಾಗುತ್ತಿದೆ.

ತಾರಸಿತೋಟ, ಕೈತೋಟಗಳು ಅಲ್ಲಿ ಮನೆಮಾತಾಗುತ್ತಿವೆ.  ಪ್ರತಿ ಹಳ್ಳಿಯಲ್ಲಿ 'ಕುಟುಂಬಶ್ರೀ' ಎಂಬ ಹೆಸರಿನ ಯೋಜನೆಯಲ್ಲಿ ಗಿಡ, ಬೀಜ, ಗೊಬ್ಬರಗಳನ್ನು ಪೂರೈಸಲಾಗುತ್ತಿದೆ. ಈ ದಿಶೆಯಲ್ಲಿ ನಮಗೆ ಕೇರಳ ರಾಜ್ಯವು ಮಾದರಿಯಾಗಬೇಕು.

ಸ್ವಚ್ಛತಾ ಅಭಿಯಾನದ ಹೆಸರಿನಲ್ಲಿ ಇಂದು ಮನೆಮನೆಯಿಂದ ಕೊಳೆತು ಉತ್ತಮ ಗೊಬ್ಬರವಾಗಬಹುದಾದ ವಸ್ತುಗಳೂ ಕೂಡ ಹೊರಕ್ಕೆ ಹರಿದು ಹೋಗುತ್ತಿದೆ, ಅದು ನಿಲ್ಲಬೇಕು. ಮನೆಮನೆಯಲ್ಲೂ ಅಂಗಳದ, ಅಡಿಗೆಮನೆಯ ತ್ಯಾಜ್ಯವನ್ನು ಬಳಸಿ ಸುಲಭದಲ್ಲಿ ಗೊಬ್ಬರ ತಯಾರಿಸುವ ವಿಧಾನಗಳು ಹೆಚ್ಚೆಚ್ಚು ಜನಪ್ರಿಯಗೊಳ್ಳಬೇಕು, ಈ ನಿಟ್ಟಿನಲ್ಲಿ ತ್ಯಾಜ್ಯವು ವಿಘಟನೆಗೊಂಡು ಗೊಬ್ಬರವಾಗಲು ಬೇಕಾಗುವ ಜೀವಾಣುಗಳ ಉತ್ಪಾದನೆಯ ಕುರಿತು  ಹಾಗೂ ಸುಲಭದ ಕೀಟನಾಶಕಗಳನ್ನು ತಯಾರಿಸುವ ಹೆಚ್ಚೆಚ್ಚು ಸಂಶೋಧನೆಗಳಾಗಬೇಕು. 

ಸಸಿ, ಬಳ್ಳಿಗಳ ಬಗ್ಗೆ  ಇಂದಿನ ಪೀಳಿಗೆಯವರಿಗೆ ಪರಿಚಯವೇ ಇಲ್ಲ, ಈ ಕುರಿತು ಶಾಲೆಗಳಲ್ಲಿ ಪಠ್ಯ ಮತ್ತು ಪ್ರಾತ್ಯಕ್ಷಿಕೆಗಳಿರಬೇಕು. ಪ್ರತಿ ಶಾಲೆಗೂ ಆಟದ ಮೈದಾನವಿರಬೇಕೆಂಬ ನಿಯಮವಿದೆಯಷ್ಟೆ?  ಪಾಠ, ಆಟದ ಜೊತೆ ಕೈತೋಟವನ್ನೂ ಮಕ್ಕಳ ಪಠ್ಯಕ್ರಮವಾಗಿಸಿ, ಮೈದಾನದ ಅಂಚುಗಳಲ್ಲಿ ಹಣ್ಣಿನ ಮರಗಳನ್ನು ಹಾಗೂ ಇತರಡೆ ಹೂ, ತರಕಾರಿಗಳ ಮಿಶ್ರ ಸಾಲಿಗೆ ಯೋಜಿಸಬೇಕು.  ಮಕ್ಕಳು ಕೈತೊಳೆಯುವ ನೀರೇ ಗಿಡಗಳಿಗೆ ಸಾಕು. ಶಿಕ್ಷಕರು ಈ ಕೆಲಸಗಳಿಗೆ ಮೇಲ್ವಿಚಾರಣೆ ವಹಿಸಬೇಕು.ಶಾಲೆಗಳ ನಡುವೆ ಆಟೋಟ ಸ್ಪರ್ಧೆಗಳಿರುವಂತೆ ಕೈತೋಟ ಸ್ಪರ್ಧೆಯೂ ಇರಬೇಕು. ಚೆಂದದ ಕೈತೋಟಕ್ಕೆ ಪ್ರಶಸ್ತಿ, ಸನ್ಮಾನಗಳನ್ನು ನೀಡುವಂತಾಗಬೇಕು.
– ಸರೋಜಾ ಪ್ರಕಾಶ

***

ಕರ್ನಾಟಕದ ಭವಿಷ್ಯವನ್ನು ಹೇಗೆ ರೂಪಿಸಬೇಕು ಎಂಬ ಪ್ರಶ್ನೆಯನ್ನಿಟ್ಟುಕೊಂಡು ಪ್ರಜಾವಾಣಿ ಆರಂಭಿಸಿದ ಲೇಖನ ಸರಣಿ ಇಂದು ಕೊನೆಗೊಳ್ಳುತ್ತಿದೆ. ಒಂದು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ಅನೇಕ ತಜ್ಞರು ಕರ್ನಾಟಕದ ನಾಳೆಗಳಿಗಾಗಿ ತಮ್ಮ ಜ್ಞಾನದ ಮೂಸೆಯಿಂದ ಸಲಹೆಗಳನ್ನು ನೀಡಿದ್ದಾರೆ. ಓದುಗರೂ ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ಲೇಖನ ಸರಣಿ ಕೊನೆಗೊಳ್ಳುವುದರೊಂದಿಗೆ ಭವಿಷ್ಯದ ಚಿಂತನೆಗಳು ನಿಲ್ಲುವುದಿಲ್ಲ. ಹೊಸ ಚಿಂತನೆಗಳು ಅಕ್ಷಯವಾದಾಗಲೇ ನಿಜವಾದ ಅಭಿವೃದ್ಧಿ ಎಂಬುದು ನಮ್ಮ ನಂಬಿಕೆ.
–ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT