ಜಾನುವಾರು ಹತ್ಯೆಗೆ ಕಡಿವಾಣ ಪರ–ವಿರೋಧದ ರಾಜಕಾರಣ

7

ಜಾನುವಾರು ಹತ್ಯೆಗೆ ಕಡಿವಾಣ ಪರ–ವಿರೋಧದ ರಾಜಕಾರಣ

Published:
Updated:
ಜಾನುವಾರು ಹತ್ಯೆಗೆ ಕಡಿವಾಣ ಪರ–ವಿರೋಧದ ರಾಜಕಾರಣ

2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಇಂಥದೊಂದು ಸೂಚನೆ ಇತ್ತು. ಈ ಸರ್ಕಾರ ಗೋಹತ್ಯೆ ನಿಷೇಧವನ್ನು ಇನ್ನಷ್ಟು ಬಿಗಿಯಾಗಿ ಜಾರಿಗೆ ತರಲಿದೆ ಎಂದು.

ಏಕೆಂದರೆ, ಬಿಜೆಪಿಯ ಗೋ ಪ್ರೀತಿ ಎಲ್ಲರಿಗೂ ಗೊತ್ತಿದ್ದೇ. ಅಲ್ಲದೆ, ಲೋಕಸಭೆಯಲ್ಲಿ ಬಿಜೆಪಿ ಏಕಾಂಗಿಯಾಗಿಯೇ ನಿಚ್ಚಳ ಬಹುಮತವನ್ನೂ ಹೊಂದಿರುವುದರಿಂದ, ತನಗೆ ಸರಿಕಂಡದ್ದನ್ನು ಅಥವಾ ತನ್ನ ನೀತಿ ನಿಲುವುಗಳನ್ನು ಅದು ಅನುಷ್ಠಾನ ಮಾಡುತ್ತದೆ ಎನ್ನುವುದರಲ್ಲಿ ಯಾರಿಗೂ ಸಂದೇಹ ಇರಲಿಲ್ಲ. ಆದರೆ ಯಾವಾಗ ಎನ್ನುವುದಷ್ಟೇ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿದಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಮೋದಿ ನೇತೃತ್ವದ ಸರ್ಕಾರ ಮೂರು ವರ್ಷ ಪೂರ್ಣಗೊಳಿಸುವ ಮೂರು ದಿನ ಮೊದಲು ಅಂದರೆ ಮೇ 23ರಂದು ಹೊರಡಿಸಿದ ಒಂದು ಅಧಿಸೂಚನೆ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಪರ- ವಿರೋಧ ಸಮರವನ್ನೇ ಹುಟ್ಟು ಹಾಕಿದೆ. ಹತ್ಯೆಗಾಗಿ ಜಾನುವಾರು ಮಾರಾಟ ನಿರ್ಬಂಧಿಸುವ ಈ ಅಧಿಸೂಚನೆಯನ್ನು ಎರಡೂ ಕಡೆಯವರು ತಮ್ಮ ತಮ್ಮ  ಸೈದ್ಧಾಂತಿಕ ಒಲವುಗಳಿಗೆ ಅನುಗುಣವಾಗಿ ವ್ಯಾಖ್ಯಾನಿಸುತ್ತಿದ್ದಾರೆ.

‘ಅದು ಅಲ್ಪಸಂಖ್ಯಾತರ ಮತ್ತು ದಲಿತರ ವಿರೋಧಿ. ತನಗೆ ಇಷ್ಟವೆನಿಸುವ ಆಹಾರ ಸೇವಿಸುವ ಮೂಲಭೂತ ಹಕ್ಕಿನ ಮೇಲೆ ಪ್ರಹಾರ. ಹಿಂದುತ್ವ ಹೇರಿಕೆ ಕಾರ್ಯಸೂಚಿಯ ಭಾಗ. ಕಡಿಮೆ ದರದಲ್ಲಿ ಸಿಗುವ ದನದ ಮಾಂಸ ಪೂರೈಕೆ ನಿಂತರೆ ಬಡವರು ತುಂಬ ತೊಂದರೆಗೆ ಒಳಗಾಗುತ್ತಾರೆ’ ಎನ್ನುವುದು ಅದನ್ನು ವಿರೋಧಿಸುವವರ ವಾದ. 

‘ಹಿಂದೂಗಳಿಗೆ ಗೋವು ಪೂಜನೀಯ. ತಾಯಿ ಸಮಾನ. ಆಕಳ ಹಾಲು, ಅದರ ಗಂಜಲ ಹೀಗೆ ಎಲ್ಲವೂ ಮನುಷ್ಯನಿಗೆ ಅತ್ಯುಪಯುಕ್ತ. ಅಲ್ಲದೆ ಗೋಹತ್ಯೆ ನಿಷೇಧ ಸಂವಿಧಾನದಲ್ಲಿಯೇ ಇದೆ. ಆದ್ದರಿಂದ ಸರ್ಕಾರದ ಆದೇಶ ಸರಿ’ ಎನ್ನುವುದು ಪರವಾಗಿರುವವರ ವಾದ.

ಬಿಜೆಪಿಯೇತರ ರಾಜ್ಯ ಸರ್ಕಾರಗಳ ಪೈಕಿ ಪಶ್ಚಿಮ ಬಂಗಾಳ ಮತ್ತು ಕೇರಳಗಳು ಈ ಅಧಿಸೂಚನೆ ಒಪ್ಪುವುದಿಲ್ಲ ಎಂದು ಹೇಳಿ ತೊಡೆತಟ್ಟಿ ನಿಂತಿವೆ. ‘ಆಹಾರದ ಆಯ್ಕೆಯ ಹಕ್ಕಿನ ಹರಣ, ಒಕ್ಕೂಟ ವ್ಯವಸ್ಥೆಯ ಮೇಲೆ ಪ್ರಹಾರ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು  ಇದರ ವಿರುದ್ಧ ಹೋರಾಟಕ್ಕೆ ಆಹ್ವಾನಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳುವಂತೆ, ‘ಜಾನುವಾರುಗಳ ರಕ್ಷಣೆ ರಾಜ್ಯಗಳ ವ್ಯಾಪ್ತಿಯ ವಿಷಯ. ಅದರಲ್ಲಿ ಕೈ ಹಾಕುವ ಅಧಿಕಾರ ಕೇಂದ್ರಕ್ಕೆ ಇಲ್ಲ’.

ಕರ್ನಾಟಕ, ಪುದುಚೇರಿ ಮತ್ತು ತೆಲಂಗಾಣ ಸರ್ಕಾರಗಳು ಸಹ ಅಧಿಸೂಚನೆ ಜಾರಿಗೆ ಮನಸ್ಸು ಮಾಡಿಲ್ಲ.  ಆದರೆ ಬಿಜೆಪಿ ಅಧಿಕಾರದ ರಾಜ್ಯಗಳು ಮಾತ್ರ ಪುಳಕಿತಗೊಂಡಿವೆ.

ಮದ್ರಾಸ್‌ ಹೈಕೋರ್ಟ್‌ನ ಮಧುರೆ ಪೀಠ ಕೇಂದ್ರದ ಅಧಿಸೂಚನೆಗೆ ನಾಲ್ಕು ವಾರಗಳ ತಡೆ ಕೊಟ್ಟಿದೆ. ಆದರೆ ಇಂಥದೇ ಕೋರಿಕೆಯನ್ನು ಕೇರಳ ಹೈಕೋರ್ಟ್ ತಳ್ಳಿ ಹಾಕಿದೆ. ರಾಜಸ್ತಾನ ಹೈಕೋರ್ಟ್ ಮಾತ್ರ, ಗೋಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಹೇಳಿದೆ.

ಇದರ ನಡುವೆ, ಕೇಂದ್ರದ ಆದೇಶ ವಿರೋಧಿಸುವ ಉನ್ಮಾದದಲ್ಲಿ ಕೇರಳದಲ್ಲಿ ಯುವ ಕಾಂಗ್ರೆಸ್‌ನ ಕೆಲ ಪದಾಧಿಕಾರಿಗಳು ಹಸುವೊಂದನ್ನು ಸಾರ್ವಜನಿಕವಾಗಿಯೇ ಕತ್ತರಿಸಿ ಅನಾಗರಿಕತೆ ಪ್ರದರ್ಶಿಸಿದರು. ಆದರೆ ಅದನ್ನು ಖಂಡಿಸುವ ಧ್ವನಿ ದೊಡ್ಡದಾಗಿ ಕೇಳಿ ಬರಲೇ ಇಲ್ಲ.

ಒಟ್ಟಾರೆಯಾಗಿ ಇಡೀ ವಿಷಯದಲ್ಲಿ ವಸ್ತುನಿಷ್ಠ ಆಲೋಚನೆ ಹಿಂದೆ ಸರಿದಿದೆ, ಪಕ್ಕಾ ರಾಜಕಾರಣದ ಲೇಪನ ಅಂಟಿಕೊಂಡಿದೆ.

**

ಪಾಕ್‌, ಕ್ಯೂಬಾದಲ್ಲೂ ನಿಷೇಧ

ಈಶಾನ್ಯ ಭಾರತದ ರಾಜ್ಯಗಳಲ್ಲಿ ದನದ ಮಾಂಸ ಸೇವನೆ ಅತ್ಯಂತ ಸಾಮಾನ್ಯ. ಈ ಕಾರಣಕ್ಕಾಗಿಯೇ ಅಲ್ಲಿ ಗೋಹತ್ಯೆ ನಿಷೇಧ ಕಾನೂನು ಇಲ್ಲ.  ಅಲ್ಲದೆ ಈ ವಿಷಯದಲ್ಲಿ ಕೈ ಹಾಕುವ ಧೈರ್ಯ ಅಲ್ಲಿ ಬಿಜೆಪಿಗೂ ಇಲ್ಲ.

ಅದನ್ನು ಬಿಟ್ಟರೆ ಎಲ್ಲ ರಾಜ್ಯಗಳಲ್ಲಿ ಒಂದಲ್ಲ ಒಂದು ರೂಪದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಇದೆ. ಕೇರಳ, ಪಶ್ಚಿಮ ಬಂಗಾಳಗಳು ಹಾಲು ಕೊಡದ ಮತ್ತು ಮುದಿ, ಗೊಡ್ಡು ಹಸುಗಳ ಹತ್ಯೆಗಷ್ಟೇ ಅವಕಾಶ ನೀಡಿವೆ.

ನಮ್ಮಲ್ಲಷ್ಟೇ ಅಲ್ಲ; ನೆರೆಯ ಪಾಕಿಸ್ತಾನದ ಪಂಜಾಬ್‌ ಪ್ರಾಂತದಲ್ಲೂ  ಹಾಲು ಕೊಡುವ ಮತ್ತು ದುಡಿಯುವ ಜಾನುವಾರುಗಳ ಹತ್ಯೆ ಮೇಲೆ ಬಿಗಿ ನಿರ್ಬಂಧ ಇದೆ. ಕಟ್ಟಾ ಕಮ್ಯುನಿಸ್ಟ್ ದೇಶ ಕ್ಯೂಬಾದಲ್ಲಿ ಹಾಲು ಕೊಡುವ ಹಸುಗಳ ವಧೆ ನಿಷಿದ್ಧ.

**

ಕೇಂದ್ರದ ಅಧಿಸೂಚನೆಯಲ್ಲಿ ಏನಿದೆ?

ಇದೇ ಮೇ 23ರಂದು ಹೊರಡಿಸಿದ ‘ಪ್ರಾಣಿ ಹಿಂಸೆ ತಡೆ (ಜಾನುವಾರು ಮಾರುಕಟ್ಟೆ ನಿಯಂತ್ರಣ) ನಿಯಮ –2017’ರ  ಅಧಿಸೂಚನೆಯ ಪ್ರಕಾರ  ‘ಆಕಳು ಹಾಗೂ ಎಮ್ಮೆ ಮತ್ತು ಅವುಗಳ ಕರುಗಳು, ಹೋರಿ, ಎತ್ತು, ಕೋಣ, ಒಂಟೆಯನ್ನು ಜಾನುವಾರು ಮಾರುಕಟ್ಟೆಯಲ್ಲಿ ಯಾರೇ ಆಗಲಿ ಮಾಂಸಕ್ಕಾಗಿ ಮಾರಾಟ ಮಾಡುವಂತಿಲ್ಲ ಅಥವಾ ಖರೀದಿಸುವಂತಿಲ್ಲ’.

ಇದಲ್ಲದೆ ಜಾನುವಾರುಗಳನ್ನು ಸಾಗಿಸುವಾಗ ಹಿಂಸೆಯಾಗದಂತೆ ನೋಡಿಕೊಳ್ಳಬೇಕು, ಅವುಗಳಿಗೆ ಸಮರ್ಪಕ ನೀರು, ನೆರಳು,  ಅಗತ್ಯ ಬಿದ್ದರೆ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು.

ಮಾರಾಟ ನಿಯಂತ್ರಣಕ್ಕೆ ಭಾರಿ ವಿರೋಧ ಬಂದ ಕಾರಣ ಮೇ 27ರಂದು ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಿ, ರೈತರು ನೇರವಾಗಿ ಕಸಾಯಿಖಾನೆಗಳಿಗೆ ತಮ್ಮ ಜಾನುವಾರು ಮಾರಾಟ ಮಾಡಲು ಯಾವುದೇ ನಿರ್ಬಂಧ ಇಲ್ಲ ಎಂದು ಹೇಳಿದೆ.

ದನಗಳ ಸಂತೆ ಅಥವಾ ಮಾರುಕಟ್ಟೆಯಲ್ಲಿ ಪ್ರಾಣಿಗಳಿಗೆ ಕಿರುಕುಳ ಆಗದಂತೆ ನೋಡಿಕೊಳ್ಳುವುದು ಮತ್ತು ನೀರು, ಆಹಾರ, ನೆರಳಿನಂತಹ ಸೌಲಭ್ಯ ಕಲ್ಪಿಸುವುದು, ರೈತರಿಗೆ ವ್ಯವಸಾಯ ಉದ್ದೇಶಕ್ಕಾಗಿ ಆರೋಗ್ಯವಂತ ಜಾನುವಾರುಗಳು ಸಿಗಬೇಕು ಎನ್ನುವುದಷ್ಟೇ ಈ ನಿರ್ಬಂಧಗಳ ಉದ್ದೇಶ ಎಂದು ವಿವರಿಸಿದೆ. 

ದನಗಳ ಸಂತೆಯಲ್ಲಿ ಕೃಷಿ ಉದ್ದೇಶಕ್ಕಾಗಿ ಮಾತ್ರ ಜಾನುವಾರು ಮಾರಾಟ– ಖರೀದಿ ನಡೆಯಬೇಕು. ಕಸಾಯಿಖಾನೆಯವರು ರೈತರಿಂದ ಅವರ ಮನೆಗಳಿಂದಲೇ ನೇರವಾಗಿ ಖರೀದಿ ಮಾಡಬಹುದು ಎಂದು ಸಮಜಾಯಿಷಿ ನೀಡಿದೆ. 1960ರ ಪ್ರಾಣಿ ಹಿಂಸೆ ತಡೆ ಕಾಯ್ದೆಯ 38ನೇ ಕಲಂ ಪ್ರಕಾರ ನಿಯಮಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ 2016ರ ಜುಲೈ 12ರಂದು ಆದೇಶಿಸಿತ್ತು. ಅದಕ್ಕೆ ಅನುಗುಣವಾಗಿ ಈ ಅಧಿಸೂಚನೆ ಎಂದು ಸಮರ್ಥಿಸಿಕೊಂಡಿದೆ.

**

ಮಾಂಸ ಮತ್ತು ಅರ್ಥವ್ಯವಸ್ಥೆ

ಮಾಂಸ ಮತ್ತು ತೊಗಲು ಉದ್ಯಮ ಅರ್ಥ ವ್ಯವಸ್ಥೆಗೆ ನೀಡುತ್ತಿರುವ ಕಾಣಿಕೆಯನ್ನು ಕಡೆಗಣಿಸಲು ಸಾಧ್ಯವೇ ಇಲ್ಲ.

ಚರ್ಮೋತ್ಪನ್ನ ರಫ್ತು ಮಂಡಳಿಯ ಅಂಕಿಅಂಶಗಳ ಪ್ರಕಾರ ತೊಗಲು ಉದ್ಯಮ 25 ಲಕ್ಷ ಜನಕ್ಕೆ ಉದ್ಯೋಗ ನೀಡಿದೆ. ಇವರಲ್ಲಿ ದಲಿತರೇ ಹೆಚ್ಚು.

2012ರ ಜಾನುವಾರು ಗಣತಿ ಪ್ರಕಾರ ದೇಶದಲ್ಲಿ 12.29 ಕೋಟಿ ಆಕಳುಗಳು ಇದ್ದವು. ಇದು 2007ರ ಗಣತಿಗೆ ಹೋಲಿಸಿದರೆ ಶೇ 6.52ರಷ್ಟು ಜಾಸ್ತಿ.

ದೇಶದ ಮಾಂಸ ಉದ್ಯಮದ ವಾರ್ಷಿಕ ವಹಿವಾಟು ಸುಮಾರು ₹ 1 ಲಕ್ಷ ಕೋಟಿ. ಇದರಲ್ಲಿ ₹ 30 ಸಾವಿರ ಕೋಟಿ ಮೌಲ್ಯದ ಮಾಂಸ ರಫ್ತಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry