ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರು, ವಿದ್ಯಾರ್ಥಿಗಳ ಪ್ರತಿಭಟನೆ

Last Updated 2 ಜೂನ್ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ನರವಿಜ್ಞಾನ ವಿಭಾಗದ ವೈದ್ಯ ಡಾ. ರಮೇಶ್‌ ಪಾಟೀಲ ಅವರ ಮೇಲೆ  ರೋಗಿಯ ಸಂಬಂಧಿ ಹಲ್ಲೆ ನಡೆಸಿದ್ದನ್ನು  ಖಂಡಿಸಿ ವೈದ್ಯರು ಹಾಗೂ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಗಳ ಶಿಕ್ಷಕರ ಒಕ್ಕೂಟ’ದ ನೇತೃತ್ವದಲ್ಲಿ ಆಸ್ಪತ್ರೆಯ ಆವರಣದಲ್ಲಿ ಸೇರಿದ್ದ ಪ್ರತಿಭಟನಾಕಾರರು, ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದರು.

ಒಕ್ಕೂಟದ ಕಾರ್ಯದರ್ಶಿ ಡಾ. ಎನ್‌.ರವಿ ಮಾತನಾಡಿ, ‘ಪ್ರಧಾನ ಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಅಡಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮೇ 28ರಂದು ಸುಹಾಸ್‌ ಎಂಬುವರು ರೋಗಿಯನ್ನು ಕರೆದುಕೊಂಡು ಬಂದಿದ್ದರು. ಈ ವೇಳೆ ನರ್ಸ್‌ ಜತೆ ಗಲಾಟೆ ಮಾಡಿದ್ದರು. 

ಬಳಿಕ ಕರ್ತವ್ಯದಲ್ಲಿದ್ದ  ಡಾ. ರಮೇಶ್‌ ಮೇಲೂ ಹಲ್ಲೆ ನಡೆಸಿದ್ದರು’ಎಂದು ಹೇಳಿದರು.

‘ಇಂತಹ ಘಟನೆಯು ವೈದ್ಯರು ಹಾಗೂ  ವಿದ್ಯಾರ್ಥಿಗಳಲ್ಲಿ ಆತಂಕವನ್ನುಂಟು ಮಾಡಿದೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ಸಾಂಕೇತಿಕವಾಗಿದ್ದು, ಇದರಿಂದ ಆಸ್ಪತ್ರೆಯ ರೋಗಿಗಳಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದು ತಿಳಿಸಿದರು.

ವೈದ್ಯೆ ಡಾ. ಪೂರ್ಣಿಮಾ ಮಾತನಾಡಿ, ‘ನಿತ್ಯವೂ ಸಾವಿರಾರು ಜನ ಆಸ್ಪತ್ರೆಗೆ ಬರುತ್ತಾರೆ. ಅವರ ಜತೆ ವೈದ್ಯಕೀಯ ವಿದ್ಯಾರ್ಥಿಗಳು ತಾಳ್ಮೆಯಿಂದ ವರ್ತಿಸುತ್ತಿದ್ದಾರೆ. ಆದರೆ, ಕೆಲ ರೋಗಿಗಳು ಹಾಗೂ ಸಂಬಂಧಿಕರು ವಿನಾಕಾರಣ ಗಲಾಟೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಹೊರ ಠಾಣೆ ರದ್ದತಿಗೆ ಖಂಡನೆ: ಆಸ್ಪತ್ರೆ ಆವರಣದಲ್ಲಿದ್ದ ಪೊಲೀಸ್‌ ಹೊರ ಠಾಣೆಯನ್ನು ಇತ್ತೀಚೆಗಷ್ಟೇ ರದ್ದು ಮಾಡಲಾಗಿದ್ದು, ಇದನ್ನು ವೈದ್ಯರು ಖಂಡಿಸಿದ್ದಾರೆ.
‘ಪ್ರಕರಣಗಳು ದಾಖಲಾಗುತ್ತಿಲ್ಲ ಎಂದು ಹೇಳಿ ಠಾಣೆಯನ್ನೇ ರದ್ದು ಮಾಡುವುದು ಸರಿಯಲ್ಲ. ಠಾಣೆಯನ್ನು ಮರು ಸ್ಥಾಪಿಸಲು ಹಿರಿಯ ಪೊಲೀಸ್‌ ಅಧಿಕಾರಿಗಳು  ಕ್ರಮ ಕೈಗೊಳ್ಳಬೇಕು’ ಎಂದು ಡಾ. ರವಿ ಒತ್ತಾಯಿಸಿದರು.

**

ಆರೋಪಿ ಬಂಧನ
ವೈದ್ಯರ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಸುಹಾಸ್‌ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಮರ್ಪಕ ಚಿಕಿತ್ಸೆ ಕೊಡಲಿಲ್ಲ. ಹೀಗಾಗಿ ತಾಳ್ಮೆ ಕಳೆದುಕೊಂಡೆ ಎಂದು ಆರೋಪಿ ಹೇಳಿದ್ದಾನೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT