ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಖರೀದಿಗೂ ‘ಪಿಓಎಸ್’ ಯಂತ್ರ

ಆಧಾರ್ ಕಡ್ಡಾಯ, ಬಯೋಮೆಟ್ರಿಕ್ ಸಾಧ್ಯ: ಅವ್ಯವಹಾರ ತಡೆಗೆ ಹಾವೇರಿ ಜಿಲ್ಲೆಯಲ್ಲಿ ನೂತನ ಪ್ರಯತ್ನ
Last Updated 1 ಜೂನ್ 2017, 10:25 IST
ಅಕ್ಷರ ಗಾತ್ರ

ಹಾವೇರಿ: ‘ಸಬ್ಸಿಡಿ’ಯ ದುರುಪಯೋಗ ತಡೆಗಟ್ಟುವ ಸಲುವಾಗಿ ‘ಬೇವು ಲೇಪಿತ ರಸಗೊಬ್ಬರ’ವನ್ನು ಬಿಡುಗಡೆ ಮಾಡಿದ್ದ ಕೇಂದ್ರದ ರಸಗೊಬ್ಬರ ಇಲಾಖೆಯು, ಈಗ ಚಿಲ್ಲರೆ ಖರೀದಿ ವ್ಯವಹಾರಕ್ಕೆ ‘ಪಿಓಎಸ್’ ಜಾರಿಗೊಳಿಸಿದೆ.

ಜಿಲ್ಲೆಯ ಚಿಲ್ಲರೆ ಮಾರಾಟಗಾರರಿಗೆ ‘ಸ್ಪಿಕ್’ (ಎಸ್‌ಪಿಐಸಿ) ಸಂಸ್ಥೆ ತರಬೇತಿ ನೀಡಿದ್ದು, ಶೀಘ್ರವೇ ‘ಪಿಓಎಸ್’ ಯಂತ್ರ ಬರಲಿದೆ.

ಪಿಓಎಸ್: ಮಾರುಕಟ್ಟೆಯಲ್ಲಿ ನಗದು ರಹಿತ ವಹಿವಾಟಿಗೆ ಬಳಸುವ ‘ಪಿಓಎಸ್‌’ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸ ಲಾಗಿದ್ದು, ಇದು ವ್ಯವಹಾರವನ್ನು ಸಂಪೂರ್ಣ ದಾಖಲಿಸಿಕೊಳ್ಳಲಿದೆ. ಇದರಲ್ಲಿ ಖರೀದಿದಾರ ರೈತರ ಆಧಾರ್‌ ಸಂಖ್ಯೆ ದಾಖಲಿಸುವ ಮೂಲಕ ಖರೀದಿಸಿದ ರಸಗೊಬ್ಬರದ ಹೆಸರು ಹಾಗೂ ಪ್ರಮಾಣವು ದಾಖಲಾಗಲಿದೆ.

ಮಾರಾಟಗಾರರು ಅಂದಿನ ವ್ಯವಹಾರದ ವಿವರಗಳನ್ನು ಪಡೆಯಬಹುದು. ಮಾರಾಟಗಾರರು ಪ್ರತ್ಯೇಕ ‘ಲೆಕ್ಕಪುಸ್ತಕ’ ಬಳಸಬೇಕಾಗಿಲ್ಲ. ಈ ಯಂತ್ರದಲ್ಲಿ ದರ, ಬಿಲ್‌, ಗ್ರೇಡ್, ವ್ಯವಹಾರ, ದಾಸ್ತಾನು ಮತ್ತಿತರ ವಿವರವೂ ಸಿಗಲಿದೆ. ಇದು ಮಾರಾಟಗಾರರ ಪ್ರತಿನಿತ್ಯದ ನಿರ್ವ ಹಣೆಗೂ ಸಹಕಾರಿಯಾಗಿದೆ. ಇಲಾಖೆಗೂ ನಿಖರ ಮಾಹಿತಿ ಲಭ್ಯವಾಗಲಿದೆ. ರೈತರಿಗೆ ಸರ್ಕಾರಿ (ಸಬ್ಸಿಡಿ) ದರದಲ್ಲೇ ರಸಗೊಬ್ಬರ ಸಿಗಲಿದೆ.

‘ಪಿಓಎಸ್’ ಮೂಲಕ ಖರೀದಿಗೆ ‘ಆಧಾರ್‌ ಕಾರ್ಡ್’ ಕಡ್ಡಾಯ ಮಾಡಲಾಗಿದೆ. ಯಂತ್ರದಲ್ಲಿ ಬಯೋಮೆಟ್ರಿಕ್ ನೋಂದಣಿ ಬರಲಿದೆ. ಇದು ಅರ್ಹ ರೈತರಿಗೆ ನೆರವಾಗಲಿದೆ.

‘ಈ ಡಿಬಿಟಿ (ಫಲಾನುಭವಿಗೆ ನೇರ ವರ್ಗಾವಣೆ) ವ್ಯವಸ್ಥೆಯನ್ನು 2016ರ ಸೆಪ್ಟೆಂಬರ್‌ನಲ್ಲಿ ತುಮಕೂರು ಸೇರಿದಂತೆ ದೇಶದ 16 ಜಿಲ್ಲೆಗಳಲ್ಲಿ ಪ್ರಾಯೋಗಿಕ ವಾಗಿ ಜಾರಿಗೊಳಿಸಲಾಗಿತ್ತು. ಈಗ ಎಲ್ಲೆಡೆ ಕಡ್ಡಾಯವಾಗುತ್ತಿದೆ. ಸದ್ಯ ಪಿಓಎಸ್‌ ವ್ಯವಹಾರವನ್ನು ಮಾತ್ರ ದಾಖಲಿಸಿಕೊಳ್ಳಲಿದೆ.

ಮುಂದಿನ ದಿನಗಳಲ್ಲಿ ಖರೀದಿದಾರ ರೈತರ ಖಾತೆಗೆ ನೇರ ಸಬ್ಸಿಡಿ ಹೋಗಲಿದೆ’ ಎಂದು ಜಿಲ್ಲೆಯಲ್ಲಿ ‘ಪಿಓಎಸ್’ ಪೂರೈಕೆ ಮಾಡಲಿ ರುವ ‘ಸ್ಪಿಕ್’ (ಎಸ್‌ಪಿಐಸಿ) ಸಂಸ್ಥೆಯ ಪ್ರಬಂಧಕ ಬಿ.ಎ. ವೆಂಕಟಾಚಲಪತಿ ತಿಳಿಸಿದರು.

‘ಮುಂದಿನ ದಿನಗಳಲ್ಲಿ ‘ರೈತರ ಮಣ್ಣಿನ ಕಾರ್ಡ್’ ಆಧಾರದಲ್ಲಿ ಗೊಬ್ಬರ ನೀಡಲಾಗುತ್ತದೆ. ರೈತನ ಹೊಲ ಮತ್ತು ಬೆಳೆಯನ್ನು ಆಧರಿಸಿಕೊಂಡು ಗೊಬ್ಬರದ ಅಗತ್ಯತೆಯನ್ನು ‘ಮಣ್ಣಿನ ಕಾರ್ಡ್’ನಲ್ಲಿ ದಾಖಲಿಸಲಾಗುತ್ತದೆ. ರೈತರು ಎಲ್ಲಿ ಬೇಕಾದರೂ ಗೊಬ್ಬರ ಖರೀದಿಸ ಬಹುದು. ಆದರೆ, ಕಾರ್ಡ್‌ನಲ್ಲಿ ನಿಗದಿ ಪಡಿಸಿದ ಪ್ರಮಾಣಕ್ಕೆ ಮಾತ್ರ ಸಬ್ಸಿಡಿ ದೊರೆಯಲಿದೆ’ ಎಂದು ವಿವರಿಸಿದರು.

ಈ ಹಿಂದೆ: ‘ಸಬ್ಸಿಡಿ ರಸಗೊಬ್ಬರದ ದುರುಪಯೋಗದ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ‘ಬೇವು ಲೇಪಿತ ರಸಗೊಬ್ಬರ’ ಬಂದಿದೆ. ಆ ಬಳಿಕ ಸಾಗಾಟದ ನಿರ್ವಹಣೆಗಾಗಿ ‘ಮೊಬೈಲ್ ರಸಗೊಬ್ಬರ ನಿರ್ವಹಣಾ ವ್ಯವಸ್ಥೆ’ (ಎಂಎಫ್ಎಂಎಸ್) ಬಂತು. ಇದರಲ್ಲಿ, ಗೋದಾಮಿನಿಂದ ಲಾರಿಗೆ ಹೇರಿದ ಹಾಗೂ ಮಾರಾಟಗಾರರಿಗೆ ಬಂದು ತಲುಪಿದ ರಸಗೊಬ್ಬರದ ವಿವರವನ್ನು ‘ಆ್ಯಪ್‌’ ಮೂಲಕ ದಾಖಲಿಸಲಾಗುತ್ತಿದೆ.

ಇನ್ನು ‘ಪಿಓಎಸ್‌’ ಬರಲಿದ್ದು, ರೈತರಿಗೆ ತಲುಪಿದ ವಿವರವೂ ನೇರವಾಗಿ ಲಭ್ಯವಾಗಲಿದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಎಸ್. ಕೊಪ್ಪದ.

‘ಪಿಓಎಸ್’ನಿಂದ ಹಲವಾರು ಲಾಭಗಳಿವೆ. ಆದರೆ, ಗ್ರಾಮೀಣ ಭಾಗದಲ್ಲಿ ಎಲ್ಲರ ಬಳಿ ಆಧಾರ್ ಕಾರ್ಡ್ ಇಲ್ಲ. ಅಲ್ಲದೇ, ಸಣ್ಣ ರೈತರು ಮಳೆ, ಮಾರುಕಟ್ಟೆ ದರವನ್ನು ಪರಿಶೀಲಿಸಿ ಕೊಂಡು ಖರೀದಿಸಿದ ರಸಗೊಬ್ಬರವನ್ನು ಬದಲಾಯಿಸಿಕೊಳ್ಳುತ್ತಾರೆ.

ಆದರೆ, ಪಿಓಎಸ್ ಮೂಲಕ ಒಮ್ಮೆ ಖರೀದಿಸಿದರೆ, ಮತ್ತೆ ಬದಲಾಯಿಸಲು ಅವಕಾಶ ಇಲ್ಲ. ಅಲ್ಲದೇ, ಎಲ್ಲ ರೈತರಿಗೂ ಎಟಿಎಂ ಕಾರ್ಡ್ (ಸ್ವೈಪಿಂಗ್‌) ಬಳಕೆ ಬಗ್ಗೆ ಸಂಪೂರ್ಣ ಜ್ಞಾನ ಇಲ್ಲ. ಇದರಿಂದ ಕೆಲವು ರೈತರಿಗೆ ಕಷ್ಟವಾಗಬಹುದು’ ಎನ್ನುತ್ತಾರೆ ರಸಗೊಬ್ಬರ ಮಾರಾಟಗಾರ ಐ.ಎಂ. ನದಾಫ.

ನೋಂದಾಯಿತ 683 ಚಿಲ್ಲರೆ ಮತ್ತು 65 ಸಗಟು ಸೇರಿದಂತೆ ಒಟ್ಟು 770 ಮಾರಾಟಗಾರರು ಜಿಲ್ಲೆಯಲ್ಲಿ ಇದ್ದಾರೆ. ಈ ಪೈಕಿ ಸಕ್ರಿಯ 264 ಮಾರಾಟ ಗಾರರಿಗೆ ಸುಮಾರು ₹20 ಸಾವಿರ ಮೌಲ್ಯದ ‘ಪಿಓಎಸ್’ ನೀಡಲಾಗುತ್ತಿದೆ.

‘ಆರಂಭದಲ್ಲಿ ಕಷ್ಟವಾದರೂ ಸಮಸ್ಯೆಯಿಲ್ಲ. ಮುಂದಿನ ದಿನಗಳಲ್ಲಿ ನಮಗೆ ಸರ್ಕಾರ ನಿಗದಿ ಪಡಿಸಿದ ದರದಲ್ಲಿ  ಸಮಯಕ್ಕೆ ಸರಿಯಾಗಿ ರಸಗೊಬ್ಬರ ಸಿಗಬೇಕು. ಈ ನಿಟ್ಟಿನಲ್ಲಿ ‘ಪಿಓಎಸ್’ ನೆರವಾಗಬಹುದು’ ಎನ್ನುತ್ತಾರೆ ರೈತ ನಿಂಗಪ್ಪ ಬಾರ್ಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT