ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆಗೆ ಮದ್ದು ಮೊಟ್ಟೆ

Last Updated 17 ಮಾರ್ಚ್ 2017, 20:16 IST
ಅಕ್ಷರ ಗಾತ್ರ

ಅಂಗನವಾಡಿ ಮಕ್ಕಳಿಗೆ ಬಿಸಿಯೂಟದ ಜತೆಗೆ ವಾರಕ್ಕೆ ಎರಡು ದಿನ ಮೊಟ್ಟೆ ನೀಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಇದೊಂದು ದೂರಗಾಮಿಯಾದ ಅತ್ಯುತ್ತಮ ನಡೆಯಾಗಿದ್ದು, ಕರ್ನಾಟಕದ ಮಕ್ಕಳ ಪೌಷ್ಟಿಕತೆಯನ್ನು ಬಾಧಿಸುತ್ತಿರುವ ಮೂರು ಪ್ರಮುಖ ತೊಡಕುಗಳನ್ನು ನಿವಾರಿಸಲಿದೆ.

ಮೊದಲನೆಯ ತೊಡಕು: ಭಾರತದಲ್ಲಿ ಮಕ್ಕಳು ತಿನ್ನುವ ಆಹಾರದ ಪ್ರಮಾಣ ಅತ್ಯಂತ ಕಡಿಮೆ. ಭಾರತದಲ್ಲಿರುವ ಮೂರು ವರ್ಷದೊಳಗಿನ ಮಕ್ಕಳಲ್ಲಿ ಇಬ್ಬರಲ್ಲಿ ಒಬ್ಬನಿಗೆ ಅಪೌಷ್ಟಿಕತೆ ಕಾಡುತ್ತಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಹೇಳಿದೆ. ಅಪೌಷ್ಟಿಕತೆಯ ಸಮಸ್ಯೆಯಿಂದ ಬಳಲುತ್ತಿರುವ ದೇಶವೊಂದರಲ್ಲಿ ಮಕ್ಕಳ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸುವುದು ಮುನ್ನಡೆಯತ್ತ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ.

ಮಕ್ಕಳಿಗೆ ಸಾಕಷ್ಟು ಆಹಾರ ದೊರೆಯದ ಸಮಸ್ಯೆಯನ್ನು ನಿವಾರಿಸುವ ಬಿಸಿಯೂಟ ಕಾರ್ಯಕ್ರಮವೇ ಬಹಳ ದೊಡ್ಡ ನಡೆ. ಹಾಗಿದ್ದರೂ ಆಹಾರದಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಅಮಿನೊ ಆಮ್ಲದ ಕೊರತೆಯಿಂದಾಗಿ ಎಳೆ ವಯಸ್ಸಿನಲ್ಲಿಯೇ ಮಕ್ಕಳು ದೈಹಿಕ ಅಸಾಮರ್ಥ್ಯ, ಉಸಿರಾಟದ ತೊಂದರೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಬಳಲುತ್ತಿದ್ದಾರೆ.

ಇಂತಹ ಮಕ್ಕಳಿಗೆ ಮೊಟ್ಟೆ ನೀಡಿಕೆ ದೊಡ್ಡ ವರವಾಗಲಿದೆ. ದೈಹಿಕ, ಮಾನಸಿಕ ಬೆಳವಣಿಗೆ ಮತ್ತು ಪೌಷ್ಟಿಕತೆಯನ್ನು ಸಮಗ್ರವಾಗಿ ಹೊಂದಿರುವ ಕೆಲವೇ ಆಹಾರಗಳಲ್ಲಿ ಮೊಟ್ಟೆಯೂ ಒಂದು. ಪಿತ್ತಜನಕಾಂಗ (ಲಿವರ್) ಮತ್ತು ನರಗಳ ಆರೋಗ್ಯಕರ ಕಾರ್ಯನಿರ್ವಹಣೆ, ಮಿದುಳು ಮತ್ತು ಸ್ನಾಯು ಬೆಳವಣಿಗೆ ಹಾಗೂ ಪಚನ ಕ್ರಿಯೆಗೆ ಸಹಕರಿಸುವ ಬಹಳ ಮುಖ್ಯವಾದ ಕೊಲೀನ್ ಎಂಬ ಪೋಷಕಾಂಶ ಇರುವ ಕೆಲವೇ ಆಹಾರಗಳಲ್ಲಿ ಮೊಟ್ಟೆಯೂ ಒಂದು.

ಮೊಟ್ಟೆ ಬಹಳ ಅಗ್ಗವಾಗಿ ದೊರೆಯುವುದಲ್ಲದೆ ಮಕ್ಕಳಿಗೆ ಆರೋಗ್ಯಕರವಾದ ಸಾಧನ. ದೀರ್ಘ ಕಾಲ ಇದನ್ನು ಕೆಡದಂತೆ ಇರಿಸಲು ಸಾಧ್ಯವಾಗುವುದರಿಂದ ಫ್ರಿಜ್ ವ್ಯವಸ್ಥೆ ಇಲ್ಲದ ಸ್ಥಳಗಳಲ್ಲಿ ಇದು ಬಹಳ ಮೌಲಿಕವಾದ ಆಹಾರ.

ಎರಡನೆಯದು ರಾಜಕೀಯ ತೊಡಕು: ಭಾರತದ ಅತ್ಯಂತ ಬಡ ಕುಟುಂಬಗಳು ಮಾಂಸಾಹಾರಿ. ಹಾಗೆಯೇ ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುವ ಬಹುಸಂಖ್ಯೆಯ ಮಕ್ಕಳು ಈ ಕುಟುಂಬಗಳಿಗೆ ಸೇರಿದ್ದಾಗಿವೆ. ಬಿಸಿಯೂಟ, ಭಾರತದಲ್ಲಿರುವ ಅತ್ಯಂತ ರಾಜಕೀಯೇತರವಾದ ಕಾರ್ಯಕ್ರಮವಾಗಿದೆ. ಆದರೆ ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಈ ಯೋಜನೆಯ ಮೇಲೆ ಧರ್ಮ ಮತ್ತು ಸಸ್ಯಾಹಾರ ಪದ್ಧತಿಯ ಪ್ರಭಾವ ಇದೆ.

ಇಂತಹ ಪರಿಸ್ಥಿತಿ ಕರ್ನಾಟಕದಲ್ಲಿಯೂ ಇರುವುದು ವಿಪರ್ಯಾಸ. ಆದರೆ ಆಹಾರದಲ್ಲಿ ಮೊಟ್ಟೆಯ ಸೇರ್ಪಡೆಯೊಂದಿಗೆ ಈ ಪ್ರಭಾವಗಳಿಂದ ಹೊರಗೆ ಬರುವುದು ಸಾಧ್ಯವಾಗುತ್ತದೆ. ಸರ್ಕಾರ ಈಗ ಕೈಗೊಂಡಿರುವ ನಿರ್ಧಾರ ಅತ್ಯಂತ ದಿಟ್ಟವಾದುದು ಮತ್ತು ಮುಂದಿನ ಚುನಾವಣೆ ನಂತರವೂ ಇದು ಮುಂದುವರಿಯಲಿದೆ ಎಂದು ಹಾರೈಸೋಣ.

ಮೂರನೆಯದು ವಾಣಿಜ್ಯ ತೊಡಕು: ಸಸ್ಯಾಹಾರವನ್ನು ಎಲ್ಲರ ಮೇಲೆ ಹೇರುವುದು ನೈತಿಕವಾಗಿ ಸರಿಯಲ್ಲ ಮತ್ತು ವಾಣಿಜ್ಯ ದೃಷ್ಟಿಯಿಂದ ಕಾರ್ಯಸಾಧುವೂ ಅಲ್ಲ. ಮೊಟ್ಟೆಗಳ ಮೇಲೆ ನಿಷೇಧ ಹೇರಿ ಪ್ರೊಟೀನ್‌ಗಾಗಿ ಸಸ್ಯಾಹಾರದಲ್ಲಿರುವ ಪ್ರೊಟೀನ್ ಮೂಲಗಳಾದ ಬ್ರಕೋಲಿ ಮತ್ತು ಸೋಯಾಬೀನ್‌ನಂತಹ ಆಹಾರಗಳನ್ನು ಹುಡುಕುವುದು ನಗೆಪಾಟಲಿಗೀಡಾಗುವ ಯೋಚನೆ.

ಯಾಕೆಂದರೆ ಇವು ದುಬಾರಿ ಮತ್ತು ಅವುಗಳನ್ನು ಸಂಗ್ರಹಿಸಿ ಇರಿಸಲು ಫ್ರಿಜ್ ಅತ್ಯಗತ್ಯ. ಈ ಸಸ್ಯಾಹಾರಿ ಪ್ರೊಟೀನ್ ಆಹಾರ ಎಲ್ಲೆಡೆಯೂ ಲಭ್ಯ ಇಲ್ಲ ಮತ್ತು ಅವುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಭಾರಿ ವೆಚ್ಚ ತಗಲುತ್ತದೆ. ಅದು ಬಿಸಿಯೂಟದ ಒಟ್ಟು ವೆಚ್ಚವನ್ನು ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡುತ್ತದೆ. 

ಅದಕ್ಕೆ ಹೋಲಿಸಿದರೆ ಮೊಟ್ಟೆ ಲಭ್ಯವಾಗುವಂತೆ ಮಾಡುವುದು ಬಹಳ ಸುಲಭ. ಯಾಕೆಂದರೆ ಕೋಳಿ ಫಾರಂಗಳು ಸರ್ವತ್ರ ವ್ಯಾಪಿಸಿವೆ. ಬಿಸಿಯೂಟದಲ್ಲಿ ಮೊಟ್ಟೆ ನೀಡುವುದು ಸ್ಥಳೀಯ ವ್ಯಾಪಾರಕ್ಕೆ ಉತ್ತೇಜನ ನೀಡುತ್ತದೆ. ಸ್ಥಳೀಯವಾಗಿಯೇ ಮೊಟ್ಟೆಗಳನ್ನು ಪಡೆದುಕೊಳ್ಳುವುದರಿಂದ ಅದರ ಸಾಗಾಟ ಸುಲಭ ಮತ್ತು ಮಕ್ಕಳಿಗೆ ತಾಜಾ ಮೊಟ್ಟೆಯೂ ದೊರೆಯುತ್ತದೆ.

ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ದಕ್ಷವಾಗಿ ಅನುಷ್ಠಾನಗೊಳಿಸುವುದು ಬಹಳ ಮುಖ್ಯ. ಪೂರೈಕೆಯ ಕೊರತೆ ಅಥವಾ ಕಳಪೆ ಗುಣಮಟ್ಟದ ಮೊಟ್ಟೆ ಪೂರೈಕೆಯಂತಹ ಆಡಳಿತಾತ್ಮಕ ತೊಡಕುಗಳು ಯೋಜನೆಯನ್ನು ಬಾಧಿಸದಂತೆ ನೋಡಿಕೊಳ್ಳಬೇಕು. ಮೊಟ್ಟೆ ನೀಡಿಕೆ ಕ್ರಮವು ಬಡ ಮಕ್ಕಳ ಪೌಷ್ಟಿಕತೆ ಕೊರತೆಯನ್ನು ನೀಗಿಸಬೇಕೇ ಹೊರತು ಅದನ್ನು ಇನ್ನಷ್ಟು ಹೆಚ್ಚಿಸದಂತೆ ನೋಡಿಕೊಳ್ಳಬೇಕು.

ಕರ್ನಾಟಕದ 60 ಸಾವಿರ ಅಂಗನವಾಡಿಗಳಲ್ಲಿ ಬಿಸಿಯೂಟ ಯೋಜನೆ ಜಾರಿಯಲ್ಲಿದೆ. ಅಂಗನವಾಡಿಗಳಲ್ಲಿ ಹಿಂದೆಯೂ ಮೊಟ್ಟೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಆಗ ಅದು ಬಿಸಿಯೂಟದ ಭಾಗವಾಗಿರಲಿಲ್ಲ. ರಾಜಕೀಯ ಲೆಕ್ಕಾಚಾರಗಳ ತೊಡಕುಗಳಿಗೆ ಒಳಗಾಗದಂತೆ ಸರ್ಕಾರವು ಬುದ್ಧಿವಂತಿಕೆಯ ಹೆಜ್ಜೆ ಇರಿಸಿದೆ.

ಇದು ಅಂಗನವಾಡಿ ಮಕ್ಕಳಿಗೆ ಪ್ರಯೋಜನವಾಗುವುದರ ಜತೆಗೆ ಹತ್ತಿರದ ಸಮುದಾಯಗಳಿಗೂ ಲಾಭಕರ. ಅಂದಾಜುಗಳ ಪ್ರಕಾರ, ರಾಜ್ಯದ 60 ಲಕ್ಷ ಮಕ್ಕಳಿಗೆ ಮೊಟ್ಟೆ ನೀಡಿಕೆಯಿಂದ ಪ್ರಯೋಜನ ದೊರೆಯಲಿದೆ.

 
-ಗಣೇಶ್ ಸಿ.ಆರ್.
ಲೇಖಕ ತಕ್ಷಶಿಲಾ ಸಂಸ್ಥೆಯಲ್ಲಿ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT