ಹಳಿಯಾಳ: 9420 ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ

7

ಹಳಿಯಾಳ: 9420 ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ

Published:
Updated:
ಹಳಿಯಾಳ: 9420 ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ

ಹಳಿಯಾಳ: ತಾಲ್ಲೂಕಿನಾದ್ಯಂತ ಕಳೆದ ಒಂದು ವಾರದಿಂದ ಮಳೆ ಬಿದ್ದ ಪರಿಣಾಮ ಭತ್ತದ ಬಿತ್ತನೆ ಪ್ರಾರಂಭಗೊಂಡಿದ್ದು, ಈಗಾಗಲೇ 9420 ಹೆಕ್ಟರ್ ಜಮೀನಿನಲ್ಲಿ ರೈತರು ಭತ್ತ ಬಿತ್ತನೆ ಮಾಡಿದ್ದಾರೆ.

ಕಳೆದ 3 ವರ್ಷಗಳಿಂದ ಸತತ ಬರಗಾಲದಿಂದ ತತ್ತರಿಸುತ್ತಿದ್ದ ಹಳಿಯಾಳ ತಾಲ್ಲೂಕಿನಲ್ಲಿ ಮುಂಗಾರಿಗೆ ಮುನ್ನವೇ ಮೇ ಕೊನೆಯ ವಾರದಲ್ಲಿ ಹಾಗೂ ಜೂನ ಆರಂಭದಲ್ಲಿ ಮಳೆ ಬಿದ್ದ ಪರಿಣಾಮ ರೈತರು ಜಾಗೃತರಾಗಿ ಕೃಷಿ ಇಲಾಖೆಗೆ ಮುಗಿಬಿದ್ದಾರೆ. ಭತ್ತ, ಗೋವಿನಜೋಳದ ಬೀಜವನ್ನು ಖರೀದಿಸಿ ಬಿತ್ತನೆ ಕಾರ್ಯವನ್ನು ಪ್ರಾರಂಭಿಸಿರುತ್ತಾರೆ.

ತಾಲ್ಲೂಕಿನಾದ್ಯಂತ 2016–17 ರಲ್ಲಿ ಭತ್ತ– 11528 ಹೆಕ್ಟೇರ್, ಕಬ್ಬು– 5429 ಹೆಕ್ಟೇರ್, ಹತ್ತಿ– 575 ಹೆಕ್ಟೇರ್, ಗೋವಿನಜೋಳ– 3886 ಹೆಕ್ಟೇರ್‌ ಜಮೀನಿನಲ್ಲಿ ಬೆಳೆಸಲಾಗಿತ್ತು. ಈ ಬಾರಿ, ಮೇ ಕೊನೆಯ ವಾರದಲ್ಲಿ ಗೋವಿನಜೋಳ 3030 ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಕಾರ್ಯ ಮುಗಿದಿರುತ್ತದೆ.

ಕೃಷಿ ಇಲಾಖೆಯಲ್ಲಿಯೂ ಸಹ ಸಾಕಷ್ಟು ಪ್ರಮಾಣದಲ್ಲಿ ಬೀಜಗೊಬ್ಬರಗಳ ಹಾಗೂ ಕೃಷಿ ಯಂತ್ರೋಪಕರಣಗಳ ದಾಸ್ತಾನು ಇದ್ದು, ಇದುವರೆಗೆ 242 ಕ್ವಿಂಟಲ್ ಭತ್ತ, 778 ಕ್ವಿಂಟಲ್ ಗೋವಿನಜೋಳದ ಬಿತ್ತನೆ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಹಳಿಯಾಳ, ಮುರ್ಕವಾಡ, ಸಾಂಬ್ರಾಣಿ, ದಾಂಡೇಲಿ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಸಹ ಬೀಜ ಗೊಬ್ಬರಗಳ ದಾಸ್ತಾನು ಇಡಲಾಗಿದೆ. ರೈತರ ಆಸಕ್ತಿಯ ಮೇರೆಗೆ ಹೈಟೆಕ್ ಕೃಷಿ ಯಂತ್ರೋಪಕರಣಗಳನ್ನು ಸಹ ರೈತರು ವಂತಿಕೆ ಕಟ್ಟಿದರೇ ಇಲಾಖೆಯಿಂದ ಪೂರೈಸಲಾಗುತ್ತಿದೆ.

ಈಗಾಗಲೇ ಕೃಷಿಗಾಗಿ ರೋಟೋವೆಟರ್ ನೇಗಿಲು, ರೋಟ್ರಿಟ್ರೇಲ್ಲರ, ವಿಡ್ಡಕಟ್ಟರ್, ಚಾಪ್ ಕಟ್ಟರ್, ಡೀಸೆಲ್ ಪಂಪಸೆಟ್, ಭತ್ತ ಬಿತ್ತನೆ ಮಾಡಲು ರಿಪೇಕ್ಸ್ ಹಾಗೂ ವಿವಿಧ ನೇಗಿಲುಗಳಾದ ಪೀಕ್ಸ್‌ ನೇಗಿಲು, ಒಂದೇ ಬಾಟೋಮ್ ಪಿಕ್ಸ್‌, ರಿವರ್ಸ ಸಿಂಗಲ್ ಬಾಟಮ್‌, ಡಬಲ್ ಬಾಟಮ್‌ ನೇಗಿಲುಗಳನ್ನು ರೈತರ ಬೇಡಿಕೆಯ ಅನುಸಾರವಾಗಿ ವಿತರಣೆ ಮಾಡಲಾಗುತ್ತಿದೆ.

‘ಕಳೆದ ವರ್ಷ ಸುಮಾರು 11 ಸಾವಿರ ರೈತರು ಕೃಷಿ ಇಲಾಖೆಗೆ ಸಂಪರ್ಕಿಸಿರುತ್ತಾರೆ. ಇತ್ತೀಚಿಗೆ ಬಿಸಿಲು ಮಳೆಯಿಂದ ಭತ್ತ ಬಿತ್ತನೆ ಮಾಡಿದ ಬೆಳೆಯ ಮೊಳಕೆಯಲ್ಲಿ ಬೆಂಕಿ ರೋಗ ಕಾಣಿಸುವುದು ಸಹಜ. ಅದಕ್ಕೆ ಬೆವಿಸ್ಟಿನ್ ಪಾರ್ಡ್‌ ಅಥವಾ ಕಾರ್ಬನ್‌ ಡೈಸಿಯಂ 1 ಕೆಜಿ  ಬೀಜಕ್ಕೆ 2 ಗ್ರಾಂನಂತೆ ಸಿಂಪಡಿಸಿ ರೋಗ ತಡೆಗಟ್ಟಬಹುದು ಅಥವಾ ಭತ್ತದ ಬೀಜ ಬಿತ್ತುವ ಮುಂಚೆ ಬೀಜೋಪಚಾರ ಮಾಡಿ ಸಹ ಮುಂಬರುವ ರೋಗ ತಡೆಗಟ್ಟಬಹುದು’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಮಂಜುಳಾ ಹಾಗೂ ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ ರೈತರಿಗೆ ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry