6

ಪುಟ್ಟ ಹುಡುಗನ ನುಡಿ ಬೆಡಗು

Published:
Updated:
ಪುಟ್ಟ ಹುಡುಗನ ನುಡಿ ಬೆಡಗು

ಏಳನೇ ತರಗತಿಯ ವಿದ್ಯಾರ್ಥಿ ಅಂತಃಕರಣ ಬರೆದ ಏಳು ಪುಸ್ತಕಗಳು ಕುತೂಹಲಕಾರಿಯಾಗಿವೆ. ಇವುಗಳಲ್ಲಿ ಅಂಕಣ ಬರಹಗಳಿವೆ, ಕವಿತೆ ಇದೆ. ಕಾಡಿನ ಕಥೆಗಳು, ಕಾದಂಬರಿ, ಕತೆಯ ಪುಸ್ತಕವಿದೆ. ಕ್ರಿಕೆಟ್‌ ಕುರಿತಾದ ಅಂಕಣ ಬರಹವೂ ಇದೆ.

ಅಂತಃಕರಣ ನಾಲ್ಕನೇ ತರಗತಿಯಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ಹುಡುಗ. ಸುಮಾರು 20 ಪುಸ್ತಕಗಳ ಲೇಖಕ. ಈ ಹುಡುಗನ ಬರಹಗಳು ಅಚ್ಚರಿ ಹುಟ್ಟಿಸುವಂತೆ ಇವೆ. ಬರಹಗಳಿಗಿಂತ ಮಿಗಿಲಾಗಿ ಅವನು ಪ್ರಯತ್ನಿಸಿರುವ ಬರವಣಿಗೆ ಪ್ರಕಾರಗಳು ಏಳನೇ ತರಗತಿಯ ಹುಡುಗರು ಪ್ರಯತ್ನಿಸಬಹುದಾದ ಬರವಣಿಗೆಯ ಮಾದರಿಗಳಲ್ಲ. ಇಲ್ಲೇ ಈ ಹುಡುಗನ ವಿಶಿಷ್ಟ ಪ್ರಯತ್ನವಿರುವುದು.

ಶಿವಮೊಗ್ಗದ ಈ ಹುಡುಗ ಬರೆದಿರುವ ಸಾಹಿತ್ಯದ ಪ್ರಮಾಣವನ್ನು ನೋಡಿದರೆ ಅಚ್ಚರಿಯಾಗುತ್ತದೆ. ಅವನದೇ ಪುಸ್ತಕದ ಹೆಸರನ್ನು ಬಳಸಿ ಹೇಳುವುದಾದರೆ ಅದು ‘ದಶದಿಕ್ಕು’ಗಳನ್ನು ಒಳಗೊಂಡಿದೆ. ‘ದಶದಿಕ್ಕು’ ಎಂಬ ಈ ಅಂಕಣ ಬರಹಗಳ ಸಂಕಲವನ್ನೇ ನೋಡಬಹುದು. ಇದರಲ್ಲಿ ಸಿನಿಮಾ, ಕ್ರಿಕೆಟ್‌, ಸಾಹಿತ್ಯ, ಟೀವಿ, ತಂತ್ರಜ್ಞಾನ, ಪರಿಸರ, ಪ್ರವಾಸ ಹೀಗೆ ಹತ್ತಾರು ವಿಷಯಗಳು, ಮಾಹಿತಿಗಳು ಮಕ್ಕಳ ಬೌದ್ಧಿಕಮಟ್ಟ – ಸಂವೇದನೆಯ ಮಟ್ಟದಲ್ಲೇ ರೂಪುಗೊಂಡಿವೆ. ಇದೇ ಪುಸ್ತಕದಲ್ಲಿ ರಾಯಚೂರು ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೂ ಪ್ರವಾಸ ಕಥನವಾಗಿ ಮೂಡಿದೆ. ವಿದೇಶಗಳಿಗೆ ಹೋದರೆ ಮಾತ್ರ ಪ್ರವಾಸ ಕಥನ ಬರೆಯಬಹುದು ಎಂಬ ಕಲ್ಪನೆಯನ್ನು ಇದು ಭಂಗಗೊಳಿಸುವಂತಿದೆ. ಇಲ್ಲಿ ಈ ಲೇಖಕ ತನಗೆ ಗೊತ್ತಿಲ್ಲದ ವಿಷಯಗಳಿಗೆ ಕೈಹಾಕುವುದಿಲ್ಲ. ತನಗೆ ನಿಲುಕುವ ವಿಷಯಗಳನ್ನೇ ತೆಗೆದುಕೊಂಡು ಬರೆಯಲು ಯತ್ನಿಸಿದ್ದಾನೆ. ಹಾಗಾಗಿ ಅದು ಎಲ್ಲರನ್ನು ನೇರವಾಗಿ ಮುಟ್ಟುವಂತಿದೆ.

ಅಂತಃಕರಣನ ಪುಸ್ತಕಗಳ ಸಾಮಾನ್ಯ ಗುಣವೆಂದರೆ ಅದರ ಸರಳ ಭಾಷೆ. ಅಂಕಣಗಳು ಮಾಹಿತಿ, ವಿಶ್ಲೇಷಣೆಗಳಿಂದ ಕೂಡಿವೆ. ಅವನದೇ ಒಲವು–ನಿಲುವುಗಳು ಅದರಲ್ಲಿವೆ. ಅವು ಯಾವುದನ್ನೂ ಅವನು ಓದುಗರ ಮೇಲೆ ಹೇರುವುದಿಲ್ಲ. ಮತ್ತು ಗೊಂದಲಗಳಿಗೆ ಎಡೆಯಾಗದಂತೆ ನೇರವಾಗಿ ವಿಷಯವನ್ನು ಮಂಡಿಸುವುದು ಈ ಲೇಖಕನ ಬರವಣಿಗೆಯ ಮತ್ತೊಂದು ಅಂಶ. ಅವನ ‘ರೋಮಾಂಚನ’ ಎಂಬ ಅಂಕಣ ಬರಹಗಳ ಪುಸ್ತಕ ಕ್ರೀಡಾ ಬರಹಗಳನ್ನು ಒಳಗೊಂಡಿದೆ. ಫುಟ್‌ಬಾಲ್‌, ಕಬಡ್ಡಿ, ಒಲಿಂಪಿಕ್ಸ್‌ನ ಬಗೆಗಿನ ಲೇಖನಗಳು ಆ ಕ್ರೀಡೆಗಳ ಆಗುಹೋಗುಗಳನ್ನು, ಅಲ್ಲಿನ ರೋಮಾಂಚಕ, ಅಚ್ಚರಿದಾಯಕ ಕ್ಷಣಗಳನ್ನು, ಮಿಂಚುಗಳನ್ನು ಕಾಣಿಸುತ್ತವೆ. ಹಾಗೆಯೇ ‘ಫೋರ್ತ್‌ಅಂಪೈರ್’ ಪುಸ್ತಕ ಭಾರತದ ದೌರ್ಬಲ್ಯ, ಪ್ರೇರಣೆ ಎರಡೂ ಆಗಿರುವ ಕ್ರಿಕೆಟ್‌ ಆಟದ ಕುರಿತಾಗಿದೆ. ಇಲ್ಲಿನ ಬರಹಗಳು ವೃತ್ತಪತ್ರಿಕೆಗಳ ಬರಹಗಳ ಮಟ್ಟವನ್ನು ಮೀರಿಲ್ಲ.

ಮಾಹಿತಿ ತಂತ್ರಜ್ಞಾನವನ್ನು ವಸ್ತುವ್ನನಾಗಿಸಿಕೊಂಡ ಕಾದಂಬರಿ ‘ಗ್ವಾಲಿಮಾರ್‌ ರಹಸ್ಯ’. ಇದೊಂದು ಮಾಹಿತಿತಂತ್ರಜ್ಞಾನದ ಕುತೂಹಲಕಾರಿ ಕಾದಂಬರಿಯಾಗಿ ಗಮನಸೆಳೆಯುತ್ತದೆ. ಕಾಡಿನ ಕತೆಗಳನ್ನು ಹೇಳುವ ‘ಭಾರತವನದ ಅರಳೀಮರ’ ಮನುಷ್ಯನ ಕತೆಯನ್ನೇ ನಿರೂಪಿಸುತ್ತದೆ.

ಮಕ್ಕಳ ಆಟ, ಪಾಠ, ನೋಟಗಳನ್ನೇ ಅಂತಃಕರಣನ ‘ಕಣ್ಣಾಮುಚ್ಚಾಲೆ’ಯ ಕವಿತೆಗಳು ದಾಖಲಿಸುತ್ತವೆ. ‘ಆಟವಿಲ್ಲದ ಮೈದಾನ’ದ ಪುಟ್ಟ ಕತೆಗಳ ಆವರಣ ಇಂದಿನ ಮಕ್ಕಳಲೋಕದ್ದೇ ಹೌದು. ತನ್ನ ಸುತ್ತಲಿನ ಜಗತ್ತಿಗೆ, ಬದುಕಿಗೆ ತನ್ನದೇ ರೀತಿಯಲ್ಲಿ ಪ್ರತಿಸ್ಪಂದಿಸಿದ್ದನ್ನು ಈಲ್ಲಿನ ಪುಸ್ತಕಗಳಲ್ಲಿ ಅಂತಃಕರಣ ದಾಖಲಿಸಿದ್ದಾನೆ. ಅವು ಮುಗ್ಧವಾಗಿ, ಉತ್ಸಾಹದಿಂದ ಕೂಡಿವೆ.

ಅಂತಃಕರಣನ ಬರಹಗಳ ಪ್ರಮಾಣವನ್ನು ನೋಡಿ ಅವನದೇ ವಯಸ್ಸಿನ ಮಕ್ಕಳಲ್ಲಿ ಕೊಂಚ ಹಿಂಜರಿಕೆ ಉಂಟಾಗಬಹುದು. ಅದು ಸಹಜ. ಆಸಕ್ತಿ ಇರುವ ಮಕ್ಕಳು ಈ ದಿಸೆಯಲ್ಲಿ ಅವನಂತೆಯೇ ಪ್ರಯತ್ನಿಸಬಹುದು. ಅವನ ಸಾಧನೆ ಹಲವರಲ್ಲಿ ನಾಳೆಗಳಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕುವ ಸಾಧ್ಯತೆ ಇದೆ. ಅವರ ಆ ನಿರೀಕ್ಷೆಯ ಭಾರ ಈ ಪುಟ್ಟಲೇಖಕನನ್ನು ಕುಸಿಯುವಂತೆ ಮಾಡಬಹುದು. ಹಾಗೆ ಆಗದಂತೆ ಅಂತಃಕರಣನಂತಹ ಹುಡುಗರು ಇಷ್ಟೆಲ್ಲ ಪ್ರಕಾರಗಳಲ್ಲಿ ಬರೆಯುವುದಕ್ಕಿಂತ ಮುಂದಿನ ದಿನಗಳಲ್ಲಿ ತಮ್ಮ ನಿರ್ದಿಷ್ಟ ಕ್ಷೇತ್ರಗಳನ್ನು ಗುರುತಿಸಿಕೊಂಡು ಅದರಲ್ಲೇ ಮುಂದುವರಿದರೆ ಇನ್ನಷ್ಟು ಉತ್ತಮ ಕೃತಿಗಳು ಕನ್ನಡಿಗರಿಗೆ ಸಿಗಬಹುದು.

**

ರೋಮಾಂಚನ: (ಕ್ರೀಡಾ ಅಂಕಣ ಪ್ರಬಂಧಗಳು)

ಪು:
96, ಬೆ: ₹ 75

*

ಭಾರತವನದ ಅರಳೀಮರ (ಕಾಡಿನ ಕಥೆಗಳು)

ಪು:
56, ಬೆ: ₹ 40

*

ದಶದಿಕ್ಕು (ಅಂಕಣ ಪ್ರಬಂಧಗಳು)

ಪು:
125, ಬೆ:₹ 120

*

ಆಟವಿಲ್ಲದ ಮೈದಾನ (ಕಥೆಗಳು)

ಪು:
56, ಬೆ: ₹ 40

*

ಫೋರ್ತ್‌ ಅಂಪೈರ್‌ (ಕ್ರಿಕೆಟ್ ಅಂಕಣ ಪ್ರಬಂಧಗಳು)

ಪು:
120, ಬೆ: ₹ 100

*

ಕಣ್ಣಾಮುಚ್ಚಾಲೆ (ಕವಿತೆಗಳು)

ಪು:
72, ಬೆ: ₹ 50

*

ಗ್ವಾಲಿಮಾರ್‌ ರಹಸ್ಯ (ಕಾದಂಬರಿ)

ಪು:
88, ಬೆ: ₹ 70

*

ಮೇಲಿನ ಏಳೂ ಪುಸ್ತಕಗಳ ಲೇಖಕ: ಅಂತಃಕರಣ

ಪ್ರ:
ಬೆನಕ ಬುಕ್ಸ್‌ ಬ್ಯಾಂಕ್‌, ಯಳಗಲ್ಲು, ಕೋಡೂರು ಅಂಚೆ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry