ಜನಾದೇಶಕ್ಕೆ ಪಂಚ ರಾಜ್ಯ ಅಣಿ

7
ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ, ಗೋವಾ ವಿಧಾನಸಭೆ ಚುನಾವಣೆ ಘೋಷಣೆ

ಜನಾದೇಶಕ್ಕೆ ಪಂಚ ರಾಜ್ಯ ಅಣಿ

Published:
Updated:
ಜನಾದೇಶಕ್ಕೆ ಪಂಚ ರಾಜ್ಯ ಅಣಿ

ಫೆಬ್ರುವರಿ 4ರಿಂದ ಮಾರ್ಚ್‌ 8ರವರೆಗೆ ಹಲವು ಹಂತಗಳ ಮತದಾನ *ಮಾರ್ಚ್‌ 11ಕ್ಕೆ ಫಲಿತಾಂಶ


**

ನವದೆಹಲಿ: ರಾಜಕೀಯವಾಗಿ ಅತ್ಯಂತ ಮಹತ್ವದ ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆ ಫೆಬ್ರುವರಿ 4ರಿಂದ ಮಾರ್ಚ್‌ 8ರ ನಡುವೆ ನಡೆಯಲಿದೆ. 


 


ಗರಿಷ್ಠ ಮುಖಬೆಲೆಯ ನೋಟು ರದ್ದತಿ ನಂತರ ಪ್ರಧಾನಿ  ನರೇಂದ್ರ ಮೋದಿ ಅವರಿಗೆ ಈ ಚುನಾವಣೆ ಅತ್ಯಂತ ದೊಡ್ಡ ಅಗ್ನಿಪರೀಕ್ಷೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.


ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಉತ್ತರಾಖಂಡ, ಪಂಜಾಬ್‌ ಮತ್ತು ಗೋವಾಗಳಲ್ಲಿ ಒಂದು ಹಂತದಲ್ಲಿ ಮತದಾನ ನಡೆದರೆ ಮಣಿಪುರದಲ್ಲಿ ಎರಡು ದಿನ ಮತದಾನ ನಡೆಯಲಿದೆ. ಹೊಸ ವರ್ಷದ ಆರಂಭದಲ್ಲಿಯೇ ಭಾರಿ ರಾಜಕೀಯ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಆರಂಭಿಸಿದೆ. 


 


ಮಾರ್ಚ್‌ 11ರಂದು ಒಂದೇ ದಿನ ಎಲ್ಲ ರಾಜ್ಯಗಳ ಮತ ಎಣಿಕೆ ನಡೆಯಲಿದೆ. ಅಂದೇ ಫಲಿತಾಂಶವೂ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ಪ್ರಕಟಿಸಿದರು.


 


ಚುನಾವಣೆಯಲ್ಲಿ ಕಪ್ಪು ಹಣ ಬಳಕೆಗೆ ಕಡಿವಾಣ ಹಾಕಲು ಎಲ್ಲ  ಕ್ರಮ ಕೈಗೊಳ್ಳಲಾಗುವುದು. ಮತದಾರರ ಮೇಲೆ ಪ್ರಭಾವ ಬೀರಲು ಇತರ ಅಕ್ರಮ ವಿಧಾನಗಳನ್ನು ಅನುಸರಿಸದಂತೆಯೂ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದರು. 


 


ಮಣಿಪುರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದೆ. ಎರಡು ಗುಂಪುಗಳ ನಡುವೆ ಸಂಘರ್ಷ ನಡೆಯುತ್ತಿದೆ. ಹಾಗಾಗಿ ಅಲ್ಲಿ ಈ ಬಾರಿ ಚುನಾವಣೆ ನಡೆಸಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿತ್ತು. ಈ ಕಾರಣದಿಂದ ಅಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಸಲು ನಿರ್ಧರಿಸಲಾಗಿದೆ. ಈಗ ಅಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ.


 


ಉತ್ತರಾಖಂಡದಲ್ಲಿ ಫೆ. 15ರಂದು ಮತದಾನ ನಡೆಯಲಿದೆ. ಅಲ್ಲಿ ಈಗ ಕಾಂಗ್ರೆಸ್‌ ಸರ್ಕಾರ ಇದೆ. ಪಂಜಾಬ್‌ ಮತ್ತು ಗೋವಾಗಳ ಜನ ಫೆಬ್ರುವರಿ 4ರಂದು ಮತದಾನದ ಹಕ್ಕು ಚಲಾಯಿಸಲಿದ್ದಾರೆ. 


 


ಪಂಜಾಬ್‌ ಮತ್ತು ಗೋವಾ ಚುನಾವಣೆಗೆ ಇದೇ 11ರಂದು ಅಧಿಸೂಚನೆ ಹೊರಡಿಸುವುದರೊಂದಿಗೆ  ಇಡೀ ಪ್ರಕ್ರಿಯೆಗೆ ಅಧಿಕೃತ ಚಾಲನೆ ದೊರೆಯಲಿದೆ. 


 


ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿನ ಬಿರುಕು ಮತ್ತು ಕುಟುಂಬ ಕಲಹ ಉತ್ತರ ಪ್ರದೇಶದ ಚುನಾವಣೆಗೆ ಹೊಸ ಆಯಾಮಗಳನ್ನು ನೀಡಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಪಡೆದಿರುವ ಬಿಜೆಪಿ 14 ವರ್ಷಗಳ ಬಳಿಕ ಇಲ್ಲಿ ಅಧಿಕಾರ ಹಿಡಿಯುವ ಆಶಾಭಾವನೆ ಹೊಂದಿದೆ. ಇತರ ಮುಖ್ಯ ಪಕ್ಷಗಳಾದ ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಸ್ಪರ್ಧೆಯನ್ನು ಚತುಷ್ಕೋನವಾಗಿಸಿವೆ. 


 


ಪಂಜಾಬ್‌ನಲ್ಲಿ ಅಕಾಲಿ ದಳ–ಬಿಜೆಪಿ ಕೂಟ ಅಧಿಕಾರಲ್ಲಿದೆ. ಈ ಬಾರಿ ಅಲ್ಲಿ ಈ ಕೂಟಕ್ಕೆ ಕಾಂಗ್ರೆಸ್‌ ಮತ್ತು ಎಎಪಿ ಕಠಿಣ ಸ್ಪರ್ಧೆ ಒಡ್ಡುವ ನಿರೀಕ್ಷೆ ಇದೆ. ಉತ್ತರಾಖಂಡದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹೋರಾಟ ನಡೆಯಲಿದೆ.


 


ಗೋವಾದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ಕಾಂಗ್ರೆಸ್‌ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ. ಆದರೆ ಹೊಸ ಪಕ್ಷ ಎಎಪಿ, ಎರಡೂ ರಾಷ್ಟ್ರೀಯ ಪಕ್ಷಗಳನ್ನು ಹಿಂದಿಕ್ಕುವ ಉತ್ಸಾಹ ಹೊಂದಿದೆ. 


 


ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಘೋಷಣೆಯನ್ನು ಸ್ವಾಗತಿಸಿವೆ.

 
**
ಅಕ್ರಮಗಳ ಕಡಿವಾಣಕ್ಕೆ ಹಲವು ನಿಯಮಗಳು
* ಕಳೆದ 10 ವರ್ಷದಲ್ಲಿ ಸರ್ಕಾರಿ ನಿವಾಸದಲ್ಲಿ ವಾಸವಿದ್ದವರು ಅಲ್ಲಿಗೆ ‘ಯಾವುದೇ ಬಾಕಿ ಉಳಿಸಿಕೊಂಡಿಲ್ಲ’ ಎಂಬ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ
 
* ಧರ್ಮದ ಹೆಸರಿನಲ್ಲಿ ಮತಯಾಚನೆಗೆ ಅವಕಾಶವಿಲ್ಲ ಎಂಬ ‘ಸುಪ್ರೀಂ’ ತೀರ್ಪು ಕಟ್ಟುನಿಟ್ಟು ಜಾರಿಗೆ ಸಿದ್ಧತೆ
 
* ಮತಗಟ್ಟೆ ಸಮೀಪ ಮತದಾರರಿಗೆ ಚಹಾ, ತಿಂಡಿ ನೀಡುವ ಘಟಕಗಳನ್ನು ಸ್ಥಾಪಿಸಿದರೆ ಅದರ ವೆಚ್ಚ ಆಯಾ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರ್ಪಡೆ
 
* ‘ಕಾಸಿಗಾಗಿ ಸುದ್ದಿ’ಯ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಜ್ಜು 
 
* ರಾಜಕಾರಣಿಗಳು, ರಾಜಕೀಯ ಪಕ್ಷಗಳ ಮಾಲೀಕತ್ವದ ಸುದ್ದಿ ವಾಹಿನಿಗಳಲ್ಲಿ ನಿರ್ದಿಷ್ಟ ಅಭ್ಯರ್ಥಿ ಬಗ್ಗೆ ಸುದ್ದಿ ಪ್ರಕಟವಾದರೆ ಅದರ ವೆಚ್ಚವೂ ಅಭ್ಯರ್ಥಿಯ ಚುನಾವಣಾ ವೆಚ್ಚವಾಗಿ ಪರಿಗಣನೆ
 
* ನೋಟು ರದ್ದತಿಯಿಂದ ಚುನಾವಣೆಗೆ ಕಪ್ಪು ಹಣ ಬಳಕೆ ಕಡಿಮೆಯಾಗುವ ಆಶಾಭಾವ ಪ್ರಕಟಿಸಿದ ಆಯೋಗ. 
 
* ಚುನಾವಣಾ ಪ್ರಕ್ರಿಯೆ ಮುಗಿದ ನಂತರವೇ ಬಜೆಟ್‌ ಮಂಡಿಸುವಂತೆ ಕೇಂದ್ರಕ್ಕೆ ಸೂಚಿಸಲು ಚುನಾವಣಾ ಆಯೋಗಕ್ಕೆ ವಿವಿಧ ಪಕ್ಷಗಳ ಆಗ್ರಹ. ಫೆ. 1ರಂದು ಬಜೆಟ್‌ ಮಂಡಿಸಲು ಕೇಂದ್ರ ನಿರ್ಧರಿಸಿದೆ. 
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry