ಹವ್ಯಾಸಿ ಸಂಗೀತಗಾರನಿಗೆ 269ನೇ ರ‍್ಯಾಂಕ್‌

7
ನನ್ನ ಯಶಸ್ಸಿನಲ್ಲಿ ‘ಪ್ರಜಾವಾಣಿ’ ಪಾತ್ರ ಮಹತ್ವದ್ದು: ಫಕ್ಕೀರೇಶ ಬದಾಮಿ ಅಭಿಮತ

ಹವ್ಯಾಸಿ ಸಂಗೀತಗಾರನಿಗೆ 269ನೇ ರ‍್ಯಾಂಕ್‌

Published:
Updated:
ಹವ್ಯಾಸಿ ಸಂಗೀತಗಾರನಿಗೆ 269ನೇ ರ‍್ಯಾಂಕ್‌

ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಿದ ನಗರದ ಫಕ್ಕೀರೇಶ ಬದಾಮಿ ಅವರು, ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆಯಲ್ಲಿ 269ನೇ ರ‍್ಯಾಂಕ್‌ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದ ಅವರು, ಕನ್ನಡ ಮಾಧ್ಯಮದಲ್ಲಿಯೇ ಯುಪಿಎಸ್‌ಸಿ ಪರೀಕ್ಷೆಯನ್ನೂ ಬರೆದು ಯಶಸ್ಸು ಪಡೆದಿದ್ದಾರೆ.ನಗರದ ಉಣಕಲ್‌ನ ರೈತ ಕಲ್ಲಪ್ಪ ರಾಮಪ್ಪ ಬದಾಮಿ ಅವರ ಹಿರಿಯ ಪುತ್ರ ಫಕ್ಕೀರೇಶ ನಾಲ್ಕನೇ ಪ್ರಯತ್ನದಲ್ಲಿ ರ‍್ಯಾಂಕ್‌ ಪಡೆಯುವಲ್ಲಿ ಯಶಸ್ವಿಯಾಗಿ­ದ್ದಾರೆ. ಕಠಿಣ ಶ್ರಮ, ತಾಳ್ಮೆ ಮತ್ತು ಸ್ಥಿರತೆ ಇದ್ದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದು ಅಸಾಧ್ಯವೇನಲ್ಲ ಎನ್ನುವ ಅವರು, ತಮ್ಮ ಸಾಧನೆಯ ಹಾದಿ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.*ನಿಮ್ಮ ಶಿಕ್ಷಣದ ಬಗ್ಗೆ ತಿಳಿಸಿ ?

ಹುಬ್ಬಳ್ಳಿಯಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ಎಚ್‌.ಎಫ್‌. ಕಟ್ಟಿಮನಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಚಂದರಗಿ ಕ್ರೀಡಾ ವಸತಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದೆ. ಆಗ, ಎಸ್ಸೆಸ್ಸೆಲ್ಸಿಗೆ ಬೆಳಗಾವಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದ್ದೆ. ಪ್ರೌಢಶಾಲೆಯವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದೇನೆ. ಹುಬ್ಬಳ್ಳಿಯ ಚೇತನಾ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ, ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ ವಿಭಾಗದಲ್ಲಿ ಬಿ.ಇ ಪದವಿ ಪಡೆದಿದ್ದೇನೆ.*ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಹೇಗಿತ್ತು?

ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ನಾಗರಿಕ ಸೇವಾ ಪರೀಕ್ಷೆಗಳ ಬಗ್ಗೆ ಆಸಕ್ತಿ ಇತ್ತು. 2012ರಲ್ಲಿ ಪದವಿ ಮುಗಿದ ನಂತರ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ. ನವದೆಹಲಿಗೆ ತೆರಳಿ, ಅಲ್ಲಿನ ಆಲ್ಟರ್ನೇಟಿವ್‌ ಲರ್ನಿಂಗ್‌ ಸಿಸ್ಟಂ (ಎ.ಎಲ್.ಎಸ್) ಕೇಂದ್ರದಲ್ಲಿ ತರಬೇತಿ ಪಡೆದೆ. ನಂತರ, ಧಾರವಾಡದಲ್ಲಿ ಎರಡು ವರ್ಷ ಅಭ್ಯಾಸ ಮಾಡಿದೆ. ಈ ಸಂದರ್ಭದಲ್ಲಿ ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದರೂ ಯಶಸ್ಸು ಸಿಗಲಿಲ್ಲ. ಅಭ್ಯಾಸ ಕ್ರಮದಲ್ಲಿ ಬದಲಾವಣೆ ಮಾಡಬೇಕು ಎನಿಸಿತು.

ಬೆಂಗಳೂರಿಗೆ ಹೋಗಿ ಕೆಲವರು ತರಗತಿಗಳಿಗೆ ಹಾಜರಾದೆ. ಆಗ, ಸಿಐಡಿ ವಿಭಾಗದಲ್ಲಿದ್ದ ಡಿಸಿಪಿ ಜಿನೇಂದ್ರ ಖನಗಾವಿ, ಬಿಡುವಿನ ವೇಳೆಯಲ್ಲಿ ದಿನಕ್ಕೆ ಎರಡು ತಾಸು ಕನ್ನಡ ಸಾಹಿತ್ಯದ ತರಗತಿ ತೆಗೆದುಕೊಂಡರು. ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ನೆರವಾಗುವ ಕೌಶಲಗಳ ಬಗ್ಗೆ ತಿಳಿಸಿದರು. ಅದನ್ನು ಸರಿಯಾಗಿ ಅನು­ಷ್ಠಾನಕ್ಕೆ ತಂದಿದ್ದ­ರಿಂದ ಯಶಸ್ಸು ಸಿಕ್ಕಿತು.*ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ ಸಿದ್ಧತೆ ಹೇಗಿತ್ತು ?

ಪ್ರಚಲಿತ ಘಟನೆಗಳ ವಿಭಾಗದ ಸಿದ್ಧತೆಗೆ ನಾನು ‘ಪ್ರಜಾವಾಣಿ’ ಪತ್ರಿಕೆ ಓದುತ್ತಿದ್ದೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವವರಿಗೆ ಸಾಕಷ್ಟು ವಿಷಯ ವಸ್ತು ಈ ಪತ್ರಿಕೆಯಲ್ಲಿ ಸಿಗುತ್ತದೆ. ವಿಶ್ಲೇಷಣೆ ಉತ್ತಮ ಹಾಗೂ ವಸ್ತುನಿಷ್ಠವಾಗಿರುತ್ತದೆ.*ಸಂದರ್ಶನದಲ್ಲಿ ಯಾವ ವಿಷಯಕ್ಕೆ ಆದ್ಯತೆ ನೀಡಿದ್ದರು ?

ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸುಜಾತಾ ಮೆಹ್ತಾ ನೇತೃತ್ವದ ಐವರು ಸದಸ್ಯರ ತಂಡ ನನ್ನ ಸಂದರ್ಶನ ನಡೆಸಿತು. ಸ್ವವಿವರದಲ್ಲಿ ನಾನು ಪ್ರಸ್ತಾಪಿಸಿದ್ದ ‘ಹವ್ಯಾಸ’ಗಳ ಬಗ್ಗೆಯೇ ಕೇಳಿದರು. ನಾನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತಿದ್ದೇನೆ. ಆಕಾಶವಾಣಿಯಲ್ಲಿ ಕಾರ್ಯಕ್ರಮವನ್ನೂ ನೀಡಿದ್ದೇನೆ. ಈ ಬಗ್ಗೆ ಕೇಳಿದರು. ಯಾವ ಘರಾಣಾ ? ಈಗ ಹೆಚ್ಚು ಸುದ್ದಿಯಲ್ಲಿರುವ ಸಂಗೀತಗಾರರು ಯಾರು ಎಂದು ಕೇಳಿದರು.ಫುಟ್‌ಬಾಲ್‌ ಆಟಗಾರ ಎಂದ್ದಿದ್ದರಿಂದ ಅದರ ಬಗ್ಗೆಯೂ ಪ್ರಶ್ನಿಸಿ­ದರು. ನನ್ನ ಹವ್ಯಾಸ­ಗಳ ಬಗ್ಗೆಯೇ ಕೇಳಿದ್ದರಿಂದ ವಿಶ್ವಾಸದಿಂದ ಉತ್ತರ ನೀಡಲು ಸಾಧ್ಯ­ವಾಯಿತು. ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಒಂದೆರಡು ಪ್ರಶ್ನೆಗಳನ್ನು ಮಾತ್ರ ಕೇಳಿದರು.*ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವವರಿಗೆ ಎದುರಾಗುವ ಸವಾಲುಗಳೇನು ?

ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಅಧ್ಯಯನ ಸಾಮಗ್ರಿಗಳು ಸಿಗದಿರುವುದೇ ದೊಡ್ಡ ಸವಾಲು. ಇಂಗ್ಲಿಷ್‌ನಲ್ಲಿ ಇರುವ ಮಾಹಿತಿ ಮತ್ತು ಗುಣಮಟ್ಟ ಕನ್ನಡದಲ್ಲಿ ಸಿಗುವುದಿಲ್ಲ. ಅಲ್ಲದೆ, ಲಿಖಿತ ಪರೀಕ್ಷೆಯಲ್ಲಿ ವೇಗವಾಗಿ ಬರೆಯುವ ಸವಾಲು ಇರುತ್ತದೆ. ಇಂಗ್ಲಿಷ್‌ಗಿಂತ ಎರಡರಷ್ಟು ಹೆಚ್ಚು ಬರೆಯಬೇಕಾಗುತ್ತದೆ. ಸಂಕ್ಷಿಪ್ತವಾಗಿ ಮತ್ತು ವೇಗವಾಗಿ ಬರೆಯುವುದನ್ನು ರೂಢಿಸಿಕೊಂಡರೆ ಕಷ್ಟವಾಗುವುದಿಲ್ಲ.*ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಏನು ಸಲಹೆ ನೀಡುತ್ತೀರಿ ?

ಒಮ್ಮೆ ಪರೀಕ್ಷೆಯಲ್ಲಿ ವಿಫಲವಾದ ತಕ್ಷಣ ಪ್ರಯತ್ನ ಬಿಡಬಾರದು. ತಾಳ್ಮೆ ಹಾಗೂ ಕಠಿಣ ಪರಿಶ್ರಮದಿಂದ ಓದಿದರೆ ಯಶಸ್ಸು ಸಿಗುತ್ತದೆ. ಈಗ, ಬೆರಳ ತುದಿಯಲ್ಲಿಯೇ ಎಲ್ಲ ಮಾಹಿತಿ ಸಿಗುವು­ದರಿಂದ ತರಬೇತಿಗೆ ಹೋಗದೆಯೂ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು. ಅಲ್ಲದೆ, ಪರಿಶಿಷ್ಟರಿಗೆ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಸರ್ಕಾರವೇ ಆರ್ಥಿಕ ನೆರವು ನೀಡುತ್ತಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು.

ಮತ್ತೊಮ್ಮೆ ಪರೀಕ್ಷೆ ಬರೆಯುವೆ

ಐಪಿಎಸ್‌ ಅಥವಾ ಐಆರ್‌ಎಸ್‌ ನಿರೀಕ್ಷೆಯಲ್ಲಿರುವ ಫಕ್ಕೀರೇಶ, ಈ ಬಾರಿ ಮತ್ತೊಮ್ಮೆ ಪರೀಕ್ಷೆ ಬರೆದು ರ‍್ಯಾಂಕ್‌ ಉತ್ತಮ ಪಡಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಮಗನ ಸಾಧನೆಗೆ ತಂದೆ ಕಲ್ಲಪ್ಪ ಬದಾಮಿ ಹಾಗೂ ತಾಯಿ ಗೌರಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry