ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ಸತ್ಯಮ್ಮತಾಯಿ ಜಾತ್ರೆ

ಕೋರಮಂಗಲ ಗ್ರಾಮದಲ್ಲಿ ಸಂಭ್ರಮದ ಹಬ್ಬದ ವಾತಾವರಣ–ಮಂಗಳವಾದ್ಯಗಳ ವಾದನ
Last Updated 8 ಜೂನ್ 2017, 11:55 IST
ಅಕ್ಷರ ಗಾತ್ರ

ವಿಜಯಪುರ: ಗ್ರಾಮದೇವತೆ ಸತ್ಯಮ್ಮತಾಯಿ ಜಾತ್ರಾ ಮಹೋತ್ಸವದ ಅಂಗವಾಗಿ ಸಮೀಪದ ಕೋರಮಂಗಲ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಜೊತೆಗೆ ಜಾತ್ರಾ ದೀಪೋತ್ಸವಗಳ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಕೋರಮಂಗಲ ಗ್ರಾಮದ ಬೀದಿ ಬೀದಿಗಳಲ್ಲೂ ಹಬ್ಬದ ಸಡಗರವಿತ್ತು. ಬೇರೆ ಊರುಗಳಿಂದ ಬಂದಿದ್ದ ನೆಂಟರಿಷ್ಟರಿಂದ ಮನೆಗಳು ತುಂಬಿದ್ದವು. ಯಾವ ಬೀದಿಗೆ ಹೋದರೂ ಪ್ರತಿ ಮನೆಯಲ್ಲೂ ತಂಬಿಟ್ಟಿನ ದೀಪಗಳನ್ನು ಸಿದ್ಧಗೊಳಿಸುವ ಕಾತುರತೆ ಇತ್ತು.

ಎಲ್ಲೆಲ್ಲೂ ತಮಟೆಗಳು, ಮಂಗಳವಾದ್ಯಗಳ ವಾದನ, ಡೊಳ್ಳುಕುಣಿತ ಕಲಾವಿದರ ಕುಣಿತದೊಂದಿಗೆ ಗ್ರಾಮದೇವತೆ ಸತ್ಯಮ್ಮ, ಮುನೇಶ್ವರಸ್ವಾಮಿ ದೇವರ ಉತ್ಸವ ಮೂರ್ತಿಗಳ ಮೆರವಣಿಗೆಯು ಜಾತ್ರೆಗೆ ಕಳೆಕಟ್ಟಿತ್ತು.

ಪ್ರತಿ ಮನೆಯಂಗಳದಲ್ಲಿ ಯುವತಿಯರು ವಿವಿಧ ಬಗೆಯ  ರಂಗೋಲಿ ಬಿಡಿಸಿ ಗ್ರಾಮದೇವತೆಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ಬೇರೆ ಊರುಗಳಿಂದ ತವರು ಮನೆಗೆ ಬಂದಿದ್ದ ಹೆಣ್ಣು ಮಕ್ಕಳು, ಸಂಭ್ರಮ ಸಡಗರದಿಂದ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಮುನೇಶ್ವರಸ್ವಾಮಿ ದೇವಾಲಯ, ಬಸವೇಶ್ವರ ಸ್ವಾಮಿ ದೇವಾಲಯ, ಸತ್ಯಮ್ಮ ದೇವಾಲಯಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು.  ಡೊಳ್ಳುಕುಣಿತ, ತಮಟೆ ವಾದನಗಳೊಂದಿಗೆ ಬಹುತೇಕ ದೇವಾಲಯಗಳಿಗೆ ತೆರಳಿದ ಮಹಿಳೆಯರು, ಮಕ್ಕಳು ತಂಬಿಟ್ಟಿನ ದೀಪಗಳನ್ನು ಬೆಳಗಿ ಭಕ್ತಿಭಾವಗಳಿಂದ ಪೂಜೆ ಸಲ್ಲಿಸಿದರು.
ಮಹಿಳೆಯರು ದೀಪ ಹೊತ್ತುಕೊಂಡು ಬೆಂಕಿಕೆಂಡಗಳನ್ನು ಹಾದುಹೋಗಿ ಭಕ್ತಿಪ್ರದರ್ಶನ ಮಾಡಿದರು. ಕೆಲವು ಭಕ್ತರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ಸಮರ್ಪಿಸಿದರು. ಎಲ್ಲಾ ದೇವಾಲಯಗಳಿಗೆ, ಗ್ರಾಮದ ಬೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ವಾದ್ಯಗೋಷ್ಠಿ ಏರ್ಪಡಿಸಲಾಗಿತ್ತು.

**

ಮನೆಗಳಲ್ಲಿ ಬಾಡೂಟ

ಜಾತ್ರಾ ವಿಶೇಷದ ಅಂಗವಾಗಿ ಮಂಗಳವಾರ ಮತ್ತು ಬುಧವಾರ ಜಾತ್ರಾ ಮಹೋತ್ಸವ ಇತ್ತು.  ದೇವರಿಗೆ ತಂಬಿಟ್ಟಿನ ದೀಪ ಮಾಡಿ, ದೇವಾಲಯಗಳ ಮುಂಭಾಗದಲ್ಲಿ ಪ್ರತಿ ಮನೆಗೊಂದರಂತೆ ಕುರಿ, ಮೇಕೆ, ಕೋಳಿಗಳನ್ನು ಬಲಿ ಅರ್ಪಣೆ ಮಾಡಿದರು. ಗ್ರಾಮಕ್ಕೆ ಯಾವುದೇ ಮಾರಕ ವ್ಯಾಧಿಗಳು ಬಾರದಂತೆ ರಕ್ಷಣೆ ಮಾಡುವಂತೆ ದೇವರಿಗೆ ಪೂಜೆ ಸಲ್ಲಿಸಿದರು.

ಬಹುತೇಕ ಮನೆಗಳಲ್ಲಿ ಮಾಂಸದೂಟ ಏರ್ಪಡಿಸಲಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್.ಸಿ. ಘಟಕದ ಅಧ್ಯಕ್ಷ ಚಿನ್ನಪ್ಪ, ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಚೇತನ್ ಗೌಡ, ನಿಸರ್ಗ ನಾರಾಯಣಸ್ವಾಮಿ, ಮುಂತಾದವರು  ಭೇಟಿ ನೀಡಿ ನಾಗರಿಕರಿಗೆ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT