ಚೌಕಟ್ಟುಗಳ ಮೀರುವ ಆಸೆಯಲ್ಲಿ ಪಾರುಲ್‌

7

ಚೌಕಟ್ಟುಗಳ ಮೀರುವ ಆಸೆಯಲ್ಲಿ ಪಾರುಲ್‌

Published:
Updated:
ಚೌಕಟ್ಟುಗಳ ಮೀರುವ ಆಸೆಯಲ್ಲಿ ಪಾರುಲ್‌

ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ‘ಕಿಲ್ಲಿಂಗ್ ವೀರಪ್ಪನ್’ ಸಿನಿಮಾದಲ್ಲಿ ಶ್ರೇಯಾ ಆಗಿ ಅಭಿನಯಿಸಿದ್ದ ಬಹುಭಾಷಾ ನಟಿ ಪಾರುಲ್ ಯಾದವ್ ಅವರು ಈಗ ‘ಪಾತರಗಿತ್ತಿ’ ಸಿನಿಮಾದಲ್ಲಿ ವಿಭಿನ್ನ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ. ‘ಪಾತರಗಿತ್ತಿ’ ಸಿನಿಮಾ ಹಿಂದಿಯ ‘ಕ್ವೀನ್’ ಚಿತ್ರದ ಕನ್ನಡ ಅವತರಣಿಕೆ. ಇದನ್ನು ನಟ ರಮೇಶ್ ಅರವಿಂದ್ ನಿರ್ದೇಶಿಸುತ್ತಿದ್ದಾರೆ.

‘ಕಿಲ್ಲಿಂಗ್‌ ವೀರಪ್ಪನ್’ ಸಿನಿಮಾದ ಶ್ರೇಯಾ, ವೀರಪ್ಪನ್ ಕುರಿತು ಪೊಲೀಸರಿಗೆ ಮಾಹಿತಿ ನೀಡುವವಳು. ‘ಪಾತರಗಿತ್ತಿ’ ಸಿನಿಮಾದಲ್ಲಿ ಪಾರುಲ್ ಅವರದ್ದು ಚೌಕಟ್ಟುಗಳನ್ನು ಮೀರುವ ಹೆಣ್ಣಿನ ಪಾತ್ರ. ‘ಪಾತರಗಿತ್ತಿ’ ಚಿತ್ರ ಹಾಗೂ ತಾವು ಬಯಸುವ ಪಾತ್ರಗಳ ಬಗ್ಗೆ ಪಾರುಲ್ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ‘ಕಿಲ್ಲಿಂಗ್ ವೀರಪ್ಪನ್’ ಮತ್ತು ’ವಾಸ್ತು ಪ್ರಕಾರ’ ನಂತರ ನಿಮ್ಮ ಪಾಲಿನ ಮಹತ್ವದ ಸಿನಿಮಾ ‘ಪಾತರಗಿತ್ತಿ’. ಇದರಲ್ಲಿ ಯಾವ ರೀತಿಯ ಪಾತ್ರ ನಿರೀಕ್ಷಿಸುತ್ತಿದ್ದೀರಿ?

‘ಪಾತರಗಿತ್ತಿ’ ಸಿನಿಮಾದಲ್ಲಿ ನಾನು ಒಪ್ಪಿಕೊಂಡಿರುವ ಪಾತ್ರವು ವೀಕ್ಷಕರ ಹೃದಯ ತಟ್ಟುವಂಥದ್ದು. ನನ್ನ ಪಾತ್ರ ವೀಕ್ಷಕರಿಗೆ ಆಪ್ತವಾಗುತ್ತದೆ ಎಂಬುದೇ ಇದರ ಮುಖ್ಯ ಅಂಶ. ಇದು ಹಿಂದಿಯ ‘ಕ್ವೀನ್’ ಚಿತ್ರ ಆಧರಿಸಿದೆ. ಅದರಲ್ಲಿ ನಾಯಕಿಯ ಪಾತ್ರವನ್ನು ಕಂಗನಾ ರನೋಟ್‌ ನಿರ್ವಹಿಸಿದ್ದರು. ಅಲ್ಲಿ ಅವರು ನಿರ್ವಹಿಸಿದ ಪಾತ್ರದಂತಹ ವ್ಯಕ್ತಿ ಪ್ರತಿ ಕುಟುಂಬದಲ್ಲೂ ಇದ್ದಾರೆ. ಇದು ಗ್ಲಾಮರ್ ಇರುವ ಪಾತ್ರವಲ್ಲ.

ಈ ಸಿನಿಮಾಕ್ಕೆ ‘ಪಾತರಗಿತ್ತಿ’ ಎಂಬ ಹೆಸರಿಟ್ಟಿರುವುದಕ್ಕೂ ಕಾರಣವಿದೆ. ಪ್ರತಿ ಹೆಣ್ಣು ಹಲವು ಹೊಣೆಗಳನ್ನು ನಿಭಾಯಿಸಬೇಕು. ಅಕ್ಕನಾಗಿ, ತಂಗಿಯಾಗಿ, ಪತ್ನಿಯಾಗಿ ಎಲ್ಲರನ್ನೂ ಸರಿದೂಗಿಸುವ ಹೊಣೆ ಹೆಣ್ಣಿನ ಮೇಲೆ ಇರುತ್ತದೆ. ಹೊಣೆ ನಿಭಾಯಿಸಿಯೂ ‘ಪಾತರಗಿತ್ತಿ’ಯಂತೆ ಹಾರುವ ಶಕ್ತಿ ಹೆಣ್ಣಿನಲ್ಲಿ ಇರುತ್ತದೆ. ಅಂತಹ ಪಾತ್ರ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ. ಈ ಸಿನಿಮಾದ ನಾಯಕಿ ಸಾಮಾಜಿಕ ಬಂಧನಗಳಿಂದ ಹೊರಬರಲು ಹಾತೊರೆಯುತ್ತಾಳೆ.

* ನೀವು ಇಂಥದ್ದೊಂದು ಪಾತ್ರಕ್ಕಾಗಿ ಕಾಯುತ್ತಿದ್ದಿರಾ ಅಥವಾ ಗಂಭೀರವಾದ ಯಾವುದೇ ಪಾತ್ರ ಆಗಬಹುದು ಎಂಬ ಧೋರಣೆಯಲ್ಲಿ ಇದ್ದಿರಾ?

‘ಕ್ವೀನ್‌’ ಸಿನಿಮಾ ವಾಣಿಜ್ಯ ಉದ್ದೇಶದ್ದಾದರೂ, ಅದು ತೀರಾ ಸೂಕ್ಷ್ಮ ಎಳೆಗಳನ್ನು ಹೊಂದಿತ್ತು. ಇದು ಆ ಚಿತ್ರದ ಹೆಗ್ಗಳಿಕೆ. ‘ಕ್ವೀನ್‌’ನಲ್ಲಿ ಸಾಮಾಜಿಕ ಸಂದೇಶವೂ ಇದೆ. ಹಾಗಾಗಿ, ‘ಕ್ವೀನ್’ ಸಿನಿಮಾದ ಕನ್ನಡ ಅವತರಣಿಕೆ ‘ಪಾತರಗಿತ್ತಿ’ಯ ಭಾಗ ಆಗಿರುವುದಕ್ಕೆ ನನಗೆ ಸಂತಸವಿದೆ. ಇಂಥದ್ದೇ ಪಾತ್ರ ಮಾಡಬೇಕು ಎಂಬ ಅಭಿಲಾಷೆ ನನ್ನಲ್ಲಿ ಬಹುಕಾಲದಿಂದಲೂ ಇತ್ತು.

ಮೂರು ವರ್ಷಗಳ ಹಿಂದೆ ನಾನು ‘ಕ್ವೀನ್’ ಸಿನಿಮಾ ವೀಕ್ಷಿಸಿದ ನಂತರ, ನನಗೆ ಇಂತಹ ಪಾತ್ರ ಮಾಡಲು ಆಗದೇ ಎಂಬ ಪ್ರಶ್ನೆ ಕಾಡಿತ್ತು. ಇದನ್ನು ರಿಮೇಕ್ ಮಾಡಲು ಸಾಧ್ಯ ಎಂಬ ಆಲೋಚನೆ ಕೂಡ ನನ್ನಲ್ಲಿ ಆಗ ಬಂದಿರಲಿಲ್ಲ. ಆದರೆ ಈಗ ಅದು ಸಾಧ್ಯವಾಗಿದೆ. ನಾನು ಕಂಗನಾ ನಿಭಾಯಿಸಿದ್ದ ಪಾತ್ರ ನಿಭಾಯಿಸಲಿದ್ದೇನೆ.

* ‘ಪ್ಯಾರ್‌ ಗೇ ಆಗ್ಬುಟೈತೆ’ ಹಾಡಿನಲ್ಲಿ ಅಭಿನಯಿಸಿದ ನಂತರ, ಗಂಭೀರ ಪಾತ್ರಗಳನ್ನು ಒಪ್ಪಿಕೊಳ್ಳಲು ಆರಂಭಿಸಿದ್ದು ಹೇಗೆ?

ಇದು ನಾನಾಗೇ ಮಾಡಿದ್ದಲ್ಲ. ನನ್ನಲ್ಲಿ ಅಭಿನಯದ ಕಲೆ ಇದೆ ಎಂದು ಜನ ಗುರುತಿಸಿದರು. ಹಾಗಾಗಿ ನನಗೆ ಇದು ಸಿಕ್ಕಿತು. ಗ್ಲಾಮರ್‌ ಆಯಸ್ಸು ಕಡಿಮೆ. ಹಾಗಾಗಿ ಗಂಭೀರ ಪಾತ್ರಗಳನ್ನು ನಾನು ಹುಡುಕುತ್ತಿದ್ದೆ.

*‘ಪಾತರಗಿತ್ತಿ’ ಸಿನಿಮಾದ ನಂತರ ನೀವು ಯಾವ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತೀರಿ?

ಪ್ರಿಯಾಂಕಾ ಛೋಪ್ರಾ ಅವರು ‘ಮೇರಿ ಕೋಮ್‌’ ಚಿತ್ರದಲ್ಲಿ ಮಾಡಿದ ಮಹಿಳಾ ಕೇಂದ್ರಿತ ಪಾತ್ರ ನಿಭಾಯಿಸುವುದು ನನ್ನ ಆಸೆ. ಹಾಗಂತ, ನಟಿಯಾಗಿ ನಾನು ನನ್ನನ್ನು ಒಂದೇ ಚೌಕಟ್ಟಿಗೆ ಸೀಮಿತಗೊಳಿಸಿಕೊಳ್ಳಲು ಬಯಸುವುದಿಲ್ಲ. ನಾನು ವಾಣಿಜ್ಯ ಉದ್ದೇಶದ ಸಿನಿಮಾಗಳಲ್ಲೂ ಅಭಿನಯಿಸುವೆ, ಒಬ್ಬ ಹೀರೊ ಹತ್ತು ಜನ ವಿಲನ್‌ಗಳಿಗೆ ಹೊಡೆಯುವ ಸಿನಿಮಾಗಳಲ್ಲೂ ಅಭಿನಯಿಸುವೆ. ಎಲ್ಲ ಪ್ರಕಾರಗಳ ಸಿನಿಮಾಗಳಲ್ಲೂ ನಾನು ಅಭಿನಯಿಸಬೇಕು. ಆದರೆ ನನ್ನ ಮನಸ್ಸು ನೆಲೆ ನಿಲ್ಲುವುದು ‘ಕ್ವೀನ್‌’ನಂತಹ ಸಿನಿಮಾ ಪಾತ್ರಗಳಲ್ಲಿ.

* ನಿರ್ದಿಷ್ಟ ಭಾಷೆಯಲ್ಲಿ ನೆಲೆ ಕಂಡುಕೊಳ್ಳುವ ಉದ್ದೇಶ ಇದೆಯೇ?

ನಾನು ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ ನನಗೆ ಕೀರ್ತಿ ದೊರೆತಿದ್ದು ಕನ್ನಡ ಚಿತ್ರರಂಗದಲ್ಲಿ. ಹಾಗಾಗಿ, ನನ್ನ ನಿಷ್ಠೆ ಇರುವುದು ಕನ್ನಡಕ್ಕೆ. ಹಾಗಂತ, ಬೇರೆ ಭಾಷೆಗಳಲ್ಲಿ ನಟಿಸಲಾರೆ ಎಂದು ಹೇಳುವುದಿಲ್ಲ. ನಾನೊಬ್ಬಳು ನಟಿ. ಭಾಷೆ ಎನ್ನುವುದು ನನ್ನ ಮಿತಿ ಆಗಬಾರದು.

* ಕಿಲ್ಲಿಂಗ್‌ ವೀರಪ್ಪನ್‌’ಗೆ ಪ್ರತಿಕ್ರಿಯೆ ಹೇಗಿತ್ತು?

ರಕ್ಷಿತ್‌ ಶೆಟ್ಟಿ, ಯೋಗರಾಜ್ ಭಟ್‌ ಸೇರಿದಂತೆ ಹಲವರು ಕರೆ ಮಾಡಿ ಅಭಿನಂದಿಸಿದರು. ಈ ಸಿನಿಮಾದಲ್ಲಿ ನನ್ನ ಅಭಿನಯ ತೀರಾ ಸಹಜವಾಗಿತ್ತು ಎಂಬ ಮೆಚ್ಚುಗೆ ವ್ಯಕ್ತವಾಯಿತು. ನನ್ನ ಹಲವು ಸಿನಿಮಾಗಳು ಹಿಟ್ ಆಗಿವೆ. ನಾನು ‘ಕಿಲ್ಲಿಂಗ್‌ ವೀರಪ್ಪನ್’ನಲ್ಲಿ ಮಾಡಿದ ಅಭಿನಯ ನನ್ನ ಇದುವರೆಗಿನ ‘ದಿ ಬೆಸ್ಟ್’.

*‘ಪಾತರಗಿತ್ತಿ’ ನಂತರ ಕನ್ನಡದ ಪ್ರೇಕ್ಷಕರಿಂದ ಪ್ರತಿಕ್ರಿಯೆ ಹೇಗಿರಬಹುದು?

ನನ್ನನ್ನು ಕನ್ನಡದ ಜನ ಹಿಂದಿಯ ‘ರಾಣಿ’ ಪಾತ್ರದ ನಾಯಕಿಯನ್ನು ಒಪ್ಪಿಕೊಂಡ ರೀತಿಯಲ್ಲಿ ಸ್ವೀಕರಿಸಬೇಕು. ಇಲ್ಲಿನ ಪಾತ್ರ ಗಟ್ಟಿಗಿತ್ತಿಯದ್ದಲ್ಲ. ಇದನ್ನು ಜನ ಒಪ್ಪಿಕೊಳ್ಳಬೇಕು ಎಂಬುದು ನನ್ನಾಸೆ. ಇದರಲ್ಲಿ ನಾನು ಮಲೆನಾಡಿನ ಹುಡುಗಿಯಾಗಿರುತ್ತೇನೆ.

****

‘ಪಾತರಗಿತ್ತಿ‘ ರೂಪ ಧರಿಸಲಿರುವ ‘ಕ್ವೀನ್’

‘ಪಾತರಗಿತ್ತಿ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಬರುತ್ತಿರುವ ‘ಕ್ವೀನ್’, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಗಳಲ್ಲೂ ಸೆಟ್ಟೇರಲಿದೆ. ಕನ್ನಡದ ಜೊತೆ ತಮಿಳು ಭಾಷೆಯಲ್ಲೂ ಈ ಸಿನಿಮಾವನ್ನು ರಮೇಶ್ ಅರವಿಂದ್ ನಿರ್ದೇಶಿಸಲಿದ್ದಾರೆ.

ಹಿಂದಿಯ ‘ಕ್ವೀನ್‌’ನಲ್ಲಿ ಕಂಗನಾ ರನೋಟ್ ನಿಭಾಯಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ಅವರು ನಿಭಾಯಿಸಲಿದ್ದಾರೆ. ನಿಸ್ಸಹಾಯಕ ಹುಡುಗಿಯೊಬ್ಬಳು ತುಂಬು ಆತ್ಮವಿಶ್ವಾಸವುಳ್ಳ ವ್ಯಕ್ತಿಯಾಗಿ ಬದಲಾಗುವ ಕಥೆ ಈ ಸಿನಿಮಾದಲ್ಲಿ ಇದೆ. ಹಾಗೆಯೇ, ‘ದೇಹವೇ ದೇವಾಲಯ ಎನ್ನುವ ಒಬ್ಬಳು ಹುಡುಗಿ, ಮನಸ್ಸೇ ಮಂತ್ರಾಲಯ ಎನ್ನುವ ಇನ್ನೊಬ್ಬಳು ಹುಡುಗಿಯನ್ನು ಸಂಧಿಸಿದ ನಂತರದ ಬೆಳವಣಿಗೆಗಳು’ ಈ ಚಿತ್ರದಲ್ಲಿ ಇರಲಿವೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಪಾರುಲ್ ಯಾದವ್ ಅವರ ಜನ್ಮದಿನದಂದೇ ಈ ಚಿತ್ರದ ಘೋಷಣೆ ಆಗಿದೆ.

‘ಈ ಸಿನಿಮಾ ಸ್ತ್ರೀ–ಪುರುಷ ಸಮಾನತೆಯನ್ನು ಹೇಳುತ್ತದೆ. ಕ್ವೀನ್‌ ಚಿತ್ರ ನನಗೆ ಬಹಳ ಇಷ್ಟವಾಗಿತ್ತು. ಹಾಗಾಗಿ ಅದನ್ನು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಮಾಡುತ್ತಿದ್ದೇವೆ. ಕನ್ನಡದಲ್ಲಿ ಪಾರುಲ್  ಅಭಿನಯಿಸುತ್ತಿದ್ದಾರೆ. ಇತರ ಭಾಷೆಗಳಲ್ಲಿ ನಾಯಕಿ ಯಾರಾಗಬೇಕು ಎಂಬುದು ಅಂತಿಮವಾಗಿಲ್ಲ’ ಎಂದು ರಮೇಶ್ ತಿಳಿಸಿದರು. ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಮನು ಕುಮಾರನ್ ಅವರು ಇದರ ನಿರ್ಮಾಪಕರು, ಮನೋಜ್ ಕೇಶವನ್ ಹಣಕಾಸು ನೆರವು ಒದಗಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry