ಪ್ರಧಾನಿಯವರ ಕರ್ತವ್ಯವೇನು?

7

ಪ್ರಧಾನಿಯವರ ಕರ್ತವ್ಯವೇನು?

Published:
Updated:

‘ಪ್ರಜಾವಾಣಿ’ ಮುಖಪುಟದಲ್ಲಿರುವ ರಾಷ್ಟ್ರಪತಿಯವರ ಕಳಕಳಿಯ ಮಾತು, ಸಂಪಾದಕೀಯ ಮತ್ತು ಸಂಪಾದಕೀಯ ಪುಟದಲ್ಲಿರುವ  ರಾಮಚಂದ್ರ ಗುಹಾ ಅವರ ಲೇಖನ (ಡಿ. 9) ಇವುಗಳನ್ನು ಓದುತ್ತಿದ್ದಾಗ ಸಂಸತ್ತಿನ ಆಗುಹೋಗುಗಳನ್ನು ಕುರಿತು ನನಗೆ ಬಂದ ಒಂದೆರಡು ಸಂದೇಹಗಳನ್ನು ಓದುಗರ ಮುಂದೆ ಇಡುತ್ತಿದ್ದೇನೆ- ಈ ವಿಷಯವನ್ನು ಕುರಿತು ಹೆಚ್ಚಿಗೆ ತಿಳಿದುಕೊಳ್ಳಲು.ಭಾರತ ಸಂವಿಧಾನದ 78ನೆಯ ವಿಧಿ ಪ್ರಧಾನಿಯವರ ಕರ್ತವ್ಯಗಳನ್ನು ಕುರಿತು ಚರ್ಚಿಸುತ್ತದೆ;  ಆದರೆ ಆ ವಿಧಿ,  ಸದನದ ಕಾರ್ಯಕಲಾಪಗಳಲ್ಲಿ ಪ್ರಧಾನಿಯವರ ಪಾತ್ರವನ್ನು ಕುರಿತು ನೇರವಾಗಿ ಏನನ್ನೂ ಹೇಳುವುದಿಲ್ಲ.  ಆ ವಿಧಿಯನ್ನು  ಕುರಿತು ಸಂವಿಧಾನ ತಜ್ಞರ ವ್ಯಾಖ್ಯಾನಗಳು ಹೀಗಿವೆ: ಪ್ರಧಾನಿಯವರ ಕರ್ತವ್ಯಗಳು: ಅ) ಸಚಿವ ಸಂಪುಟದೊಡನೆ ಚರ್ಚಿಸಿ ಪಾರ್ಲಿಮೆಂಟಿನ ಉಭಯ ಸದನಗಳ ಅಧಿವೇಶನಗಳ  ಕಾಲಾವಧಿಯನ್ನು ನಿರ್ಧರಿಸುವುದು ಮತ್ತು ಸದನದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸುವುದು.  ಆ) ಸದನದಲ್ಲಿ ಸರ್ಕಾರದ ಪ್ರಮುಖ ನೀತಿಗಳನ್ನು ಘೋಷಿಸುವುದು.  ಇ) ಸದನದ ಕಲಾಪಗಳು ಸುಗಮವಾಗಿ ನಡೆಯುವಂತೆ ಸಭಾಧ್ಯಕ್ಷರಿಗೆ ನೆರವಾಗುವುದು. ಆದರೆ, ಇಂದಿನ ದಿನಗಳಲ್ಲಿ ಬೇರೆಯೇ ನಡೆಯುತ್ತಿದೆ: ತುರ್ತು ಪರಿಸ್ಥಿತಿಯ ಘೋಷಣೆಯ ನಂತರ ಬಂದಿರುವ, ಜನಸಾಮಾನ್ಯರಿಂದ ಅತ್ಯುನ್ನತ ವರ್ಗಗಳನ್ನೂ ನೇರವಾಗಿ ಪ್ರಭಾವಿಸುವ ಅತ್ಯಂತ ಪರಿಣಾಮಕಾರಿ ನೋಟು ಅಮಾನ್ಯೀಕರಣ ಘೋಷಣೆ ಸಂಸತ್ತಿನಲ್ಲಿ ಆಗಲಿಲ್ಲ; ಆ ನಂತರ ಅದನ್ನು ಕುರಿತ ಅಲ್ಪಕಾಲಿಕ ಚರ್ಚೆಯಲ್ಲಿ ಈ ಹಿಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು ‘It is a monumental management failure’ ಎಂದು ಸದನದಲ್ಲಿ ಘೋಷಿಸಿದಾಗಲೂ ಅದಕ್ಕೆ ಪ್ರಧಾನಿಯವರು ಉತ್ತರಿಸುವ ಗೋಜಿಗೇ ಹೋಗಿಲ್ಲ; ಕಳೆದ ತಿಂಗಳು ಎಂಟರಿಂದ ಇಂದಿನ ತನಕವೂ ಬಹುಶಃ ಮೂರು ಬಾರಿ ಪ್ರಧಾನಿಯವರು ಸಂಸತ್ತಿಗೆ ಆಗಮಿಸಿದ್ದಾರೆ, ಆದರೆ ಒಮ್ಮೆಯೂ ಯಾವುದರ ಬಗ್ಗೆಯೂ ಮಾತನಾಡಿಲ್ಲ.ಈ ನಿಲುವನ್ನು ಸಂಸತ್ತಿಗೆ ತೋರಿಸುವ ಅಗೌರವ ಎಂದು ಭಾವಿಸಬಹುದೆ?  ನನ್ನ ನೆನಪು ಸರಿಯಾಗಿದ್ದರೆ, ಸ್ವಾತಂತ್ರ್ಯಾನಂತರ ಇಲ್ಲಿಯವರೆಗೆ, ಎಂದರೆ ಕಳೆದ 70 ವರ್ಷಗಳಲ್ಲಿ,  ಒಮ್ಮೆಯೂ ಪ್ರಧಾನಿಯವರು ಸ್ಥಳದಲ್ಲಿದ್ದು 18 ದಿನಗಳ ಕಾಲ ಸಂಸತ್ ಕಲಾಪಗಳಲ್ಲಿ ಭಾಗವಹಿಸದೆ ಇರುವುದು ಇದೇ ಮೊದಲು.  ವಿರೋಧ ಪಕ್ಷಗಳ ನಡವಳಿಕೆ ಖಂಡಿತಾ ಖಂಡನಾರ್ಹ; ಆದರೆ ಅವರಿಗೆ ಬೇರಾವ ಮಾರ್ಗವಿತ್ತು?  ಹತಾಶರಾಗಿ ವಿರೋಧ ಪಕ್ಷಗಳು ಕೂಗಾಡಿ ಸದನವನ್ನು ಮುಂದೂಡುವಂತೆ ಮಾಡುತ್ತಿರುವುದಕ್ಕೆ ಕೇವಲ ಅವುಗಳನ್ನು ಮಾತ್ರವೇ ಗುರಿಯಾಗಿಸುವುದು ಎಷ್ಟು ಸರಿ?ಈ ಸಂದರ್ಭದಲ್ಲಿ, ಭಾರತ-ಚೀನಾ ಸಂಘರ್ಷದ ದಿನಗಳಲ್ಲಿ, ಆಚಾರ್ಯ ಕೃಪಲಾನಿಯವರು ಸಂಸತ್ತಿನಲ್ಲಿ (1961ರಲ್ಲಿ) ಮಾಡಿದ ‘I charge him  with having created cliques …’  ಎಂದು ಪ್ರಾರಂಭವಾಗುವ ಉಗ್ರ, ಆಕ್ರಾಮಕ ಭಾಷಣವು ನೆನಪಿಗೆ ಬರುತ್ತದೆ.  ಕೃಪಲಾನಿಯವರ ಲಕ್ಷ್ಯ ನೇರವಾಗಿ ರಕ್ಷಣಾ ಮಂತ್ರಿ  ವಿ.ಕೆ. ಮೆನನ್ ಆಗಿದ್ದರೂ ಪರೋಕ್ಷವಾಗಿ ಆ ಭಾಷಣ ನೆಹರೂ ಅವರ ಮೇಲಾದ ದಾಳಿಯೂ ಆಗಿತ್ತು.  ಆದರೂ ಕೃಪಲಾನಿಯವರ ಭಾಷಣಕ್ಕೆ ಯಾವ ಅಡ್ಡಿಯನ್ನೂ ಮಾಡದೆ (ಇತರರೂ ಅಡ್ಡಿ ಮಾಡುವುದಕ್ಕೆ ಬಿಡದೆ), ಆ ಭಾಷಣವನ್ನು ಪೂರ್ಣವಾಗಿ ನೆಹರೂ ಕೇಳಿಸಿಕೊಂಡಿದ್ದರು ಮತ್ತು ಅದಕ್ಕೆ ಅವರಿಗೆ ಕಂಡ ಸೂಕ್ತ ಉತ್ತರವನ್ನೂ ಕೊಟ್ಟಿದ್ದರು. ಪಕ್ಷಗಳ ಬಲಾಬಲ ಸಂಖ್ಯೆಗಳೇನೇ ಇರಲಿ, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಪರಸ್ಪರ ಗೌರವಾದರಗಳಿದ್ದರೆ ಮಾತ್ರ ಸದನದಲ್ಲಿ ಕಾರ್ಯಕಲಾಪಗಳು ಸುಗಮವಾಗಿ ನಡೆಯಬಹುದು ಎಂಬುದು ಸರ್ವ ವಿದಿತವೆಂದುಕೊಂಡಿದ್ದೇನೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry