ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಓಲೈಕೆಗೆ ಸಿದ್ದರಾಮಯ್ಯ ಕಸರತ್ತು

Last Updated 2 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ  ನಡೆಯಲಿದೆ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಪ್ರಕಟಿಸುತ್ತಿದ್ದಂತೆ ರಾಜ್ಯ ಸರ್ಕಾರ ದಲಿತರ ಓಲೈಕೆಗೆ ಕಸರತ್ತು ಆರಂಭಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆಯಲ್ಲಿ ‘ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ವಿಶೇಷ ಘಟಕ ಯೋಜನೆ (ಟಿಎಸ್‌ಪಿ)’ಯಡಿ ಹಲವು ಹೊಸ ಕಾರ್ಯಕ್ರಮ ಘೋಷಣೆ ಹಾಗೂ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳ ಸಹಾಯಧನ ಹೆಚ್ಚಿಸುವ ತೀರ್ಮಾನ ಕೈಗೊಳ್ಳಲಾಗಿದೆ.

ಗೃಹ ಸಚಿವ ಸ್ಥಾನ ತ್ಯಜಿಸುವಂತೆ ಕಾಂಗ್ರೆಸ್‌ ಹೈಕಮಾಂಡ್ ಪರಮೇಶ್ವರ್‌ಗೆ ಸೂಚಿಸಿತ್ತು. ಇದರಿಂದ ದಲಿತ ಸಮುದಾಯದ ಆಕ್ರೋಶಕ್ಕೆ ಪಕ್ಷ ಈಡಾಗಬಹುದೆಂಬ ಆತಂಕ ಮೂಡಿತ್ತು.  ಅಲ್ಲದೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ  ದಲಿತರ ಮನೆಗಳಿಗೆ ಭೇಟಿ ಕೊಡುತ್ತಿರುವುದು ಚರ್ಚೆಗೆ ಗ್ರಾಸವಾಗಿತ್ತು. ಈ ಎರಡೂ ಬೆಳವಣಿಗೆಗಳ ಬೆನ್ನಲ್ಲಿಯೇ ಪರಿಶಿಷ್ಟ ಜಾತಿ, ಪಂಗಡದ ಸಮುದಾಯವನ್ನು  ಸೆಳೆಯಲು ಸಿದ್ದರಾಮಯ್ಯ ಮುಂದಡಿ ಇಟ್ಟಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಐಎಎಸ್ ಅಧಿಕಾರಿಗಳಿಗೆ ನೋಟಿಸ್‌: ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಎಸ್‌ಸಿಪಿ, ಟಿಎಸ್‌ಪಿ ಅಡಿ ಮೀಸಲಿಟ್ಟ  ಅನುದಾನವನ್ನು ಮಾರ್ಚ್‌ ಒಳಗೆ ಖರ್ಚು ಮಾಡದೇ ಇದ್ದರೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಾಗಿರುವ ಐಎಎಸ್ ಅಧಿಕಾರಿಗಳಿಗೆ ನೋಟಿಸ್‌ ನೀಡಿ, ಶಿಸ್ತುಕ್ರಮ ಜರುಗಿಸಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ತರಾಟೆ: ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದ ಸಮರ್ಪಕ
ಬಳಕೆ ಉಸ್ತುವಾರಿ ವಹಿಸಬೇಕಾದ ಸಮಾಜ ಕಲ್ಯಾಣ ಇಲಾಖೆ ಶೇ 100ರಷ್ಟು ಅನುದಾನ ಖರ್ಚು ಮಾಡಿಲ್ಲ. ನೋಡಲ್‌ ಇಲಾಖೆಯೇ ಹೀಗೆ
ನಿರ್ಲಕ್ಷ್ಯ ತೋರಿದರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. 2015–16ರಲ್ಲಿ ₹751 ಕೋಟಿ ಹಾಗೂ 2016–17ರಲ್ಲಿ ₹1,782 ಖರ್ಚಾಗದೇ ಉಳಿದಿದೆ. ಹೀಗಾಗಿ ಈ ವರ್ಷ ₹27,703 ಕೋಟಿ ಅನುದಾನ ಲಭ್ಯವಿದೆ. ಮಾರ್ಚ್‌ ತಿಂಗಳೊಳಗೆ ಇದನ್ನ ಖರ್ಚು ಮಾಡಲೇಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT