ಶುಕ್ರವಾರ, ಆಗಸ್ಟ್ 12, 2022
20 °C

ಸಂವಿಧಾನ ಮತ್ತು ನ್ಯಾಯಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂವಿಧಾನ ಮತ್ತು ನ್ಯಾಯಾಲಯ

ಆಕಳು ಮತ್ತು ಕರುಗಳ ಹತ್ಯೆ ತಡೆಯಲು ಕ್ರಮ ಕೈಗೊಳ್ಳಬೇಕು ಎನ್ನುವ ಸಲಹೆ ಸಂವಿಧಾನದಲ್ಲಿಯೇ ಇದೆ.

ಸರ್ಕಾರ ಏನು ಮಾಡಬೇಕು ಎಂದು ಸೂಚಿಸುವ ನಿರ್ದೇಶಕ ತತ್ವಗಳಲ್ಲಿ ಇದು ಅಡಕವಾಗಿದೆ.

ಸಂವಿಧಾನದ 48ನೇ ವಿಧಿಯ ಪ್ರಕಾರ, ಕೃಷಿ ಮತ್ತು ಪಶುಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಅದಕ್ಕಾಗಿ ಪಶು ತಳಿಗಳನ್ನು ರಕ್ಷಿಸಬೇಕು. ಅಲ್ಲದೆ, ಆಕಳು ಮತ್ತು ಕರುಗಳನ್ನು ಕೊಲ್ಲುವುದನ್ನು ನಿಷೇಧಿಸಬಹುದು.

ಪ್ರಾಣಿಗಳ ಮೇಲಿನ ಹಿಂಸೆ ತಡೆಯಬೇಕು ಎಂಬ ಸಂವಿಧಾನಾತ್ಮಕ ಕಟ್ಟುಪಾಡು ಕೂಡ ಗೋಹತ್ಯೆ ನಿಷೇಧಕ್ಕೆ ಪೂರಕ ಎಂಬುದು ಅದನ್ನು ಸಮರ್ಥಿಸುವವರ ವಾದ.

ಇದಕ್ಕೂ ಮುನ್ನ, ಸಂವಿಧಾನ ರಚನಾ ಸಭೆಯೂ ಈ ಬಗ್ಗೆ ಅನೇಕ ಸಲ  ಚರ್ಚೆ ನಡೆಸಿತ್ತು. ಕೊನೆಯದಾಗಿ 1949 ನವೆಂಬರ್‌ 14ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ರಾಜೇಂದ್ರ ಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ  ನಡೆದ ನಿರ್ಣಾಯಕ ಸಭೆಯಲ್ಲಿ ಕೂಡ ಶಿಬ್ಬನ್‌ಲಾಲ್‌ ಸಕ್ಸೇನಾ ಮತ್ತು ಪಂಡಿತ್‌ ಠಾಕೂರ ದಾಸ್‌ ಭಾರ್ಗವ ಅವರು ಇದನ್ನು ಪ್ರಸ್ತಾಪಿಸಿದ್ದರು. ‘ಕರಡು ಸಂವಿಧಾನದ 38 ಎ ವಿಧಿಯಲ್ಲಿ, ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ವಾಕ್ಯ ಇತ್ತು. ಆದರೆ ಅಂತಿಮವಾಗಿ ಅಂಗೀಕರಿಸಲಾಗುತ್ತಿರುವ ಸಂವಿಧಾನದಲ್ಲಿ ಅದನ್ನು ದುರ್ಬಲಗೊಳಿಸಲಾಗಿದೆ’ ಎಂದು ಆಕ್ಷೇಪಿಸಿದ್ದರು.

ಆಗ ಮಾತನಾಡಿದ್ದ ಇನ್ನೊಬ್ಬ ಸದಸ್ಯ ನಿಕೋಲಸ್‌ ರಾಯ್‌ ಅವರು, ‘ಎಲ್ಲ ಬಗೆಯ ಅಂದರೆ ಹಾಲು ಕೊಡುವ ಅಥವಾ ಕೊಡದೇ ಇರುವ ಹಸುಗಳ ಹತ್ಯೆಯನ್ನು ಸಂಪೂರ್ಣ ನಿಷೇಧಿಸಿದರೆ ದೇಶದ  ಮೇಲೆ ಭಾರಿ ಹೊರೆ ಬೀಳುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದರು.

‘ನಿರುಪಯುಕ್ತ ಹಸುಗಳನ್ನೂ ಕೊಲ್ಲಲೇಬಾರದು ಎನ್ನುವುದಾದರೆ ಸರಿಯಾದ ಆರೈಕೆಯಿಲ್ಲದೆ ನೂರಾರು ಹಸುಗಳು ಬಯಲಿನಲ್ಲಿಯೇ ಬಿದ್ದು ಸಾಯುತ್ತವೆ. ಗೋಹತ್ಯೆಯನ್ನು ಪೂರ್ಣವಾಗಿ ನಿಷೇಧಿಸಬೇಕು ಎನ್ನುವ  ಕಾನೂನು, ಮಾಂಸಕ್ಕಾಗಿಯೇ ದನಕರುಗಳನ್ನು ಸಾಕುವ ಮತ್ತು ಅವುಗಳ ಮಾಂಸ ಸೇವಿಸುವ ಅಸ್ಸಾಂ ಜನರ ಹಕ್ಕುಗಳನ್ನು ಕಸಿಯುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದ್ದರು.

ಆದ್ದರಿಂದ ‘ಜನರಿಗೆ ಉಪಯೋಗಿಯಾದ ಹಸುಗಳನ್ನು ಮಾತ್ರ ಕೊಲ್ಲುವಂತಿಲ್ಲ ಎಂಬುದು 48ನೇ ವಿಧಿಯ ಅರ್ಥ ಎಂಬುದು ತಮ್ಮ ಗ್ರಹಿಕೆ’ ಎಂದು ಹೇಳಿದ್ದರು.

ಗೋಹತ್ಯೆ ನಿಷೇಧ ವಿಚಾರ ಅನೇಕ ಸಲ ಸುಪ್ರೀಂ ಕೋರ್ಟ್ ಮುಂದೆ ಬಂದಿದೆ. ಅದು ಕರಡು ಸಂವಿಧಾನದ 38 ಎ ಮತ್ತು ಅಂಗೀಕೃತ ಸಂವಿಧಾನದ 48ನೇ ವಿಧಿಗಳನ್ನು ಗಣನೆಗೆ ತೆಗೆದುಕೊಂಡೇ ತೀರ್ಪು ನೀಡಿದೆ.

ಸಂವಿಧಾನದ 48ನೇ ವಿಧಿ ವ್ಯಾಖ್ಯಾನಿಸಿ ಸುಪ್ರೀಂ ಕೋರ್ಟ್ ಮೊದಲ ಬಾರಿ ತೀರ್ಪು ಕೊಟ್ಟಿದ್ದು 1958ರಲ್ಲಿ, ‘ಎಂ.ಎಚ್‌. ಖುರೇಷಿ ವಿರುದ್ಧ ಬಿಹಾರ ಸರ್ಕಾರ’ ಪ್ರಕರಣದಲ್ಲಿ.

‘ಎಲ್ಲ ವಯೋಮಾನದ ಹಸುಗಳು ಮತ್ತು ಕರುಗಳು, ಎಮ್ಮೆಯ ಕರುಗಳನ್ನು ಕೊಲ್ಲುವುದರ ಮೇಲಿನ ನಿಷೇಧ ಸಮರ್ಥನೀಯ, ಸಂವಿಧಾನಬದ್ಧ’ ಎಂದು  ಆಗ ಕೋರ್ಟ್ ಹೇಳಿತ್ತು.

ಅಲ್ಲದೆ ಹೋರಿಗಳು, ಹಾಲು ಕೊಡುವ ಎಮ್ಮೆಗಳು ಮತ್ತು ದುಡಿಯುವ ಎತ್ತು– ಕೋಣಗಳ ಹತ್ಯೆ ಮೇಲಿನ ನಿಷೇಧ ಕೂಡ ಸಂವಿಧಾನಬದ್ಧ. ಆದರೆ ಒಮ್ಮೆ ಇವು ಹಾಲು ಕೊಡುವುದು ನಿಲ್ಲಿಸಿದರೆ ಅಥವಾ ದುಡಿಯುವ ಸಾಮರ್ಥ್ಯ ಕಳೆದುಕೊಂಡರೆ ಇವನ್ನು ಕೊಲ್ಲಲು ನಿಷೇಧ ಹೇರುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಸಮರ್ಥನೀಯ ಅಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.

1996ರಲ್ಲಿ ಮೂವರು ನ್ಯಾಯಮೂರ್ತಿಗಳ ಪೀಠ ಕೂಡ, ಆಕಳು ಮತ್ತು ಆಕಳ ಹಾಗೂ ಎಮ್ಮೆ ಕರುಗಳನ್ನು ಕೊಲ್ಲುವುದರ ಮೇಲಿನ ನಿಷೇಧ ಎತ್ತಿ ಹಿಡಿದಿತ್ತು. ಆದರೆ ‘ಹೋರಿ ಮತ್ತು ಎತ್ತುಗಳ’ ಹತ್ಯೆ ನಿಷೇಧವು ಈ ವೃತ್ತಿ ನಡೆಸುವವರ  ಮೂಲಭೂತ ಹಕ್ಕನ್ನು ಮೊಟಕು ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

2005ರಲ್ಲಿ ‘ಗುಜರಾತ್‌ ಸರ್ಕಾರ ವಿರುದ್ಧ ಮಿರ್ಜಾಪುರ ಮೋತಿ ಖುರೇಷಿ ಕಸಬ್‌ ಜಮಾತ್‌’ ಪ್ರಕರಣದಲ್ಲಿ ಕೂಡ ಗುಜರಾತ್‌ನ ಗೋಹತ್ಯೆ ನಿಷೇಧ ಕಾಯ್ದೆಯನ್ನು 7 ನ್ಯಾಯಮೂರ್ತಿಗಳ ಸಂವಿಧಾನ ಪೀಠ ಎತ್ತಿ ಹಿಡಿದಿತ್ತು. ಅದೇ ಉಸಿರಿನಲ್ಲಿಯೇ, ‘ನಿರ್ದೇಶಕ ತತ್ವಗಳನ್ನು ಪಾಲಿಸಬೇಕು ಎಂಬುದೇನೋ ನಿಜ; ಆದರೆ ಅದು  ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವಂತಿಲ್ಲ’ ಎಂದೂ ಹೇಳಿತ್ತು.

ಕರ್ನಾಟಕದ ಕೆಲ ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ಪ್ರಕರಣದಲ್ಲಿ 2006ರಲ್ಲಿ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಬರವಾಲ್‌ ಮತ್ತು ನ್ಯಾಯಮೂರ್ತಿ  ತರುಣ್‌ ಚಟರ್ಜಿ ಅವರ ಪೀಠ, ಗೋಹತ್ಯೆ ನಿಷೇಧ ಕಾಯ್ದೆಯ ಸಂವಿಧಾನಬದ್ಧತೆ ಎತ್ತಿ ಹಿಡಿದಿತ್ತು.  ಆದರೆ ಇದನ್ನು, ಪರವಾನಗಿ ಪಡೆದು ದನಕರುಗಳನ್ನು ಕೊಲ್ಲುವುದು ಸಂವಿಧಾನಬಾಹಿರ  ಎಂದು ಅರ್ಥೈಸಬಾರದು ಎಂದು ಸ್ಪಷ್ಟಪಡಿಸಿತ್ತು.

ಕೆಲ ವಕೀಲರು ಮತ್ತು ಸಂವಿಧಾನ ತಜ್ಞರು ಇವನ್ನೆಲ್ಲ ವ್ಯಾಖ್ಯಾನಿಸುವುದು ಹೀಗೆ.

ಗೋಹತ್ಯೆಯನ್ನು ಸಂವಿಧಾನ ಸಂಪೂರ್ಣವಾಗಿ ನಿಷೇಧಿಸಿಲ್ಲ. ಒಂದು ನಿರ್ದಿಷ್ಟ ವಯಸ್ಸಿನವರೆಗಿನ ಹಸುಗಳ ಹತ್ಯೆಗೆ ಮಾತ್ರ ನಿರ್ಬಂಧ ಹೇರಿದೆ. ಬೀಫ್‌ ಅಥವಾ ದನ ಮತ್ತು ಎಮ್ಮೆ ಮಾಂಸದ ಸೇವನೆಯ ಪೂರ್ಣ ನಿಷೇಧ ಸಂವಿಧಾನಬಾಹಿರ. ಅಲ್ಲದೆ  ತಮ್ಮ ಇಷ್ಟದ ಮಾಂಸ ಸೇವಿಸುವ ಬಹುಸಂಖ್ಯೆಯ ಜನರ ಹಕ್ಕನ್ನು ಉಲ್ಲಂಘಿಸುತ್ತದೆ.

ತೊಗಲು ಉದ್ಯಮಕ್ಕೆ ಹೊಡೆತ

ಕೊಲ್ಹಾಪುರಿ ಚರ್ಮದ ಚಪ್ಪಲಿ ಯಾರಿಗೆ ಗೊತ್ತಿಲ್ಲ. ಆದರೆ, ಅದರ ಮೂಲ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು. ಸಮಗಾರ ಸಮುದಾಯದ ಮುಖ್ಯ ಕಸುಬು ಚರ್ಮದ ಚಪ್ಪಲಿ ತಯಾರಿಸುವುದು. ಅಂಥ ಲಾಭ ಇಲ್ಲದಿದ್ದರೂ ಈ ಕುಲಕಸುಬನ್ನು  ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬೆಳಗಾವಿ ಜಿಲ್ಲಾ ಕೇಂದ್ರದಿಂದ 150 ಕಿ.ಮೀ. ದೂರದಲ್ಲಿರುವ ಉತ್ಪಾದಕರಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕೆ 90 ಕಿ.ಮೀ. ದೂರದ ಮಹಾರಾಷ್ಟ್ರದ ಕೊಲ್ಹಾಪುರ ಆಧಾರ. ಕೊಲ್ಹಾಪುರದಲ್ಲಿ ಮಾರಾಟವಾಗುವ ಕಾರಣಕ್ಕೆ ಕೊಲ್ಹಾಪುರಿ ಚಪ್ಪಲಿ ಎಂದೇ ಇದು ಹೆಸರಾಗಿದೆ.

ಇದಕ್ಕೆ ಕಚ್ಚಾ ಚರ್ಮ ಅಗತ್ಯ. ವಿಜಯಪುರ, ಮೀರಠ್‌ ಇಲ್ಲವೇ ಬೆಳಗಾವಿಯಿಂದ ಜಾನುವಾರುಗಳ  ಕಚ್ಚಾ ಚರ್ಮ ತರಿಸಿಕೊಳ್ಳುತ್ತಾರೆ. ಆದರೆ ಹೊಸ ಅಧಿಸೂಚನೆಯಿಂದ ಈ ಉದ್ಯಮಕ್ಕೂ  ದೊಡ್ಡ ಹೊಡೆತ ಬೀಳಲಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಸಮಗಾರ ಕುಟುಂಬಗಳು ವಾಸಿಸುವ ಅಥಣಿ, ಮದಭಾವಿ, ಮೋಳೆ, ಉಗಾರ, ಐನಾಪುರ, ಸಂಕೋನಟ್ಟಿ, ಶಂಬರಗಿ, ನಿಪ್ಪಾಣಿ, ರಾಮದುರ್ಗ ಮತ್ತು ರಾಯದುರ್ಗದಲ್ಲಿ ಈ ಉದ್ಯಮ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಲಿಡ್ಕರ್‌ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

**

ರಾಜ್ಯ ಕಾಯ್ದೆ– 1964 ವರ್ಸಸ್ ಕೇಂದ್ರ ಕಾಯ್ದೆ – 1960


ಕರ್ನಾಟಕ ಗೋಹತ್ಯೆ ನಿರ್ಬಂಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ– 1964

(ರಾಜ್ಯ ಕಾಯ್ದೆ)

ಪ್ರಾಣಿ ಹಿಂಸೆ ತಡೆಗಟ್ಟುವ ಕಾಯ್ದೆ (ಪಿಸಿಎ)– 1960

( ಕೇಂದ್ರ ಕಾಯ್ದೆ)

ಸೆಕ್ಷನ್‌ 9– ಮಾಂಸಕ್ಕಾಗಿ ಹಸು ಅಥವಾ ಎಮ್ಮೆಯ ಕರುಗಳ ( ಆರು ತಿಂಗಳವರೆಗಿನ) ಮಾರಾಟವನ್ನು ನಿರ್ಬಂಧಿಸುತ್ತದೆ.

ಹೊಸದಾಗಿ ರೂಪಿಸಿದ ನಿಯಮ–22ರಲ್ಲಿ ಜಾನುವಾರುಗಳನ್ನು ಕೊಲ್ಲುವ ಉದ್ದೇಶಕ್ಕೆ ಮಾರಾಟವನ್ನು ನಿರ್ಬಂಧಿಸುತ್ತದೆ. ಕೃಷಿ ಉದ್ದೇಶಕ್ಕೆ ನಿರ್ಬಂಧ ಇಲ್ಲ.

ಸೆಕ್ಷನ್‌ 2 ಅಡಿಯಲ್ಲಿ ಪ್ರಾಣಿ ಅಂದರೆ ಹೋರಿ, ಎತ್ತು, ಎಮ್ಮೆ (ಗಂಡು ಅಥವಾ ಹೆಣ್ಣು) ಅಥವಾ ಎಮ್ಮೆಯ ಕರುಗಳು (ಗಂಡು ಅಥವಾ ಹೆಣ್ಣು)

ನಿಯಮ 2 (ಇ) ಅಡಿ ಜಾನುವಾರು  (Cattle) ಅಂದರೆ ಹೋರಿ,ಎತ್ತು, ಹಸು ಎಮ್ಮೆ, ಮಣಕ (ಖಡಸು) ಮತ್ತು ಕರುಗಳು ಹಾಗೂ ಒಂಟೆಗಳು (ಈ ಎಲ್ಲ ಜಾನುವಾರುಗಳು ನಿಯಮ 22ರಂತೆ ಮಾರುಕಟ್ಟೆ ನಿರ್ವಹಣಾ ವ್ಯವಸ್ಥೆಯಡಿ ಬರುತ್ತವೆ).

ಸೆಕ್ಷನ್‌ 2 ಅಡಿ ಹಸು ಮತ್ತು ಹಸುವಿನ ಕರು ( ಹಸುವನ್ನು ಪ್ರತ್ಯೇಕವಾಗಿ ವ್ಯಾಖ್ಯಾನಿಸಲಾಗಿದೆ)

ಹಸುವನ್ನು ಪಿಸಿಎ –1960 ಅಡಿ ಕಾಯ್ದೆಯಾಗಲಿ ಅಥವಾ ಹೊಸತಾಗಿ ಮಾಡಿರುವ ನಿಯಮಗಳಡಿ ವ್ಯಾಖ್ಯಾನಿಸಿಲ್ಲ

ಕುಕ್ಕುಟ (Poultry) ವ್ಯಾಖ್ಯಾನಿಸಿಲ್ಲ

ನಿಯಮ –2 (ಎಚ್‌) ಅಡಿ ಪ್ರತ್ಯೇಕವಾಗಿ ವ್ಯಾಖ್ಯಾನಿಸಲಾಗಿದೆ.

ಸೆಕ್ಷನ್‌– 5 (1) ಮತ್ತು (2) ಅಧಿಕೃತ ಅಧಿಕಾರಿಯಿಂದ ದೃಢೀಕರಣ ಇಲ್ಲದ ಜಾನುವಾರುಗಳ ಹತ್ಯೆ ಮಾಡುವುದನ್ನು ನಿರ್ಬಂಧಿಸುತ್ತದೆ (12 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾದ, ಅನುತ್ಪಾದಕ ಪ್ರಾಣಿಗಳನ್ನು ಕೊಲ್ಲಲು ನಿರ್ಬಂಧ ಇಲ್ಲ).

ನಿಯಮ– 2(1) ಅಡಿ unfit  ಅಂದರೆ ಎಳೆಯ, ಗರ್ಭಧರಿಸದ, ನಿಶ್ಶಕ್ತ, ರೋಗಪೀಡಿತ, ಗಾಯಗೊಂಡಿರುವ ಇಂತಹ ಪ್ರಾಣಿಗಳ ಹತ್ಯೆಗೆ ನಿರ್ಬಂಧ ವಿಧಿಸಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.