ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ

Last Updated 6 ಜೂನ್ 2017, 9:05 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಪೇಟೆಯ ಅಂದ ಕೆಡಿಸುವುದರ ಜತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ಸಂಚರಿಸಲು ಮತ್ತಷ್ಟು ತೊಡಕಾಗಿರುವ ಇಲ್ಲಿನ ಅವೈಜ್ಞಾನಿಕ ಮೇಲ್ಸೇತುವೆ ಬಳಿ, ಸೋಮವಾರ ಸಂಜೆ ಕೆಸರು ನೀರು ಹರಿಯುವಂತಾಯಿತು.

ಕಳೆದ ನಾಲ್ಕೈದು ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಸರ್ವೀಸ್‌ ರಸ್ತೆ ಕಾಮಗಾರಿ, ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮತ್ತೆ ಸುದ್ದಿಯಾಗತೊಡಗಿದೆ. ಸೋಮವಾರ ಸಂಜೆ ಸುರಿದ ಸಾಧಾರಣ ಮಳೆಗೆ ಕೃತಕ ಕೆರೆಯಂತೆ ಕಂಡು ಬಂದಿರುವ ಇಲ್ಲಿನ ಅಪೂರ್ಣ ಸರ್ವೀಸ್‌ ರಸ್ತೆಯ ಹೊಂಡದಲ್ಲಿ ಹಲವಾರು ದ್ವಿಚಕ್ರ, ಲಘು ವಾಹನಗಳು ಸಿಲುಕಿ ಒದ್ದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಳೆದ ವರ್ಷವಷ್ಟೇ ಆರಂಭಗೊಂಡ ಒಳಚರಂಡಿ ಮತ್ತು ಕಾಂಕ್ರಿಟೀಕರಣ ಮುಚ್ಚಳ ಅಳವಡಿಸುವ ಕಾಮಗಾರಿಯೂ ಅರ್ಧದಲ್ಲೇ ಮೊಟಕುಗೊಂಡಿದೆ. ಇದರಿಂದಾಗಿ ಇಲ್ಲಿನ ಹೊಂಡಮಯ ಸರ್ವೀಸ್‌ ರಸ್ತೆಯಲ್ಲಿ ಚರಂಡಿ ಕೆಸರು ನೀರು ಕೂಡಾ ಹರಿದಾಡುತ್ತಿದೆ. ಸ್ಥಳೀಯ ವರ್ತಕರು ಸಾಂಕ್ರಾಮಿಕ ರೋಗ ಭೀತಿ ಎದುರಿಸುತ್ತಿದ್ದಾರೆ.

ಬೇಸಿಗೆಯಲ್ಲಿ ಒಳಚರಂಡಿ ಕಾಮಗಾರಿ ನೆಪದಲ್ಲಿ ರಸ್ತೆಯ ಎರಡೂ ಬದಿ ಜೆಸಿಬಿ ಮೂಲಕ ಅಗೆದು ಹಾಕಿದ್ದು, ಪುರಸಭೆ ಅಳವಡಿಸಿದ ಕುಡಿಯುವ ನೀರಿನ ಪೈಪ್ ಒಡೆದು ಅಪಾರ ಪ್ರಮಾಣದಲ್ಲಿ ಕುಡಿಯುವ ನೀರು ಪೋಲಾಗಿದೆ. ಬಿಎಸ್ಎನ್ಎಲ್ ಮತ್ತಿತರ ಸಂಸ್ಥೆಯ ಬೆಲೆ ಬಾಳುವ ಭೂಗತ ತಂತಿ ತುಂಡರಿಸಿ ನೂರಾರು ಮಂದಿ ಗ್ರಾಹಕರು ದೂರವಾಣಿ ಮತ್ತು ಅಂತರ್ಜಾಲ ಸಂಪರ್ಕ ಕಡಿತಗೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉಳ್ಳಾಲದಲ್ಲಿ ಮಳೆ: ಸಂಚಾರ ಅಸ್ತವ್ಯಸ್ತ
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ನೀರು ತುಂಬಿ ಸುಮಾರು ಒಂದು ಗಂಟೆ ಸಂಚಾರ ಅಸ್ತವ್ಯಸ್ತಗೊಂಡಿತು.ಸೋಮವಾರ ಸಂಜೆ ವೇಳೆಗೆ ಸುರಿದ ಮಳೆಯಿಂದ ಜಂಕ್ಷನ್‌ನ ಮಧ್ಯ ಭಾಗದಲ್ಲಿ ನೀರು ಹರಿದು ಬಂದು, ರಸ್ತೆ ಸಂಪೂರ್ಣ ನೀರಿನಲ್ಲಿ ಮುಳುಗಿತ್ತು.

ದ್ವಿಚಕ್ರ ವಾಹನ ಚಾಲಕರು ಮತ್ತು ಶಾಲಾ– ಕಾಲೇಜು ಮಕ್ಕಳು ರಸ್ತೆ ದಾಟಲು ಕಷ್ಟ ಪಡುವಂತಾಯಿತು. ತೊಕ್ಕೊಟ್ಟು ಜಂಕ್ಷನ್ ತಗ್ಗು ಪ್ರದೇಶದಲ್ಲಿರುವುದರಿಂದ ನಾಲ್ಕು ಕಡೆಯಿಂದ ಹರಿದು ಬಂದ ನೀರು, ಜಂಕ್ಷನ್‌ನಲ್ಲಿ ಶೇಖರಣೆಯಾಗಿ ಸಮಸ್ಯೆ ಉಂಟಾಯಿತು.

ಅಪೂರ್ಣ ಕಾಮಗಾರಿಯಿಂದ ನೀರು ರಸ್ತೆಯಲ್ಲಿ: ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಅಪೂರ್ಣವಾಗಿರುವುದೇ ಮುಖ್ಯ ಸಮಸ್ಯೆಯಾಗಿದೆ.ಒಂದೆಡೆ ಚರಂಡಿಗೆ ಕಾಂಕ್ರಿಟ್ ಹಾಕಿರುವುದರಿಂದ ನೀರು ಚರಂಡಿಗೆ ಹರಿಯುತ್ತಿಲ್ಲ. ಸ್ಥಳಕ್ಕೆ ಹೆದ್ದಾರಿ ಕಾಮಗಾರಿ ನಡೆಸುವ ನವಯುಗ್ ಸಂಸ್ಥೆಯ ಜೆಸಿಬಿ ಬಂದು, ತುಂಬಿರುವ ನೀರನ್ನು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT