ಬೆಳ್ಳಂದೂರು ಕೆರೆ: 3,707 ಟನ್‌ ಕಳೆ ತೆರವು

7

ಬೆಳ್ಳಂದೂರು ಕೆರೆ: 3,707 ಟನ್‌ ಕಳೆ ತೆರವು

Published:
Updated:
ಬೆಳ್ಳಂದೂರು ಕೆರೆ: 3,707 ಟನ್‌ ಕಳೆ ತೆರವು

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಇದುವರೆಗೆ ಒಟ್ಟು 3,707 ಟನ್‌ ಕಳೆಯನ್ನು ಹೊರಗೆ ತೆಗೆಯಲಾಗಿದೆ.

ಕಳೆ ತೆಗೆಯುವ ಕಾರ್ಯಾಚರಣೆಯ ದೈನಂದಿನ ಪ್ರಗತಿಯ ಮಾಹಿತಿಯನ್ನು   ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು  (ಬಿಡಿಎ) ವೆಬ್‌ಸೈಟ್‌ನಲ್ಲಿ (www.bdabangalore.org) ಪ್ರಕಟಿಸಿದೆ. 

ಕೆರೆಯ ಪುನರುಜ್ಜೀವನದ ಬಗ್ಗೆ ಬಿಡಿಎ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಸ್ವಯಂಸೇವಾ ಸಂಘಟನೆಗಳು ಟೀಕಿಸಿದ್ದವು.  ಆ ಬಳಿಕ  ಪ್ರಾಧಿಕಾರ ಮಾಹಿತಿ ಹಂಚಿಕೊಂಡಿದೆ.

ಹೈದರಾಬಾದ್‌ನ ಹಾರ್ವಿನ್ಸ್‌ ಕನ್‌ಸ್ಟ್ರಕ್ಷನ್‌ ಪ್ರೈವೇಟ್‌ ಲಿಮಿಟೆಡ್‌ ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ.  ಮೂರು ಅತ್ಯಾಧುನಿಕ  ಯಂತ್ರಗಳ ಮೂಲಕ ದಿನಕ್ಕೆ ಸರಾಸರಿ 100 ಟನ್‌ಗಳಷ್ಟು ಕಳೆಯನ್ನು ಹೊರಗೆ ತೆಗೆಯಲಾಗುತ್ತಿದೆ.

ಸರ್ವೆ ಪ್ರಗತಿಯಲ್ಲಿ: ಬೆಳ್ಳಂದೂರು ಕೆರೆಯ ಒತ್ತುವರಿ ಪತ್ತೆ ಹಚ್ಚುವ ಸಲುವಾಗಿ ಸರ್ವೆ ನಡೆಸಲಾಗುತ್ತಿದೆ.  2 ಕಿ.ಮೀ.ನಷ್ಟು ಸರ್ವೆ  ಪೂರ್ಣಗೊಂಡಿದೆ.  

ವರ್ತೂರು ಕೆರೆಯಲ್ಲಿ 7 ಕಿ.ಮೀ.ನಷ್ಟು ಸರ್ವೆ ಮುಗಿದಿದೆ. ಇನ್ನು 1 ಕಿ.ಮೀ ಸರ್ವೆ ಮಾತ್ರ ಬಾಕಿ ಇದೆ ಎಂದು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕೆರೆ ಯಾವಾಗ ಸ್ವಚ್ಛ ಮಾಡುತ್ತೀರಿ...?

‘ಬೆಳ್ಳಂದೂರು ಕೆರೆಯನ್ನು ಯಾವಾಗ ಸ್ವಚ್ಛ ಮಾಡುತ್ತೀರಿ’ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ಪ್ರಶ್ನಿಸಿದೆ.

ಡಿ.ಕುಪೇಂದ್ರ ರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಸರ್ಕಾರಿ ವಕೀಲ ವಿ.ಶ್ರೀನಿಧಿ, ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದ ಅನುಸಾರ ರಾಜ್ಯ ಸರ್ಕಾರ ಈಗಾಗಲೇ ಕೆರೆ ಸ್ವಚ್ಛತೆಗೆ ಎಲ್ಲಾ ಕ್ರಮ ಕೈಗೊಂಡಿದೆ. ಹೂಳು ಎತ್ತುವ, ಕಳೆ ತೆಗೆಯುವ ಹಾಗೂ ಕೆರೆಗೆ ತ್ಯಾಜ್ಯ ಹರಿಸುತ್ತಿರುವ 60ಕ್ಕೂ ಹೆಚ್ಚು ಕೈಗಾರಿಕೆಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದರು. ಇದೇ ವೇಳೆ ಬೆಂಗಳೂರು ಜಲಮಂಡಳಿ ವಕೀಲರು ಕೆರೆ ಸ್ವಚ್ಛತೆಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿ ಸಲ್ಲಿಸಿದರು.

‘ಹೊರ ವಲಯದ ಪ್ರದೇಶಗಳಲ್ಲಿನ ಒಳಚರಂಡಿ ತ್ಯಾಜ್ಯವನ್ನು ಬೆಳ್ಳಂದೂರು ಕೆರೆಗೆ ಹರಿಯ ಬಿಡಲಾಗುತ್ತಿದೆ. ಈ ಕಾರಣದಿಂದಾಗಿ ಮಾಲಿನ್ಯದ  ಪ್ರಮಾಣ ಹೆಚ್ಚಾಗಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry