ಭಾನುವಾರ, ಮೇ 29, 2022
31 °C

ಬ್ರಿಟನ್‌ನ ಮ್ಯಾಂಚೆಸ್ಟರ್‌: ಉಗ್ರನ ಕರಾಳ ಕೃತ್ಯಕ್ಕೆ 22 ಬಲಿ

ಪಿಟಿಐ Updated:

ಅಕ್ಷರ ಗಾತ್ರ : | |

ಬ್ರಿಟನ್‌ನ ಮ್ಯಾಂಚೆಸ್ಟರ್‌: ಉಗ್ರನ ಕರಾಳ ಕೃತ್ಯಕ್ಕೆ 22 ಬಲಿ

ಮ್ಯಾಂಚೆಸ್ಟರ್‌ (ರಾಯಿಟರ್ಸ್‌): ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್‌ ದಾಳಿಗೆ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ. 59 ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಹದಿಹರೆಯದ ಬಾಲಕ ಬಾಲಕಿಯರೇ ಹೆಚ್ಚಿದ್ದಾರೆ.  ಸ್ಫೋಟದ ಹೊಣೆಯನ್ನು ಉಗ್ರಗಾಮಿ ಸಂಘಟನೆ ಐಎಸ್‌ ಹೊತ್ತುಕೊಂಡಿದೆ.

ಯುರೋಪ್‌ನ ಅತ್ಯಂತ ದೊಡ್ಡ ಸಭಾಂಗಣ ಮ್ಯಾಂಚೆಸ್ಟರ್‌ ಅರೇನಾದಲ್ಲಿ ಅಮೆರಿಕದ ಪಾಪ್‌ ತಾರೆ ಅರಿಯಾನಾ ಗ್ರಾಂಡೆ ಅವರ ಸಂಗೀತ ಕಾರ್ಯಕ್ರಮ ಇನ್ನೇನು ಮುಗಿಯಿತು ಎಂಬ ಹೊತ್ತಿಗೆ ಆತ್ಮಹತ್ಯಾ ಬಾಂಬರ್‌ ಬಾಂಬ್‌ ಸ್ಫೋಟಿಸಿದ್ದಾನೆ. ಸ್ಫೋಟದ ನಂತರದ ಕೆಲವು ಕ್ಷಣ ಎಲ್ಲವೂ ಸ್ತಬ್ಧವಾದಂತಿತ್ತು.

ತಕ್ಷಣ ಎಚ್ಚೆತ್ತುಕೊಂಡ ಜನರು ಸಭಾಂಗಣದಿಂದ ಹೊರಗೆ ಓಡತೊಡಗಿದ್ದಾರೆ. ಕಾಲ್ತುಳಿತಕ್ಕೆ ಸಿಕ್ಕಿ ಹಲವರು ಗಾಯಗೊಂಡಿದ್ದಾರೆ.

ಬ್ರಿಟನ್‌ನ ನಾಲ್ವರು ಮುಸ್ಲಿಂ ಉಗ್ರರು  2005ರಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಗುರಿಯಾಗಿಸಿ ಆತ್ಮಹತ್ಯಾ ಬಾಂಬ್‌ ದಾಳಿ ನಡೆಸಿದ್ದರು. ಇದರಲ್ಲಿ 52 ಜನರು ಬಲಿಯಾಗಿದ್ದರು. ನಂತರ ಬ್ರಿಟನ್‌ನಲ್ಲಿ ಅತ್ಯಂತ ಕರಾಳ ದಾಳಿ ಮ್ಯಾಂಚೆಸ್ಟರ್‌ ಅರೆನಾದಲ್ಲಿ ನಡೆದಿದೆ.

‘ನಾವು ಓಡಿದೆವು. ಸುತ್ತಲು ಇದ್ದ ಜನರು ಕಿರುಚುತ್ತಿದ್ದರು. ಹೊರಗೆ ಹೋಗುವುದಕ್ಕಾಗಿ ಮೆಟ್ಟಲುಗಳಲ್ಲಿ ತಳ್ಳಾಟ ನಡೆಯಿತು. ಬಾಲಕಿಯರು ಕೆಳಗೆ ಬಿದ್ದು ಅಳುತ್ತಿದ್ದುದನ್ನು ನಾನು ಕಂಡೆ. ಕಾಲಿಗೆ ಗಾಯಗೊಂಡ ಕೆಲವು ಮಹಿಳೆಯರಿಗೆ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದರು. ಎಲ್ಲವೂ ಗೊಂದಲಮಯವಾಗಿತ್ತು’ ಎಂದು ಸೆಬಾಸ್ಟಿಯನ್‌ ಡಯಾಸ್‌ ಎಂಬ ಯುವಕ ಹೇಳಿದ್ದಾರೆ. ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಒಬ್ಬನೇ ವ್ಯಕ್ತಿ ಈ ಸ್ಫೋಟ ನಡೆಸಿದ್ದಾನೆ ಎಂದು ಮ್ಯಾಂಚೆಸ್ಟರ್ ಪೊಲೀಸ್‌ ಮುಖ್ಯಸ್ಥ ಇಯಾನ್‌ ಹಾಕಿನ್ಸ್‌ಹೇಳಿದ್ದಾರೆ.

ಆತ್ಮಹತ್ಯಾ ಬಾಂಬರ್‌ನನ್ನು ಸಲ್ಮಾನ್‌ ಅಬೆದಿ (22) ಎಂದು ಗುರುತಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ಈತ ಮ್ಯಾಂಚೆಸ್ಟರ್‌ನಲ್ಲಿಯೇ ಹುಟ್ಟಿ ಬೆಳೆದವನು ಎಂಬ ಮಾಹಿತಿ ದೊರೆತಿದೆ. ಲಂಡನ್‌ನ ಬೀದಿಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇಲ್ಲಿನ ವಿಕ್ಟೋರಿಯಾ ರೈಲು ನಿಲ್ದಾಣದಲ್ಲಿ ಶಂಕಾಸ್ಪದವಾದ ಪೆಟ್ಟಿಗೆ ಕಂಡು ಬಂದ ಕಾರಣ ಸ್ವಲ್ಪ ಹೊತ್ತು ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಸಮಯ: ರಾತ್ರಿ 10.33ಕ್ಕೆ (ಭಾರತೀಯ ಸಮಯ ಮಂಗಳವಾರ ಬೆಳಗ್ಗಿನ ಜಾವ 3 ಗಂಟೆ) ಸ್ಫೋಟ ನಡೆಯಿತು.

ಭಾರಿ ಸಭಾಂಗಣ: ಮ್ಯಾಂಚೆಸ್ಟರ್‌ ಅರೆನಾ ಯುರೋಪ್‌ನಲ್ಲಿರುವ ಅತ್ಯಂತ ದೊಡ್ಡ ಸಭಾಂಗಣ. ಇದರಲ್ಲಿ 21 ಸಾವಿರ ಜನರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಅರಿಯಾನಾ ಗ್ರಾಂಡೆ ಅವರ ಕಾರ್ಯಕ್ರಮದ ಸಂದರ್ಭದಲ್ಲಿ ಎಷ್ಟು ಜನರಿದ್ದರು ಎಂಬುದು ತಿಳಿದು ಬಂದಿಲ್ಲ.

ಯುವಜನರೇ ಹೆಚ್ಚು: ಅರಿಯಾನಾ ಅವರು  ಅಮೆರಿಕ ಮತ್ತು ಯುರೋಪ್‌ನಲ್ಲಿ ಯುವಜನರಿಗೆ ಅದರಲ್ಲೂ ವಿಶೇಷವಾಗಿ ಯುವತಿಯರಿಗೆ ಹುಚ್ಚು ಹಿಡಿಸಿರುವ ಗಾಯಕಿ. ಕಾರ್ಯಕ್ರಮದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕ ಯುವತಿಯರೇ ಇದ್ದರು.

ಸ್ಥಗಿತ: ಬ್ರಿಟನ್‌ನಲ್ಲಿ ಜೂನ್‌ 8ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಸ್ಫೋಟದಿಂದಾಗಿ ಆಡಳಿತ ಮತ್ತು ವಿರೋಧ ಪಕ್ಷಗಳು ಚುನಾವಣಾ ಪ್ರಚಾರ ಸ್ಥಗಿತಗೊಳಿಸಲು ನಿರ್ಧರಿಸಿವೆ.

ಬಾಂಬ್‌ನಲ್ಲಿ ಲೋಹದ ತುಣುಕು: ಆತ್ಮಹತ್ಯಾ ಬಾಂಬರ್‌ ಸ್ಫೋಟಿಸಿದ ಬಾಂಬ್‌ನಲ್ಲಿ ಬೋಲ್ಟ್‌ಗಳು, ಲೋಹದ ತುಣುಕುಗಳು ಮತ್ತು ಮೊಳೆಗಳನ್ನು ತುಂಬಲಾಗಿತ್ತು. ಇವುಗಳು ದೇಹಕ್ಕೆ ನಾಟಿಕೊಂಡ 19 ಜನರ ಸ್ಥಿತಿ ಗಂಭೀರವಾಗಿದೆ.

ಸಂಭ್ರಮ: ಉಗ್ರಗಾಮಿ ಗುಂಪು ಐಎಸ್‌ನ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ದಾಳಿಯ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಇಂತಹ ಇನ್ನಷ್ಟು ದಾಳಿಗಳನ್ನು ನಡೆಸುವಂತೆ ಕರೆ ಕೊಟ್ಟಿದ್ದಾರೆ.

ಬ್ರಿಟನ್‌ ಮೇಲೆ ಉಗ್ರರ ಕಣ್ಣು

ಉಗ್ರರ ದಾಳಿಯ ಅಪಾಯ ಅತ್ಯಂತ ಹೆಚ್ಚಾಗಿರುವ ದೇಶಗಳಲ್ಲಿ ಬ್ರಿಟನ್‌ ಕೂಡ ಒಂದು. ಬ್ರಿಟನ್‌ನ ಭಯೋತ್ಪದನಾ ನಿಗ್ರಹ ದಳವು ಕ್ರಿಯಾಶೀಲವಾಗಿದೆ. ಭಯೋತ್ಪಾದನೆ ಚಟುವಟಿಕೆ ಜತೆ ನಂಟು ಹೊಂದಿದ ಆರೋಪದಲ್ಲಿ ಬಂಧಿತರಾದವರ ಸಂಖ್ಯೆ ದಿನಕ್ಕೆ ಸರಾಸರಿ ಒಂದರಂತೆ ಇದೆ.

ಒಬ್ಬನ ಬಂಧನ: ಸ್ಫೋಟದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ದಕ್ಷಿಣ ಮ್ಯಾಂಚೆಸ್ಟರ್‌ನಲ್ಲಿ 23 ವರ್ಷದ ಯುವಕನೊಬ್ಬನನ್ನು ಬಂಧಿಸಿದ್ದಾರೆ. ನಗರದ ಬೇರೊಂದು ಸ್ಥಳದಲ್ಲಿ ನಿಯಂತ್ರಿತ ಸ್ಫೋಟವೊಂದನ್ನೂ ಪೊಲೀಸರು ನಡೆಸಿದ್ದಾರೆ.

ಭಾರತೀಯರು ಸುರಕ್ಷಿತ

ನವದೆಹಲಿ (ಪಿಟಿಐ): ಮ್ಯಾಂಚೆಸ್ಟರ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಭಾರತೀಯರಿಗೆ ಯಾವುದೇ ಹಾನಿ ಆಗಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ. ಕೈಗಾರಿಕಾ ನಗರವಾಗಿರುವ ಮ್ಯಾಂಚೆಸ್ಟರ್‌ನಲ್ಲಿ ದಕ್ಷಿಣ ಏಷ್ಯಾದ ಜನರು ಗಣನೀಯ ಪ್ರಮಾಣದಲ್ಲಿದ್ದಾರೆ.

ಮಕ್ಕಳಿಗಾಗಿ ಹುಡುಕಾಟ

ಹಲವು ಜನರು ತಮ್ಮ ಮಕ್ಕಳಿಗಾಗಿ ಕಣ್ಣೀರಿಡುತ್ತಾ ಹುಡುಕಾಡುತ್ತಿದ್ದ ದೃಶ್ಯ ಸ್ಫೋಟದ ಸ್ಥಳದಲ್ಲಿ ಕಂಡು ಬಂತು. ಹಲವರು ಮಕ್ಕಳ ಫೋಟೊಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಮಾಹಿತಿ ನೀಡುವಂತೆ ಕೋರಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಉಗ್ರರಿಂದ ರಕ್ತದೋಕುಳಿ

2017 ಏಪ್ರಿಲ್‌ 7: ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಜನದಟ್ಟಣೆಯ ಅಂಗಡಿಗೆ ಟ್ರಕ್‌ ಹರಿಸಿ ಐವರ ಹತ್ಯೆ

2017 ಏಪ್ರಿಲ್‌ 3: ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನ ರೈಲು ಸುರಂಗ ಮಾರ್ಗದಲ್ಲಿ ಬಾಂಬ್‌ ಸ್ಫೋಟಕ್ಕೆ ಐವರು ಬಲಿ. ಹೊಣೆ ಹೊತ್ತುಕೊಂಡ ಅಲ್‌ ಕೈದಾ

2017 ಮಾರ್ಚ್‌ 22: ಲಂಡನ್‌ನ ವೆಸ್ಟ್‌ಮಿನ್‌ಸ್ಟರ್‌ ಬ್ರಿಡ್ಜ್‌ನಲ್ಲಿ ಪಾದಚಾರಿ ದಾರಿಯ ಮೇಲೆ ಕಾರು ಹತ್ತಿಸಿ ಐದು ಜನರ ಹತ್ಯೆ. ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಇರಿತ. ಉಗ್ರನನ್ನು ಗುಂಡಿಟ್ಟು ಸಾಯಿಸಿದ ಪೊಲೀಸರು

2017 ಜನವರಿ 1: ಇಸ್ತಾಂಬುಲ್‌ನ ರೈನಾ ನೈಟ್‌ಕ್ಲಬ್‌ಗೆ ನುಗ್ಗಿದ ಬಂದೂಕುಧಾರಿ ಮನಸೋಇಚ್ಛೆ ಗುಂಡು ಹಾರಿಸಿ 39 ಮಂದಿಯ ಹತ್ಯೆ. ಹೊಣೆ ಹೊತ್ತುಕೊಂಡ ಐಎಸ್‌

2016 ಡಿಸೆಂಬರ್‌ 19: ಜರ್ಮನಿಯ ಬರ್ಲಿನ್‌ನ ಮಾರುಕಟ್ಟೆ ಮೇಲೆ ಟ್ರಕ್‌ ಹರಿಸಿ 12 ಜನರ ಹತ್ಯೆ. ಕೃತ್ಯದ ಹೊಣೆ ಹೊತ್ತುಕೊಂಡು ಐಎಸ್‌. ನಾಲ್ಕು ದಿನ ಬಳಿಕ ಪೊಲೀಸ್‌ ಗುಂಡಿಗೆ ಉಗ್ರ ಬಲಿ

2016 ಜುಲೈ 14: ಫ್ರಾನ್ಸ್‌ನ ರಾಷ್ಟ್ರೀಯ ರಜಾದಿನದಂದು ನೀಸ್‌ ನಗರದಲ್ಲಿ ಟ್ರಕ್‌ ಹರಿಸಿ ಐಎಸ್‌ ಉಗ್ರನೊಬ್ಬ 86 ಮಂದಿಯನ್ನು ಹತ್ಯೆ ಮಾಡಿದ

2016 ಮಾರ್ಚ್‌ 22: ಬೆಲ್ಜಿಯಂನ ಬ್ರಸೆಲ್ಸ್‌ ವಿಮಾನ ನಿಲ್ದಾಣ ಮತ್ತು ಮೇಲ್‌ಬೀಕ್‌ ಮೆಟ್ರೊ ರೈಲು ನಿಲ್ದಾಣದಲ್ಲಿ ಐಎಸ್‌ನಿಂದ ಸ್ಫೋಟ: 32 ಸಾವು, 230 ಮಂದಿಗೆ ಗಾಯ

2015 ನವೆಂಬರ್‌ 13: ಪ್ಯಾರಿಸ್‌ನ ಬಟಕ್ಲಾನ್‌ ಸಭಾಂಗಣ, ಕ್ರೀಡಾಂಗಣ ಮತ್ತು ನಗರದ ವಿವಿಧ ಬಾರ್‌ ಹಾಗೂ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ಐಎಸ್‌ ಉಗ್ರರು 130 ಮಂದಿಯನ್ನು ಕೊಂದರು

2015 ಅಕ್ಟೋಬರ್‌ 10: ಕುರ್ದ್‌  ಸಮುದಾಯದ ಪರ ಟರ್ಕಿಯ ಅಂಕಾರದಲ್ಲಿ ನಡೆದ ಸಮಾವೇಶದಲ್ಲಿ ಎರಡು ಆತ್ಮಹತ್ಯಾ ಬಾಂಬ್‌ ದಾಳಿ. 103 ಸಾವು. ಇದು ಐಎಸ್‌ ಕೃತ್ಯ ಎಂದು ಆರೋಪಿಸಿದ ಸರ್ಕಾರ

2015 ಫೆಬ್ರುವರಿ 14: ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ನಡೆಯುತ್ತಿದ್ದ ಇಸ್ಲಾಂ ಮತ್ತು ವಾಕ್‌ ಸ್ವಾತಂತ್ರ್ಯ ವಿಚಾರ ಸಂಕಿರಣ ನಡೆಯುತ್ತಿದ್ದ ಸಾಂಸ್ಕೃತಿ ಕೇಂದ್ರದ ಮೇಲೆ ಗುಂಡಿನ ದಾಳಿ, ಸಿನಿಮಾ ನಿರ್ದೇಶಕ ಬಲಿ; ನಂತರ ನಗರದ ಮತ್ತೊಂದು ಕಡೆ ವ್ಯಕ್ತಿಯೊಬ್ಬರಿಗೆ ಗುಂಡಿಟ್ಟು ಹತ್ಯೆ. ಐಎಸ್‌ ಬೆಂಬಲಿಗ ಉಗ್ರ ನಂತರ ಪೊಲೀಸ್‌ ಗುಂಡಿಗೆ ಬಲಿ

2015 ಜನವರಿ 7: ಪ್ಯಾರಿಸ್‌ನ ಚಾರ್ಲಿ ಹೆಬ್ಡೊ ವಿಡಂಬನಾ ಪತ್ರಿಕೆಯ ಕಚೇರಿಗೆ ನುಗ್ಗಿದ ಅಲ್‌ ಕೈದಾ ಉಗ್ರರಿಂದ 12 ಮಂದಿಯ ಹತ್ಯೆ. ಮರುದಿನ ಐಎಸ್‌ಗೆ ಸೇರಿದ ಉಗ್ರನೊಬ್ಬನಿಂದ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ ಹತ್ಯೆ. ಅದರ ಮರುದಿನ ಸೂಪರ್‌ ಮಾರ್ಕೆಟ್‌ಗೆ ನುಗ್ಗಿದ ಆತ ಹಲವರನ್ನು ಒತ್ತೆ ಇರಿಸಿಕೊಂಡು ನಾಲ್ವರನ್ನು ಕೊಂದ. ಈ ಮೂರೂ ಉಗ್ರರನ್ನು ಕೊನೆಗೆ ಪೊಲೀಸರು ಹೊಡೆದುರುಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.