‘ರಾತ್ರಿ ಕಾವಲಿನ ಕೆಲಸ ಹೇಗಿರುತ್ತೆ ಗೊತ್ತಾ?’

7

‘ರಾತ್ರಿ ಕಾವಲಿನ ಕೆಲಸ ಹೇಗಿರುತ್ತೆ ಗೊತ್ತಾ?’

Published:
Updated:
‘ರಾತ್ರಿ ಕಾವಲಿನ ಕೆಲಸ ಹೇಗಿರುತ್ತೆ ಗೊತ್ತಾ?’

ನಾನು ಗಂಗಮ್ಮ, ನಮ್ಮೂರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು. ಈಗ ಜೆ.ಪಿ.ನಗರದಲ್ಲಿ ಒಂದು ಶೆಡ್‌ನಲ್ಲಿ  ನನ್ನ ವಾಸ. ಭಯಂಕರವಾದ ಬಡತನದಲ್ಲಿ ನಾನು ಕಷ್ಟಪಡುತ್ತಿರುವಾಗ ನಮ್ಮೂರಲ್ಲಿ ಯಾರೋ ಈ ಬೆಂಗಳೂರಿನ ದಾರಿ ತೋರಿಸಿದ್ರು. ಕೆಲಸ ಮಾಡಲು ಇಲ್ಲಿ ಬಹಳ ಅವಕಾಶ ಇರುತ್ತೆ ಅಂದ್ರು. ಹಾಗೆ  ನಾನು ಬೆಂಗಳೂರಿಗೆ ಬಂದೆ.

ಇಲ್ಲಿ ಬಂದಾಗ ನನಗೆ ಯಾರಲ್ಲಿ ಕೆಲಸ ಕೇಳಬೇಕು, ಏನು ಮಾಡಬೇಕು ಎಂದು  ಗೊತ್ತಿರಲಿಲ್ಲ. ನನಗೆ ಕೂಲಿ ಮಾಡೋದು ಹೊಸದೇನಲ್ಲ. ನಮ್ಮ ಊರಲ್ಲಿ ಆಂಧ್ರಪ್ರದೇಶದವರು ಜಮೀನು ಖರೀದಿಸಿ ಕೃಷಿ ಮಾಡ್ತಿದ್ರು. ಅಲ್ಲೇ ನಾವು ದಿನಗೂಲಿ ಮಾಡ್ತಿದ್ವಿ.

ಇಲ್ಲಿಗೆ ಬಂದು ಕೆಲವೇ ದಿನದಲ್ಲಿ ಒಂದು ಕೆಲಸ ಗಿಟ್ಟಿಸಿಕೊಂಡೆ. ಎಂತಾ ಕೆಲಸ ಗೊತ್ತಾ? ನಿರ್ಮಾಣ ಹಂತದಲ್ಲಿರೋ ಕಟ್ಟಡ ಕಾಯೋ ಕೆಲಸ! ಬೇರೆ ಯಾವುದೇ ಕಟ್ಟಡದಲ್ಲಿ ಹೆಣ್ಣು ಹೆಂಗಸರು ವಾಚ್‌ಮೆನ್‌ ಆಗಿರಲಿಲ್ಲ. ನನಗೆ ಅನಿವಾರ್ಯತೆ ಇತ್ತು. ಆ ಕೆಲಸವನ್ನೇ ಒಪ್ಪಿಕೊಂಡೆ.

ರಾತ್ರಿ ಕಾವಲಿನ ಕೆಲಸ ಹೇಗಿರುತ್ತೆ ಗೊತ್ತಾ? ಇದು ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಅನುಭವ. ಸಂಜೆ ಕಳೆದರೆ ಒಳಗೇ ಭಯ ಶುರುವಾಗುತ್ತಿತ್ತು. ಯಾಕಾದರೂ ಕತ್ತಲಾಗುತ್ತದೋ ಅಂತ. ನಿರ್ಮಾಣ ಹಂತದಲ್ಲಿರುವ ಕಟ್ಟಡವೆಂದರೆ ಕಳ್ಳಕಾಕರ ಕಾಟ ತಪ್ಪಿದ್ದಲ್ಲ. ಅಂತಹ ಕಟ್ಟಡದಲ್ಲಿ ಒಬ್ಬ ಹೆಣ್ಣು ಹೆಂಗಸು ಕಾವಲು ಕಾಯೋದಂದ್ರೆ ಕಳ್ಳರಿಗೆ ಭಯ ಇರುತ್ತದಾ?

ಆದರೆ ಕಾವಲು ಕಾಯೋದು ನನ್ನ ಕರ್ತವ್ಯ. ಕಟ್ಟಡದಲ್ಲಿ ಕಳ್ಳತನ ಆಗದಂತೆ ಎಚ್ಚರ ವಹಿಸಬೇಕು, ನಮ್ಮ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳಬೇಕು... ಹೀಗೆ. ಭಯ, ಚಳಿ, ಸೊಳ್ಳೆಗಳ ಕಾಟದಿಂದ ನಲುಗಿ ಹೋಗಿದ್ದೆ. ಕೊನೆಗೂ ಆ ಕೆಲಸದಲ್ಲಿ ಮುಂದುವರಿಯೋಕೆ ಆಗಲೇ ಇಲ್ಲ. ಬಿಟ್ಟುಬಿಟ್ಟೆ.

ಆಮೇಲೆ ಗಾರೆ ಕೆಲಸದವರ ಜತೆ ಕೆಲಸಕ್ಕೆ ಸೇರಿಕೊಂಡೆ. ಸಿಮೆಂಟು, ಜಲ್ಲಿ, ಕಲ್ಲು, ಇಟ್ಟಿಗೆ ಮಹಡಿಯಿಂದ ಮಹಡಿಗೆ   ಕೊಡುವುದು. ಇದೇನೂ ಸುಲಭದ ಕೆಲಸವಲ್ಲ ಬಿಡಿ. ಆದರೂ ಮಾಡಲೇಬೇಕಿತ್ತಲ್ಲ? ಅಲ್ಲಿಂದ ನಮ್ಮ ಪಾಲಿಗೆ ಅಲೆಮಾರಿ ಜೀವನ ಶುರುವಾಯಿತು. ಎಲ್ಲಿ ಕೆಲಸ ಸಿಗುತ್ತದೋ ಅಲ್ಲಿ ಟೆಂಟ್‌ ಹಾಕಬೇಕಿತ್ತು. ದಿನಕ್ಕೆ ₹ 40 ಸಂಬಳ. ಒಂದು ದಿನ ಗಾರೆ ಕೆಲಸ ಮಾಡುವಾಗ ಪೆಟ್ಟು ಮಾಡಿಕೊಂಡೆ. ಆಸ್ಪತ್ರೆಗೂ ಸೇರಿದ್ದೆ. ಇದಾದ ನಂತರ ಗಾರೆ ಕೆಲಸ ಬಿಟ್ಟುಬಿಟ್ಟೆ. ನನ್ನ ಮಗನ ಓದೂ ನಿಂತು ಹೋಯಿತು. ಈ ಬೇಜಾರು ನನ್ನನ್ನು ಈಗಲೂ ಕಾಡುತ್ತಿದೆ. ಮಗ ಈಗ ಪ್ಲಂಬಿಂಗ್ ಕೆಲಸ ಮಾಡಿಕೊಂಡು ಇದ್ದಾನೆ. ಈಗ ಅವನೇ ನಮ್ಮ ಕುಟುಂಬಕ್ಕೆ ಯಜಮಾನ.

ಗಾರೆ ಕೆಲಸ ನಿಲ್ಲಿಸಿದ ನಂತರ ನಾನು ಪರಿಚಿತರ ಮನೆಯಲ್ಲಿ ಮನೆಕೆಲಸಕ್ಕೆ ಸೇರಿಕೊಂಡೆ. ಈಗಲೂ ಅದೇ ಕೆಲಸ. ಸದ್ಯ ತಿಂಗಳಿಗೆ ₹5,000 ದುಡೀತೀನಿ.ನೋಡ್ತಾ ನೋಡ್ತಾ ಇದ್ದಂಗೆ ನಾನು ಬೆಂಗಳೂರಿಗೆ ಬಂದು 15 ವರ್ಷ ಆಗಿಹೋಗಿದೆ. ವಯಸ್ಸಾದ ನನ್ನ ತಾಯಿ ನನ್ನ ಜತೆಗೇ ಇದ್ದಾರೆ. ಮಗಳು, ಅಳಿಯ,  ಇಬ್ಬರು ಗಂಡು ಮಕ್ಕಳ ಜತೆ ಜೀವನ ಸಾಗುತ್ತಾ ಇದೆ.

ನಿರೂಪಣೆ: ಸುಕೃತ ಎಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry