ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡೀಮ್ಡ್‌ ಫಾರೆಸ್ಟ್‌ ಗುರುತು: ಸ್ಪಷ್ಟ ನೀತಿ ಅಗತ್ಯ’

Last Updated 6 ಜೂನ್ 2017, 9:33 IST
ಅಕ್ಷರ ಗಾತ್ರ

ಕುಂದಾಪುರ: ಸರ್ಕಾರಿ ಜಾಗದಲ್ಲಿ ಮನೆ, ಕೊಟ್ಟಿಗೆ, ತೋಟ, ಗದ್ದೆಗಳಿರುವ ಪ್ರದೇಶ ಗಳನ್ನು ಎಲ್ಲಿಯೋ ಕುಳಿತು ಮಾಡಿರುವ ವರದಿಯ ಆಧಾರದಲ್ಲಿ ಇದು ಡೀಮ್ಡ್ ಫಾರೆಸ್ಟ್ ಎನ್ನುವ ಅಧಿಕಾರಿಗಳ ಧೋರಣೆ ಸರಿಯಲ್ಲ. ಎಲ್ಲಿ ಅರಣ್ಯ ಪ್ರದೇ ಶಗಳಿದೆಯೋ ಅದನ್ನು ಡೀಮ್ಡ್ ಫಾರೆಸ್ಟ್ ಆಗಿ ಗುರುತಿಸಲು ನಮ್ಮ ಆಕ್ಷೇಪಗಳಿಲ್ಲ.

ಈ ಬಗ್ಗೆ ಸರ್ಕಾರ  ಸ್ಪಷ್ಟವಾದ ನೋಟಿಫೀಕೇಶನ್ ಹೊರಡಿಸಬೇಕು ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಒತ್ತಾಯಿಸಿದರು. ಇಲ್ಲಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಹಾಗೂ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಕ್ರಮ– ಸಕ್ರಮಕ್ಕಾಗಿ ಸಲ್ಲಿಸಿರುವ ಎಷ್ಟೋ ಅರ್ಜಿಗಳನ್ನು ಈ ರೀತಿಯ ಕುಂಟು ನೆಪಗಳನ್ನು ನೀಡಿ ತಡೆಹಿಡಿಯಲಾಗುತ್ತಿದೆ. ಬಿತ್ತನೆ ಬೀಜಗಳ ಕೊರತೆಗೆ ಬರಗಾಲವಿದೆ ಎಂಬ ಕಾರಣ ನೀಡಲಾಗುತ್ತಿದೆ. ಕೋಟೇಶ್ವರದಲ್ಲಿ  ವಿಶಾಲವಾದ ಬೀಜ ಉತ್ಪಾದನಾ ಪ್ರದೇಶವಿದ್ದರೂ, ಅದರ ಸಮರ್ಪಕ ಬಳಕೆಯಾಗಿಲ್ಲ ಎಂದರು.

ತೋಟಗಾರಿಕೆ ಹಾಗೂ ಕೃಷಿ ಇಲಾಖೆಯಲ್ಲಿ ಸವಲತ್ತುಗಳನ್ನು ನೀಡಲು ಸ್ಪಷ್ಟವಾದ ಮಾನದಂಡಗಳನ್ನು ಅನುಸ ರಿಸದೆ ಇದ್ದ ಕಾರಣದಿಂದಾಗಿ ಸರ್ಕಾರದ ಉದ್ದೇಶದಂತೆ ಯೋಜನೆಗಳು ಫಲಾನು ಭವಿಗಳಿಗೆ ದೊರಕುತ್ತಿಲ್ಲ. ಕಟಾವು ಮುಗಿದ ಬಳಿಕ ಭತ್ತದ ಬೀಜಗಳನ್ನು ಸಂಗ್ರಹಿಸುವ ದೊಡ್ಡ ಕಣಜಗಳು ರೈತರಲ್ಲಿ ಲಭ್ಯವಿಲ್ಲದೆ ಇರುವುದರಿಂದ ಬೀಜಗಳನ್ನು ಸಂಗ್ರಹಿಸುವ ಗೋದಾಮು ಗಳನ್ನು ತೆರೆಯಲು ಎಪಿಎಂಸಿ ಪ್ರಯತ್ನಿಸಬೇಕು ಎಂದು ಹೇಳಿದರು.

ನೆರೆಯ ರಾಜ್ಯದಲ್ಲಿ ಇರುವಂತೆ ಇಲ್ಲಿಯೂ ಸಿಆರ್‌ಝಡ್‌ ನೀತಿಯ ಪರಿಷ್ಕರಣೆ ಆಗಬೇಕು. ಸದ್ಯದಲ್ಲಿಯೇ ಕರಾವಳಿ ತೀರ ಪ್ರದೇಶದ ಗ್ರಾಮ ಪಂಚಾಯಿತಿ ಮುಖ್ಯಸ್ಥರ ಹಾಗೂ ತೀರವಾಸಿಗಳ ಸಭೆ ಕರೆದು ಸಿಆರ್‌ಝಡ್‌ ನೀತಿಯ ಬಗ್ಗೆ ರೈತ ಸಂಘ ಹೋರಾಟದ ರೂಪರೇಷೆಯನ್ನು ತೀರ್ಮಾನಿಸಲಿದೆ. ಉಪ್ಪು ನೀರಿನ ತಡೆಗೋಡೆ ಹಾಗೂ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯ ಬಗ್ಗೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಿಗದಿ ಮಾಡಲಾಗಿತ್ತು. ವ್ಯವಸ್ಥೆಯನ್ನೆ ನಿಯಂತ್ರಿಸುವ ಪರ್ಯಾಯ ವ್ಯವಸ್ಥೆ ಯಿಂದ ಸಭೆ ರದ್ದಾಗಿದ್ದರೂ, ಮುಂಬ ರುವ ದಿನಗಳಲ್ಲಿ ಸೂಕ್ತ ವೇದಿಕೆಯಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು.

ವಾರಾಹಿ ಯೋಜನೆಯ ಕಾಲುವೆ ಗಳ ಗುಣಮಟ್ಟ ಹಾಗೂ ನೀರು ಹರಿ ಯುವಿಕೆಯಿಂದಾಗುವ ಅನಾಹುತಗಳ ಬಗ್ಗೆ ಇಲಾಖಾ ಅಧಿಕಾರಿಗಳು ಗಮನ ಹರಿಸಬೇಕು. ಎಡ ಹಾಗೂ ಬಲದಂಡೆ ಯ ಕಾಲುವೆ ಹಾಗೂ ಏತ ನೀರಾವರಿಯ ಅನುಷ್ಠಾನ ಸಮರ್ಪಕವಾಗಿ ನಡೆದರೆ ಉದ್ದೇಶಿತ ಯೋಜನೆಯ ಪೂರ್ಣ ಪ್ರಯೋಜನ ಕೃಷಿಕರಿಗೆ ದೊರಕಲಿದೆ. ಕೃಷಿ ಗದ್ದೆಗಳು ಹಾಗೂ ತೋಟಗಳಿಗೆ ರೈತರಿಂದ ವಿಮಾ ಕಂತುಗಳನ್ನು ಪಾವತಿಸಿಕೊಳ್ಳುವುದನ್ನು ಆರ್ಥಿಕ ಸಂಸ್ಥೆಗಳು ಕಡ್ಡಾಯಗೊಳಿಸದೆ ರೈತರ  ನಿರ್ಧಾರಕ್ಕೆ ಬಿಡುವುದು ಸೂಕ್ತ ಎಂದರು.

ಸಭೆಯಲ್ಲಿ ಮಾತನಾಡಿದ ಬಿ.ಹಿರಿಯಣ್ಣ, ಕೆದೂರು ಸದಾನಂದ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ರವಿರಾಜ ಹೆಗ್ಡೆ, ಜಯರಾಮ ಶೆಟ್ಟಿ ಬೆಳ್ವೆ, ಸೀತಾರಾಮ ಗಾಣಿಗ, ಅಲ್ತಾರು ಸುರೇಂದ್ರ ಶೆಟ್ಟಿ, ಪ್ರದೀಪ್‌ಮಾರ ಶೆಟ್ಟಿ ಕಾವ್ರಾಡಿ, ಕೆಂಚನೂರು ಸೋಮಶೇಖರ ಶೆಟ್ಟಿ, ಕೃಷ್ಣದೇವ ಕಾರಂತ ಕೋಣಿ, ಶಾಡಿಗುಂಡಿ ರಾಜೀವ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ ರತ್ನಾಕರ ಶೆಟ್ಟಿ, ಪಹಣಿ ಪತ್ರಗಳನ್ನು ನೀಡುವ ಕ್ರಮವನ್ನು ಸರಳೀಕರಿಸಲು, ಅರಣ್ಯ ಇಲಾಖೆಯಿಂದ ಸಿಂಗಲ್ ಪರ್ಮಿಟ್‌ ವಿತರಣೆ, ಕುಮ್ಕಿ ಹಕ್ಕು, ಸಮುದ್ರ ಬದಿಯಲ್ಲಿನ ಬಿಳಿ ಮರಳು ತೆಗೆಯುವಿಕೆ ನಿಯಂತ್ರಣ, ಬೀಜಾಡಿ ಸಮುದ್ರ ಕಿನಾರೆ ಸಮೀಪದ ತೋಡಿಗೆ ವೆಟಂಡ್ ಡ್ಯಾಂ ರಚನೆ, ಕೊಜೆ ಗುಂಡಿಗಳ ಸಮಸ್ಯೆಯ ಪರಿಹಾರ, ವಿಶೇಷ ಭೂಸ್ವಾಧೀನಾಧಿಕಾರಿಯ ನೇಮಕ ಸೇರಿದಂತೆ ಹಲವು ವಿಚಾರಗಳ ಕುರಿತು ಗಮನ ಸೆಳೆದರು.

ಕುಂದಾಪುರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ರೈತ ಸಂಘದ ಎಸ್.ರಾಜೂ ಪೂಜಾರಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಸತೀಶ್ ಕಿಣಿ ಬೆಳ್ವೆ, ಹರಿಪ್ರಸಾದ್‌ ಶೆಟ್ಟಿ ಬಿದ್ಕಲ್‌ಕಟ್ಟೆ, ಮಲ್ಯಾಡಿ ಶಿವರಾಮ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ, ಸಂತೋಷ್ ಶೆಟ್ಟಿ ಹಕ್ಲಾಡಿ, ಶರತ್‌ ಕುಮಾರ ಶೆಟ್ಟಿ, ಜ್ಯೋತಿ ವಿ. ಪುತ್ರನ್ ಇದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ ಹೆಗ್ಡೆ ಸ್ವಾಗತಿಸಿದರು. ರಾಜೇಶ್ ಕುಂದಾಪುರ ನಿರೂಪಿಸಿದರು. ಸಂತೋಷ್ ಶೆಟ್ಟಿ ಬಲಾಡಿ ವಂದಿಸಿದರು.

ಮರಳು ಸಮಸ್ಯೆ ಬಗೆಹರಿಯುವ ವಿಶ್ವಾಸ
ಜಿಲ್ಲೆಯಲ್ಲಿ ಅವೈಜ್ಞಾನಿಕ ನಿರ್ಧಾರ ಗಳಿಂದ ಮರಳು ಅಭಾವ ಆಗಿದೆ. ಸಾಮಾನ್ಯ ಜನರ ಅಭಿಪ್ರಾಯಗಳಿಗೆ ಜಿಲ್ಲಾಡಳಿತ ಕಿವಿಯಾದರೆ ಖಂಡಿತವಾಗಿ ಯೂ ಇಲ್ಲಿನ ಮರಳು ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಮರಳು ಸಲೀಸಾಗಿ ದೊರಕದೆ ಇದ್ದಾಗಲೂ ಜನರಿಗೆ ದೊಡ್ಡ ತೊಂದರೆಯಾಗಿರಲಿಲ್ಲ.

ಆದರೆ, ಮರಳು ವ್ಯಾಪಾರಸ್ಥರ ಸಂಖ್ಯೆ ದೊಡ್ಡದಾದಾಗ ಮಾತ್ರ ಸಮಸ್ಯೆಯೂ ದೊಡ್ಡದಾಯಿತು ಎಂದು ಮಾರ್ಮಿಕ ವಾಗಿ ಹೇಳಿದ ಅವರು, ಜಿಲ್ಲೆಯ ಗಡಿಭಾಗಳಲ್ಲಿ ಹೊರ ಸಾಗಣೆಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿ ಸಾಮಾನ್ಯ ಜನರಿಗೂ ಅವಶ್ಯಕತೆಗೆ ಅನುಗುಣವಾಗಿ ಮರಳು ದೊರಕಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆ. ಪ್ರತಾಪಚಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT