ಭಾನುವಾರ, ಸೆಪ್ಟೆಂಬರ್ 27, 2020
21 °C

ಮಂಕುತಿಮ್ಮನ ಕಗ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಕುತಿಮ್ಮನ ಕಗ್ಗ

ಮಧ್ಯಮ ವರ್ಗದವರ ಆಪ್ತಕೃತಿ

‘ಮಂಕುತಿಮ್ಮನ ಕಗ್ಗ’ದ ಖ್ಯಾತಿಯ ಗುಟ್ಟನ್ನು ಅರ್ಥಮಾಡಿಕೊಳ್ಳಲು ಡಿ.ಎ. ಶಂಕರ್‌ ಸಾಕಷ್ಟು ತಿಣುಕಿದ್ದಾರೆ. ತಮ್ಮನ್ನು ತಾವು ಡಿವಿಜಿ ಅವರ ಅಭಿಮಾನಿಯೆಂದು ಕರೆದುಕೊಳ್ಳುವ, ಕಗ್ಗದ ಇಂಗ್ಲಿಷ್‌ ಅವತರಣಿಕೆಯ ಪರಿಷ್ಕರಣದಲ್ಲಿ ಕೈಯಾಡಿಸಿರುವ ಶಂಕರರಂತಹ ‘ಲೋಕಶಂಕರ’ರಿಗೂ ಇಂತಹ ಅನುಮಾನಗಳು ಬಂದರೆ ನಮ್ಮಂತಹ ಪಾಮರರ ಪಾಡೇನು?ಅವರು ಹೇಳುತ್ತಾರೆ: ‘ಕಗ್ಗ ಉಳಿದಿರುವುದು ಕೆಲವು ಶಿಷ್ಟ ಓದುಗ ವರ್ಗದಿಂದ ಮಾತ್ರ’ ಎಂದು. ಆ ಶಿಷ್ಟ ಓದುಗ ವರ್ಗ ಯಾವುದು? ಈ ಸಮಾಜದ ಬಹುಸಂಖ್ಯಾತರಾದ ಮಧ್ಯಮ ವರ್ಗದ ಜನ ಅವರು. ಸುಶಿಕ್ಷಿತರು, ಇಂಗ್ಲಿಷ್‌–ಕನ್ನಡಗಳನ್ನು ಕಲಿತು ಎಲ್ಲ ಬಗೆಯ ಹೊಸತುಗಳಿಗೆ ಮೈ ತೆರೆದುಕೊಂಡವರವರು; ಶ್ರೀಮಂತವರ್ಗದ ಹಣದ ದರ್ಪವನ್ನಾಗಲೀ, ಅತಿ ಕೆಳವರ್ಗದ ಬಡತನದ ಕಾರ್ಪಣ್ಯವನ್ನಾಗಲೀ ಕಾಣದವರು.ಪಾಶ್ಚಾತ್ಯ ಚಿಂತನೆಗಳ ಕಡೆಗೆ ಒಲಿದರೂ ಈ ನೆಲದ ಸಂಸ್ಕಾರ, ಸಂಸ್ಕೃತಿಗಳಿಗೆ ಸಂಪೂರ್ಣವಾಗಿ ಎಳ್ಳು–ನೀರು ಬಿಟ್ಟಿರದ ಅತಿದೊಡ್ಡ ಸಮುದಾಯವಿದು. ಹಿಂದಿನ ತಲೆಮಾರುಗಳಿಗಿದ್ದ ಸಂಸ್ಕೃತಜ್ಞಾನವಾಗಲೀ ವೇದ–ಉಪನಿಷತ್ತು ಅಥವಾ ಗೀತೆಗಳ ಅವಲಂಬನವಾಗಲೀ ಇವರಿಗಿಲ್ಲ. ಇತ್ತ ಹಿಂದಿನ ಗ್ರಾಮೀಣ ಜೀವನದ ಜ್ಞಾನಗಂಗೆಗಳಾದ ತತ್ವಪದಗಳ, ಸರ್ವಜ್ಞನ ವಚನಗಳ – ಅಷ್ಟೇಕೆ, ಗಾದೆ, ಒಗಟುಗಳ ಊರುಗೋಲೂ ಇಲ್ಲ.

ಮನೆಯ ಹಿರಿಯರ ಮಾರ್ಗದರ್ಶನ, ಸಮಾಜದ ಮುಖಂಡರ ಆದರ್ಶ, ನೊಂದಾಗ ಸಾಂತ್ವನಗೊಳಿಸುವ ಆಪ್ತರ ಆತ್ಮೀಯತೆ ಇದಾವುವೂ ಇರದ ನಿರ್ಭಾಗ್ಯರಾದ ಇಂದಿನ ಮಧ್ಯವಯಸ್ಸಿನ ಮಧ್ಯಮ ವರ್ಗ ‘ಕಗ್ಗ’ವನ್ನು ಅಪ್ಪಿ ಆರಾಧಿಸುತ್ತಿದೆ. ಅವರಿಗೆ ‘ಬಾಳಿಗೊಂದು ನಂಬಿಕೆ’ ಬೇಕು. ಹಾಗಾಗಿ ಅವರಿಗೆ ಈ ಅಲಂಬನದ ಅವಶ್ಯಕತೆಯಿದೆ. ಜಾತಿ, ಮತ, ಪಂಥ, ಇಸಂಗಳನ್ನು ಮೀರಿದ ಜನಗಳ ಆಪ್ತಕೃತಿಯಿದು.ಬಿನದದ ಕಥೆಯಲ್ಲ ಹೃದ್ರಸದ ನಿಝರಿಯಲ್ಲ ।

ಮನ ನಾನು ಸಂಧಾನ ಕಾದುದೀ ಕಗ್ಗ ।।

ನೆನಯುತೊಂದೊಂದು ಪದ್ಯವನದೊಮ್ಮೊಮ್ಮೆ ।

ಅನುಭವಿಸಿ ಚಪ್ಪರಿಸೋ – ಮರುಳ ಮುನಿಯ ।।
ಎಂದು ಡಿವಿಜಿ ಅವರು ನೀಡಿರುವ ಸೂಚನೆಯನ್ನು ಕನ್ನಡ ಜನತೆ ತಮ್ಮದಾಗಿಸಿಕೊಂಡಿದ್ದಾರೆ. ಹಾಗಾಗಿಯೇ ಇಲ್ಲಿಯ ಪದ್ಯಗಳು ಅವರ ಬಾಳ ಬೆಳಕಾಗಿವೆ. ‘ಇದು ಪಂಡಿತರನ್ನೂ ಪ್ರಸಿದ್ಧರನ್ನೂ ಪುಷ್ಟರನ್ನೂ ಉದ್ದೇಶಿಸಿದ್ದಲ್ಲ. ಬಹು ಸಾಮಾನ್ಯರಾದವರ ಮನೆಯ ಬೆಳಕಿಗೆ ಇದು ಒಂದು ತೊಟ್ಟಿನಷ್ಟು ಎಣ್ಣೆಯಂತಾದರೆ ನನಗೆ ತೃಪ್ತಿ’ ಎಂಬ ಮುನ್ನುಡಿಯ ಮಾತುಗಳು ಡಿವಿಜಿಯವರ ಆಶಯವೂ ಇದೇ ಆಗಿತ್ತು ಎಂಬುದನ್ನು ಸಾರಿ ಹೇಳುತ್ತವೆ.‘ಈಗ ಅನೇಕರು ಕಗ್ಗವನ್ನು ವೇದೋಪನಿಷತ್ತು, ಗೀತೆಗಳಂತೆ ಕಂಡು – ಅದಕ್ಕೆ ಭಾಷ್ಯ, ವ್ಯಾಖ್ಯಾನ ವಿವರಣೆ ಕೊಟ್ಟಿದ್ದಾರೆ. ಒಂದೊಂದು ಪದ್ಯವೂ ವೇದದ ಒಂದೊಂದು ಖುಕ್‌ ಇದ್ದಂತೆ ಎನ್ನುವರೂ ಇದ್ದಾರೆ’ ಎಂದು ಶಂಕರ್‌ ಉದ್ಗರಿಸಿದ್ದಾರೆ.

ಇದೇನು ಹೊಗಳಿಕೆಯೋ, ತೆಗಳಿಕೆಯೋ ಅಥವಾ ಅಸೂಯೆಯೋ ಅವರಿಗೇ ಗೊತ್ತಿರಬೇಕು. ಡಿವಿಜಿಯವರ ಮಾತಿನಲ್ಲೇ ಹೇಳುವುದಾದರೆ ಕಗ್ಗವು ‘ಜೀವನಧರ್ಮದ  ದರ್ಶನ’. ಈ ಕಾಣ್ಕೆ ತಮಗೆ ಕಂಡರೀತಿಯಲ್ಲಿ ಅವರು ಅದನ್ನು ‘ಕಗ್ಗದಂತೆ ಹೊಸೆದರು’. ಇದನ್ನು ನಾವು ನಮ್ಮದನ್ನಾಗಿ ಮಾಡಿಕೊಳ್ಳುವಾಗ ನಮ್ಮ, ಜೀವನನುಭವದ ಬೆಳಕು ಬೇಕು.

ಒಂದೇ ಕೃತಿಯು ಏಕಕಾಲಕ್ಕೆ ಅತ್ಯಂತ ಸರಳವೂ ಮತ್ತು ಅತಿ ಸಂಕೀರ್ಣವೂ ಆಗಿ ತೋರುವುದು ಅದರ ನೋಡುಗನ ದೃಷ್ಟಿಕೋನವನ್ನ ಅವಲಂಬಿಸಿರುತ್ತದೆ. ಕಗ್ಗವು ಜನಸಾಮಾನ್ಯನ ಜೀವನದ ಪ್ರತಿಫಲವಾಗಿರುವುದರಿಂದಲೇ ಅದಕ್ಕೆ ಇಷ್ಟೊಂದು ಜನಪ್ರೀತಿಯೂ, ಆಖ್ಯಾನ–ವ್ಯಾಖ್ಯಾನಗಳ ಮನ್ನಣೆಯೂ ದೊರೆತಿದೆ (ಜೈಮಿನಿ ಭಾರತ, ನಳ ಚರಿತ್ರೆಗಳು ಜನರ ನಾಲಿಗೆಯ ಮೇಲಿದೆ ಎಂದು ಶಂಕರ್‌ ಹೇಳುತ್ತಾರೆ, ಯಾವ ಕಾಲದಲ್ಲಿ ಎಂಬುದನ್ನು ಮಾತ್ರ ಮರೆಯುತ್ತಾರೆ!

ಸಾಹಿತ್ಯದ ಅಧ್ಯಾಪಕನಾಗಿ ನನಗೆ ಇಂತಹುದನ್ನು ಕಾಣುವ ಸುವರ್ಣಾವಕಾಶ ಈ ಕಾಲು ಶತಮಾನದಲ್ಲಿ ಬಂದಿಲ್ಲ!)

‘ಸ್ವೋಪಜ್ಞ ಎನ್ನುವ ಬರವಣಿಗೆ ಇಲ್ಲಿ ಇಲ್ಲವೇ ಇಲ್ಲ. ಡಿವಿಜಿಯವರದೇ ಎನ್ನಬಹುದಾದ ಒಂದೇ ಒಂದು ಸ್ವತಂತ್ರ ಆಲೋಚನೆಯೂ ಇಲ್ಲಿಲ್ಲ’ ಎಂಬುದು ಶಂಕರ್‌ ಆರೋಪ. ಈ ಮಾತಿಗೂ ಡಿವಿಜಿಯವರಲ್ಲೇ ಉತ್ತರವಿದೆ.ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ ।

ಅವನರಿವಿಗೆಟುಕುವ ವೊಲೊಂದಾತ್ಮನಯವ ।।

ಹವಣಿಸಿದನು ಪಾಮರ ಜನದ ಮಾತಿನಲಿ ।

ಕವನ ನೆನಪಿಗೆ ಸುಲಭ – ಮಂಕುತಿಮ್ಮ ।।

‘ನಾಹಂ ಕರ್ತಾ ಹರಿಃ ಕಾರ್ತಾ’, ‘ವೀರನಾರಾಯಣನೆ ಕವಿ ಲಿಪಿಕಾರ ಕುವರವ್ಯಾಸ’ ಎಂಬ ಪರಂಪರೆಯಲ್ಲಿ ಬಂದ ಡಿವಿಜಿಯವರ ರಚನೆಯಲ್ಲಿ ‘ಸ್ವೋಪಜ್ಞತೆ’, ‘ಸ್ವತಂತ್ರ ಆಲೋಚನೆ’ಗಳಾದರೂ ಪಾಪ, ಎಲ್ಲಿಂದ ಬರಬೇಕು? ಛೇ, ಕುವೆಂಪುರವರೂ ವರ್ಜಿಲ್‌, ಹೋಮರ್‌, ಡಾಂಟಿ, ನಾರಣಪ್ಪ, ಕಂಬ, ಕೃತ್ತಿವಾಸರಿಗೇ ಕ್ರೆಡಿಟ್ಟನ್ನೆಲ್ಲ ಕೊಟ್ಟುಬಿಟ್ಟಿದ್ದಾರಲ್ಲ? ಪೂರ್ವಸೂರಿಗಳನ್ನು ಗೌರವಿಸುವ ಇಂತಹವರನ್ನು ವಿರೋಧಿಸುವರಿಗೆಂದೇ ಹೊಸ ಬಗೆಯ ‘ವ್ಯಾನಿಟಿ ಬ್ಯಾಗ್‌’ ತಯಾರಿಸಿದರೆ ಭರ್ಜರಿ ಮಾರಾಟ ಗ್ಯಾರೆಂಟಿ!

–ಡಾ. ಎಸ್‌.ಎಲ್‌. ಶ್ರೀನಿವಾಸ ಮೂರ್ತಿ

*

ಭಾವಕ್ಕೆ ತಕ್ಕಂತೆ ‘ಮಂಕುತಿಮ್ಮ’

ಭರತನು ಪಾದುಕೆಯನ್ನು ಕೈಗೆತ್ತಿಕೊಂಡು ಧ್ಯಾನಿಸಿ ತನ್ನ ತಲೆಯ ಮೇಲಿಟ್ಟುಕೊಂಡಂತೆ, ಕುವೆಂಪು ಕಗ್ಗವನ್ನು ಕೈಗೆತ್ತಿಕೊಂಡು ಧ್ಯಾನಿಸಿ ತಮ್ಮ ತಲೆಯ ಮೇಲಿಟ್ಟುಕೊಂಡರು. ಶಂಕರ್‌ ಅವರು ಕಗ್ಗವನ್ನು ಕೈಗೆತ್ತಿಕೊಂಡು, ಧ್ಯಾನಿಸಲರಿಯದೆ ತಮ್ಮ ಕಾಲುಗಳಿಗೆ ಮೆಟ್ಟಿಕೊಂಡರು. ಅವರವರ ಭಾವಕ್ಕೆ, ಅವರವರ ದರುಶನಕ್ಕೆ ತಕ್ಕಂತೆ ಇರುತಿಹನು ಮಂಕುತಿಮ್ಮ. ಎಲ್‌. ಬಸವರಾಜು ಮಾರ್ಗದಲ್ಲಿ ಪದ ವಿಭಜನೆ ಮಾಡಿ, ಸರಳ ಕಗ್ಗವನ್ನು ಮುದ್ರಿಸುವ ಅಗತ್ಯವಿದೆ.

–ಚಂದ್ರಶೇಖರ ನಂಗಲಿ

*

ಹಸ್ತದಿಂದ ಮೇಲೇರದ ವ್ಯಾಖ್ಯಾನ

ಡಿ.ಎ. ಶಂಕರ್ ಅವರು ‘ಮಂಕುತಿಮ್ಮನ ಕಗ್ಗ’ದ ಜನಪ್ರಿಯತೆಯನ್ನು ವಿವೇಚಿಸುತ್ತ ‘ಆ ಕೃತಿ ಉಳಿದಿರುವುದು ಶಿಷ್ಟ ಓದುಗ ವರ್ಗದಿಂದ ಮಾತ್ರ. ಅನೇಕರಿಗೆ ಅದು ಒಂದು ರೀತಿಯ ಬೌದ್ಧಿಕ ವ್ಯಾನಿಟಿ ಬ್ಯಾಗ್, ಬೌದ್ಧಿಕ ಪೌರೋಹಿತ್ಯಕ್ಕೆ ಅನುಕೂಲಕರವಾದ ಒಣ ಸಮಿತ್ತು’ ಎಂದು ಅಭಿಪ್ರಾಯ ಪಟ್ಟಿರುವರು. ‘ನೀತಿ ಬೋಧಕ’ (ಡೈಡಾಕ್ಟಿಕ್) ಸಾಹಿತ್ಯ ಪ್ರಕಾರಕ್ಕೆ ಸೇರಿಸಬಹುದಾದ ಅವರ ಲೇಖನ ಸಾಹಿತ್ಯ ವಿಮರ್ಶೆ ಮತ್ತು ಸಾಹಿತ್ಯ ಚರಿತ್ರೆಗಷ್ಟೇ ಸೀಮಿತಗೊಂಡಿರುವ ಕಾರಣ ಶ್ರೀಯುತರಿಗೆ ಹಾಗೆನ್ನಿಸುವುದು ಸಹಜ.

ಅಧ್ಯಾತ್ಮ, ಪುರಾಣ, ಸಂಸ್ಕೃತಿ, ಸಮಾಜ ಮುಂತಾದ ನಾನಾ ಜ್ಞಾನಶಾಖೆಗಳನ್ನು ಒಳಗೊಂಡಿರುವ ಕಗ್ಗವನ್ನು ಸಾಹಿತ್ಯಿಕ ದೃಷ್ಟಿಯಿಂದಷ್ಟೇ ಕಂಡು ತೀರ್ಮಾನಿಸಲು ಹೊರಡುವ ವಿಮರ್ಶಕ ಆ ಕೃತಿಯ ಬೇರೆ ಹಲವು ಮುಖಗಳಿಗೆ ಕುರುಡನಾಗಲೇಬೇಕಾಗುತ್ತದೆ.ಬಹು ಹಿಂದೆ ಕುವೆಂಪು ಸಹ ಹೀಗೆಯೇ ಯೋಚಿಸಿದ್ದರೆನಿಸುತ್ತದೆ. ಮಂಕುತಿಮ್ಮನ ಕಗ್ಗದಂತೆಯೇ ದ್ವಿತೀಯ ಪ್ರಾಸದ, ನಾಲ್ಕು ಗಣ ಮತ್ತು ನಾಲ್ಕು ಸಾಲುಗಳ ಛಂದೋಬಂಧದಲ್ಲಿ ಕುವೆಂಪು ಕಗ್ಗಕ್ಕೆ ಪ್ರತಿಕ್ರಿಯಿಸಿ ಹಾಡಿರುವ ಜನಪ್ರಿಯ ಸಾಲುಗಳು ಹೀಗಿವೆ:ಹಸ್ತಕ್ಕೆ ಬರಿ ನಕ್ಕೆ ಓದುತ್ತ ಓದುತ್ತ

ಮಸ್ತಕಕ್ಕಿಟ್ಟು ಗಂಭೀರನಾದೆ  ।

ವಿಸ್ತರದ ದರುಶನಕೆ ತುತ್ತತುದಿಯಲಿ ನಿನ್ನ

ಪುಸ್ತಕಕೆ ಕೈಮುಗಿದೆ ಮಂಕುತಿಮ್ಮ  ।।
ಶಂಕರ್‌ ಅವರ ಲೇಖನ ಈ ಮೇಲಿನ ಕವಿತೆಯ ಮೊದಲ ಸಾಲಿಗೆ ಬರೆದ ವಿಸ್ತಾರವಾದ ವ್ಯಾಖ್ಯಾನದಂತಿದೆ. ಆದರೆ ಅವರ ವಿಮರ್ಶೆ ಆ ಮೊದಲ ಸಾಲಿನ ವ್ಯಾಖ್ಯಾನದೊಂದಿಗೇ ಪರಿಸಮಾಪ್ತಿಯಾಗಿರುವುದು ವಿಷಾದನೀಯ. ಆ ಬರಹ ಇನ್ನೂ ಮುಂದುವರಿದು ಉಳಿದ ಮೂರು ಸಾಲುಗಳ ವ್ಯಾಖ್ಯಾನವನ್ನೂ ಒಳಗೊಂಡು ಒಂದು ಸಮಗ್ರ ವಿಮರ್ಶಾ ಲೇಖನದ ರೂಪ ತಾಳಿದ್ದರೆ ಆಗ ಅದು ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು.ಶ್ರೀಯುತರು ಡಿವಿಜಿ ಅವರದೇ ಎನ್ನಬಹುದಾದ ಒಂದೇ ಒಂದು ಸ್ವತಂತ್ರ ಆಲೋಚನೆಯೂ ಇಲ್ಲಿ ಇಲ್ಲ. ಬಹುಪಾಲು ಪದ್ಯಗಳು ವೇದೋಪನಿಷತ್ತುಗಳ, ಗೀತೆಯ, ವಿಸ್ತಾರ ಓದಿನಿಂದ ಎರವು ಪಡೆದುಕೊಂಡವು ಎಂದಿದ್ದಾರೆ. ಕಗ್ಗದ ನಿರೂಪಕ ಒಬ್ಬ ಸಾಧಕನ ನೆಲೆಯಲ್ಲಿ ಕೃತಿರಚನೆ ಮಾಡಿರುವ ಕಾರಣ, ಶಾಸ್ತ್ರ ಪ್ರಾಮಾಣ್ಯವನ್ನು ಅಲಕ್ಷಿಸಿ ಅವನು ಏನನ್ನೂ ನುಡಿಯಲಾರ.

ಶಾಸ್ತ್ರ ಪ್ರಾಮಾಣ್ಯವನ್ನು ಸಾರಾಸಗಟಾಗಿ ನಿರ್ಲಕ್ಷಿಸಿ ಸ್ವತಂತ್ರವಾಗಿ ವಿಶಿಷ್ಟ ಒಳನೋಟಗಳನ್ನು ನೀಡಿರುವ ಬುದ್ಧ, ನಾಗಾರ್ಜುನ, ಅಲ್ಲಮ ಮುಂತಾದವರ ಸಾಹಿತ್ಯದ (ಬೋಧನೆಗಳ) ಪರಿಚಯವಿರುವವರಿಗೆ ಸಹಜವಾಗಿಯೆ ಇಲ್ಲಿ ಸ್ವೋಪಜ್ಞ ಎನ್ನುವ ಬರವಣಿಗೆ ಕಾಣಿಸದಿರಬಹುದು. ಆದರೆ ಬಹುಸಂಖ್ಯಾತ ಓದುಗರು, ಜಿಜ್ಞಾಸುಗಳು ಶಾಸ್ತ್ರ ಪ್ರಮಾಣಕ್ಕೆ ನೀಡುವ ಮಾನ್ಯತೆಯನ್ನು ವ್ಯಕ್ತಿಯ ಅಂತರಂಗದ ಒಳನೋಟಕ್ಕೆ ನೀಡಲಾರರು ಎಂಬುದನ್ನು ನಾವು ನೆನಪಿಡಬೇಕು.ಸ್ವಾಮಿ ವಿವೇಕಾನಂದ, ಶ್ರೀರಾಮಕೃಷ್ಣರ ಅಂತರಂಗದ ಅರಿವನ್ನೇ ಬಹಿರಂಗದಲ್ಲಿ ಎಲ್ಲರಿಗೂ ತಲುಪಿಸುತ್ತಿದ್ದ ಒಬ್ಬ ಪ್ರಚಾರಕರಾಗಿದ್ದರು. ತಾನು ಅವರ ಪರಿಚಾರಕನೆಂದು ಸ್ವತಃ ವಿವೇಕಾನಂದರೇ ಹೇಳಿಕೊಂಡಿದ್ದಾರೆ. ಇಂದು ವಿವೇಕಾನಂದರನ್ನು ತಲೆಮೇಲೆ ಹೊತ್ತು ಮೆರೆಸುವ ಕೋಟ್ಯಂತರ ಮಂದಿಗೆ ಇದು ಅರ್ಥವಾಗುತ್ತಿಲ್ಲ.

ವಿವೇಕಾನಂದ ತನ್ನ ಗುರುವಿನ ಭಾವಸಮಾಧಿಯನ್ನು ವೇದೋಪನಿಷತ್ತುಗಳ ಹಿನ್ನೆಲೆಯಲ್ಲಿ ಅದ್ಭುತವಾಗಿ ವಿದ್ವತ್ಪೂರ್ಣವಾಗಿ ಪ್ರಚಾರ ಮಾಡದೆ ಹೋಗಿದ್ದರೆ ಶಾಸ್ತ್ರಪ್ರಮಾಣವನ್ನು ಸದಾ ಲೇವಡಿ ಮಾಡುತ್ತಿದ್ದ ಶ್ರೀರಾಮಕೃಷ್ಣರ ಹಿರಿಮೆ ದಕ್ಷಿಣೇಶ್ವರದಿಂದ ಆಚೆಗೆ ಪಸರಿಸುತ್ತಲೇ ಇರಲಿಲ್ಲವೇನೋ.

ಇದನ್ನು ಮನಗಂಡೇ ಬಹುಶಃ ಡಿವಿಜಿ ತಮ್ಮ ಒಳನೋಟಗಳಿಗೆ ಶಾಸ್ತ್ರಪ್ರಮಾಣವೆಂಬ ಲೇಪನ ಅಥವಾ ಸುವರ್ಣ ಚೌಕಟ್ಟು ನೀಡಿರಬಹುದು. ಕಗ್ಗವೊಂದೇ ಅಲ್ಲ, ಅವರ ಒಟ್ಟು ಬರವಣಿಗೆ ಶಾಸ್ತ್ರಪ್ರಮಾಣದ ನೆರವಿಲ್ಲದೆ ವಿಷಯವನ್ನು ನೇರವಾಗಿ ಸರಳವಾಗಿ ನಿರೂಪಿಸುವ ಧಾಟಿಯದ್ದಲ್ಲ ಎಂಬುದನ್ನು ನಾವು ಗಮನಿಸಬೇಕಾಗುತ್ತದೆ.

ಲೇಖಕರು ತಮ್ಮ ಲೇಖನದಲ್ಲಿ ಬಳಸಿರುವ ಶಿಷ್ಟ ಓದುಗ ವರ್ಗ, ಬೌದ್ಧಿಕ ಪೌರೋಹಿತ್ಯ, ಒಣಸಮಿತ್ತು, ಮುಂತಾದ ಪದಗಳು ಒಂದು ನಿರ್ದಿಷ್ಟ ಜಾತಿವರ್ಗವನ್ನು ಪರೋಕ್ಷವಾಗಿ ನಿರ್ದೇಶಿಸುತ್ತಿವೆ ಎಂಬ ಅಂಶವನ್ನೇನೂ ಮರೆಮಾಚಬೇಕಾದ ಅವಶ್ಯಕತೆ ಇಲ್ಲ. ಸಾಮಾಜಿಕ ಕಳಕಳಿಯುಳ್ಳ ಯಾವ ಲೇಖಕನೂ ನಮ್ಮ ನಡುವಿನ ಜಾತೀಯತೆ, ತಾರತಮ್ಯ ಮುಂತಾದ ರೋಗಗಳನ್ನು ಅಥವಾ ವಾಸ್ತವಗಳನ್ನು ಮರೆಗೆ ಸರಿಸಿ ಏನನ್ನೂ ನುಡಿಯಲಾರ.

ಇಷ್ಟು ಕಾಲ ವೇದಗಳನ್ನು ಕೇಳಿಸಿಕೊಳ್ಳುವ ಶೂದ್ರರ ಕಿವಿಗೆ ಕಾದ ಸೀಸ ಸುರಿಯಬೇಕು, ಪಶುಗಳನ್ನು, ಗೋವುಗಳನ್ನು, ಸ್ತ್ರೀ–ಶೂದ್ರಾದಿಗಳನ್ನು ಸದಾ ಹದ್ದುಬಸ್ತಿನಲ್ಲಿ ಇರಿಸಿಕೊಳ್ಳಬೇಕು ಎಂದೆಲ್ಲ ಬೋಧಿಸುತ್ತಿದ್ದ ಶಾಸ್ತ್ರಗ್ರಂಥಗಳನ್ನು ಪೂಜಿಸುತ್ತಿದ್ದ ಆ ನಿರ್ದಿಷ್ಟ ವರ್ಗ ಅಂತಹ ಗ್ರಂಥಗಳನ್ನು ಪಕ್ಕಕ್ಕಿಟ್ಟು ‘ಮಂಕುತಿಮ್ಮನ ಕಗ್ಗ’ವನ್ನು ಕೈಗೆತ್ತಿಕೊಳ್ಳುವಂತೆ ಮಾಡಿದ್ದು ಒಂದು ಸುಧಾರಣೆಯಲ್ಲವೇ? ಮೇಲ್ವರ್ಗದ ನೂರಾರು ಮನಸ್ಸುಗಳು ಕಗ್ಗದ ವಿವೇಕಕ್ಕೆ ಮನಸೋತು ಕಂದಾಚಾರದ ಗ್ರಂಥಗಳ ಪ್ರಭಾವದಿಂದ ಒಂದಿಷ್ಟಾದರೂ ಹೊರಬಂದಿದ್ದರೆ ಅದನ್ನೊಂದು ಸಾಧನೆ ಎನ್ನಬೇಕಲ್ಲವೇ?

‘ಒಬ್ಬ ಸಾಹಿತ್ಯದ ವಿದ್ಯಾರ್ಥಿ ತನಗರಿವಿಲ್ಲದೆಯೆ ಜಾತ್ಯತೀತನಾಗಿಬಿಡುವನು’ ಎಂದು ಕಿ.ರಂ. ನಾಗರಾಜ ಆಗಾಗ ಹೇಳುತ್ತಿದ್ದರು. ಹಾಗೆ ನೋಡಿದರೆ ಬಸವಣ್ಣನ ವಚನಗಳನ್ನು ಅರಿತವನಿಗೆ ಜಾತಿ ಎಲ್ಲಾದರೂ ಉಳಿದಿರುವುದೇ ಅಥವಾ ‘ಅವಿದ್ಯೆಯನ್ನು ಪೂಜಿಸುವವನು ಕತ್ತಲೆಯಲ್ಲಿ ಬದುಕಿದರೆ, ವಿದ್ಯೆಯನ್ನು ಪೂಜಿಸುವವನು ಇನ್ನೂ ಹೆಚ್ಚಿನ ಗಾಢಾಂಧಕಾರದಲ್ಲಿ ನವೆಯುವನು’ ಎಂಬ ಉಪನಿಷದ್ವಾಣಿಯನ್ನು ಕೇಳಿದ ಮೇಲೂ ಒಬ್ಬ ಬ್ರಾಹ್ಮಣನ ಜಾತಿ ಮದ ಮತ್ತು ಜಾತಿ ಮೋಹಗಳು ನಿರಸನವಾಗದಿದ್ದರೆ ಅವನಿಗೆ ಆ ಮಂತ್ರದ ಅರ್ಥಸಿದ್ಧಿಯಾಗಿಲ್ಲ, ಕೇವಲ ಒಂದು ಗಿಳಿಯಂತೆ ಅದನ್ನು ಓದುತ್ತಿದ್ದ, ಎಂದೇ ತೀರ್ಮಾನಿಸಬೇಕಾಗುತ್ತದೆ.

ಮನುಷ್ಯ ತನ್ನ ದುಷ್ಟತನ, ಸಣ್ಣತನ ಮತ್ತು ಜಾತೀಯತೆಗಳಿಂದ ಹೊರಬರಲು ನೆರವಾಗಬಲ್ಲ ಇಂತಹ ವಿವೇಕದ ನುಡಿಗಳನ್ನಷ್ಟೇ ಡಿವಿಜಿ ತಮ್ಮ ಕಗ್ಗದಲ್ಲಿ ಪ್ರತಿಧ್ವನಿಸುವ ಕೆಲಸ ಮಾಡಿದ್ದರು ಎಂಬುದನ್ನು ವಿವರಿಸಿ ತಿಳಿಸಬೇಕಾದ ಅವಶ್ಯಕತೆಯಿಲ್ಲ.ಕೆಲವು ಪ್ರಕಾಶಕರು ಬರಹಗಾರರಿಗೆ ‘ನಿಮ್ಮ ಕತೆ, ಕವನಗಳನ್ನು ಯಾರೂ ಓದುವುದಿಲ್ಲ. ಸ್ಕಿಲ್ ಡೆವಲಪ್‌ಮೆಂಟ್, ಪರ್ಸನಾಲಿಟಿ ಇಂಪ್ರೂವ್‌ಮೆಂಟ್, ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಮುಂತಾದ ವಿಷಯಗಳ ಮೇಲೆ ಪುಸ್ತಕ ಬರೆಯಿರಿ, ಪ್ರಕಟಿಸುತ್ತೇವೆ, ಅವು ಸುಲಭವಾಗಿ ಬಿಕರಿಯಾಗುತ್ತವೆ’ ಎಂದು ಉಚಿತವಾಗಿ ಸಲಹೆ ನೀಡುವುದನ್ನು ನಾನು ಬಹಳಷ್ಟು ಸಲ ಕಂಡಿದ್ದೇನೆ.

ಆ ತರಹದ ಪುಸ್ತಕಗಳನ್ನು ಓದುವ ವರ್ಗ ಯಾವುದು, ಯಾವ ಜಾತಿಯದ್ದು? ‘ಮಂಕುತಿಮ್ಮನ ಕಗ್ಗ’ದಲ್ಲಿ ಈ ಕೌಶಲ್ಯ ಅಭಿವೃದ್ಧಿ, ವ್ಯಕ್ತಿತ್ವ ವಿಕಸನ, ಒತ್ತಡದ ನಿರ್ವಹಣೆ ಮುಂತಾದ ವಿಷಯಗಳ ಮೂಲಧಾತುಗಳು ಹುದುಗಿವೆ. ಅಂದಮೇಲೆ ಅದರ ಜನಪ್ರಿಯತೆ ಹೆಚ್ಚಲು ಜಾತಿಮೋಹಕ್ಕಿಂತ ಮಿಗಿಲಾಗಿ ಆಧುನಿಕ ಬದುಕಿನ ಪಲ್ಲಟಗಳು ಮತ್ತು ಜೀವನಶೈಲಿಗಳೂ ಕಾರಣವಾಗಿರಬಹುದು. ಆದ್ದರಿಂದ ಸಿದ್ಧ ಮಾನದಂಡಗಳನ್ನು ಅನಾಮತ್ತಾಗಿ ತೆಗೆದುಕೊಂಡು ಓದುಗರನ್ನು ಜಾತಿವಾರು ವಿಂಗಡಿಸುವ ಕೆಲಸ ಎಷ್ಟೋ ಸಲ ದಾರಿ ತಪ್ಪಿಸುತ್ತದೆ.ಇನ್ನು ಡಿವಿಜಿಯವರ ಭಾಷಾಶೈಲಿಯ ಪ್ರಶ್ನೆ: ಇದು ಬರೀ ಕಗ್ಗದ ಸಮಸ್ಯೆಯಲ್ಲ, ಒಟ್ಟು ಕನ್ನಡ ಸಾಹಿತ್ಯ ಪರಂಪರೆಯ ಸಮಸ್ಯೆಯಾಗಿದೆ. ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು’ ಎಂಬ ಸರಳವಾದ ಸಾಲುಗಳಿಗೆ ಸಾಕ್ಷಿಯಾಗಿದ್ದ ನಮ್ಮ ಪರಂಪರೆ ತರುವಾಯ, ‘ವೇದ ಪುರುಷನ ಸುತನ ಸುತನ ಸಹೋದರನ ಹೆಮ್ಮಗನ ಮಗನ ತಳೋದರಿಯ ಮಾತುಳನ ರೂಪನನತುಳ ಭುಜಬಲದಿ...’ ಎಂಬ ಜಟಿಲವಾದ ಪ್ರಯೋಗಗಳನ್ನು, ಮುಂಡಿಗೆಗಳನ್ನು ಕಂಡಿದೆ. ಒಬ್ಬನೇ ಹರಿಹರ ರಗಳೆಯ ಛಂದಸ್ಸಿನಲ್ಲಿ ಸರಳವಾದ ಸಾಲುಗಳನ್ನೂ ಹಾಗೆಯೇ ತನ್ನ ಚಂಪೂಕಾವ್ಯದಲ್ಲಿ ಒಡಪಿನಂತಹ ಕ್ಲಿಷ್ಟ ಸಾಲುಗಳನ್ನೂ ರಚನೆ ಮಾಡಿರುವನು.ಕಗ್ಗದಲ್ಲಿ ಕಂಡುಬರುವ ಭಾಷಾಶೈಲಿ ನವೋದಯ ಕಾಲದ ಬಹುತೇಕ ಎಲ್ಲ ಕವಿಗಳೂ ಒಪ್ಪಿದ್ದ ಮತ್ತು ಅಳವಡಿಸಿಕೊಂಡಿದ್ದ ಶೈಲಿ. ತನ್ನ ಸಾಹಿತ್ಯದ ವಸ್ತುನಿರ್ವಹಣೆಗೆ ಒಂದು ನಿರ್ದಿಷ್ಟವಾದ ಅಥವಾ ಒಂದು ವಿಲಕ್ಷಣವಾದ ಶೈಲಿ ಅತ್ಯಗತ್ಯ ಎಂದು ಕವಿಗೆ ಅನ್ನಿಸಿರಬಹುದು ಅಥವಾ ಖಯಾಲಿಗೂ ಹಾಗೆ ಪ್ರಯೋಗಿಸಿರಬಹುದು. ತಾನು ಹಳೆಯ ವಿಚಾರಗಳನ್ನೇ ಪುನರುಚ್ಚರಿಸುತ್ತಿರುವ ಕಾರಣ ಹಳೆಯ ಶೈಲಿಯೇ ಸೂಕ್ತವೆಂದು ಕವಿಗೆ ತೋರಿರಬಹುದು.

ಅಷ್ಟಕ್ಕೂ ಹೊಸದಾಗಿ ಹೇಳಲು ಏನು ತಾನೇ ಉಳಿದಿದೆ? ಬೇಂದ್ರೆ ತಮ್ಮ ಒಂದು ಪದ್ಯದಲ್ಲಿ ‘ಹಳೆಯದನ್ನೆ ಮತ್ತೆ ಮತ್ತೆ ಹೊಸಯಿಸಿ ನೀ ಹೇಳುವೆ’ (’ಜಿಜ್ಞಾಸೆ’, ‘ಗಂಗಾವತರಣ’) ಎಂದು ಹಾಡಿರುವರು. ಆದ್ದರಿಂದ ಇಂತಹ ಪ್ರಯೋಗಗಳನ್ನು ಆಕ್ಷೇಪಾರ್ಹವೆಂದು ಏಕಾಏಕಿ ತೀರ್ಮಾನಿಸಲು ಬರುವುದಿಲ್ಲ.

ಇಂದಿನ ಹೊಸಕಾಲದಲ್ಲೂ ನಮ್ಮ ಸಾಹಿತಿಗಳಲ್ಲಿ ಸರ್ವಮಾನ್ಯವಾದ ಭಾಷಾ ಪ್ರಯೋಗವೇನೂ ಕಾಣಿಸುತ್ತಿಲ್ಲ. ದೇವನೂರರ ‘ಕುಸುಮಬಾಲೆ’ಯನ್ನು ಯಾರಾದರೂ ಕನ್ನಡಕ್ಕೆ ಅನುವಾದಿಸಿ ಕೊಡಬೇಕಾಗಿದೆ ಎಂಬ ಮಾತು (ಈ ಮಾತು ಮೊದಲಿಗೆ ಯಾರು ನುಡಿದರೋ ನನಗೆ ತಿಳಿಯದು) ಸಾಹಿತ್ಯ ವಲಯದಲ್ಲಿ ಒಂದು ಜನಜನಿತವಾದ ನುಡಿಗಟ್ಟಾಗಿ ಹೋಗಿದೆ.

ಇಂದು ಕಗ್ಗಕ್ಕೆ ಕೈಪಿಡಿ, ವ್ಯಾಖ್ಯಾನಗಳು ಪ್ರಕಟವಾಗುತ್ತಿರುವ ಹಾಗೆ ನಾಳೆ ‘ಕುಸುಮಬಾಲೆ’ಗೂ ಕೈಪಿಡಿ, ಟಿಪ್ಪಣಿ, ಪ್ರಾಯೋಗಿಕ ವಿಮರ್ಶೆಗಳು ಬಂದರೆ ಆಶ್ಚರ್ಯವೇನೂ ಪಡಬೇಕಾಗಿಲ್ಲ. ಹಾಕಿಕೊಡಬೇಕಾದ ಮೇಲ್ಪಂಕ್ತಿಯನ್ನೆಲ್ಲ ಈಗಾಗಲೇ ಹಾಕಿಕೊಟ್ಟಾಗಿದೆ, ಮುಂಬರುವ ದಿನಗಳೇನಿದ್ದರೂ ವ್ಯಾಖ್ಯಾನ, ಮರುವ್ಯಾಖ್ಯಾನಗಳ ಯುಗವಾಗಲಿದೆ.ಮೊನ್ನೆ ದಿವಸ ಪುಸ್ತಕ ಮಳಿಗೆಯ ಮಾಲೀಕರಾದ ನನ್ನ ಸ್ನೇಹಿತರೊಬ್ಬರು ‘ಕಗ್ಗದ ಪ್ರತಿಗಳು ಹಾಗೇ ಇವೆ, ಕಗ್ಗದ ಮೇಲಿನ ವ್ಯಾಖ್ಯಾನಗಳೇ ಹೆಚ್ಚಾಗಿ ಖರ್ಚಾಗುತ್ತಿವೆ, ಎಲ್ಲರೂ ವ್ಯಾಖ್ಯಾನವನ್ನೇ ಕೇಳುತ್ತಿದ್ದಾರೆ’ ಎಂದು ಹೇಳಿದರಲ್ಲದೆ, ಗೋದಾಮಿಗೂ ಕರೆದುಕೊಂಡು ಹೋಗಿ ತೋರಿಸಿದರು. ಒಳಹೊಕ್ಕು ನೋಡಿದಾಗ ಪೇರಿಸಿ ಇರಿಸಲಾಗಿದ್ದ ಕಗ್ಗದ ಪ್ರತಿಗಳ ಮೇಲೆ ಒಂದಿಂಚು ದೂಳು ಕೂತಿದ್ದುದು ಕಂಡು ಬೇಸರವಾಯಿತು. 

–ಡಾ. ಟಿ.ಎನ್. ವಾಸುದೇವಮೂರ್ತಿ, ಬೆಂಗಳೂರು

*

ಈ ಟಿಪ್ಪಣಿಗಳೊಂದಿಗೆ ‘ಮಂಕುತಿಮ್ಮನ ಕಗ್ಗ’ದ ಕುರಿತಾದ ಚರ್ಚೆ ಕೊನೆಗೊಳ್ಳುತ್ತಿದೆ.

–ಸಂ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.