ಕಾರು ಮತ್ತು ಹುಡುಗಿಯ ‘ಬ್ರಾಂಡ್‌’

7

ಕಾರು ಮತ್ತು ಹುಡುಗಿಯ ‘ಬ್ರಾಂಡ್‌’

Published:
Updated:
ಕಾರು ಮತ್ತು ಹುಡುಗಿಯ ‘ಬ್ರಾಂಡ್‌’

‘ನಾಯಕ ಒಂದು ಒಳ್ಳೆಯ ಬ್ರ್ಯಾಂಡ್‌ನ ಕಾರು ತೆಗೆದುಕೊಳ್ಳಬೇಕು ಎಂದು ನಿರ್ಧರಿಸುತ್ತಾನೆ. ಒಳ್ಳೆಯ ಬ್ರ್ಯಾಂಡ್‌ನ ಕಾರ್‌ಗೆ ಅಷ್ಟೇ ಒಳ್ಳೆಯ ಬ್ರ್ಯಾಂಡ್‌ನ ಹುಡುಗಿಯೂ ಜತೆಗಿರಬೇಕು ಅನಿಸುತ್ತದೆ. ಗೊತ್ತಿಲ್ಲದೇ ಕ್ಯಾಬರೆ ಡಾನ್ಸರ್‌ ಒಬ್ಬಳ ಬೆನ್ನು ಬೀಳುತ್ತಾನೆ. ಇದೇ ಚಿತ್ರದ ಕಥೆ’.

ಹೀಗೆ ತೊದಲುತ್ತಲೇ ಸಿನಿಮಾದ ಎಳೆಯನ್ನು ಬಿಚ್ಚಿಟ್ಟರು ನಿರ್ದೇಶಕ ಪ್ರಶಾಂತ್‌ ಕೆ. ಶೆಟ್ಟಿ. ಅದೇ ಆತಂಕದಲ್ಲಿಯೇ ‘ಇದೊಂದು ಕಾಮಿಡಿ ಚಿತ್ರ. ಕ್ಲಬ್‌ ಡಾನ್ಸರ್‌ ಕಥೆಯಾದರೂ ಆಶ್ಲೀಲತೆ ಇಲ್ಲ’ ಎಂದೂ ಅವರು ಹೇಳಿದರು. ಮೈಕ್‌ ಹಿಡಿದು ಮಾತನಾಡಲು ಮೊದಲೇ ಹೆದರುತ್ತಿದ್ದ ಅವರು ಅಷ್ಟಕ್ಕೆ ಮಾತು ಮುಗಿಸಿ ಪಕ್ಕದಲ್ಲಿದ್ದವರಿಗೆ ಮೈಕ್‌ ರವಾನಿಸಿದರು.

ಅದು ‘ಬ್ರ್ಯಾಂಡ್‌’ ಸಿನಿಮಾದ ಪತ್ರಿಕಾಗೋಷ್ಠಿ. ನಿರ್ದೇಶನದ ಜತೆ ನಾಯಕನಾಗಿ ನಟಿಸುವ ಹೊಣೆಯನ್ನೂ ಅವರು ಹೊತ್ತಿದ್ದಾರೆ. ಅವರ ಜತೆ ಸೌಮ್ಯಾ ಮತ್ತು ರಚಿತ ಎಂಬಿಬ್ಬರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕಾಗಿ ಮರ್ಸಿಡಸ್‌ ಬೆಂಜ್‌ ಕಾರನ್ನೂ ಖರೀದಿಸಿದ್ದಾರೆ ಪ್ರಶಾಂತ್‌.

ನಟಿ ಸೌಮ್ಯಾ ಅವರು ಈ ಚಿತ್ರದ ಮೂಲಕ ಬಣ್ಣದ ಬದುಕಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ‘ಮೊದಲ ಚಿತ್ರದಲ್ಲಿಯೇ ನನಗೆ ತುಂಬ ಪ್ರಬುದ್ಧವಾದ ಪಾತ್ರ ಸಿಕ್ಕಿದೆ. ಅಷ್ಟೇ ಸವಾಲಿನ ಪಾತ್ರವೂ ಹೌದು. ಪಬ್‌ ಡಾನ್ಸರ್‌ ಬದುಕನ್ನು ನಿರ್ದೇಶಕರು ತುಂಬ ಚೆನ್ನಾಗಿ ಚಿತ್ರಿಸಿದ್ದಾರೆ. ನಮ್ಮೆಲ್ಲರ ಶ್ರಮಕ್ಕೆ ಒಳ್ಳೆಯ ಸ್ಪಂದನ ಸಿಗುತ್ತದೆ ಎಂಬ ನಂಬಿಕೆ ಇದೆ’ ಎಂದರು ಸೌಮ್ಯಾ.

ಸಂಚಾರಿ ವಿಜಯ್‌ ಅವರೂ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ವಿನುಮನಸು ಸಂಗೀತ ಸಂಯೋಜನೆ ಮಾಡಿದ್ದಾರೆ. ಕುಮಾರ್‌ ಎಸ್‌. ಬಂಗೇರ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಅಣಜಿ ನಾಗರಾಜ್‌ ವಿತರಣೆಯ ಜವಬ್ದಾರಿ ಹೊತ್ತಿದ್ದಾರೆ. ಜೂನ್‌ 2ರಂದು ‘ಬ್ರ್ಯಾಂಡ್‌’ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry