ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದ ಬಲೆಗೆ ಸಿಲುಕಿ ಪಕ್ಷಿಗಳ ಸಾವು

ಆರು ತಿಂಗಳಿಂದಲೂ ಪಕ್ಷಿ ಸತ್ತಿರುವ ಶಂಕೆ
Last Updated 5 ಜೂನ್ 2017, 19:30 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಹಣ್ಣಿನ ತೋಟಗಳಿಗೆ ರಕ್ಷಣೆಗೆ ಹಾಕಿದ್ದ ಬಲೆಗೆ ಸಿಲುಕಿ ನೂರಾರು ಪಕ್ಷಿಗಳು ಸಾವನ್ನಪ್ಪಿರುವುದು ಗಂಜಾಂ ಬಳಿ ಬೆಳಕಿಗೆ ಬಂದಿದೆ.

ಟಿಪ್ಪು ಸುಲ್ತಾನ್‌ ಸಮಾಧಿ ಸ್ಥಳ ಗುಂಬಸ್‌ಗೆ ಕೂಗಳತೆ ದೂರದಲ್ಲಿರುವ ಅಂದಾನಯ್ಯ ಎಂಬುವವರ ಸೀಬೆ ಮತ್ತು ಪನ್ನೇರಳೆ ಹಣ್ಣಿನ ತೋಟದ ಸುತ್ತ ಹರಡಿರುವ ಬಲೆಗೆ ಪಕ್ಷಿಗಳು ಸಿಲುಕಿ ಪ್ರಾಣ ಕಳೆದುಕೊಂಡಿವೆ.

ತೋಟದ ಸುತ್ತ ಹಾಕಿರುವ ನೈಲಾನ್‌ ಬಲೆಗೆ ಸಿಲುಕಿ ಸಾವನ್ನಪ್ಪಿರುವ ಕೋಗಿಲೆ, ಬಿಳಿಚುಕ್ಕೆ ಗೂಬೆ, ಕಿಂಗ್‌ ಫಿಷರ್‌, ಹಸಿರು ಗಿಳಿ, ಮರಕುಟಿಕ, ಸನ್‌ ಬರ್ಡ್‌, ಬುಲ್‌ ಬುಲ್‌ ಇನ್ನಿತರ ಜಾತಿಯ ಪಕ್ಷಿಗಳ ದೇಹಗಳು ಮನಕಲಕುವಂತಿವೆ.

ಸುಮಾರು 2 ಎಕರೆ ವಿಸ್ತೀರ್ಣದ ತೋಟದಲ್ಲಿ ಆರೇಳು ತಿಂಗಳುಗಳಿಂದಲೂ ಪಕ್ಷಿಗಳು ಬಲೆಗೆ ಸಿಲುಕಿ ಸತ್ತಿರುವ ಕುರುಹುಗಳಿವೆ. ಪಕ್ಷಿಗಳ ಮೂಳೆ, ರೆಕ್ಕೆ–ಪುಕ್ಕಗಳ ಅವಶೇಷಗಳು ಅಲ್ಲಲ್ಲಿ ಬಿದ್ದಿವೆ.

ಆಹಾರ ಅರಸಿಕೊಂಡು ಬಂದ ಪಕ್ಷಿಗಳು ಗಟ್ಟಿಯಾದ ಈ ಬಲೆಗೆ ಸಿಲುಕಿ, ಅದರಿಂದ ಬಿಡಿಸಿಕೊಳ್ಳಲಾಗದೆ ಪ್ರಾಣ ಕಳೆದುಕೊಂಡಿವೆ. ಸೋಮವಾರ ಕೂಡ ಬಲೆಗೆ ಸನ್‌ಬರ್ಡ್‌ ಪಕ್ಷಿಯೊಂದು ಸಿಲುಕಿ ವಿಲವಿಲ ಒದ್ದಾಡುತ್ತಿತ್ತು. ಸ್ಥಳೀಯ ಪಕ್ಷಿ ಪ್ರಿಯರು ಅದನ್ನು ಬಿಡಿಸಿ ಜೀವ ಉಳಿಸಿದ್ದಾರೆ.

‘ಪನ್ನೇರಳೆ ಮರಕ್ಕೆ ಕೋತಿಗಳ ಹಾವಳಿ ನಿಯಂತ್ರಿಸಲು ಬಲೆ ಹಾಕಲಾಗಿತ್ತು. ಬಲೆಗೆ ಪಕ್ಷಿಗಳು ಸಿಲುಕಿ ಮೃತಪಟ್ಟಿವೆ. ಇದು ಉದ್ದೇಶಪೂರ್ವಕವಲ್ಲ’ ಎಂದು ತೋಟದ ಮಾಲೀಕ ಅಂದಾನಯ್ಯ ಅವರು ಹೇಳಿದರು.

* ಗಂಜಾಂನ ತೋಟದಲ್ಲಿ ಪಕ್ಷಿಗಳು ಮೃತಪಟ್ಟಿರುವ ವಿಷಯ ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಸ್ಥಳೀಯ ಅರಣ್ಯಾಧಿಕಾರಿಗಳಿಂದ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು

-ಧನಂಜಯ, ಮಂಡ್ಯ ಡಿಎಫ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT