ಮಾರ್ದನಿಸಿದ ಪರಿಸರ ಪರ ಘೋಷಣೆ

7

ಮಾರ್ದನಿಸಿದ ಪರಿಸರ ಪರ ಘೋಷಣೆ

Published:
Updated:
ಮಾರ್ದನಿಸಿದ ಪರಿಸರ ಪರ ಘೋಷಣೆ

ತುಮಕೂರು: ವಿಶ್ವಪರಿಸರ ದಿನಾಚರಣೆಯನ್ನು ಸೋಮವಾರ ನಗರದಲ್ಲಿ ಹಬ್ಬದ ರೀತಿ ಆಚರಿಸಲಾಯಿತು. ವಿವಿಧ ಕಾಲೇಜುಗಳ, ಸಂಘ ಸಂಸ್ಥೆಗಳ ಅಂಗಳದಲ್ಲಿ ಪರಿಸರ ಜಾಗೃತಿಯ ಘೋಷಣೆಗಳು ಮೊಳಗಿದವು.

ಪರಿಸರ ಉಳಿಸಿ ಎನ್ನುವ ಕೂಗು ಅಭಿಯಾನದಂತೆ ನಡೆಯಿತು. ಚಿತ್ರಕಲೆ, ಬೀದಿ ನಾಟಕ, ಕಾರ್ಯಾಗಾರ, ಸಂವಾದಗಳ ಮೂಲಕ ಪರಿಸರದ ಮಹತ್ವವನ್ನು ಸಾರಲಾಯಿತು. ಯುವ ಸಮುದಾಯ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಅತಿಥಿಗಳು ತಮ್ಮ ಭಾಷಣಗಳಲ್ಲಿ ಒತ್ತಿ ಹೇಳಿದರು.

ಗಮನ ಸೆಳೆದ ನಾಟಕ: ಬಿಜಿಎಸ್ ವೃತ್ತದಲ್ಲಿ ಎಸ್‌ವಿಎಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿಕೊಟ್ಟ ‘ಪರಿಸರ ರಕ್ಷಣೆ’ ಬೀದಿ ನಾಟಕ ಗಮನ ಸೆಳೆಯಿತು. ದಾರಿ ಹೋಕರು ಕೊಂಚ ಹೊತ್ತು ನಿಂತು ನಾಟಕ ವೀಕ್ಷಿಸಿದರು. ಕಾಲೇಜಿನಿಂದ ಹೊರಟ ಜಾಥಾಕ್ಕೆ ಪ್ರಾಂಶುಪಾಲರಾದ ರೂಪಾಶ್ರೀ ಚಾಲನೆ ನೀಡಿದರು. ಕುಣಿಗಲ್ ವೃತ್ತದ ಮೂಲಕ ಜಾಥಾ ಹಾದು ಬಿಜಿಎಸ್ ವೃತ್ತ ತಲುಪಿತು. ಪ್ರಶಿಕ್ಷಣಾರ್ಥಿಗಳು ಪರಿಸರ ಗೀತೆಗಳನ್ನು ಹಾಡಿದರು. ನಂತರ ರೈಲ್ವೆ ನಿಲ್ದಾಣ, ಗಾಂಧಿನಗರ ಮಾರ್ಗವಾಗಿ ಜಾಥಾ ಸಾಗಿತು.

ವಿದ್ಯಾಸಂಸ್ಥೆಗಳ ಅಂಗಳದಲ್ಲಿ ಪರಿಸರ ಧಾರೆ: ಹಿರೇಮಠ ವಿದ್ಯಾಸಂಸ್ಥೆಯ ವಿದ್ಯಾ ಮಾನಸ ವಿದ್ಯಾಲಯದ ಮಕ್ಕಳು ಭಿತ್ತಿ ಪತ್ರಗಳನ್ನು ಹಿಡಿದು ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು. ವಿಶೇಷ ಎನ್ನುವಂತೆ ಮಕ್ಕಳ ಉಡುಗೆಯೂ ಹಸಿರು ಬಣ್ಣದಾಗಿತ್ತು.

ವಿದ್ಯಾನಿಧಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಪ್ರಧಾನ ಭಾಷಣ ಮಾಡಿದರು. ‘ಶುಭ್ರ ಪರಿಸರವನ್ನು ನಮ್ಮದಾಗಿಸಿಕೊಂಡರೆ ಆರೋಗ್ಯಕರ ಜೀವನ ನಮ್ಮದಾಗುತ್ತದೆ’ ಎಂದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ   ಕೆ.ಬಿ.ಜಯಣ್ಣ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕಿ ರಿಝ್ವಾನಾ ಭಾನು ಪರಿಸರ ಪರವಾದ ವಿಶ್ವಸಂಸ್ಥೆಯ ಘೋಷಣೆಗಳ ಬಗ್ಗೆ ತಿಳಿಸಿಕೊಟ್ಟರು.  ವಿದ್ಯಾರ್ಥಿನಿ ಸಿಂಧು ಪರಿಸರ ಕುರಿತು ವಿಚಾರ ಮಂಡಿಸಿದರು. ಪ್ರತಿ ತರಗತಿಗಳಿಗೂ ಗಿಡಗಳನ್ನು ವಿತರಿಸುವ ಮೂಲಕ ‘ಹಸಿರಿನೆಡೆಗೆ ನಮ್ಮ ನಡೆ’ ಎಂಬ ಘೋಷಣೆ ಮೊಳಗಿಸಲಾಯಿತು. 

ಉಪನ್ಯಾಸಕಿ ಪ್ರಿಯಾಂಕಾ, ಕವಿತಾ, ಎಸ್‌.ವಿ.ಪ್ರಸಾದ್, ವಿಜಯ್ ಕುಮಾರ್, ಆರತಿ ಕೆ. ಪಟ್ರಮೆ ಇದ್ದರು.

ಪ್ರತಿಜ್ಞೆ: ಸರಸ್ವತಿಪುರಂನ ಆರ್ಯಭಾರತಿ ಪಾಲಿಟೆಕ್ನಿಕ್‌ ಆವರಣದಲ್ಲಿ ವಿವಿಧ ರೀತಿಯ ಗಿಡಗಳನ್ನು ನೆಟ್ಟು ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು. ಪ್ರಾಂಶುಪಾಲ ಕೆ.ಆರ್. ಅಶೋಕ್, ಸಂಸ್ಥೆಯ ಗೌರವ ನಿರ್ದೇಶಕ ಟಿ.ಎಸ್.ರಾಮಶೇಷ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಜರಿದ್ದರು.

ನಿಸರ್ಗದೊಂದಿಗೆ ಕೈ ಜೋಡಿಸಿ: ಜಿಲ್ಲಾ ವಿಜ್ಞಾನ ಕೇಂದ್ರವು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಆಶ್ರಯದಲ್ಲಿ ‘ನಿಸರ್ಗದೊಂದಿಗೆ ಕೈ ಜೋಡಿಸಿ’ ಎನ್ನುವ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಬಾಲ ಭವನದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಸಿತು. ರವೀಂದ್ರ ಕಲಾನಿಕೇತನದ ಉಪನ್ಯಾಸಕ ಕಿಶೋರ್ ಕುಮಾರ್ ಸ್ಪರ್ಧೆ ಉದ್ಘಾಟಿಸಿದರು. ವಿಜ್ಞಾನ ಕೇಂದ್ರದ ಕುಮಾರ ಸ್ವಾಮಿ, ಕೆ.ಎನ್.ಮಧು ಪ್ರಮುಖ ಭಾಷಣ ಮಾಡಿದರು.

ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ವಿಶ್ವನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಂಜೇಗೌಡ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಶೋಕ್, ಟಿ.ಜಿ.ಶಿವಲಿಂಗಯ್ಯ, ಪಿ.ಪ್ರಸಾದ್, ಎನ್.ಅಕ್ಕಮ್ಮ , ರೇಣುಕಾ ವಿದ್ಯಾ ಪೀಠದ ಪ್ರಾಂಶುಪಾಲ ಡಾ.ನಾಗಭೂಷಣ್, ಉಪನ್ಯಾಸಕ ಶಿವಾನಂದ ಮೂರ್ತಿ ಇದ್ದರು.

ವಿಜ್ಞಾನ ಬಿಂದು ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಹಸಿರು ಸಿರಿ ಸಂಘ, ಚಿನ್ಮಯಿ ಗ್ರಾಮೀಣ ಶಿಕ್ಷಣ ಮತ್ತು ಮಹಿಳಾ ಕೇಂದ್ರ, ಸಿದ್ಧಗಂಗಾ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ‘ಕನೆಕ್ಟಿಂಗ್ ಪೀಪಲ್ ಟು ಅರ್ಥ್’ ಶೀರ್ಷಿಕೆಯಲ್ಲಿ  ಪರಿಸರ ದಿನಾಚರಣೆ ನಡೆಯಿತು.

ವಿಜ್ಞಾನ ಪರಿಷತ್ತಿನ ಎಸ್ ರವಿಶಂಕರ್ ಪರಿಸರ ಅವಶ್ಯಕತೆ ಮತ್ತು ಸಂಪನ್ಮೂಲಗಳ ಬಳಕೆ ಕುರಿತು ಉಪನ್ಯಾಸ ನೀಡಿದರು.

ಡಾ. ಕವಿತಾ ಕೃಷ್ಣ ಪರಿಸರ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಆರ್.ರುದ್ರಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಹಸಿರು ಸಿರಿ ಸಂಘದ ಅಧ್ಯಕ್ಷ ಟಿ.ದೀಪಕ್, ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ಇದ್ದರು. 

ಮಹೇಶ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಸಿಗಳನ್ನು ನೀಡುವ ಮೂಲಕ ಕಾರ್ಯಕ್ರಮ ಆಚರಿಸಲಾಯಿತು. ಪ್ರಾಂಶುಪಾಲ ಪ್ರೊ. ಕೆ.ಟಿ ಮಂಜುನಾಥ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಚಿಗುರು ಯುವ ಜನ ಸಂಘ, ‘ಪರಿಸರ ಪ್ರಜ್ಞೆ, ನುಡಿಯಿಂದ ನಡೆಯತ್ತ’ ಸಂವಾದ ಆಯೋಜಿಸಿತ್ತು.

2 ಲಕ್ಷ  ಸೀಡ್ ಬಾಲ್:  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತುಮಕೂರು ತಾಲ್ಲೂಕಿನಲ್ಲಿ 2 ಲಕ್ಷ  ಬೀಜ ದುಂಡೆಯನ್ನು (ಸೀಡ್ ಬಾಲ್) ಅರಣ್ಯ ಪ್ರದೇಶಗಳಿಗೆ ಎಸೆಯುವ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಚಾಲನೆ ನೀಡಿದರು.

ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಜಿಲ್ಲಾ ನಿರ್ದೇಶಕ ಬಿ.ವಸಂತ್, ಯೋಜನಾಧಿಕಾರಿ ಚನ್ನಕೇಶವ, ಜಿಲ್ಲಾ ಜನಜಾಗೃತಿ ಅಧ್ಯಕ್ಷ ಸಂಜಯ್ ನಾಯಕ್, ಬಸವಲಿಂಗ ಪ್ರಭು ಸ್ವಾಮೀಜಿ ಇದ್ದರು.

ಕೋಟಿ ಗಿಡ ನೆಡುವ ಅಭಿಯಾನ

ಸಮರ್ಥ ಭಾರತ ಸಂಸ್ಥೆಯಿಂದ ಜೂನ್ 5ರಿಂದ ಆಗಸ್ಟ್ 15ರ ವರೆಗೆ ಹಮ್ಮಿಕೊಂಡಿರುವ ಒಂದು ಕೋಟಿ ಗಿಡ ನೆಡುವ ಬೃಹತ್ ಅಭಿಯಾನಕ್ಕೆ ನಗರದ ಸಿದ್ದರಾಮೇಶ್ವರ ಬಡಾವಣೆಯ ಶಿವ ಸುಬ್ರಮಣ್ಯ ಗಣಪತಿ ಉದ್ಯಾನದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಚಾಲನೆ ನೀಡಿದರು.

ಸಮರ್ಥ ಭಾರತ ಜಿಲ್ಲಾ ಪ್ರಮುಖ ಜಿ.ಬೈರಣ್ಣ ಕಾರ್ಯಕ್ರಮದ ವಿವರ ನೀಡಿದರು. ಜಿಲ್ಲಾ ಪ್ರಮುಖರಾದ ಕೆಂಪರಾಜು ಮತ್ತು ಶ್ರೀಧರ್, ಬಿಜೆಪಿ ಮುಖಂಡ ಜಿ.ಎಸ್. ಬಸವರಾಜು, ಸಿದ್ದರಾಮೇಶ್ವರ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್, ದೇವಾಲಯ ಸಮಿತಿ ಅಧ್ಯಕ್ಷ ಬಿ.ಕೆ.ಜಯಪ್ರಕಾಶ್, ಸಮಿತಿ ಸದಸ್ಯರು ಹಾಗೂ ಬಡಾವಣೆಯ ನಾಗರೀಕರು ಉಪಸ್ಥಿತರಿದ್ದರು.

25 ಸಾವಿರ ಸಸಿ ನೆಡುವ ಯೋಜನೆ

‘ನಗರದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಪ್ರಸಕ್ತ ವರ್ಷ 25 ಸಾವಿರ ಸಸಿ ನೆಡಲು ಯೋಜನೆ ರೂಪಿಸಿವೆ’ ಎಂದು ಎಂದು ಅಭಿವೃದ್ದಿ ರೆವುಲ್ಯೂಷನ್‌ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್‌ ತಿಳಿಸಿದ್ದಾರೆ.

‘ಸಾಮಾಜಿಕ ಅರಣ್ಯ ಇಲಾಖೆ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಗಳು ಗಿಡ ನೆಡಲು ಸಹ ಯೋಜನೆ ರೂಪಿಸುತ್ತಿವೆ. ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದವರು ಸಾರ್ವಜನಿಕ ಸ್ಥಳದಲ್ಲಿ ಸಪೋಟ ಗಿಡ ಬೆಳೆಸಲು ಉತ್ಸುಕರಾಗಿದ್ದಾರೆ. ಆಸಕ್ತರು ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಬಹುದು’ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮನೆ ಮನೆಗೂ ತೆರಳಿ; ಗಿಡ ಹಂಚಿ

ಬಿಜಿಎಸ್‌ ವೃತ್ತದಿಂದ ನಗರದ ವಿವಿಧ ರಸ್ತೆಗಳಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪರಿಸರ ಜಾಗೃತಿ ಜಾಥಾ ನಡೆಸಿ ಭಿತ್ತಿ ಪತ್ರ ಹಂಚಿದರು. ಜಾಥಾಕ್ಕೆ ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ವೇಣುಗೋಪಾಲಕೃಷ್ಣ ಚಾಲನೆ ನೀಡಿದರು.

ಗೈಡ್ಸ್ ಆಯುಕ್ತೆ ಸುಭಾಷಿಣಿ ಅವರೊಂದಿಗೆ ಮಕ್ಕಳು ಉಪ್ಪಾರಹಳ್ಳಿ ಬಡಾವಣೆಯ ಪ್ರತಿ ಮನೆಗಳಿಗೂ ತೆರಳಿ ಗಿಡಗಳನ್ನು ವಿತರಿಸಿದರು. ಗಿಡ ಬೆಳೆಸುವುದರಿಂದ ಪರಿಸರದ ಮೇಲಾಗುವ ಒಳ್ಳೆಯ ಪರಿಣಾಮಗಳ ಕುರಿತ ಭಿತ್ತಿಪತ್ರಗಳನ್ನು ನೀಡಿದರು.

ಇದಕ್ಕೂ ಮುನ್ನ ಉಪ್ಪಾರಹಳ್ಳಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಉಪಮೇಯರ್ ಫರ್ಜಾನಾ ಖಾನಂ ಚಾಲನೆ ನೀಡಿದರು. ಸ್ಥಳೀಯ ಸಂಸ್ಥೆ ಮುಖ್ಯಸ್ಥ ಬೆಳ್ಳಿ ಲೋಕೇಶ್, ಕಾರ್ಯದರ್ಶಿ ರಮೇಶ್, ಪದಾಧಿಕಾರಿಗಳಾದ ಕುಮಾರ್ ಉಪ್ಪಾರಹಳ್ಳಿ, ರಮೇಶ್‌ ಬಾಬು, ಅಶ್ವತ್ಥ್ ಕುಮಾರ್, ಗಂಗಣ್ಣ,  ಚಂದ್ರಶೇಖರ್, ಗಂಗಾಂಬಿಕ ರವೀಶ್, ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಹನುಮಂತರಾವ್, ರಾಮಣ್ಣ, ಆಯುಬ್, ಲಕ್ಷ್ಮಣ್, ರವಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 1

  Frustrated
 • 0

  Angry