ಹೈಬ್ರಿಡ್ ವಾಹನ: ಬೇಕು ತಂತ್ರಜ್ಞಾನ ಸುಧಾರಣೆ

7

ಹೈಬ್ರಿಡ್ ವಾಹನ: ಬೇಕು ತಂತ್ರಜ್ಞಾನ ಸುಧಾರಣೆ

Published:
Updated:
ಹೈಬ್ರಿಡ್ ವಾಹನ: ಬೇಕು ತಂತ್ರಜ್ಞಾನ ಸುಧಾರಣೆ

ವಿದ್ಯುತ್‌ಚಾಲಿತ ವಾಹನಗಳೆಂದರೆ ಹೇಗೊ ಏನೊ ಎಂದು ಮೂಗುಮುರಿಯುವವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲೇ ಇದ್ದಾರೆ. ಇದಕ್ಕೆ ಕಾರಣ, ಅಷ್ಟಾಗಿ ಸುಧಾರಣೆಗೊಂಡಿರದ ಈ ಕಾರುಗಳ ಮೋಟಾರ್‌, ಕಡಿಮೆ ಮೈಲೇಜ್‌, ಬ್ಯಾಟರಿ ಸಾಮರ್ಥ್ಯ ಇತ್ಯಾದಿ. ‘ಪರಿಸರ ಸ್ನೇಹಿ’ ವಾಹನಗಳಾದರೂ, ನಿರ್ವಹಣೆ– ಕಿರಿಕಿರಿ ಮುಕ್ತ ವಾಹನಗಳು ಬೇಕು ಎನ್ನುವುದು ಚಾಲಕರ ಮನದಾಳದ ಹಂಬಲ. ಇಂಥವರಿಗಾಗಿಯೇ ಹೈಬ್ರಿಡ್‌ ವಾಹನಗಳು ಮಾರುಕಟ್ಟೆಯಲ್ಲಿವೆ.

ಇವು ಪರಿಸರಪ್ರಿಯವೂ ಆಗಿವೆ. ಹೆಚ್ಚು ಮೈಲೇಜ್‌ ನೀಡುತ್ತವೆ. ಇವು ಸಾಂಪ್ರದಾಯಿಕ ಇಂಧನ ಎಂಜಿನ್‌ ಹಾಗೂ ವಿದ್ಯುತ್‌ ಮೋಟಾರ್‌ ಎರಡನ್ನೂ ಹೊಂದಿರುವ ವಾಹನಗಳು.

ಇಂತಹ ವಾಹನಗಳನ್ನೇ ಹೈಬ್ರಿಡ್‌ ವಾಹನಗಳು ಎನ್ನುವುದು. ಭಾರತದಲ್ಲಿ ಕೆಲವೇ ಕೆಲವು ಕಂಪೆನಿಗಳು ಸೀಮಿತ ಸಂಖ್ಯೆಯಲ್ಲಿ ಈ ಬಗೆಯ ಕಾರ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ನಾಲ್ಕು ಚಕ್ರ ವಾಹನಗಳ ಮಾರುಕಟ್ಟೆಯ ಗಾತ್ರಕ್ಕೆ ಹೋಲಿಸಿದಾಗ, ಈ ಬಗೆಯ ಕಾರುಗಳ  ಮಾರಾಟ ತೀರಾ ಕಡಿಮೆ. ಭಾರತದಲ್ಲಿ ಕೇವಲ ಮೂರೇ ಮೂರು ಕಾರುಗಳು ಮಾರುಕಟ್ಟೆಯಲ್ಲಿವೆ. ಅವೆಂದರೆ, ಟೊಯೊಟಾ ಸಂಸ್ಥೆಯ ಕ್ಯಾಮ್ರಿ ಹಾಗೂ ಪ್ರಿಯಸ್‌ ಹಾಗೂ ಹೋಂಡಾದ ಅಕ್ಕಾರ್ಡ್‌.

ಹೈಬ್ರಿಡ್‌ ವಾಹನಗಳು ಇಷ್ಟು ಕಡಿಮೆ ಸಂಖ್ಯೆಯಲ್ಲಿವೆ? ವಾಹನ ಪ್ರಿಯರಿಂದ ಬೇಡಿಕೆಯೇ ಇಲ್ಲವೇ? ಇದಕ್ಕೆ, ಈ ವಾಹನಗಳ ತಂತ್ರಜ್ಞಾನ ಇನ್ನೂ ಉತ್ತಮವಾಗಿ ಅಭಿವೃದ್ಧಿಯಾಗಿಲ್ಲ ಎನ್ನುವ ಆರೋಪ ಕಾರಣವೇ?

ಹೀಗೆ, ಏನೇ ಆರೋಪಗಳಿದ್ದರೂ, ಹೈಬ್ರಿಡ್ ಕಾರುಗಳು ಭಾರತದಲ್ಲಿ ಬೆರಳೆಣಿಕೆಯಷ್ಟೂ ಇಲ್ಲ. ಇದಕ್ಕೆ ವಾಹನ ತಜ್ಞರು ನೀಡುವ ಮುಖ್ಯ ಕಾರಣವೆಂದರೆ, ಈ ಹೈಬ್ರಿಡ್‌ ಕಾರುಗಳಲ್ಲಿ ಬಳಕೆಯಾಗುತ್ತಿರುವ ತಂತ್ರಜ್ಞಾನ ಇನ್ನೂ ಉತ್ತಮಗೊಂಡಿಲ್ಲದೇ ಇರುವುದು. ಉದಾಹರಣೆಗೆ ಸಾಮಾನ್ಯವಾಗಿ ನಮ್ಮಲ್ಲಿ ಸಿಗುತ್ತಿರುವ ಎಲ್ಲ ಹೈಬ್ರಿಡ್‌ ಕಾರುಗಳಲ್ಲೂ ಪೆಟ್ರೋಲ್‌ ಎಂಜಿನ್‌ ಇದೆ. ಈ ಎಂಜಿನ್‌ಗಳು ಡೀಸೆಲ್ ಎಂಜಿನ್‌ ಕಾರುಗಳಿಗೆ ಹೋಲಿಸಿದಲ್ಲಿ ಕಡಿಮೆ ಮೈಲೇಜ್‌ ನೀಡುತ್ತವೆ. ಹಾಗಿದ್ದ ಮೇಲೆ ವಿದ್ಯುತ್‌ ಮೋಟಾರ್‌ ಅಳವಡಿಸಿದರೆ ಹೆಚ್ಚು ಮೈಲೇಜ್‌ ಸಿಗಬೇಕು ಎನ್ನುವುದು ಸಮರ್ಥನೆ. ಆದರೆ, ಈ ಕಾರುಗಳಲ್ಲಿ ಮೈಲೇಜಿನಲ್ಲಿ ಅಂತಹ ಶ್ರೇಷ್ಠ ಸುಧಾರಣೆಯೇನೂ ಆಗಿಲ್ಲ ಎನ್ನುವುದು ಮುಖ್ಯ ಕೊರತೆ. ಈ ಕಾರಣಕ್ಕಾಗಿಯೇ, ಅತಿ ದುಬಾರಿ ಬೆಲೆ ಕೊಟ್ಟು, ಹೈಬ್ರಿಡ್‌ ಕಾರುಗಳನ್ನು ಏಕೆ ಕೊಳ್ಳಬೇಕು ಎಂದು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಜತೆಗೆ, ಹೈಬ್ರಿಡ್‌ ಕಾರುಗಳ ಬ್ಯಾಟರಿಯ ಸಮಸ್ಯೆ. ಈ ಕಾರುಗಳಲ್ಲಿ ನಿಕ್ಕಲ್‌ ಮೆಟಲ್‌ ಹೈಡ್ರೇಟ್‌ ಹಾಗೂ ಲಿಥಿಯಂ ಅಯಾನ್‌ ಬ್ಯಾಟರಿಗಳನ್ನು ಇಡಲಾಗಿದೆ. ಇವೆಲ್ಲವೂ ಹಳೆಯ ತಂತ್ರಜ್ಞಾನದ ಬ್ಯಾಟರಿಗಳು. ಈಗ ಚಾಲ್ತಿಯಲ್ಲಿರುವ ಲಿಥಿಯಂ ಪಾಲಿಮರ್‌ ತಂತ್ರಜ್ಞಾನ ಇನ್ನೂ ಅಳವಡಿಕೆ ಆಗಿಯೇ ಇಲ್ಲ. ಜತೆಗೆ, ಈ ಬ್ಯಾಟರಿಗಳ ಬೆಲೆ ತೀರಾ ಹೆಚ್ಚು. ಹಾಗಾಗಿ, ಕಾರಿನ ಬೆಲೆಯೂ ಸಹಜವಾಗಿಯೇ ಹೆಚ್ಚಾಗುತ್ತದೆ. ಇದರಿಂದಾಗಿ ಸದ್ಯಕ್ಕೆ ಮಾರಾಟದಲ್ಲಿ ಸುಧಾರಣೆ ಕಷ್ಟವಿದೆ ಎನ್ನುವುದು ವಾಹನ ತಜ್ಞರ ಅಭಿಮತ.

ಹಾಲಿ ಕಾರುಗಳ ಆರ್ಭಟ?: ಟೊಯೊಟಾ ಎರಡು ಹೈಬ್ರಿಡ್‌ ಕಾರ್‌ಗಳನ್ನು ತಯಾರಿಸುತ್ತಿದೆ. ಪ್ರಿಯಸ್ ಹಾಗೂ ಕ್ಯಾಮ್ರಿ. ಪ್ರಿಯಸ್, ಕ್ಯಾಮ್ರಿಗಿಂತ ದುಬಾರಿ ಕಾರ್. ಪ್ರಿಯಸ್‌ನಲ್ಲಿ 1,798 ಸಿಸಿ ಪೆಟ್ರೋಲ್‌ ಎಂಜಿನ್‌ ಇದೆ. ಇದರ ಜತೆಗೆ, 53 ಕಿಲೋವಾಟ್‌ ವಿದ್ಯುತ್‌ ಮೋಟಾರ್‌ ಇದೆ. ಈ ಮೋಟಾರ್‌ 72 ಪಿಎಸ್ ಶಕ್ತಿಯನ್ನು ಉತ್ಪಾದಿಸುತ್ತದೆ. ನಿಕ್ಕಲ್‌ ಮೆಟಲ್‌ ಹೈಡ್ರೇಟ್‌ ತಂತ್ರಜ್ಞಾನದ 6.5 ಎಎಚ್‌ ಸಾಮರ್ಥ್ಯದ ಬ್ಯಾಟರಿ ಇದೆ. ಪೆಟ್ರೋಲ್‌ ಎಂಜಿನ್‌ ಚಾಲನೆಯಾದ ಮೇಲೆ ವಿದ್ಯುತ್‌ ಮೋಟಾರ್‌ ಕೆಲಸ ಮಾಡಲು ಶುರು ಮಾಡುತ್ತದೆ. ಆ ಮೂಲಕ ಪೆಟ್ರೋಲ್‌ ಉಳಿಸುತ್ತದೆ. ಲೀಟರ್‌ ಪೆಟ್ರೋಲ್‌ಗೆ 23.9 ಕಿಲೋಮೀಟರ್‌ ಮೈಲೇಜ್ ನೀಡುತ್ತದೆ. ಜತೆಗೆ, ಕಡಿಮೆ ಹೊಗೆ ಪರಿಸರವನ್ನು ಸೇರುವಂತೆ ಮಾಡುತ್ತದೆ.

ಇನ್ನು ಕ್ಯಾಮ್ರಿಯದೂ ಇದೇ ತಂತ್ರಜ್ಞಾನ. ಕ್ಯಾಮ್ರಿಯಲ್ಲಿ ಶಕ್ತಿಶಾಲಿ 2,494 ಸಿಸಿ ಪೆಟ್ರೋಲ್‌ ಎಂಜಿನ್‌ ಇದೆ. ಲೀಟರ್‌ ಪೆಟ್ರೋಲ್‌ಗೆ 19.16 ಕಿಲೋಮೀಟರ್‌ ಮೈಲೇಜ್‌ ನೀಡುತ್ತದೆ. 650  ವಾಟ್‌ ಸಾಮರ್ಥ್ಯದ ವಿದ್ಯುತ್‌ ಮೋಟಾರ್‌ ಇದೆ. ಕ್ಯಾಮ್ರಿಯ ಆರಂಭಿಕ ಬೆಲೆ ₹ 13.70 ಲಕ್ಷ ಎಕ್ಸ್ ಷೋರೂಂ. ಪ್ರಿಯಸ್‌ ಬೆಲೆ ₹ 38 ಲಕ್ಷದಿಂದ ಆರಂಭವಾಗುತ್ತದೆ.

ಹೋಂಡಾ ಅಕ್ಕಾರ್ಡ್‌: ಪೆಟ್ರೋಲ್‌ ಕಾರ್‌ಗಳನ್ನು ತಯಾರಿಸುವಲ್ಲಿ ಹೋಂಡಾದ್ದು ಎತ್ತಿದ ಕೈ. ಹೈಬ್ರಿಡ್‌ ಅಕ್ಕಾರ್ಡ್‌ ಕಾರ್‌ನಲ್ಲಿ 1,993 ಸಿಸಿ ಪೆಟ್ರೋಲ್‌ ಎಂಜಿನ್‌ ಇದೆ. 184 ಪಿಎಸ್‌ ಶಕ್ತಿಯನ್ನು ಉತ್ಪಾದಿಸುವ ವಿದ್ಯುತ್‌ ಮೋಟಾರ್‌ ಇದರಲ್ಲಿದೆ. ಅತ್ಯದ್ಭುತ ಎನ್ನಬಹುದಾದ ಲಿಥಿಯಂ ಅಯಾನ್‌ ಬ್ಯಾಟರಿ ಈ ಕಾರ್‌ನಲ್ಲಿದೆ. ಟೊಯೊಟಾದ ಹೈಬ್ರಿಡ್‌ ಕಾರ್‌ಗಳಲ್ಲಿ ಈ ಸೌಲಭ್ಯ ಇಲ್ಲ. ಲಿಥಿಯಂ ಅಯಾನ್‌ ಬ್ಯಾಟರಿ ಇದ್ದಲ್ಲಿ, ಬ್ಯಾಟರಿ ಬೇಗನೆ ಚಾರ್ಜ್‌ ಆಗುತ್ತದೆ, ಅಂತೆಯೇ, ಹೆಚ್ಚು ಮೈಲೇಜ್‌ ಸಹಾ ನೀಡುತ್ತದೆ. ಅಕ್ಕಾರ್ಡ್‌ನ ಬೆಲೆ ₹ 37.35 ಲಕ್ಷದಿಂದ ಆರಂಭಗೊಳ್ಳುತ್ತವೆ. ಲೀಟರ್‌ ಪೆಟ್ರೋಲ್‌ಗೆ 23.5 ಕಿಲೋಮೀಟರ್‌ ಮೈಲೇಜ್‌ ನೀಡುತ್ತದೆ.

ಏನಿದು ಹೈಬ್ರಿಡ್ ತಂತ್ರಜ್ಞಾನ?

ಹೈಬ್ರಿಡ್ ವಾಹನಗಳಲ್ಲಿ ಆರಂಭಿಕ ಚಾಲನೆ ಇಂಧನದಿಂದಲೇ ಆಗುತ್ತದೆ. ಇಂಧನವು ಪೆಟ್ರೋಲ್‌ ಅಥವಾ ಡೀಸೆಲ್ ಆಗಿರಬಹುದು. ವಾಹನ ಚಾಲನೆಗೊಂಡ ಕೂಡಲೇ ವಾಹನದಲ್ಲಿ ಇಟ್ಟಿರುವ ಬ್ಯಾಟರಿ ಚಾರ್ಜ್‌ ಆಗಲು ಆರಂಭವಾಗುತ್ತದೆ. ವಾಹನವು ನಿಗದಿತ ವೇಗವನ್ನು ತಲುಪಿದ ಕೂಡಲೇ ವಾಹನದ ಎಂಜಿನ್‌ ಬಂದ್‌ ಆಗಿ, ವಿದ್ಯುತ್‌ ಮೋಟಾರ್‌ ಚಾಲನೆಗೊಳ್ಳುತ್ತದೆ. ಅಲ್ಲದೇ, ವಾಹನ ನಿಂತ ಕೂಡಲೇ ಮೋಟಾರ್‌ ಬಂದ್ ಆಗಿ ಶಕ್ತಿ ಉಳಿಸುತ್ತದೆ. ಹೈಬ್ರಿಡ್‌ ವಾಹನಗಳಲ್ಲಿ ಇಂಧನವನ್ನು ಅವಲಂಬಿಸಿಯೇ ವಾಹನ ಹೆಚ್ಚಾಗಿ ಓಡುವುದು ಸಾಮಾನ್ಯ. ವಿದ್ಯುತ್‌ ಮೋಟಾರ್‌ ಸೇವಕನಂತೆ ಕೆಲಸ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry