ಬಿಜೆಪಿ ನಾಯಕರಿಂದ ಬಾಯಿ ಚಪಲದ ಹೇಳಿಕೆ

7

ಬಿಜೆಪಿ ನಾಯಕರಿಂದ ಬಾಯಿ ಚಪಲದ ಹೇಳಿಕೆ

Published:
Updated:
ಬಿಜೆಪಿ ನಾಯಕರಿಂದ ಬಾಯಿ ಚಪಲದ ಹೇಳಿಕೆ

ರಾಯಚೂರು: ‘ಬರ ಪರಿಹಾರ ವಿತರಣೆಯ ಸತ್ಯವನ್ನು ತಿಳಿದುಕೊಳ್ಳದೆ, ಬಿಜೆಪಿ ನಾಯಕರು ಬಾಯಿ ಚಪಲಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ  ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಟೀಕಿಸಿದರು.

ಜಿಲ್ಲೆಯ ಮಾನ್ವಿ ತಾಲ್ಲೂಕು ನವಲಕಲ್ಲು ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ‘ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌.ಬೋಸರಾಜು ಅವರ 70 ನೇ ಜನ್ಮ ದಿನಾಚರಣೆ ನಿಮಿತ್ತ ಸರ್ವಧರ್ಮಗಳ 171 ಜೋಡಿ ಸರಳ ವಿವಾಹ’ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಆಧಾರ್ ಸಂಖ್ಯೆ ಲಿಂಕ್ ಸರಿಯಾಗಿ ಮಾಡದ ಕಾರಣದಿಂದ ಶೇ 10 ರಷ್ಟು ರೈತರಿಗೆ ಮಾತ್ರ ಪರಿಹಾರ ವಿತರಣೆ ಬಾಕಿ ಉಳಿದಿತ್ತು. ಕಳೆದ ವಾರ ಎಲ್ಲರಿಗೂ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಬರ ನಿರ್ವಹಣೆಗೆ ನೀಡಿದ ಅನುದಾನ ವಿತರಿಸದೆ ಉಳಿಸಿಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದು ಸರಿಯಲ್ಲ. ಬಿಜೆಪಿ ನಾಯಕರು ಕೀಳುಮಟ್ಟದ ರಾಜಕೀಯ ಮಾಡಬಾರದು’ ಎಂದರು.

ಬಿಜೆಪಿಯವರಿಗೆ ರೈತಪರ ನಿಜವಾದ ಕಾಳಜಿ ಇಲ್ಲ. ಹಿಂಗಾರು ಬೆಳೆ ಹಾನಿ ಕುರಿತು ಕೇಂದ್ರಕ್ಕೆ ₹3,310 ಕೋಟಿ ಅನುದಾನ ಬೇಡಿಕೆಗೆ ಇನ್ನೂ ಸ್ಪಂದಿಸಿಲ್ಲ. ಮುಂಗಾರು ಬೆಳೆ ಪರಿಹಾರಕ್ಕೆ ₹4,702 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರೆ, ಕೇವಲ ₹1,685 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

ರೈತರ ಸಾಲಮನ್ನಾ ಮಾಡುವ ವಿಚಾರವು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟಿದ್ದೇವೆ. ಪ್ರಸಕ್ತ ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ತೊಗರಿ ಬೆಂಬಲ ಬೆಲೆಯಲ್ಲಿ ರಾಜ್ಯದ ಪ್ರೋತ್ಸಾಹಧನವನ್ನು ಈಗಾಗಲೇ ನೀಡಲಾಗಿದೆ. ಇನ್ನುಳಿದ ಮೊತ್ತವನ್ನು ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ.

ಈ ವರ್ಷ ತೊಗರಿ ಬೆಳೆಗಾರರಿಗೆ ₹200 ಕೋಟಿ ಪ್ರೋತ್ಸಾಹಧನ ನೀಡಿ ಖರೀದಿಸಲಾಗಿದೆ. ಅದರಲ್ಲಿ ನಾಫೆಡ್ ಸಂಸ್ಥೆಗೆ ₹10 ಕೋಟಿ ಬರಬೇಕಿದ್ದು ಶೀಘ್ರದಲ್ಲೇ ಪಾವತಿಸಲಾಗುವುದು ಎಂದು ಹೇಳಿದರು.

2013–14ರಲ್ಲಿ ಸರ್ಕಾರದಿಂದ 2.5 ಲಕ್ಷ ಕ್ವಿಂಟಲ್ ತೊಗರಿ ಖರೀದಿಯಾಗಿತ್ತು. ಈ ವರ್ಷ 33 ಲಕ್ಷ ಕ್ವಿಂಟಲ್ ತೊಗರಿ ಖರೀದಿ ಆಗಿದೆ. 14 ಪಟ್ಟು ಹೆಚ್ಚು ತೊಗರಿ ಖರೀದಿಸಿರುವುದು ಸರ್ಕಾರದ ಸಾಧನೆ ಎಂದು ತಿಳಿಸಿದರು.

ಪಡಿತರದಲ್ಲಿ ಅಕ್ಕಿ ವಿತರಣೆಗೆ ಪರ್ಯಾಯವಾಗಿ ರಾಗಿ, ಜೋಳ ವಿತರಣೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಮುಂದಿನ ತಿಂಗಳಿಂದ ದ್ವಿದಳ ಧಾನ್ಯಗಳನ್ನು ವಿತರಿಸಲಾಗುವುದು.  ಪಡಿತರ ವ್ಯವಸ್ಥೆಯಲ್ಲಿ ಪೌಷ್ಟಿಕ ಆಹಾರ ನೀಡುವ ಬಗ್ಗೆ ನಿರ್ಧರಿಸಲಾಗಿದೆ ಎದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್, ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಎಚ್.ಕೆ ಪಾಟೀಲ್, ಶಾಸಕ ಪ್ರತಾಪಗೌಡ ಪಾಟೀಲ ಇದ್ದರು.

‘ಮೋಡ ಬಿತ್ತನೆಗೆ ಟೆಂಡರ್‌ ಪ್ರಕ್ರಿಯೆ’

ರಾಜ್ಯದಲ್ಲಿ ಮಳೆ ಬರದೇ ಹೋದರೆ ಜುಲೈನಲ್ಲಿ ಮೋಡ ಬಿತ್ತನೆ ಮಾಡಲು ತೀರ್ಮಾನಿಸಲಾಗಿದ್ದು, ಟೆಂಡರ್‌ ಪ್ರಕ್ರಿಯೆ ನಡೆದಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಜಿಲ್ಲೆಯ ಮಾನ್ವಿ ತಾಲ್ಲೂಕು ನವಿಲುಕಲ್‌ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಳೆಗಾಗಿ ಪರ್ಜನ್ಯ ಹೋಮ ಮಾಡಿಸುತ್ತಿರುವುದು ಅವರವರ ನಂಬಿಕೆಗೆ ಬಿಟ್ಟಿರುವ ವಿಚಾರ.

ನನಗೆ ವಿಜ್ಞಾನ, ತಂತ್ರಜ್ಞಾನದಲ್ಲಿ ಹೆಚ್ಚು ನಂಬಿಕೆ ಇದೆ. ಜನಕಲ್ಯಾಣ ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಪಾತಾಳಗಂಗೆ ಯೋಜನೆಯ ಸಾಧಕ–ಬಾಧಕಗಳ ಬಗ್ಗೆ ಇಲಾಖೆಯ ತಜ್ಞರೊಂದಿಗೆ ಸಮಾಲೋಚನೆ ಮಾಡಲಾಗುತ್ತಿದೆ’ ಎಂದರು.

‘ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತುವುದಕ್ಕೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಬೇಕು. ಇದು ಕಷ್ಟದ ಕೆಲಸ. ಹೀಗಾಗಿ ಸರ್ಕಾರವು ಪರ್ಯಾಯ ವ್ಯವಸ್ಥೆಗೆ ಸಮಾಲೋಚನೆ ಆರಂಭಿಸಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳ ಅನುಮೋದನೆ ಪಡೆದು ತುಂಗಭದ್ರಾ ಅಣೆಕಟ್ಟನ್ನು ಮೂರು ಅಡಿ ಎತ್ತರ ಮಾಡಲು ಈ ಹಿಂದೆಯೇ ಯೋಜಿಸಲಾಗಿತ್ತು. ಆದರೆ ಕೃಷ್ಣಾ ನದಿ ನೀರು ವಿವಾದದಿಂದ ಅದು ನನೆಗುದಿಗೆ ಬಿತ್ತು’ ಎಂದರು.

* *

ರಾಜ್ಯದಲ್ಲಿ ಮುಂಗಾರು ಬಿತ್ತನೆಗೆ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರಿಗೆ ರಸಗೊಬ್ಬರ, ಬೀಜಗಳ ತೊಂದರೆ ಆಗದಂತೆ ದಾಸ್ತಾನು ಮಾಡಲಾಗಿದೆ.

ಕೃಷ್ಣ ಬೈರೇಗೌಡ,  ಕೃಷಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry