ಶ್ರದ್ಧೆ–ಆತ್ಮವಿಶ್ವಾಸದಿಂದ ಯಶಸ್ಸು; ಅಜಯ ಬಿದರಿ

7

ಶ್ರದ್ಧೆ–ಆತ್ಮವಿಶ್ವಾಸದಿಂದ ಯಶಸ್ಸು; ಅಜಯ ಬಿದರಿ

Published:
Updated:
ಶ್ರದ್ಧೆ–ಆತ್ಮವಿಶ್ವಾಸದಿಂದ ಯಶಸ್ಸು; ಅಜಯ ಬಿದರಿ

ವಿಜಯಪುರ: ‘ಗ್ರಹಿಕೆ, ತಾಳ್ಮೆ, ಶ್ರದ್ಧೆಯ ಕಲಿಕೆ, ಆತ್ಮವಿಶ್ವಾಸವೊಂದಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ..’ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 768ನೇ ರ‍್ಯಾಂಕ್‌ ಪಡೆದಿರುವ ನಗರದ ಅಜಯ ಬಿದರಿ ನುಡಿಗಳಿವು.‘ಯುಪಿಎಸ್‌ಸಿ ಪರೀಕ್ಷೆ ಕಬ್ಬಿಣದ ಕಡಲೆಯಲ್ಲ. ತಯಾರಿಗೂ ಮುನ್ನ ಸೂಕ್ತ ಮಾರ್ಗದರ್ಶನ ಪಡೆದರೆ ಯಶಸ್ಸು ಲಭಿಸುತ್ತದೆ. ಅನುಭವಿಗಳು, ವಿಶೇಷವಾಗಿ ಪರೀಕ್ಷೆ ಎದುರಿಸಿ ಭಾರತೀಯ ಸೇವೆಗೆ ಸೇರ್ಪಡೆಯಾಗಿರುವ ಸಾಧಕರಿಂದ ಮಾರ್ಗದರ್ಶನ ಪಡೆಯಿರಿ.ಇದು ನಿಮ್ಮ ಯಶಸ್ಸಿನ ಅವಕಾಶಗಳ ಬಾಗಿಲನ್ನು ತೆರೆಯುತ್ತದೆ. ವಿನಾಃ ಕಾರಣ ತಾಸುಗಟ್ಟಲೇ ಶ್ರಮ ಪಡುವುದು, ಸಮಯ ವ್ಯರ್ಥ ಮಾಡುವುದು ತಪ್ಪುತ್ತದೆ. ಅಗತ್ಯ ವಿಷಯದಲ್ಲಿ ಜ್ಞಾನ ಸಂಪಾದಿಸಲು ಸಹಕಾರಿಯಾಗುತ್ತದೆ. ಸಾಧಕರ ಮಾರ್ಗದರ್ಶನವೇ ನನಗೆ ಪ್ರೇರಣೆ’ ಎಂದು ಅಜಯ ಹೇಳಿದರು.‘ಪಿಯುಸಿಯವರೆಗೂ ವಿಜಯಪುರ­ದಲ್ಲೇ ವಿದ್ಯಾಭ್ಯಾಸ. ಎಂಜಿನಿಯರಿಂಗ್‌ ಶಿಕ್ಷಣ ಬೆಂಗಳೂರಿನಲ್ಲಿ. ಎರಡು ವರ್ಷ ಸಾಫ್ಟ್‌ವೇರ್‌ ಉದ್ಯೋಗಿಯಾಗಿ ಕೆಲಸ ಮಾಡಿದೆ. ಐಎಎಸ್‌, ಐಪಿಎಸ್‌, ಐಆರ್‌ಎಸ್, ಐಎಫ್‌ಎಸ್‌ ಕನಸು ಹೊತ್ತು ನೌಕರಿಗೆ ರಾಜೀನಾಮೆ ನೀಡಿದೆ.ನನ್ನ ತಂದೆ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕರು. ನನ್ನ ನಿರ್ಧಾರ ಬೆಂಬಲಿಸಿದರು. ಹಿರಿಯರ ಮಾರ್ಗ­ದರ್ಶನ, ಕುಟುಂಬದವರ ಪ್ರೋತ್ಸಾಹ­ದಿಂದ ಮೂರನೇ ಯತ್ನದಲ್ಲಿ ಅವಕಾಶ ಪಡೆದಿರುವೆ. ಇದೀಗ ಮತ್ತೊಮ್ಮೆ ರ್‌್ಯಾಂಕ್‌ ಉತ್ತಮ ಪಡಿಸಿಕೊಳ್ಳಲು ಇನ್ನೊಂದು ಸುತ್ತು ಪೂರ್ವಭಾವಿ ಪರೀಕ್ಷೆ ಬರೆಯಲು ಮಾನಸಿಕವಾಗಿ ಸಿದ್ಧತೆ ನಡೆಸಿದ್ದೇನೆ’ ಎಂದು ಅಜಯ ತಿಳಿಸಿದರು.‘ನಾನು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದರೂ ಸಾಹಿತ್ಯದ ಬಗ್ಗೆ ಒಲವಿತ್ತು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ನನ್ನ ಪ್ರಮುಖ ವಿಷಯ. ಬೆಂಗಳೂರು, ನವದೆಹಲಿಯಲ್ಲಿ ತರಬೇತಿ ಪಡೆದೆ. ಇಷ್ಟೇ ತಾಸು ಓದಬೇಕು ಎಂಬು­ದೇನು ಇಲ್ಲ. ಎಷ್ಟು ಓದಿತ್ತಿರೋ ಅಷ್ಟನ್ನೂ ಇಷ್ಟಪಟ್ಟು ಓದಿ, ಕಷ್ಟಪಟ್ಟು ಓದಬೇಡಿ. ಎಷ್ಟೇ ಅಡ್ಡಿಯಾದರೂ ಚಿಂತೆಯಿಲ್ಲ. ಐಎಎಸ್ ಹುದ್ದೆ ಪಡೆಯ­ಬೇಕು ಎಂಬ ಅಚಲ ವಿಶ್ವಾಸದೊಂದಿಗೆ, ಅಭ್ಯಾಸ ನಡೆಸಿದರೆ ಫಲ ದೊರಕುತ್ತದೆ’ ಎಂದು ಯುಪಿಎಸ್‌ಸಿ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.‘ನಿತ್ಯ ಐದಾರು ತಾಸು ಅಧ್ಯಯನ ನಡೆಸಿದರೆ ಸಾಕು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಇರಬೇಕು. ವಿವೇಚನಾ ಶಕ್ತಿ ಕೂಡಾ ಅತ್ಯಂತ ಅವಶ್ಯ. ಜ್ಞಾನಕ್ಕೆ ಪೂರಕವಾದ ನಿಯತಕಾಲಿಕೆ, ದಿನಪತ್ರಿಕೆ, ಜ್ಞಾನಾಧಾರಿತ ಅಂತರ್ಜಾಲ ತಾಣ ವೀಕ್ಷಿಸಬೇಕು. ಆಳವಾದ ಅಧ್ಯಯನ ನಡೆಸಬೇಕು. ಯಾವ ಮೂಲದಿಂದ ಜ್ಞಾನ ಸಿಗುತ್ತ­ದೆಯೋ ಆ ಮೂಲದಿಂದ ಜ್ಞಾನ ಪಡೆಯಬೇಕು. ಮಾಹಿತಿ ಸಂಗ್ರಹ ಹೆಚ್ಚಿದರೆ ಜ್ಞಾನವೂ ಹೆಚ್ಚುತ್ತದೆ, ಜ್ಞಾನ ಹೆಚ್ಚಿದರೆ ಆತ್ಮವಿಶ್ವಾಸವೂ ಹೆಚ್ಚುತ್ತದೆ’ ಎಂದು ಅಜಯ ಬಿದರಿ ಹೇಳಿದರು.

*

ನಿತ್ಯ ಆರು ತಾಸು ಅಧ್ಯಯನಕ್ಕೆ ಮೀಸಲಿಡುತ್ತಿದ್ದೆ. ಸ್ನೇಹಿತರೊಡನೆ ಗುಂಪು ಚರ್ಚೆ ನಡೆಸುತ್ತಿದ್ದೆ. ಇದು ನನಗೆ ಬಹಳಷ್ಟು ಅನುಕೂಲವಾಯಿತು.

–ಅಜಯ ಬಿದರಿ,

768ನೇ ರ‍್ಯಾಂಕ್‌ ಪಡೆದವರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry