ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ನಂತರ: ಸ್ವಾವಲಂಬನೆಗೆ ನೆರವಾಗುವ ಪಶುಸಂಗೋಪನೆ ಡಿಪ್ಲೊಮಾ

Last Updated 12 ಮೇ 2017, 11:43 IST
ಅಕ್ಷರ ಗಾತ್ರ

ಬೀದರ್: ಪೈಪ್‌ಲೈನ್‌ ಮೂಲಕ ಸರಬರಾಜು ಮಾಡುವಷ್ಟು ಹಾಲನ್ನು ಬೀದರ್‌ ಜಿಲ್ಲೆಯಲ್ಲಿ ಉತ್ಪಾದನೆ ಮಾಡಲು ಸಾಧ್ಯವಿದೆ.
ಹೀಗೆಂದು ಕ್ಷೀರಕ್ರಾಂತಿ ಹರಿಕಾರ, ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ (GCMMF)ದ ಸಂಸ್ಥಾಪಕ ಅಧ್ಯಕ್ಷ ವರ್ಗಿಸ್ ಕುರಿಯನ್ ಅವರು ಬೀದರ್ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ  ಹೇಳಿದ್ದರು. ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟಕ್ಕೆ ಬೀದರ್‌ ಜಿಲ್ಲೆಯಿಂದ ಪೂರೈಕೆಯಾಗುತ್ತಿರುವ ಹಾಲಿನ ಪ್ರಮಾಣವನ್ನು ಅವಲೋಕಿಸಿದರೆ ಕುರಿಯನ್‌ ಹೇಳಿಕೆ ಸತ್ಯ ಎನ್ನುವುದು ಮನವರಿಕೆಯಾಗುತ್ತದೆ.

ಜಿಲ್ಲೆಯಲ್ಲಿ  ಹೈನೋದ್ಯಮ ಹಾಗೂ ಪಶು ಸಂಗೋಪನೆಗೆ ಸಾಕಷ್ಟು ಅವಕಾಶಗಳಿವೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಶಿಗ್ಗಾವಿ ಮತ್ತು ತಿಪಟೂರು ಸಮೀಪದ ಕೊನೆಹಳ್ಳಿಯಲ್ಲಿ ಪಶುಸಂಗೋಪನೆ ಡಿಪ್ಲೊಮಾ ಪರಿಚಯಿಸಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಯಾದಗಿರಿ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯಲ್ಲೂ ಪಶುಸಂಗೋಪನೆ ಡಿಪ್ಲೊಮಾ ಆರಂಭಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳ ಬಯಸುವವರಿಗೆ ಹಾಗೂ ಕೃಷಿ ಜಮೀನು ಇರುವವರಿಗೆ  ಈ ಕೋರ್ಸ್ ಅನುಕೂಲವಾಗಿದೆ.

ಏನಿದು ಪಶುಸಂಗೋಪನೆ ಡಿಪ್ಲೊಮಾ ?: ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಎರಡು ವರ್ಷದ ಪಶುಸಂಗೋಪನೆ ಡಿಪ್ಲೊಮಾ ಮಾಡಬಹುದಾಗಿದೆ.  ರಾಜ್ಯಮಟ್ಟದಲ್ಲಿ ಮೆರಿಟ್ ಆಧಾರದ ಮೇಲೆ ಪ್ರವೇಶ ದೊರೆಯುತ್ತದೆ.

ವಿದ್ಯಾರ್ಥಿಗಳು ಕಡ್ಡಾಯವಾಗಿ 1 ರಿಂದ 10ನೇ ತರಗತಿ ವರೆಗೆ ಗ್ರಾಮೀಣ ಪ್ರದೇಶದಲ್ಲಿಯೇ ವ್ಯಾಸಂಗ ಮಾಡಿರಬೇಕು. 2 ವರ್ಷದ  ಡಿಪ್ಲೊಮಾ ಅವಧಿಯಲ್ಲಿ ಪ್ರತೀ ತಿಂಗಳು  ₹1,000 ಶಿಷ್ಯವೇತನ ನೀಡಲಾಗುತ್ತದೆ.  ಎಸ್ಸೆಸ್ಸೆಲ್ಸಿ ನಂತರ ಶಿಕ್ಷಣ ಮುಂದುವರಿಸಲು ಸಾಧ್ಯವಾಗದವರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅನುಕೂಲವಾಗಿದೆ. ಈ ಕೋರ್ಸ್‌ನಲ್ಲಿ ಕುರಿ, ಮೇಕೆ, ಕೋಳಿ ಸಾಕಾಣಿಕೆ ಕುರಿತು ತರಬೇತಿ ಹಾಗೂ ಮಾಹಿತಿ ನೀಡಲಾಗುತ್ತದೆ. ಪಶು ಆಹಾರ, ಪೌಷ್ಟಿಕ ಆಹಾರ, ವೈಜ್ಞಾನಿಕ ರೀತಿಯಲ್ಲಿ ಪಶುಪಾಲನೆ ಕುರಿತು ಪ್ರಾಯೋಗಿಕವಾಗಿ ಮಾಹಿತಿ ನೀಡಲಾಗುತ್ತಿದೆ. 

ಬೀದರ್ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ರಚನೆಯಾದರೆ ಐದು ಲಕ್ಷ ಲೀಟರ್‌ ವರೆಗೂ ಹಾಲು ಉತ್ಪಾದನೆ ಮಾಡಬಹುದಾಗಿದೆ. ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೂ ಹಾಲು ಪೂರೈಸಬಹುದು. ಜಾನುವಾರು ಪಾಲನೆಗೆ ಅಗತ್ಯವಿರುವ ಸೂಕ್ತ ಹವಾಗುಣ ಹಾಗೂ ಪರಿಸರ ಜಿಲ್ಲೆಯಲ್ಲಿದೆ.
‘ಪಶುಸಂಗೋಪನೆ ಡಿಪ್ಲೊಮಾ ನಂತರ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸುಜಲಾ–3 ಪ್ರಾಜೆಕ್ಟ್‌ನಲ್ಲಿ ಕ್ಷೇತ್ರ ಪರಿವೀಕ್ಷಕ ಹುದ್ದೆಗೆ ನೇಮಕಗೊಂಡಿದ್ದೇನೆ.

₹ 11,400 ಮೂಲವೇತನ ಹಾಗೂ ಇತರೆ ಭತ್ಯೆ ದೊರೆಯುತ್ತಿದೆ. ಗ್ರಾಮಗಳಿಗೆ ತೆರಳಿ ರೈತರಿಗೆ ಒಣಮೇವು ಪೌಷ್ಟಿಕರಣ, ರಸ ಮೇವು, ಜಾನವಾರು ರೋಗ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿವಳಿಕೆ ನೀಡುತ್ತಿದ್ದೇನೆ. ರಾಜ್ಯದ ಏಳು ಜಿಲ್ಲೆಯಲ್ಲಿ ಜಾರಿಯಲ್ಲಿರುವ ಈ ಯೋಜನೆಗೆ  ಪಶುಸಂಗೋಪನೆ ಡಿಪ್ಲೊಮಾ ಅಭ್ಯರ್ಥಿಗಳನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಹಳೆಯ ವಿದ್ಯಾರ್ಥಿ ಶಿಗ್ಗಾವಿಯ ಸುನೀಲ್‌ ರೊಳ್ಳಿ.

ಸರ್ಕಾರಿ ನೇಮಕಾತಿಯಲ್ಲೂ ಅವಕಾಶ
‘ಸರ್ಕಾರದ ಇಲಾಖೆಗಳಲ್ಲಿ ಈವರೆಗೆ ಪಶುಸಂಗೋಪನೆ ಡಿಪ್ಲೊಮಾ ಮಾಡಿದವರ ನೇಮಕ ಆಗಿಲ್ಲ. ಆದರೆ ಪಶು ಸಂಗೋಪನಾ ಇಲಾಖೆಯಲ್ಲಿನ ಕ್ಷೇತ್ರ ಸಹಾಯಕ ಹುದ್ದೆಗೆ ಪಶುಸಂಗೋಪನೆ ಡಿಪ್ಲೊಮಾ ಶಿಕ್ಷಣ ಪಡೆದವರನ್ನು ನೇಮಕಾತಿ ಮಾಡಿಕೊಳ್ಳುವಂತೆ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಸರ್ಕಾರ ಶೀಘ್ರದಲ್ಲೇ ಆದೇಶ ಹೊರಡಿಸುವ ನಿರೀಕ್ಷೆ  ಇದೆ’  ಎನ್ನುತ್ತಾರೆ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವಿಸ್ತರಣಾಧಿಕಾರಿ ಡಾ.ಎಸ್‌.ಎಂ.ಶಿವಪ್ರಕಾಶ.
-ಚಂದ್ರಕಾಂತ ಮಸಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT