ದೊಡ್ಡ ನಕ್ಷತ್ರ ಕಬಳಿಸುತ್ತಿರುವ ಪುಟ್ಟ ತಾರೆ

7
ಇಸ್ರೊದ ಆಸ್ಟ್ರೊಸ್ಯಾಟ್‌ ಖಗೋಳ ವೀಕ್ಷಕ ಟೆಲಿಸ್ಕೋಪ್‌ನಿಂದ ಪತ್ತೆ

ದೊಡ್ಡ ನಕ್ಷತ್ರ ಕಬಳಿಸುತ್ತಿರುವ ಪುಟ್ಟ ತಾರೆ

Published:
Updated:
ದೊಡ್ಡ ನಕ್ಷತ್ರ ಕಬಳಿಸುತ್ತಿರುವ ಪುಟ್ಟ ತಾರೆ

ಬೆಂಗಳೂರು: ದೊಡ್ಡ ಮೀನು ಸಣ್ಣ ಮೀನುಗಳನ್ನು ನುಂಗುವುದನ್ನು ನೋಡಿದ್ದೇವೆ. ಆದರೆ, ಪುಟ್ಟ ನಕ್ಷತ್ರವೊಂದು ಬೃಹತ್‌ ನಕ್ಷತ್ರವನ್ನು ನುಂಗುತ್ತಿರುವ ವಿದ್ಯಮಾನ ಗೊತ್ತೆ? ಹೌದು, ಹಲವು ಜ್ಯೋತಿ­ವರ್ಷಗಳಷ್ಟು ದೂರದಲ್ಲಿ ನಡೆ­ಯುತ್ತಿರುವ ಈ ವಿದ್ಯಮಾನವನ್ನು ಭಾರತದ ‘ಬ್ರಹ್ಮಾಂಡದ ಕಣ್ಣು’ ಎಂದೇ ಖ್ಯಾತಿ ಪಡೆದಿರುವ ಇಸ್ರೊದ ಆಸ್ಟ್ರೊಸ್ಯಾಟ್‌ ಖಗೋಳ ವೀಕ್ಷಕ ಟೆಲಿಸ್ಕೋಪ್‌ ಪತ್ತೆ ಮಾಡಿದೆ.ಚಿಕ್ಕ ನಕ್ಷತ್ರಕ್ಕೆ ಆಹಾರವಾಗುತ್ತಿರುವ ದೊಡ್ಡ  ನಕ್ಷತ್ರದ ಇರುವಿಕೆಯನ್ನು ಮೊದಲ ಬಾರಿಗೆ ಪತ್ತೆ ಮಾಡಿರುವ ಕೀರ್ತಿ ಬೆಂಗಳೂರಿನ ವಿಜ್ಞಾನಿಗಳಿಗೆ ಸಲ್ಲುತ್ತದೆ. ‘ಪರಸ್ಪರ ಗುರುತ್ವಾಕರ್ಷಣಾ ಬಲದಿಂದ ಪರಿಭ್ರಮಣ ನಡೆಸುತ್ತಿರುವ ಈ ಅವಳಿ ನಕ್ಷತ್ರಗಳು ತಾರಾಪುಂಜ ಎನ್‌ಜಿಸಿ 188 ಸಮೀಪದಲ್ಲಿವೆ’

ಎಂದು ಭಾರತೀಯ ಖಭೌತ ಸಂಸ್ಥೆಯ ವಿಜ್ಞಾನಿ ಪ್ರೊ. ಅನ್ನಪೂರ್ಣ ಸುಬ್ರಹ್ಮಣ್ಯಂ ಹೇಳಿದ್ದಾರೆ.ನಕ್ಷತ್ರಮಂಡಲದಲ್ಲಿ  ಅವಳಿ ನಕ್ಷತ್ರಗಳಿರುವುದು ಅದ್ವಿತೀಯ ಸಂಗತಿ. ಬ್ಲೂಸ್ಟ್ರಾಗ್ಲರ್‌ ಅಥವಾ ವ್ಯಾಂಪಾಯರ್‌ ಸ್ಟಾರ್‌ ಎಂದು ಕರೆಯಲಾಗುವ ಸಣ್ಣ ನಕ್ಷತ್ರಕ್ಕೆ ಈ ಹೆಸರು ಬರಲು ಕಾರಣ, ದೊಡ್ಡ ನಕ್ಷತ್ರವನ್ನು ಆಪೋಶನ ತೆಗೆದುಕೊಳ್ಳುತ್ತಿರುವುದು. ಸರಳವಾಗಿ ಹೇಳುವುದಾದರೆ ರಕ್ತ ಪಿಶಾಚಿ (vampire)ಎಂಬ ಅರ್ಥವೂ ಇದಕ್ಕೆ ಬರುತ್ತದೆ ಎಂದಿದ್ದಾರೆ.‘ತೀರಾ ಇತ್ತೀಚಿನವರೆಗೆ ಸಣ್ಣ ನಕ್ಷತ್ರವು ದೊಡ್ಡ ನಕ್ಷತ್ರವನ್ನು ಆಪೋಶನ ತೆಗೆದುಕೊಳ್ಳುತ್ತಲೇ ಇತ್ತು. ಬ್ಲೂಸ್ಟ್ರಾಗ್ಲರ್‌ ಯೌವನಾವಸ್ಥೆಯಲ್ಲಿ ಇರುವಂತೆ ತೋರಿ ಬರುತ್ತದೆ. ನಕ್ಷತ್ರಗಳ ವಿಕಾಸವನ್ನು ಅರ್ಥೈಸಿಕೊಳ್ಳುವಲ್ಲಿ ನಮ್ಮ ಈ ಅಧ್ಯಯನ ಮಹತ್ವವಾದುದು. ಅವಳಿ ನಕ್ಷತ್ರ ವ್ಯವಸ್ಥೆಯಲ್ಲಿ ಸಣ್ಣ  ನಕ್ಷತ್ರ ದೊಡ್ಡ ನಕ್ಷತ್ರದ ಹೊರ ಆವರಣದ ಪದಾರ್ಥಗಳನ್ನು ನುಂಗಲಾರಂಭಿಸುತ್ತದೆ. ಕ್ರಮೇಣ ಚಿಕ್ಕ ನಕ್ಷತ್ರವು ಬ್ಲೂಸ್ಟ್ರಾಗ್ಲರ್‌ ಆಗಿ ಪರಿವರ್ತನೆಗೊಳ್ಳುತ್ತದೆ’ ಎನ್ನುತ್ತಾರೆ ಸುಬ್ರಹ್ಮಣ್ಯಂ.ದೊಡ್ಡದ್ದನ್ನು ನುಂಗುತ್ತಾ ಹೋಗುವ ಸಣ್ಣ ನಕ್ಷತ್ರ ತನ್ನ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತಾ ಹೋಗುತ್ತದೆ. ಸೂರ್ಯನಂತೆ ಸುಡುತ್ತಿರುತ್ತದೆ ಮತ್ತು ನೀಲ ವರ್ಣಕ್ಕೆ ತಿರುಗುತ್ತದೆ. ಇದರಿಂದ  ಸಣ್ಣ ನಕ್ಷತ್ರವು ತಾರುಣ್ಯಾ­ವಸ್ಥೆಯಲ್ಲಿರುವಂತೆ ತೋರಿ ಬರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ದೊಡ್ಡ ನಕ್ಷತ್ರವು ಸುಡುತ್ತಾ, ನಾಶಕ್ಕೆ ಒಳಗಾಗುತ್ತಾ ಅವಶೇಷವಾಗಿ ಉಳಿಯುತ್ತದೆ ಎನ್ನುತ್ತಾರೆ ಅವರು.ಈ ಸಂಶೋಧನೆಯ ವಿಶೇಷವೆಂದರೆ, ಬ್ಲೂಸ್ಟ್ರಾಗ್ಲರ್‌ಗೆ ಸಂಗಾತಿ ನಕ್ಷತ್ರ ಇರುವಿಕೆಯ ಪತ್ತೆ ಆಗಿರುವುದು ಇದೇ ಮೊದಲು. ಕಬಳಿಕೆಗೆ ಒಳಗಾಗಿಯೂ ಇನ್ನೂ ಅವಶೇಷದ ಹಂತವನ್ನು ದೊಡ್ಡ ನಕ್ಷತ್ರ ತಲುಪಿಲ್ಲ. ಅಧಿಕ ಸುಡುವಿಕೆ ಮತ್ತು ವಿಶಾಲತೆಯ ಹರವನ್ನು ಹೊಂದಿದೆ. ಪ್ರಖರ ಹೊಳಪನ್ನೂ

ಇದು ಉಳಿಸಿಕೊಂಡಿದೆ. ಆದರೆ, ಆಸ್ಟ್ರೊಸ್ಯಾಟ್‌ ಆಪ್ಟಿಕಲ್‌ ಟೆಲಿಸ್ಕೋಪ್‌ ಸೆರೆ ಹಿಡಿದಿರುವ ಚಿತ್ರದಲ್ಲಿ ನಕ್ಷತ್ರ ಹೊಳೆಯುವಿಕೆ ಅಷ್ಟು ಪ್ರಖರವಾಗಿ ಕಾಣುವುದಿಲ್ಲ.ಈ ಹಿಂದಿನ ಅಧ್ಯಯನದಲ್ಲಿ ಬ್ಲೂಸ್ಟ್ರಾಗ್ಲರ್‌ನ ಸಂಗಾತಿ ನಕ್ಷತ್ರವನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ಅಧ್ಯಯನದಿಂದಾಗಿ ಬ್ಲೂಸ್ಟ್ರಾಂಗರ್‌ ನಕ್ಷತ್ರಗಳ ರಚನೆಯ ಕಾರಣಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲು ಸಾಧ್ಯ ಎಂಬ ಅಭಿಪ್ರಾಯ ಸುಬ್ರಹ್ಮಣ್ಯ ಅವರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry