ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ವ್ಯಕ್ತಿ

Last Updated 4 ಜೂನ್ 2017, 5:41 IST
ಅಕ್ಷರ ಗಾತ್ರ

ಆಫ್ರಿಕನ್ ಮೂಲ: ಇ.ಬಿ. ಡೊಂಗಾಲ
ಕನ್ನಡಕ್ಕೆ : ಕೇಶವ ಮಳಗಿ

...ಇಲ್ಲ! ಈ ಸಲ ಅವನು ಕೈ ತಪ್ಪಿಹೋಗಲು ಸಾಧ್ಯವೇ ಇಲ್ಲ! ನಲ್ವತ್ತೆಂಟು ಗಂಟೆಗಳ ಬಳಿಕ ಅವನ ಅಡಗುತಾಣವನ್ನು ಪತ್ತೆಹಚ್ಚಲಾಗಿದೆ. ಆದರೆ ಎಷ್ಟೊಂದು ಹಾದಿತಪ್ಪಿಸುವ ಮಾಹಿತಿಗಳು! ಸರ್ವಾಂತರ್ಯಾಮಿಯಂತೆ ಎಲ್ಲೆಡೆಯೂ ಏಕಕಾಲಕ್ಕೆ ಆತ ಪ್ರತ್ಯಕ್ಷವಾಗುತ್ತಿದ್ದ; ಕಟ್ಟಾ ಉಗ್ರರು ನಗರದ ಹೃದಯಭಾಗದಲ್ಲಿಯೇ ಅವನನ್ನು ಅಟ್ಟಾಡಿಸಿಕೊಂಡು ಹೋಗಿದ್ದರು. ಆದರೆ ಹಿಡಿಯಲಾಗಿರಲಿಲ್ಲ, ಅಷ್ಟೇ.

ಉತ್ತರದ ಕಡೆ ಕಾರ್ಯಾಚರಣೆ ನಡೆಸುತ್ತಿದ್ದ ಪಡೆ ಆತನೊಂದಿಗೆ ಕಣಿವೆ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆಸಿ ಗಾಯಗೊಳಿಸಿದ್ದಾಗಿ ಹೇಳಿದ್ದರೂ ಸಾಕ್ಷ್ಯ ಗುಡ್ಡಗಾಡಿನಲ್ಲೇ ಕಣ್ಮರೆಯಾಗಿತ್ತು. ಇನ್ನೊಂದು ತುಕಡಿಯೂ ಆತ ದೋಣಿ ದಾಟುವಾಗ ಗುಂಡು ಹಾರಿಸಿದ್ದಾಗಿ ಹೇಳಿತ್ತು. ದೋಣಿ ನದಿಯಲ್ಲಿ ಕೊಚ್ಚಿ ಹೋಗಿದ್ದರೂ ಆತ ಪರಾರಿಯಾಗಿದ್ದ. ಹೇಳಿಕೆಗಳೇನೇ ಇದ್ದರೂ ಚುರುಕಿನ ತನಿಖೆಗೆ ಸಹಾಯಕವಾಗಿರಲಿಲ್ಲ.

ಈಗಾಗಲೇ ಬಿಗಿಯಾಗಿದ್ದ ಪೊಲೀಸ್ ಪಡೆಯನ್ನು ಇನ್ನಷ್ಟು ಬಿಗಿಗೊಳಿಸಲಾಯಿತು, ಫ್ರೆಂಚ್ ಪೊಲೀಸ್ ತುಕಡಿಯನ್ನು ಸೃಷ್ಟಿಸಲಾಯಿತು. ಸೇನೆಗೆ ಪರಮಾಧಿಕಾರವನ್ನು ನೀಡಲಾಯಿತು. ಕಾರ್ಮಿಕವರ್ಗ ವಾಸಿಸುವ ನಗರದ ಹೊರವಲಯಕ್ಕೆ ಸೇನೆ ನುಗ್ಗಿತು.

ಮನೆಗಳ ಬಾಗಿಲುಗಳನ್ನು ಕೆಡವಿ, ಬಯೊನೆಟ್‌ಗಳಿಂದ ಹಾಸಿಗೆ, ಚಾಪೆಗಳ ಹತ್ತಿ–ಬಿದಿರುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಸಾಮಾನುಗಳನ್ನು ಚೆದರಿ, ಕೇಳಿದ ಪ್ರಶ್ನೆಗಳಿಗೆ ಉತ್ತರಿಸದಿರುವವರಿಗೆ, ಪ್ರತಿರೋಧಿಸುವವರಿಗೆ ಬೂಟುಗಾಲುಗಳ ರುಚಿ ತೋರಿಸಿ ತನ್ನ ಶಕ್ತಿ ಪ್ರದರ್ಶಿಸಿತು. ಈ ಬಿಗಿಮುಷ್ಟಿ ತಂತ್ರಗಳಿಂದ ಏನೂ ಪ್ರಯೋಜನವಾಗಲಿಲ್ಲ. ದೇಶದಲ್ಲಿದ್ದ ಆತಂಕ ಸ್ಥಿತಿ ಹಾಗೇ ಮುಂದುವರೆಯಿತು. ಆತ ಎಲ್ಲಿ ಅಡಗಿಕೊಂಡಿರಬಹುದು?

ದೇಶದ ಸಂಸ್ಥಾಪಕ, ದಿವ್ಯದೃಷ್ಟಿಯ, ಜನತೆಯ ಮಾರ್ಗದರ್ಶಿ, ಆಜೀವ ರಾಷ್ಟ್ರಾಧ್ಯಕ್ಷ, ಸೇನಾ ಮುಖ್ಯಸ್ಥ, ಜನತೆಯ ಕಣ್ಮಣಿಯಾಗಿ ದೇಶದ ಸಾಮಾನ್ಯ ಪ್ರಜೆ ತಲುಪಲು ಅಸಾಧ್ಯವಾದ ಭಾರೀ ಅರಮನೆಯಲ್ಲಿ ಜೀವಿಸುತ್ತಿರುವ ವ್ಯಕ್ತಿಗೆ ಇದು ನಿಜಕ್ಕೂ ನಿದ್ದೆಗೆಡಿಸುವ ವಿಚಾರವಾಗಿತ್ತು. ಆದಾಗ್ಯೂ, ಸಮರ ವಿಜ್ಞಾನ ಮತ್ತು ಉಗ್ರನಿಗ್ರಹ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದ ಇಸ್ರೇಲಿ ಪ್ರೊಫೆಸರ್‌ನ ನೇತೃತ್ವದಲ್ಲಿ ರಚಿಸಲಾಗಿದ್ದ ಭದ್ರತಾ ವ್ಯವಸ್ಥೆ ಅಭೇದ್ಯವಾಗಿತ್ತು. ಅರಮನೆಯ ಅಡಿಅಡಿಗೆ ಕಾವಲು ಪಡೆ ನಿಯೋಜಿಸಲಾಗಿತ್ತು.

ಅರಮನೆಯ ತಡೆಗೋಡೆಗಳ ಎತ್ತರವೇ ಸುಮಾರು ಅರವತ್ತು ಅಡಿಯಿತ್ತು. ಮಾತ್ರವಲ್ಲ, ಅರಮನೆಯ ಸುತ್ತ ನೀರು ತುಂಬಿದ ಕಂದಕಗಳನ್ನು ನಿರ್ಮಿಸಿ ಅದರಲ್ಲಿ ಭಾರತ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಮೊಸಳೆಗಳನ್ನು ಬಿಡಲಾಗಿತ್ತು. ಜೌಗುಗಳಲ್ಲಿ ವಿಷಪೂರಿತ ಕಾಳಿಂಗಸರ್ಪಗಳನ್ನು ಬಿಡಲಾಗಿತ್ತು. ಪವಿತ್ರದಲ್ಲಿ ಪವಿತ್ರವಾಗಿದ್ದ, ಬೃಹದಾಕಾರದ ಕನ್ನಡಿಗಳನ್ನು ಹೊಂದಿದ್ದ ಅರಮನೆಯಲ್ಲಿ ನೂರೈವತ್ತು ಕೋಣೆಗಳಿದ್ದವು.

ಅಲ್ಲಿದ್ದವರ ಪ್ರತಿ ಚಲನವಲನವನ್ನೂ ಅವು ಪ್ರತಿಫಲಿಸುವಂತಿದ್ದವು. ಜತೆಗೆ, ಕಣ್ಗಾವಲು ಬೇರೆ ಇರುತ್ತಿತ್ತು. ಒಂದು ಚಿಕ್ಕ ಚಲನವೂ ಕನ್ನಡಿಯಿಂದ ಕನ್ನಡಿಗೆ, ಕೋಣೆಯಿಂದ ಕೋಣೆಗೆ ಪ್ರತಿಬಿಂಬಿತವಾಗಿ ಅಂತಿಮವಾಗಿ ಇಡೀ ವಿಶ್ವವನ್ನೇ ಕಾಯುವ ಮಹಾನೇತ್ರಗಳನ್ನು ಹೊಂದಿದ ಅಧ್ಯಕ್ಷನ ಕನ್ನಡಿಯಲ್ಲಿ ಪ್ರತಿಫಲಿತವಾಗುತ್ತಿದ್ದವು. ಯಾವ ಕೋಣೆಯಲ್ಲಿ ಸಂಸ್ಥಾಪಕ ರಾಷ್ಟ್ರಾಧ್ಯಕ್ಷರು ಪವಡಿಸುತ್ತಾರೆ ಎನ್ನುವ ಗುಟ್ಟು ಅವನ ಅತ್ಯುತ್ತಮ ದೈಹಿಕ ಅಭಿರುಚಿಗಳನ್ನು ತಣಿಸಲೆಂದು ತಂದ, ಎಷ್ಟೋ ಇರುಳುಗಳನ್ನು ಅವನೊಂದಿಗೆ ಕಳೆದ, ವೇಶ್ಯೆಯರಿಗೂ ಗೊತ್ತಾಗುವಂತಿರಲಿಲ್ಲ.

ಪೂಜ್ಯ ರಾಷ್ಟ್ರಪಿತನೂ, ಮೂರೂ ಸೇನೆಗಳ ಮುಖ್ಯಸ್ಥನೂ, ಮಾನವ ಸಂಕುಲದ ಪುಣ್ಯಪುರುಷನೂ ಆದ ಆ ವ್ಯಕ್ತಿ ಬಹುತೇಕರಿಗೆ ಅಗೋಚರನಾಗಿರುತ್ತ, ಇನ್ನೊಂದೆಡೆ ಎಲ್ಲೆಡೆಯೂ ಪ್ರತ್ಯಕ್ಷನಾಗಬಲ್ಲವನಾಗಿದ್ದನು. ಆತನ ಭಾವಚಿತ್ರವನ್ನು ಪ್ರತಿ ಮನೆಗಳಲ್ಲಿ ತೂಗುಬಿಡುವುದು ಕಡ್ಡಾಯವಾಗಿತ್ತು. ಆಕಾಶವಾಣಿಯ ವಾರ್ತೆಗಳ ಆರಂಭದಲ್ಲಿ ಮತ್ತು ಕೊನೆಗೆ ಆತನ ಅಣಿಮುತ್ತುಗಳನ್ನು ಬಿತ್ತರಿಸಲಾಗುತ್ತಿತ್ತು.

ದೂರದರ್ಶನದ ವಾರ್ತೆಯ ಆರಂಭ ಮತ್ತು ಅಂತ್ಯಗಳು ಆತನ ಭಾವಚಿತ್ರದೆದುರು ಆಗುತ್ತಿದ್ದವು. ಪ್ರಜೆಗಳು ತಮ್ಮ ನಾಯಕನಿಗಾಗಿ ಜೀವ ತೆರಲು ಹೇಗೆ ಸಿದ್ಧವಿದ್ದಾರೆಂಬುದನ್ನು ಜಾಹೀರುಪಡಿಸಲು ಸ್ಥಳೀಯ ಪತ್ರಿಕೆಗಳು ಕನಿಷ್ಠ ನಾಲ್ಕುಪುಟಗಳ ಪುರವಣಿಯನ್ನು ಹೊರತರುತ್ತಿದ್ದವು. ಆತ ಎಲ್ಲೆಡೆ ಇದ್ದರೂ ದುರ್ಗಮವಾಗಿದ್ದ. ಹಾಗೆಂದೇ ದುಷ್ಕೃತ್ಯಗಳು ಅಸಾಧ್ಯವಾಗಿದ್ದವು.

ಹಾಗಿದ್ದರೂ ಕೂಡ ಆ ವ್ಯಕ್ತಿ ನರಭಕ್ಷಕ ಮೊಸಳೆಗಳು, ವಿಷಪೂರಿತ ಸರ್ಪಗಳು, ಬಲಿ ಹಾಕುವ ಪ್ರತಿಫಲಿತ ಕನ್ನಡಿಗಳ ಕಣ್ತಪ್ಪಿಸಿ ಅರಮನೆಯನ್ನು ಹೊಗಲು ಯಶಸ್ವಿಯಾಗಿದ್ದ. ಸಾಮಾನ್ಯ ಮನುಷ್ಯರನ್ನು ಸೇನೆಗಳು ಬೇಟೆಯಾಡುವ ರೀತಿಯಲ್ಲಿಯೇ, ರಾಷ್ಟ್ರಪಿತ ಹಾಗೂ ಸೇನಾಕ್ರಾಂತಿಗಳ ಚಿತಾವಣೆಗಾರನನ್ನು ಹತ್ಯೆ ಮಾಡಿದ್ದ. ಮಾತ್ರವಲ್ಲ, ಬೆಂಗಾವಲು ಪಡೆ, ಹಂತಕ ಪಡೆ ಇತ್ಯಾದಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ. ನಲವತ್ತೆಂಟು ಗಂಟೆಗಳ ಬಳಿಕವೂ ಆತನನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ.

...ಆಮೇಲೆ, ಮೂಲದ ಸುಳಿವಿಲ್ಲದ ಗಾಳಿಸುದ್ದಿ ಹಬ್ಬಿದ್ದವು: ಅವನ ಅಡಗುತಾಣವನ್ನು ಪತ್ತೆಹಚ್ಚಲಾಗಿದೆ, ಅವನಿದ್ದ ಗ್ರಾಮದ ಸುತ್ತ ಸೇನೆ ಜಮಾಯಿಸಿದೆ. ಈ ಸಲ ಆತ ತಪ್ಪಿಸಿಕೊಂಡು ಹೋಗಲಾರ!

ಬೆಳಗಿನ ಜಾವವೇ ಸೈನಿಕರು ತುಂಬಿದ್ದ ಲಾರಿಗಳು, ಶಸ್ತ್ರಗಳು ಪೇರಿಸಿದ್ದ ಜೀಪು–ಕಾರುಗಳು ಅಲ್ಲಿಗೆ ತಲುಪಿದವು. ದಾರಿಯಲ್ಲಿನ ಹಳ್ಳಿಗಳನ್ನು ಸುಟ್ಟುಹಾಕಲಾಗಿತ್ತು, ಹೊಲಗಳಿಗೆ ಬೆಂಕಿ ಇಡಲಾಗಿತ್ತು, ಎಲ್ಲೆಂದರಲ್ಲಿ ಹೆಣಗಳ ರಾಶಿಯನ್ನು ಕಾಣಬಹುದಿತ್ತು.

ಆ ಅಸಹಾಯಕ ದೇಶದ ವಿಜೇತರು ಬಲುಬೇಗ ಆ ಸ್ಥಳವನ್ನು ತಲುಪಿದರು. ಆ ಗ್ರಾಮದ ಜನರನ್ನು ತಮ್ಮ ಬಂದೂಕಿನ ತುದಿಯಿಂದ ತಿವಿದು ಎಬ್ಬಿಸಿದರು. ಎಲ್ಲವನ್ನೂ ಚಿಂದಿ ಮಾಡುತ್ತ ತಮ್ಮ ಶೋಧ ಕಾರ್ಯವನ್ನು ನಡೆಸಿದರು. ಆದರೆ ಅವರು ಹುಡುಕುತ್ತಿದ್ದವನು ಅಲ್ಲಿರಲಿಲ್ಲ. ಸೈನ್ಯಾಧಿಕಾರಿಯ ಪಿತ್ತ ನೆತ್ತಿಗೇರಿತ್ತು. ಕತ್ತು ಉದುರಿ ಬೀಳುವಂತೆ ಆತ ಕಿರುಚಿದ:

‘ಅಮರ ನಾಯಕರ ಸಾಲಿನಲ್ಲಿ ಅಜರಾಮರವಾಗಿರುವ ನಮ್ಮ ಸಂಸ್ಥಾಪಕ ಅಧ್ಯಕ್ಷರನ್ನು ಹತ್ಯೆ ಮಾಡಿದ ಬೋಸಡಿಮಗ ಇಲ್ಲೇ ಇದ್ದಾನೆ ಅಂತ ನನಗೆ ಗೊತ್ತು. ಆ ನೀಚ ದಾಡಿ ಬಿಟ್ಟಿರೋದು, ಒಕ್ಕಣ್ಣನಾಗಿರೋದು ಕೂಡ ನನಗೆ ಗೊತ್ತು. ಅವನು ಎಲ್ಲಿ ಅಡಗಿದ್ದಾನೆ ಅಂತ ಇನ್ನು ಹತ್ತು ನಿಮಿಷದೊಳಗೆ ಬಾಯಿ ಬಿಡದಿದ್ದರೆ ನಿಮ್ಮ ಮನೆಗಳಿಗೆ ಬೆಂಕಿ ಹಚ್ಚಿಸ್ತೀನಿ. ನಿಮ್ಮಲ್ಲೊಬ್ಬರಿಗೆ ಗುಂಡಿಟ್ಟು ಸಾಯಿಸ್ತೀನಿ.’

ಹತ್ತು ನಿಮಿಷಗಳು ಗತಿಸಿದವು. ಸೃಷ್ಟಿಯ ಮೊದಲಿನ ಭಯಾನಕ ಮೌನದಂತೆ ಅಲ್ಲಿ ನಿಶ್ಶಬ್ದ ಅಡಗಿತ್ತು. ಸೈನ್ಯಾಧಿಕಾರಿ ಕಾರ್ಯವನ್ನು ಕೈಗೆತ್ತಿಕೊಳ್ಳಲು ಅಣತಿ ನೀಡಿದ. ಸೈನಿಕರು ಗ್ರಾಮಸ್ಥರನ್ನು ಥಳಿಸತೊಡಗಿದರು. ನೆಲಕ್ಕೆ ಹಾಕಿ ಹೊಸಕತೊಡಗಿದರು. ಅವರ ತೆರೆದ ಗಾಯಗಳಿಗೆ ಮೆಣಸಿನ ಪುಡಿ ತುಂಬಲಾಯಿತು. ಕೆಲವರ ಬಾಯಿಗೆ ಸಗಣಿಯನ್ನು ತುರುಕಲಾಯಿತು...

ಆದರೆ ಗ್ರಾಮಸ್ಥರು ಆತನ ಕುರಿತು ಬಾಯಿ ಬಿಡಲಿಲ್ಲ. ಗ್ರಾಮಸ್ಥರ ಮನೆಗಳನ್ನು ಸುಟ್ಟು, ಬೆಳೆಯನ್ನು ನಾಶ ಮಾಡಲಾಯಿತು. ರುಚಿ ಕೂಡ ನೋಡದೆ ಸಂಗ್ರಹಿಸಿಟ್ಟ ಒಣ ಹಣ್ಣುಗಳನ್ನು ಮಣ್ಣಿಗೆ ಸುರಿಯಲಾಯಿತು.

ಏನೇ ಆದರೂ, ಗ್ರಾಮಸ್ಥರು ಸೈನ್ಯಕ್ಕೆ ಬೇಕಾದ ಮಾಹಿತಿಯನ್ನು ಒದಗಿಸಲಿಲ್ಲ. ಹತ್ಯೆಯ ಕೃತ್ಯವನ್ನು ಯಾರು ಎಸಗಿದ್ದಾರೆ ಎಂಬುದು ಅವರಿಗೆ ಗೊತ್ತಿರಲಿಲ್ಲ; ಅದೇ ಅವರ ಮೌನಕ್ಕೆ ನಿಜವಾದ ಕಾರಣವಾಗಿತ್ತು.

ಆ ವ್ಯಕ್ತಿಯೊಬ್ಬನೇ ಈ ಕೆಲಸವನ್ನು ಪೂರೈಸಿದ್ದ. ಅಧ್ಯಯನ, ಮಾಹಿತಿ ಸಂಗ್ರಹ, ಯೋಜನೆಗಾಗಿ ತಿಂಗಳುಗಟ್ಟಲೆ ಶ್ರಮಪಟ್ಟಿದ್ದ. ಕೃತಕ ಗಡ್ಡಬಿಟ್ಟಿದ್ದ. ಕಡಲ್ಗಳ್ಳರಂತೆ ಎಡಗಣ್ಣಿಗೆ ಕಪ್ಪುಪಟ್ಟಿ ಧರಿಸಿದ್ದ. ಸರ್ವಾಧಿಕಾರಿಯನ್ನು ಹತ್ಯೆ ಮಾಡಲು ಅತಿಸರಳ ವಿಧಾನದಲ್ಲಿ ಅರಮನೆಯನ್ನವನು ಪ್ರವೇಶಿಸಿದ್ದ.

ತನಗೆ ಮಾರಣಾಂತಿಕವಾಗಿ ಹಿಂಸಿಸಿದರೂ ಅವನು ಗುಟ್ಟನ್ನು ಬಿಟ್ಟುಕೊಡಲು ನಿರ್ಧರಿಸಿದ್ದುದಕ್ಕೆ ಕಾರಣವೆಂದರೆ, ಇನ್ನೊಮ್ಮೆ ಮತ್ಯಾರೂ ಆ ತಂತ್ರವನ್ನು ಬಳಸಬಾರದು ಎಂಬುದೇ ಆಗಿತ್ತು. ತನ್ನ ಹಳ್ಳಿಯಲ್ಲಿ ಸೈನ್ಯವನ್ನು ನೋಡಿ ಆತನಿಗೆ ಅಚ್ಚರಿಯಾಗಿತ್ತು.

ತನ್ನ ಗುರುತನ್ನು ನಿಜವಾಗಿಯೂ ಅವರು ಹಿಡಿದಿದ್ದರೋ ಅಥವಾ ಬೊಗಳೆ ಬಿಡುತ್ತಿದ್ದಾರೋ ತಿಳಿಯಲಿಲ್ಲ. ವಾಸ್ತವದಲ್ಲಿ ಸೈನ್ಯಕ್ಕೆ ಕೂಡ ಅವನ್ಯಾರೆಂದು ತಿಳಿದಿರಲಿಲ್ಲ. ಏನೇನೂ ಅರಿಯದ ಉಳಿದ ಗ್ರಾಮಸ್ಥರ ಜೊತೆಗೆ ಸೈನ್ಯದ ಎದುರೇ ನಿಂತಿದ್ದರೂ ಆ ವ್ಯಕ್ತಿಯ ಗುರುತು ಹಿಡಿದಿರಲಿಲ್ಲ. ಆತನಿಗೆ ದಾಡಿಯಿರಲಿಲ್ಲ. ಎರಡೂ ಕಣ್ಣುಗಳಿದ್ದವು. ಮುಂದೇನಾಗುತ್ತದೆ ಎಂದು ಗಮನಿಸುತ್ತ ಆತ ನಿಂತಿದ್ದ.

ಅಪರಾಧಿಗಳ ಮೌನ ಸೇನಾಧಿಕಾರಿಯನ್ನು ಇನ್ನಷ್ಟು ಕುಪಿತನನ್ನಾಗಿಸಿತು. ಆತ ಕಿರುಚಿದ: ‘ಇನ್ನೊಂದು ಕೊನೆಯ ಅವಕಾಶ ಕಾಡ್ತಾ ಇದೀನಿ. ನಮ್ಮ ರಾಷ್ಟ್ರದ ಆಜೀವ ಸಂಸ್ಥಾಪಕ ಅಧ್ಯಕ್ಷರನ್ನು ಕೊಲೆ ಮಾಡಿದ ಒಕ್ಕಣ್ಣ ಸೂಳೆಮಗ ಇಲ್ಲೇ ಇದ್ದಾನೆಂದು ನನಗೆ ಗೊತ್ತು. ಆತ ಬಚ್ಚಿಟ್ಟುಕೊಂಡಿರುವ ಜಾಗವನ್ನು ತೋರಿಸಿ. ಇಲ್ಲದಿದ್ದರೆ ನಿಮ್ಮಲ್ಲೊಬ್ಬರನ್ನು ಇನ್ನೈದು ನಿಮಿಷದಲ್ಲಿ ಗುಂಡಿಟ್ಟು ಸಾಯಿಸ್ತೀನಿ.’

ತನ್ನ ಗಡಿಯಾರದ ಕಡೆ ಜ್ವರ ಬಂದವನಂತೆ ನಡುಗುತ್ತ ನೋಡಿದ. ಎರಡು ನಿಮಿಷ, ಒಂದು ನಿಮಿಷ, ಮೂವತ್ತು ಕ್ಷಣ...ಗ್ರಾಮದ ಹಿರಿಯ ಧ್ವನಿಯೆತ್ತಿದ: ‘ನಿಮಗೆ ಆಣೆ ಮಾಡಿ ಹೇಳ್ತೀನಿ. ಅವನ್ಯಾರೋ ನಮಗೆ ತಿಳಿದಿಲ್ಲ. ಅವನು ನಮ್ಮ ಹಳ್ಳಿಯವನಲ್ಲ.’
‘ಅದರಿಂದ ನಿಮಗೆ ಕೆಡುಕೇ. ಈಗ ನಿಮ್ಮಲ್ಲೊಬ್ಬರನ್ನ ಎಳೆದು ಎಲ್ಲರೆದುರು ಗುಂಡಿಟ್ಟು ಸಾಯಿಸ್ತೀನಿ. ಅದರಿಂದ ಪರಿಸ್ಥಿತಿ ಏನೂಂತ ಸ್ವಲ್ಪ ಅರ್ಥ ಆಗಬಹುದು. ಏಯ್! ನೀನೇ, ಬಾ ಇಲ್ಲಿ!’

ಸೈನ್ಯಾಧಿಕಾರಿ ಆತನತ್ತಲೇ ಬೆರಳು ತೋರಿಸಿದ್ದ. ಇದನ್ನೇ ನಿರೀಕ್ಷಿಸಿದ್ದೆ ಎಂಬಂತಿದ್ದ ಆತನಿಗೆ ಇದರಿಂದ ಅಚ್ಚರಿಯಾಗಲಿಲ್ಲ. ತನ್ನ ಬದಲು ಬೇರೆ ಯಾರಾದರೂ ಸತ್ತರೆ ತಾನು ಬದುಕಿಡೀ ಆತ್ಮಸಾಕ್ಷಿಗೆ ಉತ್ತರ ನೀಡಬೇಕಾಗುತ್ತದಲ್ಲಾ ಎಂಬ ಚಿಂತೆಯಿಂದ ಆತ ಮುಕ್ತನಾಗಿದ್ದ. ತನ್ನ ಗುಟ್ಟನ್ನು ಒಳಗೇ ಇಟ್ಟುಕೊಂಡು ಸಾಯುತ್ತಿರುವುದಕ್ಕೆ ಆತನಿಗೆ ಖುಷಿಯಾಗಿತ್ತು.

‘ನಿನ್ನ ಗ್ರಾಮಸ್ಥರು ಮತ್ತು ಗ್ರಾಮದ ಹಿರಿಯನ ಬೇಜವಾಬ್ದಾರಿಗಾಗಿ ಪ್ರಾಣ ತೆರಲಿರುವ ಮುಗ್ಧ ಒತ್ತೆಯಾಳು ನೀನೇ. ಇವನ್ನ ಗಿಡಕ್ಕೆ ಕಟ್ಟಿಹಾಕಿ, ಗುಂಡು ಹೊಡೆಯಿರಿ.’

ಅವನಿಗೆ ಬಂದೂಕಿನಿಂದ ಚಚ್ಚಿದರು. ಬಯೋನೆಟ್‌ನಿಂದ ತಿವಿದರು. ನೆಲದ ಮೇಲೆ ದರದರ ಎಳೆದುಕೊಂಡು ಹೋಗಿ ಗಿಡಕ್ಕೆ ಕಟ್ಟಿ ಹಾಕಿದರು. ಆತನ ಹೆಂಡತಿ ಆತನ ಮೇಲೆ ಬಿದ್ದು ರೋದಿಸುವಾಗ ಆಕೆಯನ್ನು ಎತ್ತಿ ಬಿಸಾಕಲಾಯಿತು.
‘ಒಂದು ಕಡೇ ಅವಕಾಶ. ಹತ್ಯಾಕೋರ ಎಲ್ಲಿ ಅಡಗಿದ್ದಾನೆ ಹೇಳಿ.’
‘ನನಗೆ ನಿಜಕ್ಕೂ ತಿಳಿದಿಲ್ಲ, ಅಧಿಕಾರಿಗಳೇ’ ಗ್ರಾಮದ ಹಿರೀಕ ಹೇಳಿದ.
‘ಗುಂಡು ಹಾರಿಸಿ.’

ಆತನ ಎದೆ ಕೊಂಚ ನಡುಗಿತು. ಬಳಿಕ ಶಬ್ದ ಕೂಡ ಇಲ್ಲದೆ ಆತ ಧರೆಗುರುಳಿದ. ಇನ್ನೀಗ ಆತನನ್ನು ಅವರು ಹಿಡಿಯಲಾರರು! ಗ್ರಾಮಸ್ಥರು ದಿಗ್ಭ್ರಮೆಗೊಳಗಾಗಿ ನೆಲಕ್ಕುರುಳಿದ ಶವವನ್ನು ನೋಡುತ್ತ ಮೌನವಾಗಿದ್ದರು. ತನ್ನ ಅಣತಿಯನ್ನು ಸಾಧಿಸಿ ತೋರಿಸಿದ್ದ ಸೈನ್ಯಾಧಿಕಾರಿ ಅವರೆದುರು ನಿಂತಿದ್ದ. ಈಗ ಯಾವ ರೀತಿಯ ಹೆದರಿಕೆ ಹಾಕಬೇಕೆಂಬುದರ ಕುರಿತು ಯೋಚಿಸುತ್ತ ಆತ ಗೊಂದಲದಲ್ಲಿದ್ದ. ಒಳಗಿನ ಹೆದರಿಕೆ ಹೊಡೆದೋಡಿಸಲು, ತನ್ನ ಘನತೆಯನ್ನು ಎತ್ತಿಹಿಡಿದುಕೊಳ್ಳಲು ಹೇಳಿದ:
‘ಸರೀನ?’
ಹಳ್ಳಿಗರು ಅವನ ಅಸ್ತಿತ್ವವನ್ನು ಮತ್ತೆ ಗಮನಕ್ಕೆ ತಂದುಕೊಂಡರು.

‘ಸರೀನ, ಅಂದ್ರೆ?’, ಕೋಪದಿಂದ ಕುದಿಯುತ್ತ ಗ್ರಾಮದ ಮುಖ್ಯಸ್ಥ ಗುಡುಗಿದ: ‘ನೀವು ಹುಡುಕುತ್ತಿರುವವನು ಯಾರೂಂತ ನಮಗೆ ಗೊತ್ತಿಲ್ಲ. ನಮ್ಮೂರಲ್ಲಿ ಇಲ್ಲಾಂತ ಹೇಳಲಿಲ್ವ? ನಮ್ಮಲ್ಲೊಬ್ಬನನ್ನ ಕೊಂದು, ಸರೀನ ಅಂತ ಕೇಳ್ತಿದೀರಲ್ಲ, ಏನು ಹೇಳಬೇಕು?’
ಸೈನ್ಯಾಧಿಕಾರಿಗೆ ಏನು ಉತ್ತರ ಹೇಳಬೇಕೆಂದು ತೋಚಲಿಲ್ಲ. ಕಾಲನ್ನು ನೆಲಕ್ಕೆ ಕುಟ್ಟುತ್ತ ಸೈನ್ಯಕ್ಕೆ ಆಜ್ಞೆ ನೀಡಿದ:
‘ಅಟೆನ್ಷನ್, ನಮ್ಮ ಬೇಟೆ ನಿಲ್ಲೋದಿಲ್ಲ. ಹತ್ಯಾಕೋರ ಮುಂದಿನ ಗ್ರಾಮದಲ್ಲಿ ಬಚ್ಚಿಟ್ಟುಕೊಂಡಿರಬಹುದು. ಒಂದು ನಿಮಿಷವೂ ವ್ಯರ್ಥ ಮಾಡೋಹಾಗಿಲ್ಲ. ಎಲ್ಲರೂ ಮುಂದಿನ ಗ್ರಾಮಕ್ಕೆ ನಡೀರಿ.’

ಗ್ರಾಮಸ್ಥರತ್ತ ತಿರುಗಿ ಕೋಪದಲ್ಲಿ ಗರ್ಜಿಸಿದ: ‘ಆ ಬೋಸಡಿಮಗನ್ನ ಹಿಡಿದೇ ಹಿಡೀತೀವಿ. ಅವನು ಎಲ್ಲೇ ಅಡಗಿದ್ದರೂ ಸಾಯಿಸ್ತೀವಿ. ಅವನ ಕೈಕಾಲು, ಕಣ್ಣು–ಕಿವಿಗಳನ್ನ ಕತ್ತರಿಸಿ ನಾಯಿಗೆ ಹಾಕ್ತೀವಿ. ಇದನ್ನೇ ಪ್ರತಿಜ್ಞೆ ಅಂದ್ಕೊಳ್ಳಿ ಬೇಕಾದ್ರೆ.’ನಂತರ ಜೀಪು–ಲಾರಿಗಳು ಆ ವ್ಯಕ್ತಿಯನ್ನು ಬೇಟೆಯಾಡಲು ಮುಂದಿನ ದಾರಿ ಸವೆಸಿದವು.  ಸೈನ್ಯ ಇನ್ನೂ ಆ ವ್ಯಕ್ತಿಯನ್ನು ಹುಡುಕುತ್ತಿದೆ. ಆತ ಎಲ್ಲೋ ಅಡಗಿ ಕುಳಿತಿದ್ದಾನೆಂದು ಅವರ ಅನ್ನಿಸಿಕೆ. ಆದರೆ ಎಲ್ಲಿ?

ಸರ್ವಾಧಿಕಾರಿಯ ದಮನಕ್ಕೆ ತುತ್ತಾದ ಜನರ ಎದೆ ಬಡಿತವು ‘ಆ ವ್ಯಕ್ತಿ’ಯ ಕುರಿತು ಮಾತನಾಡಿದಾಗ ದ್ವಿಗುಣಗೊಳ್ಳುತ್ತದೆ. ದೇಶವೂ ಈ ಹಿಂದೆಗಿಂತಲೂ ಹೆಚ್ಚಿನ ಪೊಲೀಸ್ ಪಡೆ, ಗುಪ್ತಚರರು, ಮಾಹಿತಿದಾರರು, ಬಾಡಿಗೆ ಹಂತಕರುಗಳಿಂದ ತುಂಬಿದೆ. ತನಗೆ ವಿಧೇಯರಾಗಿರುವ ಬುಡಕಟ್ಟಿನ ಬೆಂಬಲದಿಂದ ಎರಡನೆಯ ರಾಷ್ಟ್ರಪಿತ ನೇಮಕಗೊಂಡ.

ಸಂಸ್ಥಾಪಕ ಅಧ್ಯಕ್ಷನ ಆಶಯಗಳನ್ನು ಸಾಕಾರಗೊಳಿಸುವ ಕಾಯಕದಲ್ಲಿ ನಿರತನಾಗಿರುವ ಆತ ಹೊರಗೆಲ್ಲೂ ಕಾಲಿಡುವುದಿಲ್ಲ. ತನ್ನ ಹತಾಶೆಯನ್ನು ಮುಚ್ಚಿಡಲೆಂಬಂತೆ ತಾನು ಶಾಶ್ವತ ಮತ್ತು ಅಮರ ಎಂದು ಆತ ಘೋಷಿಸಿಕೊಂಡಿದ್ದರೂ ಅರಮನೆಯೊಳಗೆ ಅಡಗಿರುತ್ತಾನೆ. ತನ್ನ ಅನೂಹ್ಯ ಕೋಟೆ, ಸುರಂಗ ಮಾರ್ಗ, ಪ್ರತಿಫಲಿತ ಕನ್ನಡಿಗಳ ನಡುವೆ ‘ಆ ವ್ಯಕ್ತಿ’ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಅದುಮಿಟ್ಟಿರುವ ಸ್ವಾತಂತ್ರ್ಯಕ್ಕಾಗಿ ತನ್ನನ್ನು ಹತ್ಯೆ ಮಾಡುತ್ತಾನೆಂದು ಅವನಿಗೆ ತಿಳಿದಿಲ್ಲ. ದೇಶದ ಮತ್ತು ಜನಗಳ ಆಶಾಕಿರಣವಾದ ಆ ವ್ಯಕ್ತಿ ‘ಇಲ್ಲ’ ಎನ್ನುತ್ತ, ಏನಾಗುತ್ತದೋ ಎಂದು ನಿರೀಕ್ಷಿಸುತ್ತಾನೆ. 

****
ಇ.ಬಿ. ಡೊಂಗಾಲ

ತಮ್ಮ ವಿಡಂಬನಾ ಶೈಲಿಯ ಬರಹಗಳಿಗೆ ಪ್ರಸಿದ್ಧರಾದ ಕಾಂಗೋ ದೇಶದ ಡೊಂಗಾಲದವರಾದ ಇ.ಬಿ. ಡೊಂಗಾಲ ಹುಟ್ಟಿದ್ದು 1941ರಲ್ಲಿ. ಸ್ಟ್ರಾರ್ಸ್‌ಬರ್ಗ್ ಮತ್ತು ಬ್ರಜವಿಲ್ಲಾ ವಿಶ್ವವಿದ್ಯಾಲಯಗಳಲ್ಲಿ ರಾಸಾಯನಿಕ ಶಾಸ್ತ್ರದ ಅಧ್ಯಾಪಕರಾಗಿ ಡೊಂಗಾಲ ಕೆಲಸ ಮಾಡಿದ್ದಾರೆ. ಅವರ ಪ್ರಮುಖ ಕೃತಿಗಳು: ಜಾನಿ ಮ್ಯಾಡ್ ಡಾಗ್, ಲಿಟ್ಲ್ ಬಾಯ್ಸ್ ಕಮ್ ಫ್ರಂ ದಿ ಸ್ಟಾರ್ಸ್, ಜಾಝ್ ಆಂಡ್ ಪಾಮ್‌ವೈನ್.

‘ಆ ವ್ಯಕ್ತಿ’ ಎಂಬ ಶೀರ್ಷಿಕೆಯಡಿ ಕನ್ನಡೀಕರಣಗೊಂಡಿರುವ ಡೊಂಗಾಲ ಅವರ ‘ದ ಮ್ಯಾನ್’ ಕತೆ ಆಫ್ರಿಕನ್ ದೇಶಗಳ ಸರ್ವಾಧಿಕಾರದ ಕ್ರೂರ ಮುಖಗಳನ್ನು, ಅದರ ಒಳದಿಗಿಲುಗಳನ್ನು ಅತ್ಯಂತ ಸಂಕೀರ್ಣವಾಗಿ ಹಿಡಿದಿಟ್ಟಿದೆ. ಪ್ರಜಾಪ್ರಭುತ್ವವಾದಿ ಎನ್ನಲಾಗುವ ರಾಷ್ಟ್ರಗಳಿಂದ ಹಿಡಿದು ಜಗತ್ತಿನ ಎಲ್ಲೆಡೆ ಈಗಲೂ ಇರುವ ಬಗೆಬಗೆಯ ಸರ್ವಾಧಿಕಾರಿಗಳ ಪ್ರತಿಬಿಂಬಗಳನ್ನು ಈ ಕತೆ ತೋರಿಸಲೆತ್ನಿಸುತ್ತದೆ.

‘ದ ಮ್ಯಾನ್’ ಕತೆಯನ್ನು ಒಳಗೊಂಡಿದ್ದ ‘ಜಾಝ್ ಎಟ್ ವಿನ್ ಡಿ ಪಾಮೆ’ ಕಥಾಸಂಕಲನವನ್ನು ಕಾಂಗೋದಲ್ಲಿ ನಿಷೇಧಿಸಲಾಗಿತ್ತು. ‘ಕುವೆಂಪು ಭಾಷಾಭಾರತಿ ಪ್ರಾಧಿಕಾರ’ ಸದ್ಯದಲ್ಲೇ ಹೊರತರಲಿರುವ ‘ಆಫ್ರಿಕಾ ಸಾಹಿತ್ಯ ವಾಚಿಕೆ’ ಸಂಕಲನದಿಂದ ಆಯ್ದುಕೊಂಡ ಕಥೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT