7
ವಿಮರ್ಶೆ

ಸಾರ್ಥಕ–ಸಮಗ್ರ ಅಧ್ಯಯನ

Published:
Updated:
ಸಾರ್ಥಕ–ಸಮಗ್ರ ಅಧ್ಯಯನ

ದೊಡ್ಡಬಳ್ಳಾಪುರ ಚಾರಿತ್ರಿಕ ಅಧ್ಯಯನ

ಲೇ:
ಡಾ. ಎಸ್. ವೆಂಕಟೇಶ್

ಪ್ರ: ದೃಶ್ಯ ಪ್ರಕಾಶನ, ದೊಡ್ಡಬಳ್ಳಾಪುರಡಾ. ಎಚ್.ಎಸ್. ಗೋಪಾಲ ರಾವ್

***

ಒಂದು ಸೀಮಿತ ಪ್ರದೇಶದ ಚಾರಿತ್ರಿಕ ಅಧ್ಯಯನವೆಂದಾಗ ಅದಕ್ಕೆ ಯಾವುದೇ ನಿರ್ದಿಷ್ಟ ಕಾಲಘಟ್ಟದ ಮಿತಿಯನ್ನು ಹಾಕಿಕೊಳ್ಳಲಾಗುವುದಿಲ್ಲ. ಪ್ರಾಗಿತಿಹಾಸ ಕಾಲದಿಂದ ಆರಂಭಿಸಿ, ಆಧುನಿಕ ಕಾಲಕ್ಕೂ ಅಧ್ಯಯನ ಮುಂದುವರಿಯುತ್ತದೆ. ಆಗ ಆ ಪ್ರದೇಶದ ಸಮಗ್ರ ಇತಿಹಾಸದ ಪರಿಚಯವಾಗುತ್ತದೆ ಮತ್ತು ರಾಜಕೀಯವೂ ಸೇರಿದಂತೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಧ್ಯಯನಗಳು ಸಮಗ್ರತೆಗೆ ಅವಕಾಶ ಕಲ್ಪಿಸುತ್ತವೆ.

ಸ್ಥಳೀಯ ಸಂಶೋಧಕರಿಗೆ ಹಲವು ಅನುಕೂಲಗಳಿರುತ್ತವೆ. ಯಾವಾಗ ಬೇಕೆಂದರೆ ಆಗ ಕ್ಷೇತ್ರಕಾರ್ಯವನ್ನು ಹಮ್ಮಿಕೊಳ್ಳಬಹುದು ಮತ್ತು ಕೆಲವು ಸ್ಥಳಗಳಿಗೆ ಜಾತ್ರೆ, ಉತ್ಸವ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ಭೇಟಿ ನೀಡಿ ಪರಂಪರೆಯ ಅನುಭವವನ್ನು ಪಡೆಯಬಹುದು. ಇದರಿಂದ ಅಲ್ಲಿನ ಆಚರಣೆಗಳಲ್ಲಿ ಅಭಿವ್ಯಕ್ತಗೊಳ್ಳುವ ಜಾನಪದ ಕಲೆ, ಪಾರಂಪರಿಕ ವಿಶೇಷಗಳು ಇತ್ಯಾದಿಗಳ ಖಚಿತ ತಿಳಿವಳಿಕೆ ದೊರೆಯುತ್ತದೆ.

‘ದೊಡ್ಡಬಳ್ಳಾಪುರ ಚಾರಿತ್ರಿಕ ಅಧ್ಯಯನ’ ಕೃತಿಗೆ ಸಂಬಂಧಿಸಿದಂತೆ, ಇಪ್ಪತ್ತು ಅಧ್ಯಾಯಗಳಲ್ಲಿ ತಮ್ಮ ಸಂಶೋಧನೆಯ ಫಲಿತಗಳನ್ನು ದಾಖಲಿಸಿರುವ ಡಾ. ವೆಂಕಟೇಶ್ ಮೊದಲಿಗೆ ಹೆಸರಿನ ಮೂಲದ ಬಗ್ಗೆ ಚರ್ಚಿಸಿ, ಅಲ್ಲಿನ ಗೊಂದಲಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದಾರೆ. ಈ ಕೃತಿಯಲ್ಲಿ ವಿಶೇಷ ಗಮನ ಸೆಳೆಯುವುದು ಸಂಶೋಧಕರು ಗುರುತಿಸಿರುವ ಪ್ರಾಗಿತಿಹಾಸ ಕಾಲದ ನೆಲೆಗಳು. ನಿಲುಸುಗಲ್ಲು, ಶಿಲಾವೃತ್ತ, ಕಲ್ಮನೆ ಮತ್ತು ಕಲ್ಲಾಸರೆಗಳ ಮೂಲಕ ಮಹತ್ವದ ಪ್ರಾಗಿತಿಹಾಸ ಕಾಲದ ನೆಲೆಗಳನ್ನು ಗುರುತಿಸಿ, ಈ ಪ್ರದೇಶವು ಎಷ್ಟು ಪ್ರಾಚೀನ ಜನವಸತಿಯ ನೆಲೆ ಎಂಬುದನ್ನು ಸಾಕ್ಷ್ಯಾಧಾರಗಳ ಮೂಲಕ ದಾಖಲಿಸಿದ್ದಾರೆ. ರಾಜಘಟ್ಟದಲ್ಲಿ ಕೆಲವು ವರ್ಷಗಳ ಹಿಂದೆ ರಾಜ್ಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದ ಮೂಲಕ ಅನಾವರಣಗೊಂಡ ಪ್ರಾಚೀನ ಬೌದ್ಧ ಚೈತ್ಯ ಹಾಗೂ ಅನೇಕ ಹರಕೆಯ ಸ್ತೂಪಗಳು ಈ ಪ್ರದೇಶದ ಇತಿಹಾಸದ ಪ್ರಾಚೀನತೆಗೆ ಸಾಕ್ಷಿಯಾಗಿವೆ. ಈ ಉತ್ಖನನವು ಈಚೆಗೆ ಕರ್ನಾಟಕದಲ್ಲಿ ನಡೆದ ಮಹತ್ವದ ಉತ್ಖನನಗಳಲ್ಲಿ ಒಂದಾಗಿದೆ. ಉತ್ಖನನದ ಸಂದರ್ಭ ದೊರೆತ ಹಲವು ಪ್ರಾಚ್ಯಾವಶೇಷಗಳ ಛಾಯಾಚಿತ್ರಗಳು ಸಂಶೋಧಕರ ಹೇಳಿಕೆಗೆ ಸಮರ್ಥನೆಯಾಗಿವೆ. ದೊಡ್ಡಬಳ್ಳಾಪುರ ತಾಲ್ಲೂಕು ಹಿಂದೆ ಗಂಗರು ಮತ್ತು ನೊಳಂಬರಿಬ್ಬರ ಪ್ರಬಲ ನೆಲೆಯಾಗಿತ್ತು. ಇದಕ್ಕೆ ಶಾಸನಾಧಾರಗಳಿವೆ. ಇವುಗಳನ್ನು ಪರಿಶೀಲಿಸಿ ಆಯಾ ಕಾಲದ ಪ್ರಮುಖ ನೆಲೆಗಳನ್ನು ಗುರುತಿಸುವ ಸಾರ್ಥಕ ಪ್ರಯತ್ನ ಇಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ ಪ್ರದೇಶವನ್ನು ಆಳಿದ ಎಲ್ಲ ರಾಜಮನೆತನಗಳ ಕಾಲದ ಪ್ರಕಟಿತ ಶಾಸನಗಳ ಮೂಲಕ ಆಯಾ ಕಾಲಘಟ್ಟದ ಆಡಳಿತ ಮಾತ್ರವಲ್ಲದೆ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಪ್ರತಿಯೊಂದು ಸ್ಥಳವನ್ನೂ ವಿವರವಾಗಿ ಪರಿಚಯಿಸುವ ಕೆಲಸವಾಗಿದೆ. ಗಂಗರ ಕಾಲದಲ್ಲಿ ರಚನೆಯಾಗಿರುವ ಗುಹಾಲಯಗಳು ಮತ್ತು ರಾಚನಿಕ ದೇವಾಲಯಗಳ ವಿಶೇಷಗಳನ್ನು ಈವರೆಗಿನ ಬೇರೆಬೇರೆ ಅಧ್ಯಯನಗಳ ಹಿನ್ನೆಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಆಯಾ ಕಾಲದಲ್ಲಿ ನಿರ್ಮಾಣಗೊಂಡಿರುವ ದೇವಾಲಯಗಳ ವಾಸ್ತು ಮತ್ತು ಶಿಲ್ಪ ವಿಶೇಷಗಳ ವಿವರಣೆಯ ಕಡೆಗೆ ಸಂಶೋಧಕರು ಹೆಚ್ಚು ಗಮನ ಹರಿಸಿದ್ದಾರೆ. ಆಯಾ ಕಾಲದಲ್ಲಿ ರಚನೆಗೊಂಡಿರುವ ಕೆರೆಕಟ್ಟೆಗಳು ಮತ್ತು ಸ್ಥಾಪನೆಗೊಂಡಿರುವ ವೀರಗಲ್ಲುಗಳನ್ನು ಶಾಸನ ಮತ್ತು ಶಿಲ್ಪಗಳ ವಿವರಗಳೊಡನೆ ದಾಖಲಿಸಲಾಗಿದೆ. ಇತಿಹಾಸ ಕಾಲದ ಕೆಲವು ವಿಶೇಷ ಘಟನೆಗಳನ್ನು ದಾಖಲೆಗಳ ಸಹಿತ ವಿವರಿಸಿರುವುದರಿಂದ ಕೃತಿಯ ಮಹತ್ವ ಹೆಚ್ಚಿದೆ.

ಈ ಕೃತಿಯಲ್ಲಿ ದೊಡ್ಡಬಳ್ಳಾಪುರದ ಪಾಳೆಯಗಾರರು ಮತ್ತು ಹುಲಕುಡಿ ನಾಡಪ್ರಭುಗಳ ಬಗ್ಗೆ ನಡೆದಿರುವ ಅಧ್ಯಯನ ವಿಶೇಷ ಉಲ್ಲೇಖಕ್ಕೆ ಪಾತ್ರವಾಗುತ್ತದೆ. ಈ ಅಧ್ಯಯನವು ಇತಿಹಾಸಪೂರ್ವ ಕಾಲದಿಂದ ಕರ್ನಾಟಕ ಏಕೀಕರಣದವರೆಗೆ ವಿಸ್ತರಿಸಿಕೊಂಡಿರುವುದು ಈ ಕೃತಿಯ ಮತ್ತೊಂದು ವೈಶಿಷ್ಟ್ಯ. ಸ್ಥಳನಾಮಗಳ ಹಿನ್ನೆಲೆಯಲ್ಲಿ ಹಲವು ವಿಷಯಗಳ ಚರ್ಚೆಯಾಗಿರುವುದು ಉಪಯುಕ್ತವಾಗಿದೆ. ದೊಡ್ಡಬಳ್ಳಾಪುರವು ಬಿಜಾಪುರದ ಸುಲ್ತಾನರು, ಮರಾಠರು ಮತ್ತು ಮೊಗಲರ ಆಳ್ವಿಕೆಯ ಸಂದರ್ಭದಲ್ಲಿ ಹಲವು ವಿಶೇಷ ಸಾಧನೆಗಳಿಗೆ ಕಾರಣವಾಗಿದೆ. ಅಧಿಕಾರಿಗಳು ನಿರ್ಮಿಸಿದ ಕಟ್ಟಡಗಳು ಮತ್ತು ಉದ್ಯಾನಗಳ ಪಳೆಯುಳಿಕೆಗಳನ್ನು ಗುರುತಿಸಿ, ಐತಿಹಾಸಿಕ ಸ್ಮಾರಕಗಳ ಮಹತ್ವವನ್ನು ತಿಳಿಸುವಲ್ಲಿ ಲೇಖಕರ ಐತಿಹಾಸಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಗುರುತಿಸಬಹುದಾಗಿದೆ. ಇಲ್ಲಿರುವ ಮೊಗಲರ ಕಾಲದ ಪರ್ಷಿಯನ್ ಭಾಷೆಯ ಶಾಸನವು ಒಂದು ಪ್ರಮುಖ ಐತಿಹಾಸಿಕ ದಾಖಲೆಯಾಗಿದೆ.

ಹೈದರಾಲಿಯು ಜನಿಸಿದ್ದು ಕೋಲಾರ ಜಿಲ್ಲೆಯ ಬೂದಿಕೋಟೆಯಲ್ಲಿ ಎಂಬ ವಿಚಾರವನ್ನು ಪ್ರಶ್ನೆಗೆ ಗುರಿಪಡಿಸಿರುವ ಸಂಶೋಧಕರು –ಕಿರ್ಮಾನಿಯ ಹೇಳಿಕೆಯನ್ನು ಆಧರಿಸಿ, ಅವನು ಹುಟ್ಟಿದ್ದು ದೊಡ್ಡಬಳ್ಳಾಪುರದಲ್ಲಿ ಎಂದು ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಇದು ಚರ್ಚೆಗೆ ಅವಕಾಶವಿರುವ ವಿಚಾರ. ಟಿಪ್ಪುಸುಲ್ತಾನ್ ಸಹ ದೊಡ್ಡಬಳ್ಳಾಪುರದ ಸಂಪರ್ಕದಲ್ಲಿದ್ದ ವಿಚಾರ ಮಾತ್ರವಲ್ಲದೆ, ಅವನ ಕಾಲದಲ್ಲಿ ದೊಡ್ಡಬಳ್ಳಾಪುರದಲ್ಲಿ ರೇಷ್ಮೆ ಕೈಗಾರಿಕೆ ಅಭಿವೃದ್ಧಿ ಕಂಡಿತು ಎಂಬ ವಿಚಾರವು ಗಮನ ಸೆಳೆಯುತ್ತದೆ. ಇಡೀ ಕರ್ನಾಟಕದಲ್ಲಿ ರೇಷ್ಮೆ ಕೈಗಾರಿಕೆಯು ಟಿಪ್ಪುಸುಲ್ತಾನನ ಕಾಲದಲ್ಲಿ ಪ್ರಸಿದ್ಧಿಗೆ ಬಂದ ವಿಷಯವು ಬಹುತೇಕ ಎಲ್ಲ ಇತಿಹಾಸಕಾರರಿಗೆ ತಿಳಿದಿದೆ. ದೊಡ್ಡಬಳ್ಳಾಪುರವು ನೇಯ್ಗೆ ಉದ್ಯಮಕ್ಕೆ ಪ್ರಸಿದ್ಧಿ ಪಡೆದದ್ದು ಆ ಕಾಲದಲ್ಲಿ ಎಂದು ತಿಳಿಯುತ್ತದೆ.

ಈ ಅಧ್ಯಯನದಲ್ಲಿ ಫ್ರಾನ್ಸಿಸ್ ಬುಖನನ್ ಎಂಬ ಬ್ರಿಟಿಷ್ ಸರ್ವೆ ಅಧಿಕಾರಿ ದೊಡ್ಡಬಳ್ಳಾಪುರಕ್ಕೆ ಬಂದಿದ್ದಾಗ ಗಮನಿಸಿ ದಾಖಲಿಸಿರುವ ವಿಚಾರಗಳು ಹೆಚ್ಚು ಗಮನ ಸೆಳೆಯುತ್ತದೆ. ಟಿಪ್ಪುಸುಲ್ತಾನನ ಕಾಲದಲ್ಲಿ ಮೀರ್‌ಸಾದಿಕ್ ಮಾಡಿದ ವಂಚನೆ ಮತ್ತು ಈ ಪ್ರದೇಶದಲ್ಲಿದ್ದ ಪೂರ್ಣಯ್ಯನವರ ಪ್ರಭಾವ ಇತ್ಯಾದಿಗಳ ವಿವರಗಳು ಮಹತ್ವ ಪಡೆದಿವೆ. ಬುಖನನ್‌ನ ದಾಖಲೆಗಳು ದೊಡ್ಡಬಳ್ಳಾಪುರದ ಸಾಮಾಜಿಕ ಅಧ್ಯಯನಕ್ಕೆ ಪ್ರಮುಖ ಆಕರವಾಗಿವೆ.

ಮೈಸೂರು ಒಡೆಯರ್ ಮತ್ತು ಬ್ರಿಟಿಷ್ ರೆಸಿಡೆಂಟರ ಆಳ್ವಿಕೆಯ ಸಂದರ್ಭ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಆದ ಬದಲಾವಣೆಗಳು, ಪ್ರಗತಿ ಇತ್ಯಾದಿ ವಿಚಾರಗಳೂ ಇಲ್ಲಿ ದಾಖಲಾಗಿವೆ. ಎಲ್ಲಕ್ಕಿಂತ ಹೆಚ್ಚು ಪ್ರಮುಖವೆನಿಸುವ ವಿಚಾರವೆಂದರೆ – ಇಲ್ಲಿ ಪ್ರಸ್ತಾಪಗೊಂಡಿರುವ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಇಡಿಯಾಗಿ ವಹಿಸಿದ ಪಾತ್ರ ಮತ್ತು ಅಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಟಿ. ಸಿದ್ಧಲಿಂಗಯ್ಯ ಮತ್ತು ಇತರ ಹೋರಾಟಗಾರರು. ಅದೇ ಹೋರಾಟಗಾರರು ನಂತರ ಕರ್ನಾಟಕ ಏಕೀಕರಣದ ಸಂದರ್ಭದಲ್ಲೂ ಹೋರಾಡಿ ಯಶಸ್ಸು ಗಳಿಸಿದ ವಿಚಾರವೂ ಇಲ್ಲಿ ಸ್ಥಾನ ಪಡೆದಿದೆ.

ನಕ್ಷೆಗಳ ಮೂಲಕ ಪ್ರಾಗತಿಹಾಸ ಕಾಲದ ನೆಲೆಗಳು ಮತ್ತು ಹೋಬಳಿವಾರು ಭೂವಿವರಗಳನ್ನು ದಾಖಲಿಸಿ, ಬುಖನನ್‌ನ ಗ್ರಂಥದಲ್ಲಿ ದಾಖಲಾಗಿರುವ ಚಿತ್ರಗಳು ಮಾತ್ರವಲ್ಲದೆ ಛಾಯಾಚಿತ್ರಗಳ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರಮುಖ ಕೋಟೆಗಳು, ಪ್ರಾಗಿತಿಹಾಸ ಕಾಲದ ಕುರುಹುಗಳು, ಇತಿಹಾಸ ಕಾಲದ ವೀರಗಲ್ಲು, ಮಾಸ್ತಿಗಲ್ಲು ಇತ್ಯಾದಿ ಸ್ಮಾರಕಗಳನ್ನು ಸುಂದರವಾಗಿ ಮತ್ತು ಹಿತವಾಗುವಂತೆ ದಾಖಲಿಸಿ, ತಮ್ಮ ಕಲಾನೈಪುಣ್ಯವನ್ನು ಮೆರೆದಿರುವ ಸಂಶೋಧಕರ ಈ ಕೃತಿಯು ಮುಂದಿನ ಇಂತಹ ಹಲವು ಸಂಶೋಧನೆ ಮತ್ತು ದಾಖಲಾತಿಗಳಿಗೆ ದಾರಿ ಮಾಡುವ ಭರವಸೆಯನ್ನಿಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry