ಭಾನುವಾರ, ಮಾರ್ಚ್ 26, 2023
31 °C

‘ಚೀನಾ–ಪಾಕಿಸ್ತಾನ’ ಆರ್ಥಿಕ ಕಾರಿಡಾರ್‌ಗೆ ಪರ್ಯಾಯವಾಗಿ ‘ಭಾರತ–ಜಪಾನ್‌’ ಹೊಸ ಯೋಜನೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

‘ಚೀನಾ–ಪಾಕಿಸ್ತಾನ’ ಆರ್ಥಿಕ ಕಾರಿಡಾರ್‌ಗೆ ಪರ್ಯಾಯವಾಗಿ ‘ಭಾರತ–ಜಪಾನ್‌’ ಹೊಸ ಯೋಜನೆ

ನವದೆಹಲಿ: ಚೀನಾ ಹಾಗೂ ಪಾಕಿಸ್ತಾನ ರಾಷ್ಟ್ರಗಳ ನಡುವೆ ಆರಂಭವಾಗಲಿರುವ ನೂತನ ಆರ್ಥಿಕ ಕಾರೀಡಾರ್‌ ‘ಒನ್‌ ಬೆಲ್ಟ್‌ ಒನ್‌ ರೋಡ್‌(ಒಬಿಒಆರ್‌)’ ಯೋಜನೆಗೆ ಪರ್ಯಾಯವಾಗಿ ಭಾರತ ಹಾಗೂ ಜಪಾನ್‌ ದೇಶಗಳು ಹೊಸ ಯೋಜನೆಯೊಂದನ್ನು ರೂಪಿಸಿವೆ.

ಹಿಂದೂ ಮಹಾಸಾಗರದ ವಾಣಿಜ್ಯ ವ್ಯವಹಾರದಲ್ಲಿ  ಅಧಿಪತ್ಯ ಸಾಧಿಸಲು ಚೀನಾ ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದೆ. ಹಾಗಾಗಿ ಭಾರತ–ಜಪಾನ್‌ಗಳು ಏಷ್ಯಾ ಹಾಗೂ ಆಫ್ರಿಕಾ ರಾಷ್ಟ್ರಗಳ ನಡುವೆ ಸಂಪರ್ಕ ಕಲ್ಪಿಸುವ ಮಾರ್ಗಗಳಿಗೆ ಸಂಬಂಧಿಸಿದಂತೆ ತಮ್ಮ ಈ ಹಿಂದಿನ ಯೋಜನೆಗಳಲ್ಲಿದ್ದ ಕಠಿಣ ನಿಯಮಗಳನ್ನು ಮೃದುಗೊಳಿಸಲು ನಿರ್ಧರಿಸಿವೆ.

2016ರ ನವೆಂಬರ್‌ನಲ್ಲಿ ಟೋಕಿಯೋದಲ್ಲಿ ನಡೆದಿದ್ದ ವಾರ್ಷಿಕ ಶೃಂಗ ಸಭೆಯ ಸಂದರ್ಭ ಭೇಟಿಯಾಗಿದ್ದ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಶಿಂಜೋ ಅಬೆ ಈ ಕುರಿತು ಚರ್ಚಿಸಿದ್ದರು.

ಮೇ 22ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ‘ಆಫ್ರಿಕನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌(ಎಎಫ್‌ಡಿಬಿ)’ ಸಭೆಯಲ್ಲಿ ಭಾರತ ಹಾಗೂ ಜಪಾನ್‌ ದೇಶಗಳು ತನ್ನ ಪಾಲುದಾರ ರಾಷ್ಟ್ರಗಳಿಗೆ ಈ ಯೋಜನೆಯ ಬಗ್ಗೆ ತಿಳಿಸಿಕೊಡಲಿವೆ. ಈ ಸಭೆಯಲ್ಲಿ ಆಫ್ರಿಕಾ ಖಂಡದ 53 ರಾಷ್ಟ್ರಗಳನ್ನೊಳಗೊಂಡಂತೆ ಸುಮಾರು 78 ಸದಸ್ಯ ರಾಷ್ಟ್ರಗಳು ಪಾಲ್ಗೊಳ್ಳಲಿವೆ.

ಚೀನಾ ತನ್ನ ಮೂಲಕ ರೈಲು, ರಸ್ತೆ ಹಾಗೂ ಸಮುದ್ರ ಮಾರ್ಗಗಳಲ್ಲಿ ಏಷಿಯಾ ಹಾಗೂ ಯುರೋಪಿಯನ್‌ ರಾಷ್ಟ್ರಗಳ ನಡುವೆ ಸಂಪರ್ಕ ಕಲ್ಪಿಸುವ ಹಲವು ಮಾರ್ಗಗಳನ್ನು ವಿವಿಧ ರಾಷ್ಟ್ರಗಳ ಮುಂದೆ ಪ್ರದರ್ಶಿಸಿದೆ. ಜತೆಗೆ ಈಗಾಗಲೇ ಚೀನಾ ರೂಪಿಸುತ್ತಿರುವ ಬಹುರಾಷ್ಟ್ರೀಯ ಆರ್ಥಿಕ ಕಾರಿಡಾರ್‌ ಒಬಿಒಆರ್‌ ಯೋಜನೆಯಲ್ಲಿ ಭಾರತ ಹಾಗೂ ಜಪಾನ್‌ಗಳು ಪಾಲ್ಗೊಳ್ಳದಿರಲು ನಿರ್ಧರಿಸಿವೆ.

ಅದರ ಬದಲಾಗಿ ಜಪಾನ್‌, ಭಾರತದ ಮೂಲಕ ಆಫ್ರಿಕಾ ರಾಷ್ಟ್ರಗಳನ್ನು ತಲುಪಬಲ್ಲ ಮತ್ತೊಂದು ಪರ್ಯಾಯ ಮಾರ್ಗವನ್ನು ನಿರ್ಮಿಸಲು ಉದ್ದೇಶಿಸಿದೆ. ಇದು ಯುರೋಪಿಯನ್‌ ಆರ್ಥಿಕ ವ್ಯವಹಾರದ ಮೇಲೂ ಪರಿಣಾಮ ಉಂಟುಮಾಡಲಿದೆ. ಭಾರತ-ಜಪಾನ್‌ ಸಹಭಾಗಿತ್ವದ ಈ ಯೋಜನೆಗಾಗಿ ಭಾರತದ 'ಆಕ್ಟ್ ಈಸ್ಟ್' ಮತ್ತು ಜಪಾನ್‌ನ 'ಕ್ವಾಲಿಟಿ ಇನ್ಫ್ರಾಸ್ಟ್ರಕ್ಚರ್‌’ಗಳಲ್ಲಿ ಬದಲಾವಣೆಗಳಾಗಲಿವೆ. ಇದರಿಂದಾಗಿ ಇಂಡೋ-ಪೆಸಿಫಿಕ್ ಪ್ರದೇಗಳ ಆರ್ಥಿಕ ವ್ಯವಹಾರಗಳಲ್ಲಿ ಮುಕ್ತ ಅವಕಾಶ ಸೃಷ್ಟಿಯಾಗಲಿವೆ.

ಭಾರತ–ಜಪಾನ್‌ ಸಹಭಾಗಿತ್ವದಲ್ಲಿ ನಿರ್ಮಾಣವಾಗುವ ಮಾರ್ಗದಲ್ಲಿ ಹಲವು ಬಂದರುಗಳನ್ನು ಸಹ ನಿರ್ಮಿಸಲಾಗುವುದು ಆದ್ದರಿಂದ ಈ ಭಾಗದ ವಾಣಿಜ್ಯ ಅಭಿವೃದ್ಧಿಗೆ ಸಹಾಯಕವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.