ಚರ್ಚೆಗೆ ಒತ್ತಾಯಿಸಿ ಬಿಜೆಪಿ ಧರಣಿ

7
ಐಎಎಸ್‌ ಅಧಿಕಾರಿ ತಿವಾರಿ ಅನುಮಾನಸ್ಪದ ಸಾವು ಪ್ರಕರಣ

ಚರ್ಚೆಗೆ ಒತ್ತಾಯಿಸಿ ಬಿಜೆಪಿ ಧರಣಿ

Published:
Updated:
ಚರ್ಚೆಗೆ ಒತ್ತಾಯಿಸಿ ಬಿಜೆಪಿ ಧರಣಿ

ಬೆಂಗಳೂರು: ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಸಾವಿಗೆ ಸಂಬಂಧಿಸಿದಂತೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಲು ನಿರಾಕರಿಸಿದ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಕ್ರಮವನ್ನು  ಪ್ರತಿಭಟಿಸಿ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಧರಣಿ  ನಡೆಸಿದರು.

ಗುರುವಾರ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿದರು.  ಕೋಳಿವಾಡ ಅದಕ್ಕೆ ಅವಕಾಶ ನೀಡಲಿಲ್ಲ.

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕವಾಗಿ ವಿಷಯ ಮಂಡಿಸಲು ಅವಕಾಶ ನೀಡಬೇಕು’ ಎಂಬ ಒತ್ತಾಯಕ್ಕೂ  ಕೋಳಿವಾಡ ಮಣಿಯಲಿಲ್ಲ.

ಇದರಿಂದ ಆಕ್ರೋಶಗೊಂಡ ಶೆಟ್ಟರ್‌, ‘ಸರ್ಕಾರವು ಅನುರಾಗ್‌ ತಿವಾರಿ ಸಾವಿನ  ಪ್ರಕರಣವನ್ನು ಮುಚ್ಚಿಡುವ ಕೆಲಸ ಮಾಡುತ್ತಿದೆ. ಸದನದಲ್ಲಿ ಮಾತನಾಡಲು ಅವಕಾಶ ನೀಡುವುದಾಗಿ ಸರ್ಕಾರ ಹೇಳಿತ್ತು. ಈಗ ಅವಕಾಶ ನಿರಾಕರಿಸುತ್ತಿದೆ’ ಎಂದು ಅವರು ಗುಡುಗಿದರು.

ಅನಂತರ ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳಕ್ಕೆ ಶೆಟ್ಟರ್‌ ಧಾವಿಸಿದಾಗ ಬಿಜೆಪಿಯ ಸದಸ್ಯರು ಅವರನ್ನು ಹಿಂಬಾಲಿಸಿದರು. ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಏರಿದ ಧ್ವನಿಯಲ್ಲಿ ಟೀಕಾ ಪ್ರಹಾರ ನಡೆಸಿದರು.

ಕೊಂಚ ಮೃದುವಾದ ಕೋಳಿವಾಡ,  ‘ಈಗ ಪ್ರಾಥಮಿಕವಾಗಿ ವಿಷಯ ಮಂಡನೆ ಮಾಡಿ. ಬಳಿಕ ಬೇರೊಂದು ನಿಯಮದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡುತ್ತೇನೆ’ ಎಂದು ಹೇಳಿದರು. ಸಭಾಧ್ಯಕ್ಷರ ಮನವಿಯನ್ನು ಪುರಸ್ಕರಿಸಿ ಬಿಜೆಪಿ ಸದಸ್ಯರು ಧರಣಿ ಹಿಂತೆಗೆದುಕೊಂಡರು.

ಯಾರನ್ನೂ ದೂರುವುದಿಲ್ಲ: ‘ಅನುರಾಗ್‌ ತಿವಾರಿ ಅವರ ಸಾವಿಗೆ ಸಂಬಂಧಿಸಿದಂತೆ ಯಾರ ಬಗ್ಗೆಯೂ ಆರೋಪ ಹೊರಿಸುವುದಿಲ್ಲ. ಆದರೆ, ಈ ಬಗ್ಗೆ  ಸದನದಲ್ಲಿ ಚರ್ಚೆ ಆಗಬೇಕು’ ಎಂದು ಶೆಟ್ಟರ್‌ ಹೇಳಿದರು.

‘ತಿವಾರಿ ಬೀದರ್‌ ಮತ್ತು ಮಡಿಕೇರಿ  ಜಿಲ್ಲಾಧಿಕಾರಿಯಾಗಿ ಉತ್ತಮವಾಗಿ ಕೆಲಸ ಮಾಡಿದ್ದರು. ಅವರ ಕುಟುಂಬದ ಸದಸ್ಯರನ್ನು ಕರೆಸಿ ಅವರ ಬೇಡಿಕೆಗಳು ಏನು ಎಂಬುದನ್ನು ಕೇಳುವ ಸೌಜನ್ಯವನ್ನು ಮುಖ್ಯಮಂತ್ರಿಯವರು ತೋರಬೇಕಿತ್ತು ’ ಎಂದರು.

ಖಾದರ್‌ ಭೇಟಿಯಾದ ತಿವಾರಿ ಸಹೋದರ

ಬೆಂಗಳೂರು:
ಐಎಎಸ್ ಅಧಿಕಾರಿ ಅನುರಾಗ್‌ ತಿವಾರಿ  ಸಹೋದರ ಮಯಾಂಕ್‌ ಗುರುವಾರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್‌  ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಅನುರಾಗ್‌ ತಿವಾರಿ ಕಳೆದ ತಿಂಗಳು  ಲಖನೌದಲ್ಲಿ ಸಂಶಯಾಸ್ಪದವಾಗಿ ಮೃತ ಪಟ್ಟಿದ್ದರು. ತಿವಾರಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯಲ್ಲಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

‘ಉತ್ತರ ಪ್ರದೇಶದ ಎಸ್‌ಐಟಿ ತಂಡದೊಡನೆ ಮಯಾಂಕ್‌ ನಗರಕ್ಕೆ ಬಂದಿರುವ ವಿಷಯ ತಿಳಿದು ಭೇಟಿಗೆ ಆಹ್ವಾನ ನೀಡಿದ್ದೆ’ ಎಂದು ಖಾದರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತನಿಖೆಗೆ ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಾಯ ನೀಡುವುದಾಗಿ ಅವರಿಗೆ ಭರವಸೆ ನೀಡಿರುವುದಾಗಿಯೂ ಖಾದರ್‌ ತಿಳಿಸಿದರು.

* ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ಇಲ್ಲಿ ನಾವೇನು ಚರ್ಚೆ ಮಾಡೋದು

- ಕೆ.ಬಿ.ಕೋಳಿವಾಡ, ವಿಧಾನಸಭಾಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry