ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಕಬಳಿಕೆದಾರರ ವಿರುದ್ಧ ಕಠಿಣ ಕ್ರಮ

Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನಲ್ಲಿ ಕೆರೆಗಳನ್ನು ಒತ್ತುವರಿ ಮಾಡಿರುವ 325 ಮಂದಿ ವಿರುದ್ಧ ಪ್ರಕರಣ ದಾಖಲಿಸಲು ‘ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ ಗುರುವಾರ ಆದೇಶಿಸಿದೆ. ಈ ಮೂಲಕ ರಾಜ್ಯದ ಜಲಮೂಲಗಳನ್ನು ಕಬಳಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ರಾಜ್ಯದ ಕೆರೆಗಳ ಕಬಳಿಕೆ ಪ್ರಮಾಣದ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿತ್ತು. ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿರಲಿಲ್ಲ. ನ್ಯಾಯಾಲಯ ನೋಟಿಸ್‌ ನೀಡಿದ ಬಳಿಕ ವರದಿಗಳು ಸಲ್ಲಿಕೆಯಾಗುತ್ತಿವೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದ ಜಾಗ ಭೂಗಳ್ಳರ ಪಾಲಾಗಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗಾಗಿ ಆರಂಭಿಕ ಹಂತದಲ್ಲಿ ಈ ಜಿಲ್ಲೆಗಳ ಪ್ರಕರಣಗಳನ್ನು ಇತ್ಯರ್ಥ ಮಾಡಲು ತೀರ್ಮಾನಿಸಿದೆ.

ದೇವನಹಳ್ಳಿ ತಾಲ್ಲೂಕಿನ ಪ್ರಕರಣಗಳನ್ನು ಸದಸ್ಯರಾದ ಆರ್‌.ಎಚ್‌. ರಡ್ಡಿ ಹಾಗೂ ಕೆ.ಆರ್‌. ನಿರಂಜನ್‌ ಅವರನ್ನು ಒಳಗೊಂಡ ನ್ಯಾಯಾಲಯ ಕೈಗೆತ್ತಿ ಕೊಂಡಿದೆ. ಜಿಲ್ಲೆಯಲ್ಲಿನ ಕೆರೆಗಳ ಒಟ್ಟು ವಿಸ್ತೀರ್ಣ 1808 ಎಕರೆ. ಈ ಪೈಕಿ 533 ಎಕರೆ 32 ಗುಂಟೆಯನ್ನು 325 ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ. ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್‌ ನೀಡಲಾಗಿದೆ.

‘ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಬಹುತೇಕ ಕೆರೆಗಳು ಒತ್ತುವರಿಯಾಗಿವೆ. ಜಲಮೂಲಗಳನ್ನು ರಕ್ಷಿಸಲು ಕಠಿಣ ಕ್ರಮ ಅಗತ್ಯ. ಹೀಗಾಗಿ ನ್ಯಾಯಾಲಯ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿದೆ. ಗ್ರಾಮಾಂತರ ಜಿಲ್ಲೆಯ ವಿಚಾರಣೆ ಪೂರ್ಣಗೊಂಡ ಬಳಿಕ ನಗರ ಜಿಲ್ಲೆಯ ಕೆರೆಗಳ ಪ್ರಕರಣಗಳ ವಿಚಾರಣೆ  ಕೈಗೆತ್ತಿಕೊಳ್ಳಲಿದೆ’ ಎಂದು ನ್ಯಾಯಾಲಯದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಎಸ್‌. ಪಾಟೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಭೂ ಅಕ್ರಮ ಸಾಬೀತಾದರೆ ಗರಿಷ್ಠ 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶ ಇದೆ’ ಎಂದು ಅವರು ಮಾಹಿತಿ ನೀಡಿದರು.

**

ಅಲ್ಲೊಂದು ಲೆಕ್ಕ– ಇಲ್ಲೊಂದು ಲೆಕ್ಕ

‘ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ 1,545 ಕೆರೆಗಳು ಇವೆ. ಅವುಗಳ ಒಟ್ಟು ವಿಸ್ತೀರ್ಣ 57,576 ಎಕರೆ. ಅದರಲ್ಲಿ 10,472 ಎಕರೆ ಒತ್ತುವರಿ ಆಗಿದೆ. ಅದರ ಮೌಲ್ಯ ₹1.5 ಲಕ್ಷ ಕೋಟಿ ಆಗಲಿದೆ’ ಎಂದು ‘ಕೆರೆ ಒತ್ತುವರಿ ಪತ್ತೆ ಕುರಿತ ಸದನ ಸಮಿತಿ’ಯು 2016ರ ಜನವರಿ 8ರಂದು ಸಲ್ಲಿಸಿದ್ದ ಮಧ್ಯಂತರ ವರದಿಯಲ್ಲಿ ತಿಳಿಸಿತ್ತು.

‘ಒತ್ತುವರಿ ಮಾಡಿದವರಲ್ಲಿ ಖಾಸಗಿ ನಿರ್ಮಾಣ ಸಂಸ್ಥೆಗಳಷ್ಟೇ ಅಲ್ಲದೆ, ಸರ್ಕಾರದ ಅಂಗ ಸಂಸ್ಥೆಗಳಾದ ಬಿಡಿಎ, ಬಿಬಿಎಂಪಿ, ಅರಣ್ಯ, ಸಾರಿಗೆ ಸಂಸ್ಥೆಗಳು ಸೇರಿದಂತೆ 11 ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ’ ಎಂಬ ಅಂಶ ವರದಿಯಲ್ಲಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ 6,195 ಎಕರೆ ಕಬಳಿಕೆಯಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಒಟ್ಟು 1,292 ಎಕರೆ ಭೂಗಳ್ಳರ ಪಾಲಾಗಿದೆ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ಜಿಲ್ಲಾಡಳಿತದ ಅಧಿಕಾರಿಗಳು ಸಲ್ಲಿಸಿದ ವರದಿಯ ಆಧಾರದಲ್ಲೇ ಸಮಿತಿ ಮಧ್ಯಂತರ ವರದಿ ಸಿದ್ಧಪಡಿಸಿದೆ. ಅಧಿಕಾರಿಗಳು ಸಮಿತಿಗೆ ಒಂದು ಲೆಕ್ಕ ನೀಡಿದ್ದಾರೆ. ನ್ಯಾಯಾಲಯಕ್ಕೆ ಮತ್ತೊಂದು ಲೆಕ್ಕ ನೀಡಿದ್ದಾರೆ. ಅಧಿಕಾರಿಗಳ ಈ ನಡೆ ಅನುಮಾನ ಮೂಡಿಸಿದೆ.

**

ತಹಶೀಲ್ದಾರ್‌ಗಳಿಗೆ ಷೋಕಾಸ್‌ ನೋಟಿಸ್‌
ಬೆಂಗಳೂರು ನಗರ ಜಿಲ್ಲೆಯ ಒತ್ತುವರಿದಾರರ ಬಗ್ಗೆ ಮಾಹಿತಿ ನೀಡಲು ವಿಳಂಬ ಮಾಡುತ್ತಿರುವ ಐದು ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಷೋಕಾಸ್ ನೋಟಿಸ್‌ ಜಾರಿ ಮಾಡಿದೆ.

‘ತಹಶೀಲ್ದಾರ್‌ಗಳು ವಿಚಾರಣೆಗಳಿಗೆ  ಸರಿಯಾಗಿ ಹಾಜರಾಗುತ್ತಿಲ್ಲ. ನ್ಯಾಯಾಲಯಕ್ಕೆ ಅಗತ್ಯ ಮಾಹಿತಿಯನ್ನೂ ನೀಡುತ್ತಿಲ್ಲ. ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ ನೋಟಿಸ್‌ ನೀಡಲಾಗಿದೆ’ ಎಂದು ನ್ಯಾಯಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT