ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವುಕತೆಯ ಮರೆಯಲ್ಲಿ ಭವ್ಯಲೋಕ

Last Updated 26 ಜನವರಿ 2017, 12:41 IST
ಅಕ್ಷರ ಗಾತ್ರ

ಅಲ್ಲಮ
ನಿರ್ಮಾಪಕ: ಶ್ರೀಹರಿ ಎಲ್‌. ಖೋಡೆ
ನಿರ್ದೇಶಕ: ಟಿ.ಎಸ್‌. ನಾಗಾಭರಣ
ತಾರಾಗಣ: ಧನಂಜಯ್‌, ಮೇಘನಾ ರಾಜ್‌, ಲಕ್ಷ್ಮೀ ಗೋಪಾಲಸ್ವಾಮಿ, ನೀರ್ನಳ್ಳಿ ರಾಮಕೃಷ್ಣ, ಸಂಚಾರಿ ವಿಜಯ್‌

ಪೌರಾಣಿಕ ಘಟನೆಗಳು, ಪವಾಡ ಪುರುಷರ ಜೀವನವನ್ನು ಆಧಾರವಾಗಿಟ್ಟುಕೊಂಡು ಬಂದಿರುವ ಸಿನಿಮಾಗಳ ಪರಂಪರೆಯೇ ನಮ್ಮಲ್ಲಿ ಇದೆ. ಈ ಹಿಂದೆ ಭಕ್ತಿ, ದೈವೀಕರಣ–ಸಾಹಸಕಥೆ, ರೋಚಕತೆಗಳನ್ನು ಪ್ರಧಾನವಾಗಿ ಬಳಸಿಕೊಂಡು ಜನರನ್ನು ತಲುಪಲು ಪ್ರಯತ್ನಿಸುತ್ತಿದ್ದವು. ಈಗ ದೃಶ್ಯವೈಭವವೇ ಅಂಥ ಸಿನಿಮಾಗಳ ಮೂಲ ಆಕರ್ಷಣೆಯಾಗಿ ಬದಲಾಗಿವೆ. ಈ ಎರಡೂ ಅಂಚುಗಳನ್ನು ತಾಕಿಕೊಂಡು ಯಾವುದಕ್ಕೂ ಪೂರ್ತಿ ಒರಗಿಕೊಳ್ಳದೆ ಟಿ.ಎಸ್. ನಾಗಾಭರಣ ‘ಅಲ್ಲಮ’ನನ್ನು ಕಟ್ಟಿದ್ದಾರೆ.

ಭಾರತೀಯ ಅಧ್ಯಾತ್ಮಪರಂಪರೆಯಲ್ಲಿ ಮಹತ್ವದ ಸ್ಥಾನದಲ್ಲಿರುವ ಅಲ್ಲಮಪ್ರಭುವಿನ ಬದುಕನ್ನು ಕಟ್ಟಿಕೊಡುವ ಪ್ರಯತ್ನವನ್ನು ‘ಅಲ್ಲಮ’ದಲ್ಲಿ ಮಾಡಲಾಗಿದೆ. ಖಚಿತ ವಿವರಗಳು ಲಭ್ಯವಿಲ್ಲದ ಕಾಲದ ವ್ಯಕ್ತಿ–ಜೀವನವನ್ನು ಚಿತ್ರಿಸುವಾಗ ಪರೋಕ್ಷ ಉಲ್ಲೇಖ – ಊಹೆಗಳ ಮೇಲೆಯೇ ಅದನ್ನು ಚಿತ್ರಿಸಬೇಕಾಗುತ್ತದೆ.

ಆಗ ಅಲ್ಲಿ ಚಿತ್ರಿಸುವ ವಿವರಗಳ ಕುರಿತಾದ ಸತ್ಯಾಸತ್ಯತೆಗಳ ಕುರಿತು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ‘ಅಲ್ಲಮ’ ಕೂಡ ಇಂಥ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಮೊಳೆಸುತ್ತದೆ. ಆದರೆ ಜೀವನ ಚರಿತ್ರೆಯ ದಾಖಲೆಯಾಗಲಿ, ಅಲ್ಲಮನ ಬದುಕಿನ ಕುರಿತು ಮಾಹಿತಿ ನೀಡುವುದಾಗಲಿ ಈ ಸಿನಿಮಾದ ಮೂಲ ಉದ್ದೇಶ ಅಲ್ಲವಾದ್ದರಿಂದ, ಅಂಥ ಪ್ರಶ್ನೆಗಳನ್ನು ಮರೆತೂ ಸಿನಿಮಾ ನೋಡಬಹುದು.

ಹಲವು ಶತಮಾನಗಳ ಹಿಂದಿನ ಅಲ್ಲಮನನ್ನು ಇಂದಿನ ಪ್ರೇಕ್ಷಕರ ಮನಸ್ಥಿತಿಗೆ ಒಗ್ಗಿಸುವ ಭರದಲ್ಲಿ ನಿರ್ದೇಶಕರು ರಂಜನೀಯ ಅಂಶಗಳನ್ನು ಸೇರಿಸಿದ್ದಾರೆ. ಹಲವು ಕಡೆಗಳಲ್ಲಿ ರಂಜನೆಯೇ ಮುನ್ನೆಲೆಗೆ ಬಂದು ಉಳಿದ ಅಂಶಗಳು ಹಿನ್ನೆಲೆಗೆ ಸರಿಯುತ್ತದೆ. ಅಲ್ಲಮನ ವೇಷಧಾರಿ ಬಹುರೂಪಿ ಶಿವಯ್ಯ ಮತ್ತು ಮಾಯಾದೇವಿ ಅವರ ಸರಸದ ಸಂದರ್ಭ ಇದಕ್ಕೊಂದು ಉದಾಹರಣೆ.

ಶರಣರ ಕಾಲವನ್ನು ಮರುರೂಪಿಸುವಲ್ಲಿ  ಕಲಾ ನಿರ್ದೇಶಕ ಶಶಿಧರ ಅಡಪ ಮತ್ತು ವಸ್ತ್ರ ವಿನ್ಯಾಸಕಿ ನಾಗಿಣಿ ಭರಣರ ಶ್ರಮ ಎದ್ದು ಕಾಣಿಸುತ್ತದೆ. ಅಲ್ಲಮನ ವಚನಗಳನ್ನೂ ಗೀತೆ–ಸಂಭಾಷಣೆಗಳ ರೂಪದಲ್ಲಿ ಹೇರಳವಾಗಿ ಬಳಸಿಕೊಳ್ಳಲಾಗಿದೆ. ಆದರೆ ಸಾಧ್ಯವಾದಷ್ಟೂ ವಚನಗಳನ್ನು ದಾಟಿಸಬೇಕೆಂಬ ಉಮೇದಿನಲ್ಲಿ ‘ಶಬ್ದದೊಳಗಿನ ನಿಶ್ಶಬ್ದ’ವೇ ಮಾಯವಾಗಿ ಸಿನಿಮಾ ವಾಚಾಳಿತನದಿಂದ ಬಳಲುತ್ತದೆ.

ನಿರ್ದೇಶಕರ ಕಲ್ಪನೆಯ ಅಲ್ಲಮನ ಪಾತ್ರಕ್ಕೆ ಪೂರ್ತಿಯಾಗಿ ಒಗ್ಗಿಕೊಳ್ಳಲು ಧನಂಜಯ್‌ ಪ್ರಯತ್ನಿಸಿದ್ದಾರೆ. ಅಲ್ಲಮನ ತಾಯಿ ನೀಲಲೋಚನೆ ಪಾತ್ರದಲ್ಲಿ ಲಕ್ಷ್ಮೀ ಗೋಪಾಲಸ್ವಾಮಿ ಗಮನಸೆಳೆಯುತ್ತಾರೆ. ಮಾಯಾದೇವಿಯಾಗಿ ಮೇಘನಾರಾಜ್‌ ಕಣ್ಮನ ಸೆಳೆಯುತ್ತಾರಾದರೂ ಅದರಾಚೆಗೆ ಆ ಪಾತ್ರ ಏನನ್ನೂ ಧ್ವನಿಸುವುದಿಲ್ಲ.

ಅಲ್ಲಮನನ್ನೇ ಸಿನಿಮಾದ ಕೇಂದ್ರವಾಗಿರಿಸಿಕೊಂಡ ಕಾರಣಕ್ಕೆ ಬಸವಣ್ಣ, ಅಕ್ಕಮಹಾದೇವಿ, ಮಿಕ್ಕೆಲ್ಲ ಶರಣರು – ಅವರು ನಡೆಸಿದ ಸಾಮಾಜಿಕ ಕ್ರಾಂತಿಯಲ್ಲಿ ಅಲ್ಲಮನ ಪಾತ್ರ ಏನು ಎನ್ನುವುದು ಗೌಣವಾಗಿಯೇ ಉಳಿಯುತ್ತದೆ. ಚಿತ್ರದ ದೃಶ್ಯವೊಂದರಲ್ಲಿ ಗುರುಗಳು ಅಲ್ಲಮನಿಗೆ ಹೇಳುವ ಮಾತು – ‘ಭಾವುಕ ಲೋಕದಿಂದ ಹೊರಬರದ ಹೊರತು ಭವ್ಯಲೋಕ ಕಾಣದು’. ಈ ಮಾತನ್ನು ಇಡೀ ಸಿನಿಮಾಕ್ಕೆ ಅನ್ವಯಿಸಬಹುದು.

ಬಾಪು ಪದ್ಮನಾಭ ಸಂಗೀತ ಆ ಕ್ಷಣದಲ್ಲಿ ತಲೆದೂಗುವಂತೆ ಮಾಡುವ ಶಕ್ತಿ ಹೊಂದಿದೆ. ಜಿ.ಎಸ್‌. ಭಾಸ್ಕರ್‌ ಛಾಯಾಗ್ರಹಣ ‘ಅಲ್ಲಮ’ನ ಪ್ರಮುಖ ಧನಾತ್ಮಕ ಅಂಶ. ಮನೆಯೊಳಗಿನ ಅರೆಬೆಳಕಿನ ದೃಶ್ಯಗಳನ್ನು ಅವರು ಸಂಯೋಜಿಸಿರುವ ರೀತಿ ಮನಮೋಹಕವಾಗಿದೆ.

ಹಲವು ದೃಶ್ಯಗಳಲ್ಲಿ ಅಲ್ಲಮನನ್ನು ಭಾವುಕ ನೆಲೆಯಿಂದ ಬಿಡಿಸಿ ‘ಭವ್ಯ’ತೆಗೆ ಮುಖಾಮುಖಿಗೊಳಿಸುವ ಪ್ರಯತ್ನವನ್ನೂ ಅವರು ಕ್ಯಾಮೆರಾ ಮೂಲಕವೇ ಮಾಡಿದ್ದಾರೆ. ಸಿನಿಮಾ ‘ಅಲ್ಲಮ’ನ ಈ ಬಯಲು ಬೆರಗು ಹುಟ್ಟಿಸುತ್ತದೆ, ಆದರೆ ಅದನ್ನು ಬಹುಕಾಲ ಮನಸಲ್ಲಿ ಉಳಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT