ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ:ಕಾರ್ಪೋರೇಟ್‌ ವಲಯಕ್ಕೆ ₹6 ಲಕ್ಷ ಕೋಟಿ ವಿನಾಯ್ತಿ!

Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ (2015–16) ಕೇಂದ್ರ ಸರ್ಕಾರವು ದೇಶದ ಉದ್ಯಮ ವಲಯಕ್ಕೆ ನೀಡಿದ ಪ್ರತ್ಯಕ್ಷ, ಪರೋಕ್ಷ ತೆರಿಗೆ ರಿಯಾಯ್ತಿಗಳ ಒಟ್ಟು ಮೊತ್ತವು ಹೆಚ್ಚು ಕಡಿಮೆ   ಐದೂವರೆ ಲಕ್ಷ ಕೋಟಿ ರೂಪಾಯಿಗಳಷ್ಟಿದೆ.

ವ್ಯಕ್ತಿಗತ ಆದಾಯ ತೆರಿಗೆ ರಿಯಾಯ್ತಿ ಮೊತ್ತ ₹ 55,366 ಕೋಟಿ ಮತ್ತು ಇತರೆ ರಿಯಾಯ್ತಿಗಳ ಲೆಕ್ಕ ಹಿಡಿದರೆ ಈ ಮೊತ್ತ ₹ 6 ಲಕ್ಷ ಕೋಟಿ ದಾಟುತ್ತದೆ.  2017–-18ರ ಬಜೆಟ್‌ನಲ್ಲಿ  ಈ ಮಾಹಿತಿ ಇದೆ.

ಪರೋಕ್ಷ ತೆರಿಗೆಗಳ ಪೈಕಿ ಅಬಕಾರಿ ಸುಂಕದ ಸಂಬಂಧದಲ್ಲಿ ನೀಡಲಾದ ರಿಯಾಯ್ತಿ ಮೊತ್ತ ₹2,24,940 ಕೋಟಿ. ಕಸ್ಟಮ್ಸ್ ಸುಂಕಗಳ ರಿಯಾಯ್ತಿ  ₹ 2,57, 549 ಕೋಟಿ. 2.25 ಕೋಟಿ ವ್ಯಕ್ತಿಗತ  ತೆರಿಗೆದಾರರಿಗೆ ನೀಡಿದ ರಿಯಾಯ್ತಿ ₹ 55,366 ಕೋಟಿ.

ಶಾಸನಾತ್ಮಕ ಕಾರ್ಪೊರೇಟ್ ತೆರಿಗೆ ದರಗಳನ್ನು ಶೇ 24.67ಕ್ಕೆ ಕಡಿತಗೊಳಿಸಿ, ಈ ಕಂಪೆನಿಗಳಿಗೆ ಒಟ್ಟು ₹68,711 ಕೋಟಿಗಳಷ್ಟು  ರಿಯಾಯ್ತಿ ನೀಡಲಾಗಿದೆ. ಇಂತಹ ಕಂಪೆನಿಗಳ ಸಂಖ್ಯೆ 5.82 ಲಕ್ಷ. ಕಾರ್ಪೊರೇಟ್ ವ್ಯಾಖ್ಯಾನದಡಿ ಬಾರದ ಪಾಲುದಾರ ಉದ್ಯಮ ಸಂಸ್ಥೆಗಳು, ವ್ಯಕ್ತಿಗಳೇ ಸೇರಿ ನಡೆಸುವ ಒಟ್ಟು 7.59 ಲಕ್ಷ ಉದ್ಯಮಗಳಿಗೆ ನೀಡಿರುವ ತೆರಿಗೆ ರಿಯಾಯ್ತಿ ₹ 4,561 ಕೋಟಿ.

‘ಬಿಟ್ಟುಕೊಡಲಾದ ಆದಾಯ’ ಎಂದರೆ  ‘ಆದ್ಯತೆಯ ತೆರಿಗೆದಾರರಿಗೆ ಒದಗಿಸುವ ಪರೋಕ್ಷ ಸಹಾಯಧನ (ಸಬ್ಸಿಡಿ)’ ಎಂದು ಬಜೆಟ್‌ನಲ್ಲಿ  ಬಣ್ಣಿಸಲಾಗಿದೆ.ತೆರಿಗೆ ನೀತಿ ಮತ್ತು ತೆರಿಗೆ ವೆಚ್ಚಗಳಲ್ಲಿ ಪಾರದರ್ಶಕತೆ ತರುವ ಅಂಗವಾಗಿ ‘ಬಿಟ್ಟುಕೊಡಲಾದ ಆದಾಯ’ದ ಮೊತ್ತದ ವಿವರಗಳನ್ನು 2006–07ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಪ್ರಕಟಿಸಲಾಯಿತು. 2014–15ರ ತನಕ ಪ್ರತಿ ವರ್ಷವೂ ಈ ವಿವರಗಳು ‘ಬಿಟ್ಟುಕೊಡಲಾದ ಆದಾಯ’ ಶೀರ್ಷಿಕೆಯಡಿ ಬೆಳಕು ಕಾಣುತ್ತಿದ್ದವು. 2015–16ರಲ್ಲಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಈ ತಲೆಬರಹ ಬದಲಿಸಿತು. ‘ಕೇಂದ್ರೀಯ ತೆರಿಗೆ ವ್ಯವಸ್ಥೆಯಡಿ ನೀಡಲಾಗುವ ತೆರಿಗೆ ಪ್ರೋತ್ಸಾಹ ಕ್ರಮಗಳು ಸರ್ಕಾರಿ ಆದಾಯದ ಮೇಲೆ ಉಂಟು ಮಾಡುತ್ತಿರುವ ಪ್ರಭಾವ’ ಎಂದು ಕರೆಯಿತು. ಹೆಸರು ಯಾವುದಾದರೇನು, ‘ಬಿಟ್ಟುಕೊಡಲಾದ ಆದಾಯ’ವೇ ಅದರ ತಿರುಳಾಗಿತ್ತು.

2015ರ ನವೆಂಬರ್ 30ರ ತನಕ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾದ ಕಾರ್ಪೊರೇಟ್ ಆದಾಯ ತೆರಿಗೆ ಪಾವತಿ ಸಂಖ್ಯೆ 5.82 ಲಕ್ಷ. ಆ ಹಣಕಾಸಿನ ಸಾಲಿನಲ್ಲಿ ನಿರೀಕ್ಷಿಸಲಾಗಿದ್ದ ಪಾವತಿಗಳ ಶೇ 90ರಷ್ಟು ಪ್ರಮಾಣವಿದು. ಈ ಕಂಪೆನಿ  ನೀಡಬೇಕಿದ್ದ ಕಾರ್ಪೊರೇಟ್ ತೆರಿಗೆಯ ಒಟ್ಟು ಮೊತ್ತ₹2,98,205 ಕೋಟಿ. ಜೊತೆಗೆ ₹32,262 ಕೋಟಿಗಳಷ್ಟು ಲಾಭಾಂಶ ಪಾವತಿ ತೆರಿಗೆಯನ್ನೂ ಈ ಕಂಪೆನಿಗಳು ಸಂದಾಯ ಮಾಡಬೇಕಿತ್ತು.

ಆದರೆ, ಈ ಕಂಪೆನಿಗಳ ಪೈಕಿ ಶೇ 53ರಷ್ಟು ಕಂಪೆನಿಗಳು ಒಟ್ಟು ₹ 12,08,658 ಕೋಟಿ ತೆರಿಗೆಸಹಿತ ಲಾಭವನ್ನು ಘೋಷಿಸಿದ್ದವು. ಶೇ 44ರಷ್ಟು ಕಂಪೆನಿಗಳು ₹ 4.76 ಲಕ್ಷ ಕೋಟಿ ನಷ್ಟವನ್ನು ಘೋಷಿಸಿದವು. ಶೇ 3ರಷ್ಟು ಕಂಪೆನಿಗಳು ಲಾಭವೂ ಇಲ್ಲ, ನಷ್ಟವೂ ಆಗಿಲ್ಲ ಎಂದವು. ತೆರಿಗೆ ರಿಯಾಯ್ತಿಯ ಲಾಭವನ್ನು ದೇಶದ ಕಾರ್ಪೊರೇಟ್ ವಲಯ ಸತತವಾಗಿ ಪಡೆಯುತ್ತ ಬಂದಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2009–10ರಲ್ಲಿ ಈ ರಿಯಾಯ್ತಿಗಳ ತಳಹದಿ ಇನ್ನಷ್ಟು ವಿಸ್ತರಿಸಿತೇ ವಿನಾ ತಗ್ಗಲಿಲ್ಲ. 2012–13ರ ಸಾಲಿನ ಹೊತ್ತಿಗೆ ಇಂತಹ ರಿಯಾಯ್ತಿಗಳ ಒಟ್ಟು ಮೊತ್ತ ₹ 5,73,627  ಕೋಟಿ. ಆದ್ಯತೆಯ ತೆರಿಗೆ ಪಾವತಿದಾರರಿಗೆ ನೀಡಲಾದ ಪರೋಕ್ಷ ಸಬ್ಸಿಡಿ’ ಇದು  ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕಂಪೆನಿಗಳ ಸಂಖ್ಯೆ ವರ್ಷ ವರ್ಷ ಹೆಚ್ಚುತ್ತ ನಡೆದಂತೆ ಕಾರ್ಪೊರೇಟ್ ತೆರಿಗೆ ದರ ಇಳಿಯತ್ತ ಸಾಗಿದೆ. ಬಿಟ್ಟುಕೊಡಲಾದ ಈ ಆದಾಯದ ಅಗಾಧತೆ ಮನಗಾಣಬೇಕಿದ್ದರೆ ಈ ಮೊತ್ತವನ್ನು ಇತರೆ ಅತ್ಯಗತ್ಯ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ನೀಡಲಾಗುವ ಹಣದ ಮೊತ್ತಗಳೊಂದಿಗೆ ಹೋಲಿಸಿ ನೋಡಬೇಕು. ಆಭರಣಗಳು ಮತ್ತು ಅಮೂಲ್ಯ ಹರಳುಗಳ ವ್ಯಾಪಾರ ಮಾಡುವ ಕಂಪೆನಿಗಳಿಗೆ ಹಾಲಿ ಬಜೆಟ್‌ನಲ್ಲಿ ನೀಡಲಾಗಿರುವ ಎಕ್ಸೈಸ್ ಸುಂಕ ವಿನಾಯಿತಿಯ ಮೊತ್ತವೇ ₹ 61,126 ಕೋಟಿಗಳು. ದೇಶದ ಒಂದೂವರೆ ಲಕ್ಷ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಬಜೆಟ್‌ನಲ್ಲಿ ನೀಡಲಾಗಿರುವ ಹಣ ₹ 6,050 ಕೋಟಿ. ಆಭರಣಗಳು ಮತ್ತು ಅಮೂಲ್ಯ ಹರಳುಗಳಿಗೆ ನೀಡಲಾಗಿರುವ ಸುಂಕ ವಿನಾಯಿತಿಯ ಮೊತ್ತದಲ್ಲಿ ಹತ್ತು ವರ್ಷಗಳ ಕಾಲ ಕುಡಿಯುವ ನೀರಿನ ಯೋಜನೆಗಳಿಗೆ ಹಣ ಹಂಚಿಕೆ ಮಾಡಬಹುದಿತ್ತು. ಬಿಟ್ಟುಕೊಡಲಾದ ಆದಾಯವಾದ ಒಟ್ಟು ₹ 6 ಲಕ್ಷ ಕೋಟಿಗಳ ಲೆಕ್ಕ ಹಿಡಿದಿದ್ದರೆ ಮುಂದಿನ 100 ವರ್ಷಗಳ ಕಾಲ ಈ ಹಳ್ಳಿಗಳಿಗೆ ಕುಡಿಯುವ ನೀರಿನ ಬಜೆಟ್ ಹಂಚಲು ಬಂದೀತು.

ಬಡಜನರಿಗೆ ಅಗ್ಗದ ದರದಲ್ಲಿ ಆಹಾರಧಾನ್ಯ ನೀಡುವ ಯೋಜನೆ ಉದಾರ ಆರ್ಥಿಕ ನೀತಿಯ ಪ್ರತಿಪಾದಕರಿಂದ ಭಾರಿ ಟೀಕೆಗೆ ಗುರಿಯಾಗಿದೆ.  ಈ ವರ್ಷದ ಬಜೆಟ್‌ನಲ್ಲಿ ಒಟ್ಟಾರೆ ಆಹಾರ ಸಬ್ಸಿಡಿಗೆಂದು ಹಂಚಿಕೆ ಮಾಡಲಾಗಿರುವ ಮೊತ್ತ ₹1,45,339 ಕೋಟಿ. ಅರ್ಥಾತ್ ‘ಬಿಟ್ಟುಕೊಡಲಾಗಿರುವ ಆದಾಯ’ದ ನಾಲ್ಕನೆಯ ಒಂದು ಭಾಗದಷ್ಟು.

ಹಾಗೆಯೇ ಕೋಟ್ಯಂತರ ನಿರುದ್ಯೋಗಿಗಳಿಗೆ ವರ್ಷದಲ್ಲಿ ನೂರು ದಿನಗಳ ಕಾಲ ಉದ್ಯೋಗ ಒದಗಿಸುವ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಒಟ್ಟು ಮೊತ್ತ ₹48 ಸಾವಿರ ಕೋಟಿ. ‘ಬಿಟ್ಟುಕೊಡಲಾಗಿರುವ ಆದಾಯ’ವಾದ ₹6ಲಕ್ಷ ಕೋಟಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು 6 ವರ್ಷ ನಡೆಸಬಹುದು.‘ಬಿಟ್ಟುಕೊಡಲಾದ ಆದಾಯ’ದ ಬಹಳಷ್ಟು ರಿಯಾಯ್ತಿ- ವಿನಾಯಿತಿಗಳು ರಫ್ತು ಪ್ರೋತ್ಸಾಹಕ್ಕೆ, ಇಲ್ಲವೇ ಜನಕಲ್ಯಾಣದ ವೃದ್ಧಿಗೆ ಕಾಣಿಕೆ ನೀಡುವಂತಹವು. ಇವುಗಳನ್ನು ಬಿಟ್ಟುಕೊಡಲಾದ ಆದಾಯದ ಪಟ್ಟಿಗೆ ಸೇರಿಸಲೇಬಾರದು. ಖಾಸಗಿ ಕ್ಷೇತ್ರವನ್ನು ನಿಂದಿಸಿ, ಬಡಿದು ಬಾರಿಸುವ ಈ ಪ್ರವೃತ್ತಿ ಕೊನೆಯಾಗಬೇಕು’ ಎಂಬುದು ದೆಹಲಿಯ ನೀತಿ ನಿರ್ಧಾರಗಳ ಸಂಶೋಧನಾ ಕೇಂದ್ರದ (ಸೆಂಟರ್ ಫಾರ್ ಪಾಲಿಸಿ ರೀಸರ್ಚ್) ವಾದ. ಔಷಧಿಗಳು, ಹಲ್ಲುಪುಡಿ, ಮೇಣದಬತ್ತಿ, ಸೂಜಿಗಳು, ಸೀಮೆ ಎಣ್ಣೆ ಸ್ಟವ್‌ಗಳು ಮುಂತಾದ ಸಾಮೂಹಿಕ ಬಳಕೆಯ ಸರಕುಗಳಿಗೆ ತೆರಿಗೆ ಕಡಿತಗೊಳಿಸಿದರೆ ಅದರ ಲಾಭ ಕಾರ್ಪೊರೇಟುಗಳಿಗೆ ಸಿಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT