ಸಿದ್ದಗಂಗಾ ಶ್ರೀಗಳಿಗೆ ಸಾರ್ವಭೌಮ ಪ್ರಶಸ್ತಿ

7
ಸಿದ್ದಗಂಗಾ ಕ್ಷೇತ್ರದ ಹಳೆಮಠದಲ್ಲಿ ನಡೆದ ಸರಳ ಸಮಾರಂಭ; ರಾಘವೇಶ್ವರ ಭಾರತೀ ಶ್ರೀಗಳಿಂದ ಪ್ರದಾನ

ಸಿದ್ದಗಂಗಾ ಶ್ರೀಗಳಿಗೆ ಸಾರ್ವಭೌಮ ಪ್ರಶಸ್ತಿ

Published:
Updated:
ಸಿದ್ದಗಂಗಾ ಶ್ರೀಗಳಿಗೆ ಸಾರ್ವಭೌಮ ಪ್ರಶಸ್ತಿ

ತುಮಕೂರು: ಸಿದ್ದಗಂಗಾ ಮಠಾಧೀಶ, ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಬುಧವಾರ ಹಳೆಯ ಮಠದಲ್ಲಿ ಗೋಕರ್ಣದ ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಬುಧವಾರ ‘ಸಾರ್ವಭೌಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಜೆ ಹೊರಗೆ ತುಂತುರು ಮಳೆ ಸುರಿಯುತ್ತಿದ್ದರೆ, ಹಳೆಯ ಮಠದ ಒಳಗೆ ಸೇರಿದ್ದ ರಾಜ್ಯದ ವಿವಿಧ ಮಠಗಳ ಮಠಾಧೀಶರು ‘ನಡೆದಾಡುವ ದೇವರು’ ಎಂದೇ ಭಕ್ತರ ಮನದಲ್ಲಿ ಸ್ಥಾನ ಪಡೆದಿರುವ ಶ್ರೀಗಳ ಗುಣಗಾನ ಮಾಡುತ್ತಿದ್ದರು. ಇತ್ತೀಚೆಗಷ್ಟೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಶ್ರೀಗಳು ಈಗ ಚೇತರಿಸಿಕೊಂಡಿದ್ದು, ಭಕ್ತರಿಗೆ ದರ್ಶನ, ಆಶೀರ್ವಾದ ನೀಡಲು ಮಧ್ಯಾಹ್ನವೇ ಹಳೆಯ ಮಠಕ್ಕೆ ಬಂದು, ಆಸೀನರಾಗಿದ್ದರು.

ವಿವಿಧ ಮಠಗಳ ಸ್ವಾಮೀಜಿ ಮತ್ತು ಭಕ್ತರ ಸಮ್ಮುಖದಲ್ಲಿ ನಡೆದ ಸರಳ ಸಮಾರಂಭದಲ್ಲಿ ಡಾ.ಶಿವಕುಮಾರ ಶ್ರೀಗಳಿಗೆ ಶ್ರೀರಾಮಚಂದ್ರಾಪುರ ಮಠದ ಸ್ವಾಮೀಜಿ ಅಭಿಮಾನದಿಂದ ಪ್ರಶಸ್ತಿ ಪ್ರದಾನ ಮಾಡಿ, ಶ್ರೀಗಳು ಮಾಡಿರುವ ಅನ್ನದಾಸೋಹ ಮತ್ತು ಅಕ್ಷರದಾಸೋಹ ವರ್ಣನೆಗೆ ನಿಲುಕದು. ಅವರ ಸೇವೆ ಮೇರುಪರ್ವತ ಸಮಾನವಾದುದು ಎಂದರು.

‘ದೇಶದಲ್ಲಿ 12 ಜ್ಯೋತಿರ್ಲಿಂಗಗಳಿವೆ. ಆತ್ಮಲಿಂಗ ಇರುವುದು ಒಂದೇ. ಅದು ಮಹಾಬಲೇಶ್ವರದ ಗೋಕರ್ಣದಲ್ಲಿದೆ. ಇಲ್ಲಿರುವ ಜ್ಯೋತಿರ್ಲಿಂಗವನ್ನು ಸಾರ್ವಭೌಮ ಎನ್ನುತ್ತೇವೆ. ಇದು ಎಲ್ಲ ದೇವತೆಗಳ ಚಕ್ರವರ್ತಿ. ಇದರ ಪರವಾಗಿ ಸಾರ್ವಭೌಮ ಪ್ರಶಸ್ತಿ ಕೊಡುತ್ತಿದ್ದು, ಜಗತ್ತಿನ ಸಾರ್ವಭೌಮನಿಂದ, ಯತಿ ಸಾರ್ವಭೌಮನಿಗೆ ಪ್ರಶಸ್ತಿ ಸಿಕ್ಕಂತೆ ಆಗಿದೆ’ ಎಂದು ಬಣ್ಣಿಸಿದರು.

ಕುಪ್ಪೂರು ಗದ್ದಿಗೆ ಮಠಾಧೀಶ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕತೊಟ್ಲುಕೆರೆ ಅಟವಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಒನಕಲ್ಲು ಮಲ್ಲೇಶ್ವರ ಸಂಸ್ಥಾನ ಮಠದ ಬಸವ ರಮಾನಂದ ಸ್ವಾಮೀಜಿ, ಕಂಬಾಳು ಮಠದ ಚನ್ನವೀರ ಸ್ವಾಮೀಜಿ, ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ಬದಾಮಿ ಕಿತ್ಲಿ ಮಠದ ಮಂಜುನಾಥ ಸ್ವಾಮೀಜಿ, ಹರಿಹರ ಸರ್ವಧರ್ಮ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಇದ್ದರು.

**

ಗೋವು ಕೊಲ್ಲಲು ಬಿಡೆವು: ರಾಘವೇಶ್ವರ ಸ್ವಾಮೀಜಿ

‘ಗೋವು ಕೊಲ್ಲಲು ನಾವು ಬಿಡುವುದಿಲ್ಲ. ಯಾವ ಮಟ್ಟದ ಹೋರಾಟ ಮಾಡಿಯಾದರೂ ಗೋವು ಉಳಿಸಿಕೊಳ್ಳುತ್ತೇವೆ’ ಎಂದು ಗೋಕರ್ಣದ ಶ್ರೀರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಸ್ವಾಮೀಜಿ ಗುಡುಗಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಬುಧವಾರ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಗೋಕರ್ಣದ ರಾಮಚಂದ್ರಾಪುರ ಮಠದಿಂದ ‘ಸಾರ್ವಭೌಮ’ ಪ್ರಶಸ್ತಿ ಪ್ರದಾನ ಮಾಡಿದ ನಂತರ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

‘ಗೋವು ಉಳಿಯಬೇಕು. ಗೋವು ರಕ್ಷಣೆಗೆ ಎಲ್ಲ ಮಠಾಧೀಶರು ಬದ್ಧರಾಗಿದ್ದೇವೆ. ಯಾರು ಏನೂ ಬೇಕಾದರೂ ಮಾತನಾಡಿಕೊಳ್ಳಲಿ, ನಮ್ಮ ಆಕ್ಷೇಪಣೆ ಇಲ್ಲ. ಗೋರಕ್ಷಣೆ ಹೋರಾಟದಿಂದ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಗೋಹತ್ಯೆ ನಿರ್ಬಂಧಿಸಿ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತಂದಿದೆ. ಆದರೆ, ಅದು ಪರಿಪೂರ್ಣವಾಗಿಲ್ಲ. ಗೋಹತ್ಯೆ ಸಂಪೂರ್ಣ ನಿಷೇಧ ಕಾಯ್ದೆ ಜಾರಿಗೆ ಬರಬೇಕಾಗಿದೆ. ಇದಕ್ಕಾಗಿ ಮಠಾಧೀಶರೆಲ್ಲರೂ ಹೋರಾಟ ನಡೆಸುತ್ತೇವೆ’ ಎಂದು ತಿಳಿಸಿದರು.

ಪ್ರಶಸ್ತಿಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ್ದೇನೆ. ಗೋಸೇವೆಯಿಂದ ಕಲ್ಯಾಣ ರಾಜ್ಯ ಕಾಣಬಹುದು. ಗೋಹತ್ಯೆ ನಿರ್ಬಂಧಿಸಿರುವ ಕಾಯ್ದೆ ಜಾರಿಗೊಳಿಸಿರುವುದು ಸಂತೋಷ ನೀಡಿದೆ

-ಡಾ.ಶಿವಕುಮಾರ ಸ್ವಾಮೀಜಿ

**

ಶ್ರೀಗಳು ಪ್ರಶಸ್ತಿ ಸ್ವೀಕರಿಸಿರುವುದು ಸಂತಸ ಉಂಟು ಮಾಡಿದೆ. ಇದರಿಂದ ಪ್ರಶಸ್ತಿಗೆ ತೂಕ ಮತ್ತು ಮಹತ್ವ ಬಂದಿದೆ.

-ರಾಘವೇಶ್ವರ ಭಾರತೀ ಸ್ವಾಮೀಜಿ, ರಾಮಚಂದ್ರಾಪುರ ಮಠಾಧೀಶ

**

1.10 ಕೆ.ಜಿ. ಬೆಳ್ಳಿ ಪ್ರಶಸ್ತಿ ಫಲಕ

ಸಾರ್ವಭೌಮ ಪ್ರಶಸ್ತಿಯು ಗೋಕರ್ಣದಲ್ಲಿರುವ ಮಹಾಬಲೇಶ್ವರ ಆತ್ಮಲಿಂಗದ ಪ್ರತಿರೂಪವಾದ 1.10 ಕೆ.ಜಿ. ತೂಕದ ಬೆಳ್ಳಿಯ ಆತ್ಮಲಿಂಗರೂಪಿ ಪ್ರಶಸ್ತಿ ಫಲಕವಿದು. ಪ್ರಶಸ್ತಿಯ ಬಿನ್ನವತ್ತಳೆಯೂ ತಾಮ್ರ ಫಲಕದಿಂದ ಕೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry