ಶುಕ್ರವಾರ, ಮೇ 29, 2020
27 °C

ನ್ಯಾ. ಸದಾಶಿವ ಆಯೋಗದ ‘ಸದಾಶಯ’ ಏನು?

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ನ್ಯಾ. ಸದಾಶಿವ ಆಯೋಗದ ‘ಸದಾಶಯ’ ಏನು?

‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ಆದರೆ ಸಾಮಾಜಿಕವಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವ ಜಾತಿಗಳಿಗೆ ಆದ್ಯತೆ ನೀಡಲೇಬೇಕು. ಅದಕ್ಕೆ ಒಳಮೀಸಲಾತಿ ಎನ್ನಿ, ಮೀಸಲಾತಿ ಪುನರ್ ವಿಂಗಡಣೆ ಎನ್ನಿ, ಮೀಸಲಾತಿ ಗುಂಪುಗಳು ಎನ್ನಿ, ಏನು ಬೇಕಾದರೂ ಹೇಳಿ. ಅದು ಸಂವಿಧಾನದ ಯಾವುದೇ ವಿಧಿಗಳ ಉಲ್ಲಂಘನೆಯಾಗುವುದಿಲ್ಲ. ಹೀಗೆ ಒಳಮೀಸಲಾತಿ ನೀಡುವುದರಿಂದ ಎಲ್ಲರಲ್ಲಿಯೂ ಸಮಾನತೆ ಬರುತ್ತದೆ. ಸಮಾನ ಅವಕಾಶ ಒದಗುತ್ತದೆ. ಇದರಿಂದ ಯಾರೂ ಯಾರನ್ನೂ ದ್ವೇಷಿಸುವ ಸಂದರ್ಭ ಇಲ್ಲ. ಯಾರ ಬಗ್ಗೆ ಅಸೂಯೆ ಪಡುವ ಕಾರಣಗಳೂ ಇಲ್ಲ. ಸಿಟ್ಟಿಗೂ ಅವಕಾಶ ಇಲ್ಲ’.

ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳ ಸ್ಥಿತಿಗತಿಯನ್ನು ಅಧ್ಯಯನ ಮಾಡಲು 2005ರಲ್ಲಿ ನೇಮಕವಾದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಸ್ಪಷ್ಟ ಅಭಿಪ್ರಾಯ ಇದು.ಆಯೋಗ ಈ ಅಭಿಪ್ರಾಯಕ್ಕೆ ಬರಲು ಹಲವಾರು ಸಂಶೋಧನೆಗಳನ್ನು ಮಾಡಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಜಾತಿಗಳ ಸಾಮಾಜಿಕ ಪರಿಸ್ಥಿತಿ, ಆರ್ಥಿಕ ಪರಿಸ್ಥಿತಿ, ಉದ್ಯೋಗ, ವಸತಿ ಸೌಲಭ್ಯ, ಕೃಷಿ ಭೂಮಿ, ಮನೆ, ಶೌಚಾಲಯ ಮುಂತಾದ ಸೌಲಭ್ಯಗಳ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಶಿಫಾರಸುಗಳನ್ನು ಮಾಡಿದೆ. ಜೊತೆಗೆ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಈ ಹಿಂದೆ ರಚನೆಯಾದ ಆಯೋಗಗಳ ಶಿಫಾರಸುಗಳು ಮತ್ತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನೂ ಪರಿಶೀಲಿಸಿ ಉಲ್ಲೇಖಿಸಿದೆ.ಪರಿಶಿಷ್ಟ ಪಟ್ಟಿಯಲ್ಲಿರುವ 101 ಜಾತಿಗಳನ್ನು  ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಬೇಕು (ಗುಂಪುಗಳ ವಿವರಕ್ಕೆ ಈ ಲೇಖನದ ಮೇಲ್ಭಾಗದಲ್ಲಿರುವ ‘ಯಾವ ಗುಂಪಲ್ಲಿ ಯಾರಿದ್ದಾರೆ’ ಬಾಕ್ಸ್‌ ನೋಡಿ). ಪರಿಶಿಷ್ಟ ಜಾತಿಗೆ ಈಗ ಇರುವ ಶೇ 15ರಷ್ಟು ಮೀಸಲಾತಿಯಲ್ಲಿ ಮೊದಲ ಗುಂಪಿಗೆ ಶೇ 6, ಎರಡನೇ ಗುಂಪಿಗೆ ಶೇ 5, ಮೂರನೇ ಗುಂಪಿಗೆ ಶೇ 3 ಹಾಗೂ ನಾಲ್ಕನೇ ಗುಂಪಿಗೆ ಶೇ 1ರಷ್ಟು ಮೀಸಲಾತಿ ಒದಗಿಸಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಈ ಬಗ್ಗೆ ತಿದ್ದುಪಡಿ ತರಬೇಕು ಎಂದೂ ಆಯೋಗ ಶಿಫಾರಸು ಮಾಡಿದೆ.ಮೀಸಲಾತಿ ವಿಂಗಡಣೆಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ನೀಡಬೇಕು ಎಂದು ಪರಿಶಿಷ್ಟ ಜಾತಿಯ ಎಲ್ಲ ಶಾಸಕರಿಗೆ ಆಯೋಗ ಪತ್ರ ಬರೆದಿದ್ದರೂ ಎಚ್.ಆಂಜನೇಯ, ಪ್ರಕಾಶ ರಾಥೋಡ್, ಜಲಜಾ ನಾಯಕ್ ಮತ್ತು ಮಲ್ಲಾಜಮ್ಮ ಮಾತ್ರ ಆಯೋಗದ ಮುಂದೆ ಹೇಳಿಕೆ ನೀಡಿದ್ದಾಗಿ ವರದಿಯಲ್ಲಿ ಹೇಳಲಾಗಿದೆ. ಪರಿಶಿಷ್ಟ ಜಾತಿಗಳ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಆಯೋಗ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿದೆ. ಅಲ್ಲದೆ ವಿವಿಧ ಸಂಘ ಸಂಸ್ಥೆಗಳಿಂದ ಮನವಿಗಳನ್ನೂ ಸ್ವೀಕರಿಸಿದೆ. ಎಡಗೈ, ಬಲಗೈ, ಸ್ಪೃಶ್ಯ ಮತ್ತು ಅಸ್ಪೃಶ್ಯರ ನಡುವಿನ ಸಾಮಾಜಿಕ  ಸ್ಥಾನಮಾನಗಳ ಕುರಿತೂ ಆಯೋಗ ಅಂಕಿಅಂಶಗಳನ್ನು ಸಂಗ್ರಹಿಸಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಅಂಕಿಅಂಶಗಳನ್ನು ಕಲೆಹಾಕಿ, ಪರಿಶಿಷ್ಟರಲ್ಲಿಯೇ ಮೀಸಲಾತಿ ಸೌಲಭ್ಯ ಸಾಮಾಜಿಕವಾಗಿ ಮುಂದುವರಿದ ಕೆಲವೇ ಜಾತಿಗಳಿಗೆ ಹೆಚ್ಚಾಗಿ ಲಭ್ಯವಾಗಿದೆ ಎನ್ನುವುದನ್ನು ಗುರುತಿಸಿದೆ.ಕೆಲವು ಜಾತಿ ಸಂಘಟನೆಗಳು ಪರಿಶಿಷ್ಟ ಜಾತಿಗೆ ನೀಡಲಾಗುವ ಮೀಸಲಾತಿ ಪ್ರಮಾಣವನ್ನು ಈಗಿರುವ ಶೇ 15ರ ಬದಲಾಗಿ ಶೇ 30ಕ್ಕೆ ಹೆಚ್ಚಿಸಬೇಕು ಎಂದು ಹೇಳಿವೆ. ಅಲ್ಲದೆ ಪಟ್ಟಿಯಲ್ಲಿರುವ ಸ್ಪೃಶ್ಯ ಜಾತಿಗಳನ್ನು ಪಟ್ಟಿಯಿಂದ ಹೊರಕ್ಕೆ ಹಾಕಬೇಕು ಎಂದು ಒತ್ತಾಯಿಸಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಂಜಾರ, ಲಮಾಣಿ, ಲಂಬಾಣಿ ಮುಖಂಡರು ಮೀಸಲಾತಿ ವರ್ಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದು ಹಾಗೂ ಬೋವಿ, ಕೊರಮ, ಕೊರಚ ಜನಾಂಗದವರು ಮೀಸಲಾತಿ ವಿಂಗಡಣೆಗೆ ಬೆಂಬಲ ಸೂಚಿಸಿದ್ದನ್ನೂ ವರದಿಯಲ್ಲಿ ಹೇಳಲಾಗಿದೆ. ಅಲ್ಲದೆ ಈ ಜನಾಂಗದವರು ತಮ್ಮ ಜಾತಿಗಳಿಗೆ ಇನ್ನಷ್ಟು ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದಾರೆ.ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇಡೀ ದೇಶದಲ್ಲಿಯೇ ಅತಿ ಹೆಚ್ಚು, ಅಂದರೆ 101 ಜಾತಿಗಳು ಇರುವುದನ್ನು ಆಯೋಗ ಗುರುತಿಸಿದೆ. ಅಲ್ಲದೆ ಸ್ಪೃಶ್ಯ ಜಾತಿಗಳು ಈ ಪಟ್ಟಿಯಲ್ಲಿ ಜಾಗ ಪಡೆದಿರುವುದನ್ನೂ ಅಚ್ಚರಿಯ ಧಾಟಿಯಲ್ಲಿ ಉಲ್ಲೇಖಿಸಿದೆ. ಅಲ್ಲದೆ ಈ ಜಾತಿಗಳು ಹೇಗೆ ಪಟ್ಟಿ ಸೇರಿದವು ಎನ್ನುವುದನ್ನೂ ಹೇಳಿದೆ. ಆದರೆ ಈ ಜಾತಿಗಳನ್ನು ಕೈಬಿಡಬೇಕು ಎಂದು ಆಯೋಗ ಶಿಫಾರಸು ಮಾಡಿಲ್ಲ.ಪರಿಶಿಷ್ಟ ಜಾತಿಗಳ ಪೈಕಿ ಶೇ 90ರಷ್ಟು ಜಾತಿಗಳವರು ಅಸ್ಪೃಶ್ಯರು. ಸ್ಪೃಶ್ಯರು ಮತ್ತು ಅಸ್ಪೃಶ್ಯರು ಒಂದೇ ಪಟ್ಟಿಯಲ್ಲಿದ್ದರೂ ಅವರ ಸಾಮಾಜಿಕ ಸ್ಥಿತಿಗತಿಯಲ್ಲಿ ವ್ಯತ್ಯಾಸ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸ್ಪೃಶ್ಯರು ಮನೆ ಕಟ್ಟಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಅಸ್ಪೃಶ್ಯರಿಗೆ ಇಂತಹ ಅವಕಾಶವಿಲ್ಲ. ಅಸ್ಪೃಶ್ಯರು ಊರಿನ ಹೊರಗೆ ಜೋಪಡಿಯಲ್ಲಿಯೇ ಇರಬೇಕು ಎಂಬ ಅಲಿಖಿತ ನಿಯಮ ಇನ್ನೂ ಜೀವಂತ ಇದೆ. ಬಲಗೈ ಜನಾಂಗದವರು ಎಡಗೈ ಜನಾಂಗದವರೊಂದಿಗೆ ಆಹಾರ, ನೀರನ್ನೂ ಹಂಚಿಕೊಳ್ಳುವುದಿಲ್ಲ. ಅವರ ಮನೆಗಳೂ ದೂರ ದೂರದಲ್ಲಿಯೇ ಇರುತ್ತವೆ. ಇದನ್ನು ಸಮಾನತೆ ಎನ್ನಲು ಸಾಧ್ಯವೇ ಎಂದು ಆಯೋಗ ಪ್ರಶ್ನೆ ಮಾಡಿದೆ.ಅಸ್ಪೃಶ್ಯತೆ ಆಚರಣೆ ಅಪರಾಧ ಎಂದು ನಮ್ಮ ಸಂವಿಧಾನ ಹೇಳುತ್ತದೆ. ಆದರೆ ನಮ್ಮ ಸಾಮಾಜಿಕ ಪರಿಸ್ಥಿತಿಯಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಈಗಲೂ ದಲಿತರಿಗೆ ದೇವಾಲಯಗಳಿಗೆ ಪ್ರವೇಶ ನೀಡುವುದಿಲ್ಲ. ಗ್ರಾಮಗಳಲ್ಲಿ ನೀರು ಕೊಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಮಾನತೆ ತರುವುದು ಕಷ್ಟದ ಕೆಲಸ. ಅಲ್ಲದೆ ಅಸ್ಪೃಶ್ಯರಲ್ಲಿಯೇ ಅಸ್ಪೃಶ್ಯರಾಗಿರುವ ಜನರ ಬಗ್ಗೆ ಇಡೀ ಸಮಾಜ ಕಾಳಜಿ ತೋರುವ ಅಗತ್ಯ ಇದೆ ಎಂದೂ ಆಯೋಗ ಹೇಳಿದೆ.

ಮೀಸಲಾತಿ ಸೌಲಭ್ಯ ಕೆಲವೇ ಕೆಲವು ಜಾತಿಗಳಿಗೆ ಸಿಕ್ಕಿರುವುದರಿಂದ ಸಮಾಜದಲ್ಲಿ ಅಸಮಾನತೆ ಇನ್ನಷ್ಟು ಹೆಚ್ಚಾಗಿದೆ. ಇದನ್ನು ಸರಿಪಡಿಸಲೇಬೇಕು. ಹಂಚಿಕೊಂಡು ತಿನ್ನುವ ಔದಾರ್ಯವನ್ನು ತೋರಬೇಕು. ಜನಸಂಖ್ಯೆ ದೃಷ್ಟಿಯಿಂದ ಹೆಚ್ಚಾಗಿರುವ ಹಾಗೂ ಸೌಲಭ್ಯ ವಂಚಿತರಿಗೆ ಅವಕಾಶ ನೀಡಬೇಕು ಎನ್ನುವುದನ್ನು ಆಯೋಗ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.