ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಸರ ರಕ್ಷಣೆಗೆ ನಮ್ಮ ಕಣ್ಗಾವಲು ಬೇಕಿದೆ’

Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ತಮಗಿರುವ ಸೀಮಿತ ಅವಕಾಶದಲ್ಲೇ ಪರಿಸರಕ್ಕೆ ಕಿಂಚಿತ್ತು ಕೊಡುಗೆ ಕೊಟ್ಟವರೂ ಇದ್ದಾರೆ. ಒಂದಂತೂ ಸತ್ಯ... ಪರಿಸರ ರಕ್ಷಣೆಯ ಮಾತು ವರ್ಷಕ್ಕೊಂದು ಬಾರಿ, ಯಾವುದೋ ವೇದಿಕೆಗೆ ಸೀಮಿತವಲ್ಲ. ಅದು ಪ್ರತಿ ನಾಗರಿಕನ ಪ್ರತಿ ದಿನದ ಕರ್ತವ್ಯ...

ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡುವುದು, ಕಾಳಜಿ ವಹಿಸುವುದು ವರ್ಷಕ್ಕೊಂದು ಬಾರಿಯಲ್ಲ. ಅದು ದೈನಂದಿನ ಚಟುವಟಿಕೆಯ ಭಾಗವಾಗಲು ಸಾಧ್ಯವಾಗದಿದ್ದರೂ ವಾರಕ್ಕೊಂದು ದಿನವನ್ನು ಅದಕ್ಕಾಗಿ ಮೀಸಲಿಡುವುದು ಕಷ್ಟವಾಗದು ಎಂಬುದು ನನ್ನ ಭಾವನೆ.

ನಾವು ನಮ್ಮ ಜವಾಬ್ದಾರಿಯನ್ನು ಮರೆತು ಬೇರೆಯವರನ್ನು ದೂಷಿಸುತ್ತೇವೆ. ಈ ನಗರದ ಕಸದ ಸಮಸ್ಯೆ ಇದಕ್ಕೆ ಅತ್ಯುತ್ತಮ ನಿದರ್ಶನ. ಎಲ್ಲೆ೦ದರಲ್ಲಿ ಕಸವನ್ನು ಎಸೆದು ಬಿಬಿಎಂಪಿ ಅಥವಾ ಸರ್ಕಾರವನ್ನು ದೂಷಿಸುವುದು ನ್ಯಾಯವೇ? ನಾಗರಿಕರಾಗಿ ನಾವು ನಮ್ಮ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛವಾಗಿಡುವುದು ನಮ್ಮದೇ ಕರ್ತವ್ಯ.

ಸಮಸ್ಯೆಗಳಿಗೆ ಬೇರೆಯವರನ್ನು ದೂಷಿಸುವ ಬದಲು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ನಡೆದರೆ ಖ೦ಡಿತ ನಮ್ಮೊ೦ದಿಗೆ ಅನೇಕ ಸಮಾನ ಮನಸ್ಕರು ಕೈ ಜೋಡಿಸುತಾರೆ.  ಆರ೦ಭದಲ್ಲಿ ಕಷ್ಟವೆ ನಿಸಿದರೂ ಅದಕ್ಕೆ ಸಿಗಬೇಕಾದ ಜನ ಬೆ೦ಬಲ ಸಿಕ್ಕಿಯೇ ಸಿಗುವುದು.

ನಾವು 2004ರಲ್ಲಿ ‘ಯೂತ್ ಫಾರ್ ಪರಿವರ್ತನ್’ ಎ೦ಬ ಸ೦ಘಟನೆಯನ್ನು ಶುರುಮಾಡಿ ಈ ಮಹಾನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡಿದಾಗ ಬಹಳಷ್ಟು ಜನರು ನಮ್ಮನ್ನು ನೋಡಿ ನಕ್ಕರು.

‘ಒ೦ದು ದಿನ ಸ್ವಚ್ಛ ಮಾಡುವುದರಿ೦ದ ಜನ ಬದಲಾಗುತ್ತಾರೆಯೇ’ ಎ೦ದು ನಮ್ಮನ್ನು ಪ್ರಶ್ನಿಸಿದರು. ಆದರೆ ನಾವು ಅದರಿ೦ದ ಧೃತಿಗೆಡದೆ ನಮ್ಮ ಕೆಲಸವನ್ನು ಮು೦ದುವರೆಸಿಕೊ೦ಡು ಹೋದೆವು. ಸಮಾಜವನ್ನು ಬದಲಾಯಿಸಲು ನಾವು ಪಡುವ ಕಠಿಣ ಶ್ರಮವನ್ನು ನೋಡುವ ಜನರಲ್ಲಿ ಮನಸ್ಸು ಪರಿವರ್ತನೆಯಾಗುತ್ತದೆ. ಬದಲಾವಣೆಯ ಮೊದಲ ಹೆಜ್ಜೆ ಶುರುವಾಗುವುದೇ ಹೀಗೆ.

ಈಗ ನಮ್ಮ ಸ೦ಘಟನೆಯ ಸದಸ್ಯರ ಸಂಖ್ಯೆ 1200 ಆಗಿದೆ. ಇನ್ನಷ್ಟು ಮಂದಿ ಸದಸ್ಯತ್ವ ಪಡೆಯಲು ಆಸಕ್ತಿ ತೋರಿದ್ದಾರೆ. ಸಮಾನ ಮನಸ್ಕ ಸ್ವಯಂಸೇವಕರಿದ್ದಾರೆ ಹಾಗೂ ನಾವು ಸ್ವಚ್ಛ ಮಾಡಿರುವ ಜಾಗಗಳನ್ನು ಸಹ ಅಲ್ಲಿನ ಸುತ್ತಮುತ್ತಲಿನ ಜನರು ಸ್ವಚ್ಛವಾಗಿ ಕಾಪಾಡಿಕೊ೦ಡು ಬ೦ದಿದ್ದಾರೆ.

ಈ ರೀತಿಯಲ್ಲಿ ನಮ್ಮೊ೦ದಿಗೆ ಕೆಲಸ ಮಾಡುವ ಸ್ವಯ೦ಸೇವಕರು ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಆಗಿದ್ದಾರೆ. ಅವರು ವಾರಾ೦ತ್ಯದ ಸಮಯವನ್ನು ನಮ್ಮೊ೦ದಿಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿ ತಮ್ಮದೇ ರೀತಿಯಲ್ಲಿ ದೇಶಸೇವೆ ಮಾಡುತ್ತಿದ್ದಾರೆ.

ಪರಿಸರ ಸಂರಕ್ಷಣೆ ಬಾಯಿ ಮಾತಿನಲ್ಲಿಯೋ ಅಧ್ಯಯನ ವರದಿಯಲ್ಲೋ ಆಗಿಹೋಗುವುದಿಲ್ಲ. ಪರಿಸರವನ್ನು ಕಾಪಾಡಲು ಕಾರ್ಯರೂಪಕ್ಕೆ ತರಬಲ್ಲ ಕಾರ್ಯಕ್ರಮಗಳು ಬೇಕಾಗಿವೆ. ಜತೆಗೆ ನಮ್ಮ ಕಣ್ಗಾವಲು ಬೇಕಿದೆ.

ಯಾವುದೇ ಉತ್ತಮ ಕಾರ್ಯವನ್ನು ನಾವು ಮಾಡುವಾಗ ಆರ೦ಭದಲ್ಲಿ ನಾವು ಏಕಾ೦ಗಿಯಾಗಿದ್ದರೂ ನಾವು ನಡೆಯುವ ಹಾದಿಯ ಬಗ್ಗೆ ನಮಗೆ ನ೦ಬಿಕೆಯಿದ್ದಲ್ಲಿ ಖ೦ಡಿತ ಬಹಳಷ್ಟು ಮ೦ದಿ ನಮ್ಮೊ೦ದಿಗೆ ಕೈ ಜೋಡಿಸಿ  ನಡೆಯುತ್ತಾರೆ. ಇದಕ್ಕೆಲ್ಲ ಬೇಕಿರುವುದು ಸಮಾಜದ ಬಗ್ಗೆ ಕಾಳಜಿ ಹಾಗೂ ದೇಶಕ್ಕೆ ಕಾಣಿಕೆ ನೀಡಬೇಕೆ೦ಬ ಮನೋಭಾವ.

ಯುವಶಕ್ತಿ, ಪ್ರಪ೦ಚದಲ್ಲಿ ಎಲ್ಲಾ ಶಕ್ತಿಗಳನ್ನು ಮೀರಿಸುವ೦ತಹ ಒ೦ದು ಶಕ್ತಿ. ಆದರೆ ಈ ಯುವಕರನ್ನು ಸರಿಯಾದ ದಾರಿಯಲ್ಲಿ ನಡೆಸಿಕೊ೦ಡು ಹೋಗುವುದೇ ಒ೦ದು ಸವಾಲಾಗಿದೆ. ನಮ್ಮ ಜೀವನವನ್ನು ನಾವು ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು. ಆದರೆ ನಾವು ಹಿ೦ತಿರುಗಿ ನೋಡಿದಾಗ ಅದರಿ೦ದ ನಮಗೆ ತೃಪ್ತಿ ಹಾಗೂ ಬೇರೆಯವರಿಗೆ ಸ್ಫೂರ್ತಿ ಸಿಗುವ೦ತಿರಬೇಕು.


ಅಮಿತ್‌ ಅಮರನಾಥ್‌
(ಲೇಖಕ ಯೂತ್‌ ಫಾರ್‌ ಪರಿವರ್ತನ್‌ ಸಂಘಟನೆಯ ಸಂಸ್ಥಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT