ಅಡಿಕೆಯ ಪರ್ಯಾಯ ಉತ್ಪನ್ನ ‘ಅರೇಕಾ ವಿಟಾ’

7

ಅಡಿಕೆಯ ಪರ್ಯಾಯ ಉತ್ಪನ್ನ ‘ಅರೇಕಾ ವಿಟಾ’

Published:
Updated:
ಅಡಿಕೆಯ ಪರ್ಯಾಯ ಉತ್ಪನ್ನ ‘ಅರೇಕಾ ವಿಟಾ’

ಶಿರಸಿ: ಮಾರುಕಟ್ಟೆಯಲ್ಲಿ ಲಭ್ಯವಿರುವ ಪೌಷ್ಟಿಕಾಂಶಯುಕ್ತ ಪೇಯ ತಯಾರಿಕೆಯ ಪುಡಿಗೆ ಪೈಪೋಟಿ ನೀಡಲು, ಅಡಿಕೆಯಿಂದ ತಯಾರಿಸಿರುವ ‘ಅರೇಕಾ ವಿಟಾ’ ಮಾರುಕಟ್ಟೆಗೆ ಬಂದಿದೆ.

ಸಿದ್ದಾಪುರ ತಾಲ್ಲೂಕು ಹೆಗ್ಗರಣಿ ಕವಲಕಟ್ಟಿನ ನಿವಾಸಿ, ಐರ್ಲೆಂಡ್‌ನಲ್ಲಿ ಹಾಲಿ ಸಂಶೋಧಕರಾಗಿ ಕೆಲಸ ಮಾಡುತ್ತಿರುವ ಎಂ.ಎಸ್‌. ಗುರುಪ್ರಸಾದ್ ಭಟ್ ಇದನ್ನು ಸಿದ್ಧಪಡಿಸಿದ್ದಾರೆ.

‘ಮಗನೇ ಎಷ್ಟು ಬೇಕಾದರೂ ಓದು, ಆದರೆ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವ ಯಾವುದಾದರೊಂದು ಕೊಡುಗೆ ನೀಡುವ ಯೋಚನೆ ನಿನ್ನಲ್ಲಿರಬೇಕು’ ಎಂದು ಅಪ್ಪ ಸತೀಶ ಭಟ್ ಹೇಳಿದ ಮಾತನ್ನು ಸದಾ ನೆನಪಿಸಿಕೊಳ್ಳುತ್ತಿದ್ದ ಗುರುಪ್ರಸಾದ್, ಓದಲು ಎರಡು ವರ್ಷಗಳ ಹಿಂದೆ ಐರ್ಲೆಂಡಿಗೆ ಹೋದಾಗಲೂ ಇದನ್ನೇ ಯೋಚಿಸುತ್ತಿದ್ದರು. ಇದರ ಫಲ ‘ಅರೇಕಾ ವಿಟಾ’ ಆಗಿ ಹೊರಹೊಮ್ಮಿದೆ.

‘ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಐರ್ಲೆಂಡಿಗೆ ಬಂದಾಗ ವಿಶ್ವವಿದ್ಯಾಲಯದಲ್ಲಿ ಸಿಗುವ ಎಲ್ಲ ಸಂಶೋಧನಾ ಪ್ರಬಂಧಗಳನ್ನು ಓದುತ್ತಿದ್ದೆ. ಹೆಚ್ಚಿನ ಎಲ್ಲ ಪ್ರಬಂಧಗಳು ಅಡಿಕೆ ಕ್ಯಾನ್ಸರ್‌ಕಾರಕ ಎಂಬುದನ್ನೇ ಹೇಳುತ್ತಿದ್ದವು. ಅಡಿಕೆ ಬೆಳೆಗಾರರ ಕುಟುಂಬದಿಂದ ಬಂದಿರುವ ನಾನು ಅಡಿಕೆಗಿರುವ ಈ ಹಣೆಪಟ್ಟಿ ತೆಗೆದು ಹಾಕಬೇಕೆಂದು ಸಾಕಷ್ಟು ಅಧ್ಯಯನ ಮಾಡಿದೆ. ಅಡಿಕೆಯಲ್ಲಿರುವ ಅರೆಕೋಲಿನ್ (arecoline) ಎಂಬ ಅಲ್ಕಲೈಟ್‌ ಅಂಶವನ್ನು ಕಡಿಮೆಗೊಳಿಸಲು ಪ್ರಯೋಗ ನಡೆಸಿದಾಗ ಸುಣ್ಣದಿಂದ ಇದು ಸಾಧ್ಯವೆಂದು ಮನವರಿಕೆಯಾಯಿತು.

‘ಹಿರಿಯರು ಎಲೆ, ಅಡಿಕೆ ಜೊತೆ ಸುಣ್ಣ ಸೇರಿಸಿ ಮೆಲ್ಲುವುದು ಜ್ಞಾಪಕಕ್ಕೆ ಬಂತು. ಸುಣ್ಣದೊಂದಿಗಿನ ಸಂಸ್ಕರಣೆಯಿಂದ ಅಡಿಕೆಯಲ್ಲಿನ ಅರೆಕೋಲಿನ್ ಅಂಶ ಕಡಿಮೆಗೊಳಿಸಿ ಅರೇಕಾ ವಿಟಾವನ್ನು ಪ್ರಾಯೋಗಿಕವಾಗಿ ಸಿದ್ಧಪಡಿಸಿದ್ದೇನೆ’ ಎಂದು ಒರೇಲಿ ಕಾಂಕ್ರೀಟ್‌ ಕಂಪೆನಿಯ ಮೆಟೀರಿಯಲ್ ರಿಸರ್ಚರ್ ಆಗಿ ಕಾರ್ಯನಿರ್ವಹಿಸುತ್ತಿರುವ ಗುರುಪ್ರಸಾದ್ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿರಸಿಯಲ್ಲಿ ಪಿಯುಸಿ ಓದಿರುವ ಅವರು ಶಿವಮೊಗ್ಗದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪೂರೈಸಿದ್ದಾರೆ. ‘ಅಡಿಕೆಯಲ್ಲಿ ಆರೋಗ್ಯಕರ ಅಂಶಗಳು ಸಾಕಷ್ಟಿವೆ. ಇದರಲ್ಲಿರುವ ‘ಆ್ಯಂಟಿ ಆಕ್ಸಿಡಂಟ್’ ರಾಸಾಯನಿಕವು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಅಡಿಕೆಯನ್ನು ಜಗಿಯುವುದರಿಂದ  ಜೀವಕೋಶಗಳು ಚುರುಕಾಗಿ ಮುಖದ ಚರ್ಮದ ಸುಕ್ಕುಗಟ್ಟುವಿಕೆ ಮುಂದೂಡುತ್ತದೆ. ಸದ್ಯಕ್ಕೆ ಇದು ಗುಟಕಾ ತಯಾರಿಕೆಗೆ ಮಾತ್ರ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಏಷ್ಯಾದ ದೇಶಗಳಲ್ಲಿ ಮಾತ್ರ ಅಡಿಕೆ ಪ್ರಚಲಿತದಲ್ಲಿದೆ. ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ವಿಶೇಷವಾಗಿ ಯುರೋಪಿಯನ್ ದೇಶಗಳಿಗೆ ಪರಿಚಯಿಸಲು ಹೊಸ ಉತ್ಪನ್ನ ಹೊರತರಬೇಕು ಎಂಬ ಹಂಬಲದಿಂದ 6–7 ತಿಂಗಳು ಸತತ ಪ್ರಯೋಗ ನಡೆಸಿ ಅರೇಕಾ ವಿಟಾ ತಯಾರಿಸುವಲ್ಲಿ ಯಶಸ್ವಿಯಾದೆ’ ಎಂದು ಅವರು ವಿವರಿಸಿದರು.

ಕವಲಕಟ್ಟಿನ ಶ್ಯಾಮಲಾ ಮತ್ತು ಸತೀಶ ಭಟ್ ದಂಪತಿ, ಮಗನ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ರೆಬೋನಾ ಇಂಡಸ್ಟ್ರೀಸ್ ಉತ್ಪಾದಿಸುವ ಈ ಉತ್ಪನ್ನಕ್ಕೆ ಶಿರಸಿಯ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ (ಟಿಎಸ್‌ಎಸ್‌) ಮಾರುಕಟ್ಟೆ ಕಲ್ಪಿಸಿದೆ.

* ಅಡಿಕೆಯ ಈ ಪಾನೀಯ ಸಿದ್ಧಪಡಿಸುವುದು ಸುಲಭ. 1 ಲೋಟ ಬಿಸಿ ನೀರಿಗೆ ಒಂದು ಚಮಚ ಅರೇಕಾ ವೀಟಾ ಪುಡಿ ಹಾಕಿ, ಹಾಲು ಮತ್ತು ಸಕ್ಕರೆ ಬೆರೆಸಿದರೆ ಕುಡಿಯಲು ಸಿದ್ಧ.

–ಸತೀಶ ಭಟ್, ಉತ್ಪನ್ನದ ಪ್ರೇರಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry